ರಾಸಾಯನಿಕ ಸ್ಫೋಟಕ್ಕೆ ವ್ಯಕ್ತಿ ಬಲಿ
Team Udayavani, May 20, 2019, 3:06 AM IST
ಬೆಂಗಳೂರು: ವೈಯಾಲಿಕಾವಲ್‌ನಲ್ಲಿರುವ ಶಾಸಕ ಮುನಿರತ್ನ ನಿವಾಸದ ಮುಂಭಾಗ ಭಾನುವಾರ ಬೆಳಗ್ಗೆ, ಅವಧಿ ಮುಗಿದ ರಾಸಾಯನಿಕ ಸ್ಫೋಟಗೊಂಡು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಅವರ ಕಚೇರಿ ಹಾಗೂ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ (45) ಮೃತರು. ಭಾನುವಾರ ಬೆಳಗ್ಗೆ 9.15ರ ಸುಮಾರಿಗೆ ಎಂದಿನಂತೆ ಕೆಲಸಕ್ಕೆ ಆಗಮಿಸಿದ್ದ ವೆಂಕಟೇಶ್, ಶಾಸಕರ ಕಚೇರಿ ಪಕ್ಕದಲ್ಲಿರುವ ಗೋಡಾನ್ ಮುಂಭಾಗದ ರಸ್ತೆಯಲ್ಲಿ ರಾಸಾಯನಿಕದ ಕ್ಯಾನ್ ಮುಚ್ಚಳ ತೆರೆಯುವಾಗ ಸ್ಫೋಟಗೊಂಡಿದ್ದು, ಅವರ ಮುಖ ಹಾಗೂ ಕತ್ತಿನ ಭಾಗ ಛಿದ್ರಗೊಂಡಿದೆ.
ಸ್ಫೋಟದ ಸದ್ದು ಕೇಳುತ್ತಲೇ ಹೊರಗಡೆ ಬಂದ ಸೆಕ್ಯೂರಿಟಿ ಗಾರ್ಡ್ ಹಾಗೂ ಸ್ಥಳೀಯರು ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದರು. ಸ್ಫೋಟಗೊಂಡ ಕ್ಯಾನ್‌ನಲ್ಲಿ ಈಥೇನ್, ಮಿಥೇನ್ ಹಾಗೂ ಇನ್ನಿತರೆ ರಾಸಾಯನಿಕಗಳ ಮಿಶ್ರಣ ಇತ್ತು. ಫೈಬರ್ ಬೆಂಡ್ ಮಾಡಲು ಮತ್ತು ಪ್ರತಿಮೆಗಳ ಜೋಡಣೆಗೆ ಈ ರಾಸಾಯನಿಕ ಬಳಕೆಯಾಗುತ್ತಿದ್ದು, ಎರಡು ವರ್ಷಗಳ ಹಿಂದೆ ಜಿಂಕೆ ಪಾರ್ಕ್‌ನಲ್ಲಿ ಪ್ರತಿಮೆಗಳು ಹಾಗೂ ಪ್ರಾಣಿಗಳ ಮಾದರಿ ನಿರ್ಮಾಣ ಮಾಡಲು ಆಂಧ್ರಪ್ರದೇಶದಿಂದ 30 ಕ್ಯಾನ್ ರಾಸಾಯನಿಕ ತರಿಸಲಾಗಿತ್ತು.
ಈ ಪೈಕಿ ಒಂದು ಕ್ಯಾನ್ ಉಳಿದಿತ್ತು. ಅವಧಿ ಪೂರ್ಣಗೊಂಡಿದ್ದ ಕಾರಣ ಕ್ಯಾನ್ ಅನ್ನು ಎಸೆಯಲು ತೆಗೆದುಕೊಂಡು ದೋಗಲಿದ್ದ ವೆಂಕಟೇಶ್, ಕ್ಯಾನ್ ಮಚ್ಚಳ ತೆಗೆಯುತ್ತಿದ್ದಂತೆ ಸ್ಫೋಟಗೊಂಡಿದೆ. ಈ ವೇಳೆ ಪಕ್ಕದಲ್ಲೇ ಇದ್ದ ಕಚೇರಿಯ ಕಿಟಕಿ ಮತ್ತು ಗೋಡೆಗೆ ಹಾನಿಯಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ದುರ್ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ವಸ್ತುಗಳ ನಿರ್ಬಂಧ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ. ಎಫ್ಎಸ್‌ಎಲ್ ತಜ್ಞರು ಸ್ಫೋಟದ ತುಣುಕುಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಸ್ಫೋಟಕ್ಕೆ ಬೆಚ್ಚಿದ ಸ್ಥಳೀಯರು: ವೈಯಾಲಿಕಾವಲ್ 11ನೇ ಕ್ರಾಸ್‌ನಲ್ಲಿ ಭಾರೀ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದ ಕೂಡಲೇ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಬಾಂಬ್ ಇರಬಹುದೇ ಎಂಬ ಆತಂಕದೊಂದಿಗೆ ಮನೆಯಿಂದ ಹೊರಗಡೆ ಓಡಿಬಂದಿದ್ದು, ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದರು.
ಸ್ಫೋಟದ ತೀವ್ರತೆಗೆ ವೆಂಕಟೇಶ್ ಮೃತದೇಹ ಐದು ಅಡಿ ದೂರ ಬಿದ್ದಿತ್ತು. ಕ್ಯಾನ್‌ನ ಪ್ಲಾಸ್ಟಿಕ್ ಚೂರುಗಳು ಘಟನಾ ಸ್ಥಳದಿಂದ ಸುಮಾರು 200 ಮೀ. ದೂರದವರೆಗೂ ಚದುರಿ ಬಿದ್ದಿದ್ದವು.
ಸ್ಫೋಟದ ಸದ್ದಾದ ಕೂಡಲೇ ಮನೆಯಲ್ಲಾ ಅಲುಗಾಡಿದಂತಹ ಅನುಭವವಾಯಿತು. ಹೊರಗಡೆ ಓಡಿ ಬಂದಾಗ ಜನ ಸೇರಿದ್ದರು. ಬಳಿಕವೇ ವೆಂಕಟೇಶ್ ಮೃತಪಟ್ಟಿರುವುದು ಗೊತ್ತಾಯಿತು ಎಂದು ಸ್ಥಳೀಯರಾದ ಶ್ರೀನಿವಾಸ್ ಹೇಳಿದರು.
ಬಾಂಬ್ ವದಂತಿಗೆ ಪೊಲೀಸರು ಕಂಗಾಲು!: ಘಟನೆ ಸಂಭವಿಸಿದ ಆರಂಭದಲ್ಲಿ ಕೆಮಿಕಲ್ ಸ್ಫೋಟ ಎಂದು ಖಚಿತಪಟ್ಟಿರಲಿಲ್ಲ. ಅನುಮಾನಾಸ್ಪದ ವಸು , ಬಾಂಬ್ ಸ್ಫೋಟ ಎಂಬ ವದಂತಿ ಹರಿದಾಡಿತು. ಸ್ಫೋಟ ಸಂಭವಿಸಿದ ಕೆಲ ಸಮಯಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸ್ಥಳವನ್ನು ಸುಪರ್ದಿಗೆ ತೆಗೆದುಕೊಂಡರು. ಶ್ವಾನದಳ ಕೂಡ ಸ್ಥಳ ಪರಿಶೀಲನೆ ನಡೆಸಿತು.
ದುರ್ಘಟನೆ ಸ್ಥಳವನ್ನು ಪೊಲೀಸರು ಸುಪರ್ದಿಗೆ ತೆಗೆದುಕೊಂಡಿದ್ದರು. ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಕೆಲಕಾಲ ಮೊಕ್ಕಂ ಹೂಡಿದ್ದರು. ಹಲವು ಗಂಟೆಗಳ ಕೂಲಂಕಶ ಪರಿಶೀಲನೆ ಬಳಿಕ ಅವಧಿ ಮೀರಿದ ರಾಸಾಯನಿಕ ಸ್ಫೋಟ ಎಂಬುದು ಖಚಿತಪಟ್ಟಿತು.
ಸಂಪೂರ್ಣ ತನಿಖೆ ನಡೆಯಲಿ – ಶಾಸಕ ಮುನಿರತ್ನ: ಘಟನೆ ನಡೆದ ವೇಳೆ ಶಾಸಕ ಮುನಿರತ್ನ ಮನೆಯಲ್ಲಿರಲಿಲ್ಲ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ವೆಂಕಟೇಶ್ ನನಗೆ ಬಾಲ್ಯದಿಂದಲೂ ಗೊತ್ತು. ನನ್ನ ಕಚೇರಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಈ ದುರ್ಘಟನೆ ಬಗ್ಗೆ ನೋವಿದೆ. ಈ ಹಂತದಲ್ಲಿ ಏನೂ ಹೇಳಲು ಇಚ್ಛಿಸುವುದಿಲ್ಲ. ಪೊಲೀಸರು ಸಂಪೂರ್ಣ ತನಿಖೆ ನಡೆಸಲಿ. ಅಗತ್ಯವಿದ್ದರೆ ತನಿಖೆಗೆ ಸಹಕರಿಸುತ್ತೇನೆ ಎಂದರು.
ಸ್ನೇಹಮಯ ವ್ಯಕ್ತಿತ್ವ: ವೆಂಕಟೇಶ್ ಅವರು ಹಲವು ವರ್ಷಗಳಿಂದ ಪರಿಚಯ. ವಯಸ್ಸಿನಲ್ಲಿ ಹಿರಿಯರಾಗಿದ್ದರೂ ಅತ್ಯಂತ ಸ್ನೇಹಮಯ ವ್ಯಕ್ತಿತ್ವ ಅವರದ್ದು. ಅವರಿಗೆ ಪತ್ನಿ ಸುಭದ್ರಾ, ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ. ಸೋಮವಾರ ಅಂತ್ಯ ಕ್ರಿಯೆ ನೆರವೇರಿಸಲಿದ್ದೇವೆ ಎಂದು ವೆಂಕಟೇಶ್ ಸಂಬಂಧಿಕರೊಬ್ಬರು ತಿಳಿಸಿದರು. ವೆಂಕಟೇಶ್ ಅವರ ಪುತ್ರಿಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್ ?
Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ
Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಸಮಸ್ಯೆ
Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು
Theft: ವಿದ್ಯಾಗಣಪತಿ, ಸುಬ್ರಹ್ಮಣ್ಯ ದೇಗುಲಗಳ ಹುಂಡಿ ಹಣ, 5 ಚಿನ್ನದ ತಾಳಿ ಬೊಟ್ಟು ಕಳವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.