ಫ್ಲೈಓವರ್‌ನಡಿ ಮೈದಾನ ಬದಲು ಪಾರ್ಕ್
Team Udayavani, Jul 30, 2023, 10:33 AM IST
ಬೆಂಗಳೂರು: ರಾಜಧಾನಿ ಬೆಂಗಳೂರಿನ ಶಿವಾನಂದ ವೃತ್ತದ ಬಳಿಯಿರುವ ಸ್ಟೀಲ್ ಬ್ರಿಡ್ಜ್ ಕೆಳಭಾಗದಲ್ಲಿ ಯೋಜಿಸಲಾಗಿದ್ದ ಮಿನಿ ಕ್ರೀಡಾಂಗಣಕ್ಕೆ ಬ್ರೇಕ್ ಹಾಕಿ, ಸುಸಜ್ಜಿತ ಪಾರ್ಕ್ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ.
ನವಿ ಮುಂಬೈನಲ್ಲಿರುವ ಸಂಪದ ಮೇಲ್ಸೇತುವೆ ಕೆಳಗಿರುವ ಕ್ರೀಡಾಂಗಣ ಮಾದರಿಯಲ್ಲಿ ಕರ್ನಾಟಕದ ಸಂಸ್ಕೃತಿ, ಪರಂಪರೆ ಬಿಂಬಿಸುವ ವಿಷಯಾ ಧಾರಿತ ಚಿತ್ರಗಳಿಂದ ಪಿಲ್ಲರ್‌ಗಳನ್ನು ಸುಂದರಗೊಳಿಸುವುದು, ಮೇಲ್ಸೇತುವೆ ಕೆಳ ಭಾಗದ ಖಾಲಿ ಪ್ರದೇಶದಲ್ಲಿ ಮಕ್ಕಳಿಗೆ ಆಟವಾಡಲು ಬಾಸ್ಕೆಟ್ ಬಾಲ್ ಮೈದಾನ, ಸ್ಕೇಟಿಂಗ್ ರಿಂಗ್ ಇನ್ನಿತರೆ ಆಟಗಳ ಅಂಕಣ ನಿರ್ಮಿಸುವಂತೆ ಈ ಹಿಂದೆ ಬಿಬಿಎಂಪಿ ತಿಳಿಸಿತ್ತು. ಬಾಸ್ಕೆಟ್‌ಬಾಲ್ ಆಡುವ ವೇಳೆ ಚೆಂಡು ರಸ್ತೆಗೆ ಹೋದರೆ, ಸವಾರರಿಗೂ ಮತ್ತು ಮಕ್ಕಳಿಗೂ ಅಪಾಯ ತಪ್ಪಿದ್ದಲ್ಲ ಎಂಬ ಕಾಳಜಿಯಿಂದ ಬಹುಕ್ರೀಡಾ ಮೈದಾನ ನಿರ್ಮಾಣಕ್ಕೆ ಸ್ಥಳೀಯರು ವಿರೋಧಿಸಿದ್ದಾರೆ. ಹೀಗಾಗಿ ಬಿಎಂಪಿ ಅಧಿಕಾರಿಗಳು ಕ್ರೀಡಾಂಗಣ ಬದಲು ಮಕ್ಕಳು, ಸಾರ್ವಜನಿಕರು ಕುಳಿತು ವಿಶ್ರಾಂತಿ ಪಡೆಯುವಂತೆ ಉದ್ಯಾನವನ ನಿರ್ಮಿಸಲು ನಿರ್ಧರಿಸಿದ್ದಾರೆ.
ಶಿವಾನಂದ ವೃತ್ತ, ಆನಂದರಾವ್ ವೃತ್ತ, ರೇಸ್ ಕೋರ್ಸ್ ಜಂಕ್ಷನ್ ಒಳಗೊಂಡಂತೆ 4 ಮೇಲ್ಸೇತುವೆಗಳ ಕೆಳಭಾಗದಲ್ಲಿ ನೂತನ ಪಾರ್ಕ್ ನಿರ್ಮಿಸಲು ಒಟ್ಟು 10.4 ಕೋಟಿ ರೂ.ಗಳನ್ನು ಬಿಬಿಎಂಪಿ ಮೀಸಲಿಟ್ಟಿದೆ. ಈಗಾಗಲೇ ಶಿವಾನಂದ ಫ್ಲೈಓವರ್ ಕೆಳಭಾಗದಲ್ಲಿ ಕಾಮಗಾರಿ ಪ್ರಾರಂಭವಾಗಿ 2 ತಿಂಗಳುಗಳಾಗಿದ್ದು, ಶೇ.40ರಷ್ಟು ಕೆಲಸ ಮುಕ್ತಾಯಗೊಂಡಿದೆ.
ಗ್ರಾನೈಟ್, ಗ್ರಿಲ್ಸ್ ಬಳಸಿದ್ದು, ನಿರು ಪಯುಕ್ತ ವಸ್ತುಗಳಿಂದ ಹೈಡಲ್‌ಗಳನ್ನು ತಯಾರಿಸಿ ಕೊಡಲು ಸಮೀಪದ ಚಿತ್ರಕಲಾ ಪರಿಷತ್‌ಗೆ ಮನವಿ ಮಾಡಲಾಗಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಕಾಮಗಾರಿ ಸಂಪೂರ್ಣಗೊಳ್ಳಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಶಿವಾನಂದ ವೃತ್ತ ಬಳಿ 18 ತಿಂಗಳುಗಳಲ್ಲಿ ನಿರ್ಮಿಸಬೇಕಿದ್ದ ಸ್ಟೀಲ್ ಬ್ರಿಡ್ಜ್ ಕಾಮಗಾರಿಗೆ ಬಿಬಿಎಂಪಿಯು ಸುಮಾರು 5 ವರ್ಷಗಳನ್ನು ತೆಗೆದುಕೊಂಡಿದೆ. ಆನಂತರ, ಉಕ್ಕಿನ ಮೇಲ್ಸೇತುವೆ ಕೆಳಭಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆಂದು ಪ್ರಾರಂಭಿಸಿದ್ದ ಕಾಮಗಾರಿ ಮತ್ತು ಕ್ರೀಡಾಂಗಣವನ್ನು ಕೈಬಿಟ್ಟು ಉದ್ಯಾನವನ ಅಭಿವೃದ್ಧಿಗೆ ಮುಂದಾಗಿದೆ.
ಹೀಗೆ ಸುಮಾರು ಐದಾರು ವರ್ಷಗಳಿಂದ ಶಿವಾನಂದ ವೃತ್ತದ ಬಳಿ ಒಂದಲ್ಲ ಒಂದು ಕಾಮಗಾರಿಗಳು ನಡೆಯುತ್ತಲೇ ಇವೆ. ಇದರಿಂದಾಗಿ ಎಲ್ಲೆಂದರಲ್ಲೆ ರಸ್ತೆಯನ್ನು ಹಾಗೂ ಪಾದಚಾರಿ ಮಾರ್ಗವನ್ನು ಅಗೆದು ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಓಡಾಡಲು ತೊಂದರೆ ಯಾಗು ತ್ತಿದೆ. ಮಳೆ ಬಂದ ಸಂದರ್ಭದಲ್ಲಿ ಗುಂಡಿಗಳ ತುಂಬೆಲ್ಲಾ ನೀರು ತುಂಬಿಕೊಳ್ಳುವುದರಿಂದ ಒಂದಲ್ಲ ಒಂದು ಅಪಾಯಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ.
ನೂತನ ಉದ್ಯಾನದಲ್ಲಿ ಯಾವ ಯಾವ ಸೌಲಭ್ಯ?: ಸಾರ್ವಜನಿಕರು ನೆರಳಿನಲ್ಲಿ ಕುಳಿತು ವಿಶ್ರಾಂತಿಸಲು ಕಲ್ಲು ಹಾಗೂ ಸಿಮೆಂಟಿನ ಬೆಂಚ್‌ಗಳು, ಲ್ಯಾಂಡ್ ಸ್ಕೇಪಿಂಗ್, ವಾಕಿಂಗ್ ಟ್ರ್ಯಾಕ್, ಫ್ಲೋರ್‌ಲೈಟಿಂಗ್, ತೂಗುಯ್ನಾಲೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮಹಿಳೆಯರಿಗೆ, ಪುರುಷರಿಗೆ, ದಿವ್ಯಾಂಗರು ಹಾಗೂ ತೃತೀಯ ಲಿಂಗಿಗಳಿಗೂ ಪ್ರತ್ಯೇಕ ಶೌಚಾಲಯಗಳನ್ನು ಮೇಲ್ಸೇತುವೆಯ ಎರಡೂ ಬದಿಗಳಲ್ಲಿ ನಿರ್ಮಿಸಲಾಗುತ್ತಿದೆ.
ಬಾಸ್ಕೆಟ್‌ಬಾಲ್ ಅಂಕಣ, ಸ್ಕೇಟಿಂಗ್ ಅಭ್ಯಾಸಕ್ಕೆ ನಿರ್ಮಿಸಬೇಕಿದ್ದ ಕ್ರೀಡಾಂಗಣಕ್ಕೆ ಸ್ಥಳೀಯರ ವಿರೋಧ ಹಾಗೂ ಅಕ್ಕಪಕ್ಕ ವಾಹನಗಳು ಓಡಾಡುತ್ತಿರುವುದರಿಂದ ಮಕ್ಕಳು ಮತ್ತು ಸಂಚಾರಿಗಳಿಗೂ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈಗ ಸಾರ್ವಜನಿಕರಿಗೆ ಉಪಯುಕ್ತವಾಗಲೆಂದು ಉದ್ಯಾನವನ ನಿರ್ಮಿಸಲಾಗುತ್ತಿದೆ. ಇನ್ನೂ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣವಾಗಲಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಲಾಗುವುದು. ●ವಿನಾಯಕ್ ಸೂಗರ್, ಬಿಬಿಎಂಪಿ ಮುಖ್ಯ ಎಂಜಿನಿಯರ್
–ಭಾರತಿ ಸಜ್ಜನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.