ಎತ್ತರಿಸಿದ ಹಾದಿಯಲ್ಲಿ ಪ್ರತ್ಯೇಕ ಬಸ್ ವೇ
Team Udayavani, Sep 17, 2018, 12:23 PM IST
ಬೆಂಗಳೂರು: ಸರ್ಕಾರದ “ಕನಸಿನ ಕೂಸು’ ಎಲಿವೇಟೆಡ್ ಕಾರಿಡಾರ್‌ನಲ್ಲಿ ಬಸ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟ್‌ಂ (ಬಿಆರ್‌ಟಿಎಸ್) ಮಾದರಿಯಲ್ಲಿ ಪ್ರತ್ಯೇಕ ಬಸ್ ಪಥ ಮೀಸಲಿಡಲು ಸರ್ಕಾರ ಉದ್ದೇಶಿಸಿದೆ. ಒಟ್ಟಾರೆ ಆರು ಎಲಿವೇಟೆಡ್ ಕಾರಿಡಾರ್‌ಗಳ ಪೈಕಿ ಎರಡು ಷಟ್ಪಥ ಮತ್ತು ನಾಲ್ಕು ಚತುಷ್ಪಥ ಎತ್ತರಿಸಿದ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ.
ಇವುಗಳಲ್ಲಿ ಒಂದು ಪಥವನ್ನು ಬಸ್‌ಗಳ ಸಂಚಾರಕ್ಕಾಗಿಯೇ ಮೀಸಲಿಡಲು ಚಿಂತನೆ ನಡೆದಿದೆ. ಇದರಿಂದ ಉದ್ದೇಶಿತ ಮಾರ್ಗಗಳಲ್ಲಿ ಓಡಾಡುವ ಬಸ್‌ಗಳ ವೇಗ ಮೂರುಪಟ್ಟು ಹೆಚ್ಚಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಮೂಲಕ ಎಲಿವೇಟೆಡ್ ಕಾರಿಡಾರ್ ವಿರುದ್ಧ ಕೇಳಿಬರುತ್ತಿರುವ ಅಪವಾದಗಳಿಂದಲೂ ಮುಕ್ತವಾಗುವ ಲೆಕ್ಕಾಚಾರ ಇದರಲ್ಲಿದೆ. ನಗರದಲ್ಲಿ ವಾಹನಗಳ ಸಂಖ್ಯೆ 60 ಲಕ್ಷ ದಾಟಿದೆ.
ಇದರಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ. ಹೀಗಿರುವಾಗ ಈ ವಾಹನಗಳಿಗಾಗಿಯೇ ಕೋಟ್ಯಂತರ ರೂ. ಸುರಿದು ಎತ್ತರಿಸಿದ ಮಾರ್ಗ ನಿರ್ಮಿಸುವುದು ಸರಿಯಲ್ಲ. ಅಷ್ಟೇ ಅಲ್ಲ, ಈ ಯೋಜನೆಯು ಖಾಸಗಿ ವಾಹನಗಳನ್ನು ಉತ್ತೇಜಿಸುತ್ತದೆ ಎಂಬ ಆರೋಪ ತಜ್ಞರಿಂದ ಕೇಳಿಬರುತ್ತಿದೆ. ಇದಕ್ಕೆ ಪ್ರತಿಯಾಗಿ ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಪಥ ಮೀಸಲಿಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಯಾಣಿಕರನ್ನು ಸೆಳೆಯಲಿದೆ: ಪ್ರಸ್ತುತ ನಗರದಲ್ಲಿ ಬಿಎಂಟಿಸಿ ಬಸ್‌ಗಳ ಸರಾಸರಿ ವೇಗ ಗರಿಷ್ಠ 15ರಿಂದ 16 ಕಿ.ಮೀ ಇದೆ. ಕೋರ್ ಏರಿಯಾದಲ್ಲಿ ಈ ಪ್ರಮಾಣ ಮತ್ತಷ್ಟು ಕಡಿಮೆ ಆಗುತ್ತದೆ. ಪ್ರತ್ಯೇಕ ಪಥ ನಿರ್ಮಿಸಿದರೆ, ಸಹಜವಾಗಿ ವೇಗ ಹೆಚ್ಚಲಿದೆ. ಪ್ರಯಾಣಿಕರು ಸಕಾಲದಲ್ಲಿ ನಿಗದಿತ ದೂರ ಕ್ರಮಿಸಬಹುದು. ಇದರಿಂದ ಸಾರ್ವಜನಿಕ ಸಾರಿಗೆಯತ್ತ ಪ್ರಯಾಣಿಕರನ್ನು ಸೆಳೆಬಹುದು ಎನ್ನುತ್ತಾರೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧಿಕಾರಿಗಳು.
ಆದರೆ, ಈ ಯೋಜನೆ ಬಿಎಂಟಿಸಿಗೆ ನಿರೀಕ್ಷಿತ ಮಟ್ಟದಲ್ಲಿ ತೃಪ್ತಿ ತಂದಿಲ್ಲ. ಕಾರಣ, ಎತ್ತರಿಸಿದ ಮಾರ್ಗದಲ್ಲಿ ಹೋಗುವ ಬಸ್‌ಗಳ ಸಂಖ್ಯೆ ತುಂಬಾ ಕಡಿಮೆ. ಹಾಗಾಗಿ, ಹೆಚ್ಚು ಪ್ರಯಾಣಿಕರಿಗೆ ಇದರಿಂದ ಪ್ರಯೋಜನ ಆಗುವುದಿಲ್ಲ. ಅಷ್ಟಕ್ಕೂ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಎಲಿವೇಟೆಡ್ ಮಾರ್ಗ ಹತ್ತಿ-ಇಳಿಯುವುದು ಕಷ್ಟ. ಹಾಗಾಗಿ, ಉದ್ದೇಶಿತ ಎತ್ತರಿಸಿದ ಮಾರ್ಗಗಳುದ್ದಕ್ಕೂ ಕೆಳಗಡೆ ಎರಡೂ ಬದಿ (ಹೋಗುವ-ಬರುವ) ಬಸ್‌ಗೆ ಪ್ರತ್ಯೇಕ ಪಥ ಮೀಸಲಿಡಬೇಕು ಎಂಬುದು ನಿಗಮದ ಅಧಿಕಾರಿಗಳ ವಾದ.
ಆಟೋ, ಸೈಕಲ್ ಪಥಗಳು ಫಲ ನೀಡಿಲ್ಲ: ನಗರದಲ್ಲಿ ಈ ಹಿಂದೆ ಆಟೋ, ಬೈಸಿಕಲ್‌ಗಳಿಗೆ ಮೀಸಲಿಟ್ಟ ಪ್ರತ್ಯೇಕ ಪಥಗಳು ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ. ಸೈಕಲ್ ಬಳಕೆ ಪ್ರೋತ್ಸಾಹಿಸಲು ದಶಕದ ಹಿಂದೆ ಹಲವು ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಪ್ರತ್ಯೇಕ ಪಥ ಮೀಸಲಿಡಲಾಗಿತ್ತು. ನಂತರ 2014-15ರಲ್ಲಿ ಸುಮಾರು ಹತ್ತು ಕಡೆ ಬ್ಯಾರಿಕೇಡ್ ಹಾಕಿ ಪ್ರತ್ಯೇಕ ಆಟೋ ಪಥ ಮಾಡಲಾಗಿತ್ತು. ಆದರೆ, ಪರಿಣಾಮಕಾರಿ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಕೈಬಿಡಲಾಯಿತು ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಎಲಿವೇಟೆಡ್ ಕಾರಿಡಾರ್‌ನಲ್ಲಿ ಸೀಮಿತ ವಾಹನಗಳು ಓಡಾಡುತ್ತವೆ. ಹಾಗಾಗಿ, ಹಿಂದಿನ ಪ್ರಯತ್ನಗಳಿಗೆ ಇದನ್ನು ಹೋಲಿಕೆ ಮಾಡಲಾಗದು ಎಂದೂ ಸ್ಪಷ್ಟಪಡಿಸುತ್ತಾರೆ.
ಎಲಿವೇಟೆಡ್ ಕಾರಿಡಾರ್‌ನಲ್ಲಿ ಬಸ್‌ಗೆ ಪ್ರತ್ಯೇಕ ಪಥ ಮೀಸಲಿಡುವ ಉದ್ದೇಶವಿದೆ. ನಿರ್ಮಾಣಕ್ಕೆ ಸಂಬಂಧಿಸಿದ ಯೋಜನೆಯಲ್ಲಿ ಇದನ್ನೂ ಸೇರಿಸಲಾಗುವುದು. ಇದರಿಂದ ಸಾರ್ವಜನಿಕ ಸಾರಿಗೆಗೆ ಉತ್ತೇಜನ ಸಿಗುವ ಜತೆಗೆ, ಜನ ಸಕಾಲದಲ್ಲಿ ನಿಗದಿತ ಸ್ಥಳ ತಲುಪುತ್ತಾರೆ.
-ಎಂ.ಗಣೇಶ್, ಕೆಆರ್‌ಡಿಸಿಎಲ್ ಎಂ.ಡಿ
ಎಲಿವೇಟೆಡ್ ಕಾರಿಡಾರ್ ಕೆಳಗೆ ಆರು ಮತ್ತು ನಾಲ್ಕು ಪಥದ ಜಾಗ ಲಭ್ಯವಾಗುತ್ತದೆ. ಅಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಎರಡು ಮಾರ್ಗಗಳನ್ನು ಮೀಸಲಿಟ್ಟರೆ ಹೆಚ್ಚು ಅನುಕೂಲ. ಎತ್ತರಿಸಿದ ಮಾರ್ಗಗಳಲ್ಲಿ ಬರೀ ಟ್ರಂಕ್ ಬಸ್‌ಗಳು ಸಂಚರಿಸುತ್ತವೆ.
-ವಿ.ಪೊನ್ನುರಾಜ್, ಬಿಎಂಟಿಸಿ ಎಂ.ಡಿ
ಯೋಜನೆ ಪ್ರಯೋಜನಗಳು
-ಸಂಚಾರದಟ್ಟಣೆ ತಗ್ಗಲಿದೆ
-ಮಾರ್ಗದ ಕೆಳಗೆ ಫುಟ್‌ಪಾತ್, ಬೈಸಿಕಲ್ ಪಥ ನಿರ್ಮಾಣ
-ಗಿಡ ಬೆಳೆಸಲು ಅನುಕೂಲ
-ಪ್ರಯಾಣದ ಸಮಯ ಕಡಿಮೆ ಆಗಲಿದೆ
-ಶಬ್ದ ಮತ್ತು ವಾಯು ಮಾಲಿನ್ಯ ತಗ್ಗಲಿದೆ
-ಇಂಧನ ಬಳಕೆ ಕಡಿಮೆ ಆಗುತ್ತದೆ
-ವಾಹನ ಸವಾರರಿಗೆ ಹೆಚ್ಚು ಸುರಕ್ಷಿತ ಪ್ರಯಾಣ ಇದಾಗಲಿದೆ
2,874 ಮರಗಳ ಹನನ?: ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕಾಗಿ 2,874 ಮರಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಎರಡು ಷಟ್ಪಥ ಮತ್ತು ನಾಲ್ಕು ಚತುಷ್ಪಥ ಸೇರಿದಂತೆ ಬೃಹತ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಸುಮಾರು 56.89 ಹೆಕ್ಟೇರ್ (ಇಂಟರ್‌ಚೇಂಜ್ ಸೇರಿ) ಭೂಸ್ವಾಧೀನದ ಅವಶ್ಯಕತೆ ಇದೆ.
ಇದರ ಜತೆಗೆ 2,874 ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಆದರೆ, ಇದು ಇನ್ನೂ ಅಂತಿಮವಾಗಿಲ್ಲ. ಪರಿಸರ ಪರಿಣಾಮ ನಿರ್ಧರಣಾ ಅಧ್ಯಯನ ವರದಿ ನಂತರ ಸ್ಪಷ್ಟವಾಗಲಿದೆ. ಅಲ್ಲದೆ, ಈ ಯೋಜನೆ ಅನುಷ್ಠಾನದ ಅವಧಿಯಲ್ಲಿ ಉದ್ದೇಶಿತ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಅಲ್ಲೆಲ್ಲಾ ವಾಹನದಟ್ಟಣೆ ಹೆಚ್ಚುವ ಜತೆಗೆ ವಾಯು ಮತ್ತು ಶಬ್ದಮಾಲಿನ್ಯ ಹೆಚ್ಚಲಿದೆ.
* ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.