ಹೊರವರ್ತುಲವೆಂಬ ಅಪಘಾತ ವಲಯ!
ದಾರಿ ಯಾವುದಯ್ಯ ಸಂಚಾರಕೆ?
Team Udayavani, Aug 24, 2019, 3:09 AM IST
ಬೆಂಗಳೂರು: ನಗರದ ಹೊರವರ್ತುಲ ರಸ್ತೆಗಳಲ್ಲಿ ಸಂಚಾರ ಈಗ ಜೀವಕ್ಕೆ ಸಂಚಕಾರವಾಗಿದೆ! ನಗರದ ಒಳಗಡೆ ಇರುವ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಿಂದ ಸವಾರರು ಪರದಾಡುತ್ತಿದ್ದರೆ, ಹೊರವರ್ತುಲ ರಸ್ತೆಗಳಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಸಂಚಾರ ಪೊಲೀಸರು ನೀಡಿದ ಮಾಹಿತಿ ಪ್ರಕಾರವೇ ಕಳೆದ ಮೂರು ವರ್ಷಗಳಲ್ಲಿ ಶೇ.70ಕ್ಕೂ ಹೆಚ್ಚು ಅಪಘಾತಗಳು ಹೊರವರ್ತುಲ ರಸ್ತೆಗಳಲ್ಲೇ ಸಂಭವಿಸಿವೆ. ಸಾವು-ನೋವುಗಳು ಕೂಡ ಈ ರಸ್ತೆಗಳಲ್ಲೇ ಅಧಿಕ ಸಂಖ್ಯೆಯಲ್ಲಿವೆ. ಇದರಿಂದ ಹಾಗಿದ್ದರೆ, ಸಂಚಾರಕ್ಕೆ ಸುರಕ್ಷಿತ ಮಾರ್ಗ ಯಾವುದು ಎಂಬ ಪ್ರಶ್ನೆ ಕಾಡುತ್ತಿದೆ.
ಈ ಹೊರವರ್ತುಲ ರಸ್ತೆಗಳು ಬಹುತೇಕ ಐಟಿ-ಬಿಟಿ ಕಂಪೆನಿಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಹೀಗಾಗಿ, ಈ ರಸ್ತೆಗಳನ್ನು ಲಕ್ಷಾಂತರ ಸವಾರರು ಬಳಸುತ್ತಾರೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರು ಸಾಮಾನ್ಯವಾಗಿ ಒತ್ತಡದಲ್ಲಿರುತ್ತಾರೆ. ಅಲ್ಲದೆ, ನಿದ್ರಾಹೀನತೆ ಸಮಸ್ಯೆಯೂ ಅವರನ್ನು ಕಾಡುತ್ತಿರುತ್ತದೆ. ಇವೆಲ್ಲವೂ ಪರೋಕ್ಷವಾಗಿ ಅಪಘಾತ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗುತ್ತಿದೆ ಎಂದು ಸಾರಿಗೆ ತಜ್ಞ ಎಂ.ಎನ್ ಶ್ರೀಹರಿ ಅಭಿಪ್ರಾಯಪಡುತ್ತಾರೆ.
“ನಗರದ ಒಳಭಾಗದಲ್ಲಿರುವ ರಸ್ತೆಗಳಿಗೆ ಹೋಲಿಸಿದರೆ, ಹೊರವರ್ತುಲ ರಸ್ತೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ. ಅಷ್ಟೇ ಅಲ್ಲ, ಈ ರಸ್ತೆಗಳಲ್ಲಿ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಒಂದೇ ಭಾಗದ ಮೇಲೆ ಒತ್ತಡ ಹೆಚ್ಚಾಗುತ್ತಿರುವುದು, ಲಕ್ಷಾಂತರ ವಾಹನಗಳು ಇರುವುದು ಸಹ ಅಪಘಾತ ಹೆಚ್ಚಾಗುತ್ತಿರುವುದಕ್ಕೆ ಕಾರಣ. ಅಗತ್ಯಕ್ಕೆ ಅನುಗುಣವಾಗಿ ಬಹುತೇಕ ರಸ್ತೆಗಳಲ್ಲಿನ ಟ್ರಾಫಿಕ್ ಸಿಗ್ನಲ್‌ಗಳು ಸುಧಾರಿಸಿಲ್ಲ. ಹೊರವರ್ತುಲ ಸರ್ವೀಸ್ ರಸ್ತೆಗಳಿದ್ದು, ಇದರಲ್ಲಿ ಕಡ್ಡಾಯ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿದೆ.
ಆದರೆ, ಬಹುತೇಕ ಸರ್ವೀಸ್ ರಸ್ತೆಗಳನ್ನು ದ್ವಿಮುಖ ಸಂಚಾರಕ್ಕೆ ಬಳಸಲಾಗುತ್ತಿದೆ. ಈ ಕಾರಣಕ್ಕೆ ಮುಖಾಮುಖೀ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದ ಒಳಭಾಗದಲ್ಲಿ ವೇಗಮಿತಿ ಗಂಟೆಗೆ 40 ಕಿ.ಮೀ., ಹೊರವರ್ತುಲ ರಸ್ತೆಯಲ್ಲಿ 60 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ 80 ಕಿ.ಮೀ. ವೇಗಮಿತಿ ಇದೆ. ಇದು ಕಡ್ಡಾಯವಾಗಿ ಪಾಲನೆ ಆಗಬೇಕು. ಹೊರವರ್ತುಲ ರಸ್ತೆಗಳು ಬಹುತೇಕ ಹೆದ್ದಾರಿಯನ್ನು ಸಂಪರ್ಕಿಸುತ್ತವೆ. ಹೀಗಾಗಿ, ವೇಗಮಿತಿಯ ಬಗ್ಗೆ ಸಂಚಾರ ಪೊಲೀಸರು ಗಮನ ನೀಡಬೇಕು’ ಎಂದು ಅವರು ವಿವರಿಸುತ್ತಾರೆ.
ನಿರ್ಲಕ್ಷ್ಯವೂ ಕಾರಣ: ನಗರದ ಒಳಭಾಗದಲ್ಲಿ ಮದ್ಯಸೇವನೆ ಮಾಡಿ ವಾಹನ ಚಲಾಯಿಸುವವರು ಸುಲಭವಾಗಿ ಸಿಕ್ಕಿಬೀಳುತ್ತಾರೆ. ಆದರೆ, ಹೊರವರ್ತುಲ ರಸ್ತೆಗಳಲ್ಲಿ ಈ ಸಂಖ್ಯೆ ತುಂಬಾ ಕಡಿಮೆ ಎನ್ನಲಾಗಿದ್ದು, ಈ ಭಾಗದಲ್ಲಿ ಕುಡಿದು ವಾಹನ ಚಲಾಯಿಸುವವರು ಮತ್ತು ವ್ಹೀಲಿಂಗ್ ಮಾಡುವವರ ಸಂಖ್ಯೆಯೂ ಹೆಚ್ಚಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸಂಚಾರ ಪೊಲೀಸರು. ಈ ಭಾಗದಲ್ಲಿ ಕಳೆದ ವರ್ಷ ಅಪ್ರಾಪ್ತ ವಯಸ್ಸಿನವರು ರಾತ್ರಿ ವೇಳೆ ವೇಗವಾಗಿ ವ್ಹೀಲಿಂಗ್ ಮಾಡುತ್ತಿದ್ದರು.
ಇದನ್ನು ತಡೆಯುವ ಉದ್ದೇಶದಿಂದ ನಾಕಾಬಂಧಿಗಳನ್ನು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು. ಇದರ ಹೊರತಾಗಿಯೂ ಅಪಘಾತಗಳು ಹೆಚ್ಚಾಗುತ್ತಿವೆ. ಜತೆಗೆ ವಾಹನ ಸವಾರರು ವೇಗವಾಗಿ ವಾಹನ ಚಲಾಯಿಸುತ್ತಿರುವುದರಿಂದ ಮುಖಾಮುಖೀ ಡಿಕ್ಕಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ವಾಹನ ಸವಾರರ ನಿರ್ಲಕ್ಷ್ಯವೂ ಕಾರಣ ಎನ್ನುತ್ತಾರೆ ಸಂಚಾರ ಪೊಲೀಸರು. ಹೊರವರ್ತುಲ ರಸ್ತೆಗಳಲ್ಲಿನ ಹಲವು ಭಾಗಗಳಲ್ಲಿ ಬೀದಿ ದೀಪಗಳಿಲ್ಲ.
ಸಿಲ್ಕ್ಬೋರ್ಡ್, ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಹೊರವಲಯದ ಪ್ರಮುಖ ರಸ್ತೆಗಳಲ್ಲೂ ಇದೇ ಸಮಸ್ಯೆ ಇದೆ ಎನ್ನುತ್ತಾರೆ ಕ್ಲೀನ್‌ಏರ್ ಫೌಂಡೇಷನ್ ಸಿಇಒ ಯೋಗೇಶ್. ಈ ಭಾಗದಲ್ಲಿ ವಾಹನ ಸವಾರರು ವೇಗವಾಗಿ ವಾಹನ ಚಲಾಯಿಸುತ್ತಾರೆ. ಹೀಗಾಗಿ, ಇಲ್ಲಿ ಮಾಹಿತಿ ಫಲಕಗಳ ಅವಶ್ಯಕತೆ ಹೆಚ್ಚಾಗಿದೆ. ಆದರೆ, ಕೆಲವೆಡೆ ಮಾಹಿತಿ ಫಲಕ ಅಳವಡಿಸಿದ್ದರೂ, ಬೀದಿ ದೀಪಗಳು ಇಲ್ಲದಿರುವುದರಿಂದ ಅವು ಇದ್ದೂ ಇಲ್ಲದಂತಾಗಿದೆ ಎಂದು ಅವರು ಆರೋಪಿಸುತ್ತಾರೆ.
ಉಲ್ಲಂಘನೆಗಿಲ್ಲ ಕಡಿವಾಣ – ಅಪಘಾತಕ್ಕೆ ಕಾರಣ: ಬೆಂಗಳೂರಿನ ಹೊರವರ್ತುಲವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ರಾತ್ರಿ ವೇಳೆ ಹೆಚ್ಚಿನ ಅಪಘಾತ ಸಂಭವಿಸುತ್ತಿದ್ದು, ಈ ವೇಳೆ ಸವಾರರು ಅತಿ ವೇಗವಾಗಿ ವಾಹನ ಚಲಾಯಿಸುತ್ತಾರೆ. ಹೊರರಾಜ್ಯ ಸಂರ್ಪಕಿಸಲು ಹೊರವರ್ತುಲ ರಸ್ತೆಗಳ ಮೂಲಕವೇ ಹಾದುಹೋಗಬೇಕಾಗಿರುವುದರಿಂದ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸವಾರರು ಇದೇ ಮಾರ್ಗದ ಮೂಲಕ ಹಾದುಹೋಗುತ್ತಾರೆ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಸಾಮಾನ್ಯವಾಗಿ ಸಂಚಾರ ಪೊಲೀಸರು ಇರುವುದಿಲ್ಲ. ಹೆದ್ದಾರಿ ಪೆಟ್ರೋಲಿಂಗ್ ವಾಹನದಲ್ಲಿ ಸಂಚಾರ ಪೊಲೀಸರು ಗಸ್ತು ತಿರುಗುತ್ತಾರೆ. ನಿರ್ದಿಷ್ಟ ಪ್ರದೇಶದಲ್ಲಿ ಸಂಚಾರ ಪೊಲೀಸರು ಇಲ್ಲದಿರುವುದರಿಂದಲೂ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಡಿವಾಣ ಬೀಳುತ್ತಿಲ್ಲ ಎನ್ನುವ ಆರೋಪವೂ ಇದೆ.
ಸಂಪರ್ಕಿಸುವ ಪ್ರಮುಖ ರಸ್ತೆಗಳು: ಹೊರವರ್ತುಲ ರಸ್ತೆಗಳನ್ನು ಸಂರ್ಪಕಿಸುವ ರಸ್ತೆಗಳಲ್ಲಿ ಪ್ರಮುಖವಾಗಿ ಇಂದಿರಾನಗರ, ಕೆ.ಆರ್. ಪುರ, ಬಾಣಸವಾಡಿ, ಕೆ.ಜೆ. ಹಳ್ಳಿ, ಆಡುಗೋಡಿ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಮೈಕೋ ಲೇಔಟ್, ವಿಮಾನ ನಿಲ್ದಾಣ ರಸ್ತೆ, ವೈಟ್‌ಫೀಲ್ಡ್, ಹುಳಿಮಾವು, ಎಚ್‌ಎಸ್‌ಆರ್ ಲೇಔಟ್, ಬೀರಪುರ, ಕಾಮಾಕ್ಷಿಪಾಳ್ಯ, ಕೆಂಗೇರಿ, ಪೀಣ್ಯ, ಜಾಲಹಳ್ಳಿ, ಬಸವನಗುಡಿ, ಬನಶಂಕರಿ, ಕುಮಾರಸ್ವಾಮಿ ಬಡಾವಣೆ, ಹೆಬ್ಟಾಳ, ಯಲಹಂಕ, ಚಿಕ್ಕಜಾಲ ಮತ್ತು ದೇವನಹಳ್ಳಿಯ ರಸ್ತೆಗಳು ಪ್ರಮುಖವಾಗಿ ಹೊರವರ್ತುಲ ರಸ್ತೆಗಳನ್ನು ಸಂರ್ಪಕಿಸುತ್ತವೆ.
ಟ್ರಾಫಿಕ್ ಒಳಗೆ, ಅಪಘಾತ ಹೊರಗೆ!: ಒಟ್ಟಾರೆ 44 ಸಂಚಾರ ಪೊಲೀಸ್ ಠಾಣೆಗಳಿದ್ದು, ಈ ಪೈಕಿ 24 ಠಾಣೆಗಳ ವ್ಯಾಪ್ತಿಯಲ್ಲಿ ಈ ಹೊರವರ್ತುಲ ರಸ್ತೆಗಳು ಬರುತ್ತವೆ. ಆದರೆ, ಹೆಚ್ಚು ವಾಹನಗಳ ದಟ್ಟಣೆ ಇರುವುದು ನಗರದ ಒಳಗಡೆ. ಅಪಘಾತಗಳು ಅಧಿಕವಾಗಿರುವುದು ನಗರದ ಹೊರಗೆ!
ವರ್ಷ ಅಪಘಾತ ಹೊರವರ್ತುಲ ರಸ್ತೆ ಅಪಘಾತ ಇತರೆ ರಸ್ತೆ
2017 2,962 1,294
2018 2,991 1,138
2019 1,777 631
ವರ್ಷ ಮೃತರು ಹೊರವರ್ತುಲ ರಸ್ತೆ ಮೃತರು ಒಟ್ಟಾರೆ ರಸ್ತೆ
2017 492 150
2018 557 129
2019 335 110
* ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.