ಮುಂದಿನ ಶೈಕ್ಷಣಿಕ ಸಾಲಿಗಾಗಿ ಈಗಿನಿಂದಲೇ ಪ್ರವೇಶ ಪ್ರಕ್ರಿಯೆ
Team Udayavani, Nov 26, 2017, 12:35 PM IST
ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭವಾಗಿ ಆರು ತಿಂಗಳು ಕೂಡ ಪೂರ್ಣಗೊಂಡಿಲ್ಲ. ಆದರೆ ತುರಕ್ಕೆ ಬಿದ್ದಂತಿರುವ ಕೆಲ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು 2018-19ನೇ ಶೈಕ್ಷಣಿಕ ವರ್ಷದ ಕೆಲ ತರಗತಿಗಳಿಗೆ ಕಾನೂನು ಬಾಹಿರವಾಗಿ ಈಗಲೇ ದಾಖಲಾತಿ ಪ್ರಕ್ರಿಯೆ ಆರಂಭಿಸಿವೆ.|
ಸರ್ಕಾರದ ನಿಯಮಗಳ ಪ್ರಕಾರ ಖಾಸಗಿ ಶಾಲೆಗಳು ಪ್ರತಿ ವರ್ಷ ಏಪ್ರಿಲ್ ಮೊದಲ ವಾರದಲ್ಲಿ ಶಾಲೆ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು ಎಂಬ ಸ್ಪಷ್ಟ ಸೂಚನೆ ಇದೆ. ಪ್ರವೇಶಾತಿ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ ನಂತರವಷ್ಟೇ ಪ್ರಕ್ರಿಯೆ ಆರಂಭಿಸಿಬೇಕು ಎಂಬ ಶಿಸ್ತು ನಿಯಮವೂ ಇದೆ. ಆದರೆ, ಬೆಂಗಳೂರು ನಗರದ ಕೆಲವು ಪ್ರತಿಷ್ಠಿತ ಖಾಸಗಿ ಶಾಲೆಗಳು ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಮುಂಗಡವಾಗಿ ಸೀಟು ಕಾಯ್ದಿರಿಸುವ ಪ್ರಕ್ರಿಯೆ ನಡೆಸುತ್ತಿವೆ.
ಎಲ್‌ಕೆಜಿ, ಯುಕೆಜಿ ಸೇರಿದಂತೆ ಪೂರ್ವ ಪ್ರಾಥಮಿಕ ತರಗತಿ ಹಾಗೂ ಒಂದನೇ ತರಗತಿಯ ಪ್ರವೇಶಕ್ಕಾಗಿ ಕೆಲವೊಂದು ಶಿಕ್ಷಣ ಸಂಸ್ಥೆಗಳು ಆಂತರಿಕ ಸುತ್ತೋಲೆಗಳನ್ನು ಹೊರಡಿಸಿವೆ. ದಸರಾ ರಜೆ ಮುಗಿದ ತಕ್ಷಣದಿಂದಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೆ ಅನುಕೂಲವಾಗುವಂತೆ ಶಾಲೆ ಆವರಣದಲ್ಲಿ ಪ್ರತ್ಯೇಕ ಪ್ರವೇಶಾತಿ ವಿಭಾಗ ತೆರೆದಿದ್ದಾರೆ ಎಂದು ಪಾಲಕರು ದೂರುತ್ತಿದ್ದಾರೆ.
ದುಬಾರಿ ಶುಲ್ಕಕ್ಕೆ ಕಡಿವಾಣ ಇಲ್ಲವೇ?: ಖಾಸಗಿ ಶಾಲೆಗಳಲ್ಲಿ ಪಡೆಯುವ ದುಬಾರಿ ಶುಲಕ್ಕೆ ಕಡಿವಾಣವೇ ಇಲ್ಲ. ನಗರದ ಕೆಲವೊಂದು ಪ್ರತಿಷ್ಠತ ಶಾಲೆಗಳಲ್ಲಿ ಪ್ರಿ ನರ್ಸರಿ ಪ್ರವೇಶಕ್ಕೆ ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುತ್ತಿದ್ದಾರೆ. ಈ ವಿಷಯ ಇಲಾಖೆಯ ಅಧಿಕಾರಿಗಳಿಗೂ ತಿಳಿದಿದೆ. ಆದರೂ ಏನೂ ಕ್ರಮ ಕೈಗೊಳ್ಳುತ್ತಿಲ್ಲ. ಬಹುತೇಕ ರಾಜಕಾರಣಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದರಿಂದ ಶುಲ್ಕ ನಿಯಂತ್ರಣ ಅಷ್ಟು ಸುಲಭವಾಗಿ ಅನುಷ್ಠಾನಗೊಳ್ಳುವ ಸಾಧ್ಯತೆಯೂ ಇಲ್ಲ.
ಕರಡು ಅನುಷ್ಠಾನವಿಲ್ಲ: ಖಾಸಗಿ ಶಾಲಾಡಳಿತ ಮಂಡಳಿಗಳು ಶೈಕ್ಷಣಿಕ ಶುಲ್ಕದ ಹೆಸರಿನಲ್ಲಿ ನಡೆಸುವ ಸುಲಿಗೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಈ ಹಿನ್ನೆಲೆಯಲ್ಲೇ 1983ರ ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತಂದು, ವರ್ಷದ ಹಿಂದೆಯೇ ಉಭಯ ಸದನಗಳಲ್ಲೂ ಮಂಡಿಸಿ, ಅನುಮೋದನೆ ಪಡೆದಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಖಾಸಗಿ ಶಾಲೆಗಳ ಶುಲ್ಕಕ್ಕೆ ಸಂಬಂಧಿಸಿದಂತೆ ಕರಡು ಸಿದ್ಧಪಡಿಸಿದ್ದು, ಹಲವು ಕಾರಣಗಳಿಗಾಗಿ ಅನುಷ್ಠಾನಕ್ಕೆ ಬಂದಿಲ್ಲ.
ಮುಂಗಡ ಬುಕಿಂಗ್‌ಗೆ ರಿಯಾಯ್ತಿ ಸೌಲಭ್ಯ!: ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ದಾಖಲಿಸಲು ಪೋಷಕರನ್ನು ಆಕರ್ಷಿಸುವ ದೃಷ್ಟಿಯಿಂದ ಶಾಲೆಗಳಲ್ಲಿ ಪ್ಯಾಕೇಜ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಈಗಲೇ ಸೀಟ್ ಬುಕ್ ಮಾಡಿಕೊಂಡು ಅರ್ಧದಷ್ಟು ಶುಲ್ಕ ಪಾವತಿಸುವ ಪಾಲಕ, ಪೋಷಕರಿಗೆ ರಿಯಾಯ್ತಿಯನ್ನೂ ಆಡಳಿತ ಮಂಡಳಿಗಳು ನೀಡುತ್ತಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪ್ರತಿಷ್ಠಿತ ಶಾಲೆಗಳಲ್ಲಿ ಸೀಟು ಕೈತಪ್ಪಬಹುದು ಎಂಬ ಭಯದಿಂದ ಕೆಲ ಪೋಷಕರು ಈಗಾಗಲೇ ತಮ್ಮ ಮಕ್ಕಳಿಗೆ ಸೀಟು ಕಾಯ್ದಿರಿಸಿದ್ದಾರೆ ಎಂದು ಶಿಕ್ಷಣ ಸಂಘಟನೆಗಳು ಮಾಹಿತಿ ನೀಡಿವೆ.
ಶಿಕ್ಷಣ ಕಾಯ್ದೆಗೂ ತಿದ್ದುಪಡಿ ತನ್ನಿ: ಖಾಸಗಿ ವೈದ್ಯಕೀಯ ಸಂಸ್ಥೆಗಳು ನೀಡುವ ಚಿಕಿತ್ಸೆಗೆ ಶುಲ್ಕ ನಿಗದಿ ಸೇರಿದಂತೆ ಹಲವು ವಿಚಾರವಾಗಿ ನಿಯಂತ್ರಣ ಸಾಧಿಸಲು ಕೆಪಿಎಂಇ ತಿದ್ದುಪಡಿ ಕಾಯ್ದೆ ಮಂಡಿಸಿದಂತೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ ಸಾಧಿಸಲು ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳು ಸರ್ಕಾರವನ್ನು ಒತ್ತಾಯಿಸಿವೆ.
ದೂರು ಸಲ್ಲಿಸಿದರೆ ಕಠಿಣ ಕ್ರಮ: ಇಲಾಖೆಯ ಸೂಚನೆ ಇಲ್ಲದೇ ಯಾವುದೇ ಶಿಕ್ಷಣ ಸಂಸ್ಥೆಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪ್ರಕ್ರಿಯೆ ಆರಂಭಿಸುವಂತಿಲ್ಲ. ಈ ಬಗ್ಗೆ ಪೋಷಕರು ಅಥವಾ ಶಿಕ್ಷಣ ಸಂಘಟನೆಗಳು ದಾಖಲೆ ಸಹಿತ ದೂರು ಸಲ್ಲಿಸಿದರೇ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆಯ ಉನ್ನತಾಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಖಾಗಿಸ ಶಾಲೆಗೆ ವಾರ್ಷಿಕ ಎಷ್ಟು ಖರ್ಚು ಬರುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಸರ್ಕಾರ ಶುಲ್ಕ ನಿಯಂತ್ರಣಕ್ಕೆ ಕಾಯ್ದೆ ಅನುಷ್ಠಾನ ಮಾಡಬೇಕು. ಇದರಿಂದ ಶೇ.95ರಷ್ಟು ಶಾಲೆಗಳಿಗೆ ದೊಡ್ಡ ರಿಲೀಫ್ ಸಿಗುತ್ತದೆ. ತಿದ್ದುಪಡಿ ಕಾಯ್ದೆ ವೈಜ್ಞಾನಿಕವಾಗಿದ್ದರೆ ಖಂಡಿತ ಅದನ್ನು ಸ್ವಾಗತಿಸುತ್ತೇವೆ.
-ಡಿ.ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ
* ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.