ಆನ್‌ಲೈನ್ ಮಾರಾಟ ವಿರೋಧಿಸಿ ಸ್ತಬ್ಧವಾದ ಕೃಷಿ ಉತ್ಪನ್ನ ಮಾರುಕಟ್ಟೆ
Team Udayavani, Dec 8, 2018, 11:55 AM IST
ಬೆಂಗಳೂರು: ಕೃಷಿ ಉತ್ಪನ್ನಗಳ ಆನ್‌ಲೈನ್ ಮಾರಾಟಕ್ಕೆ ಪರವಾನಗಿ ನೀಡಿರುವುದನ್ನು ಖಂಡಿಸಿ ಶುಕ್ರವಾರ ವರ್ತಕರ ಒಕ್ಕೂಟ ಕರೆ ನೀಡಿದ್ದ ಯಶವಂತಪುರ ಎಪಿಎಂಸಿ ಅನಿರ್ದಿಷ್ಟಾವಧಿ ಮುಷ್ಕರ ಸಂಪೂರ್ಣ ಯಶಸ್ವಿಯಾಗಿದ್ದು, ಶನಿವಾರ ಕೂಡ ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಸದಿರಲು ವರ್ತಕರು ತೀರ್ಮಾನಿಸಿದ್ದಾರೆ.
ಕೆಲವು ಕಂಪನಿಗಳು ಆನ್‌ಲೈನ್ ಮೂಲಕ ವರ್ತಕರಿಂದ ಉತ್ಪನ್ನಗಳನ್ನು ಖರೀದಿಸಿ, ಯಾವುದೇ ಸಾಗಣಿಕೆ ವೆಚ್ಚ ಇಲ್ಲದೆ ನೇರವಾಗಿ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿವೆ. ಕಳೆದ ಆರು ತಿಂಗಳಿಂದ ಇದೇ ಮಾದರಿಯಲ್ಲಿ ವಹಿವಾಟು ನಡೆದಿದೆ. ಇದರಿಂದ ಯಶವಂತಪುರ ಯಾರ್ಡ್‌ನಲ್ಲಿ ಬರುವ ಉತ್ಪನ್ನ ಇಳಿಮುಖವಾಗಿದ್ದು, ಸಾವಿರಾರು ವರ್ತಕರು, ಕಾರ್ಮಿಕರು ಹಾಗೂ ಎಪಿಎಂಸಿ ವ್ಯಾಪಾರ-ವಹಿವಾಟು ಅವಲಂಬಿಸಿದ ಕುಟುಂಬಗಳು ಆತಂಕಕ್ಕೀಡಾಗಿವೆ. ಹಾಗಾಗಿ, ಕೂಡಲೇ ಆನ್‌ಲೈನ್ ಪರವಾನಗಿ ಹಿಂಪಡೆಯಬೇಕು ಎಂದು ಯಶವಂತಪುರ ಎಪಿಎಂಸಿ ವರ್ತಕರ ಒಕ್ಕೂಟ ಆಗ್ರಹಿಸಿತು.
ಒಕ್ಕೂಟದಡಿ ಎಪಿಎಂಸಿ ಯಾರ್ಡ್‌ನ ಗಣಪತಿ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡ ನೂರಾರು ವರ್ತಕರು, ಸರ್ಕಾರವು ಆನ್‌ಲೈನ್ ಸೇವೆ ಜಾರಿಗೊಳಿಸಿ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಇವೆಲ್ಲವೂ ಫ್ಲಿಪ್‌ಕಾರ್ಟ್, ಅಮೇಜಾನ್‌ನಂತಹ ಕಂಪನಿಗಳ ಮತ್ತೂಂದು ರೂಪ. ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ. ಈಗಾಗಲೇ ಮಹರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಆನ್‌ಲೈನ್ ಸೇವೆ ನಿಷೇಧಿಸಿದ್ದು, ಕರ್ನಾಟಕದಲ್ಲೂ ಇದನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು.
ಯಶವಂತಪುರ ಬೇಳೆಕಾಳು ಮಾರಾಟಗಾರರ ಸಂಘದ ಅಧ್ಯಕ್ಷ ರಮೇಶ್ಚಂದ್ರ ಲಾಹೋಟಿ ಮಾತನಾಡಿ, ಆರು ತಿಂಗಳ ಹಿಂದೆ ಆರಂಭಗೊಂಡ ಕೃಷಿ ಉತ್ಪನ್ನಗಳ ಆನ್‌ಲೈನ್ ಮಾರಾಟ ಕಂಪೆನಿಗಳು ಇಂದು 16 ಸಾವಿರ ಚಿಲ್ಲರೆ ವ್ಯಾಪಾರಿಗಳನ್ನು ನೋಂದಣಿ ಮಾಡಿಕೊಂಡಿದೆ. ಇದರೊಂದಿಗೆ 50-60 ವರ್ತಕರನ್ನೂ ಸೆಳೆದು, ನೇರವಾಗಿ ಖರೀದಿಸಿ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿವೆ.
5 ಟನ್‌ನಿಂದ ಶುರುವಾಗಿ ಇಂದು 500 ಟನ್ ಉತ್ಪನ್ನಗಳ ಮಾರಾಟ ಮಾಡುತ್ತಿದೆ. ಇದರಿಂದ ಗ್ರಾಹಕರಿಗಾಗಲಿ, ರೈತರಿಗಾಗಲಿ ಯಾವುದೇ ಲಾಭ ಇಲ್ಲ. ಕೇವಲ ತಮ್ಮ ಕಂಪೆನಿಗಳ ಹಿತಾಸಕ್ತಿ ಅಡಗಿದೆ. ಮತ್ತೂಂದೆಡೆ ಸರ್ಕಾರವನ್ನೂ ವಂಚಿಸಲಾಗುತ್ತಿದೆ. ಈ ಮಧ್ಯೆ ಎಪಿಎಂಸಿಯಲ್ಲಿನ ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವಲಂಬಿತ ಕಾರ್ಮಿಕರ ಮೇಲೂ ಇದು ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಕೋ ಎನ್ನುವ ರಸ್ತೆಗಳು…: ಯಶವಂತಪುರ ಎಪಿಎಂಸಿಯಲ್ಲಿ ನಿತ್ಯ 50 ಕೋಟಿ ರೂ. ವಹಿವಾಟು ನಡೆಯುತ್ತದೆ. ಎರಡೂವರೆ ಸಾವಿರ ವರ್ತಕರು, ಹತ್ತು ಸಾವಿರಕ್ಕೂ ಅಧಿಕ ಕಾರ್ಮಿಕರು ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸಗಡ ಸೇರಿದಂತೆ ನಾನಾ ಕಡೆಗಳಿಂದ ಇಲ್ಲಿಗೆ ಕೃಷಿ ಉತ್ಪನ್ನ ಬರುತ್ತದೆ. ವಾರ್ಷಿಕ 80 ಕೋಟಿ ರೂ. ಮಾರುಕಟ್ಟೆ ಶುಲ್ಕ ಹಾಗೂ 20 ಕೋಟಿ ರೂ. ಬಾಡಿಗೆ ರೂಪದಲ್ಲಿ ಸರ್ಕಾರಕ್ಕೆ ಈ ಯಾರ್ಡ್‌ನಿಂದ ಸಂದಾಯವಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಈ ಮಧ್ಯೆ ನಿತ್ಯ ಗಿಜಗುಡುವ ಮಾರುಕಟ್ಟೆ ಶುಕ್ರವಾರ ಬಿಕೋ ಎನ್ನುತ್ತಿತ್ತು. ಸಾಲುಗಟ್ಟಿ ನಿಂತ ಆಹಾರಧಾನ್ಯ ತುಂಬಿದ ಲಾರಿಗಳು, ಚೀಲಗಳ ಮೇಲೆ ಅಥವಾ ಮಳಿಗೆಗಳ ಮುಂದೆ ಕಾರ್ಮಿಕರು ಕುಳಿತು ಹರಟೆ ಹೊಡೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಮಾರುಕಟ್ಟೆಯಲ್ಲಿ ಜನಸಂದಣಿಯೂ ಇಲ್ಲದ್ದರಿಂದ ಹೋಟೆಲ್, ತಿಂಡಿ-ತಿನಿಸು, ಸೋಡಾ ಮತ್ತಿತರ ತಂಪುಪಾನೀಯ ವ್ಯಾಪಾರಿಗಳಿಗೂ ಇದರ ಬಿಸಿ ತಟ್ಟಿತು. ಇದು ಹೀಗೆ ಮುಂದುವರಿದರೆ, ರೈತರಿಗೆ ಇದರ ಬಿಸಿ ತಟ್ಟಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.