ಕಂದಾಯ ನಿವೇಶನಗಳಿಗೆ ಪಾಲಿಕೆಯಿಂದ ಖಾತೆ
Team Udayavani, Feb 23, 2019, 6:23 AM IST
ಬೆಂಗಳೂರು: ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಗ್ರಾಮಗಳ ವ್ಯಾಪ್ತಿಯ ಕಂದಾಯ ನಿವೇಶನಗಳಿಗೆ ಖಾತೆ ನೀಡಲು ಸರ್ಕಾರ ಅನುಮೋದನೆ ನೀಡಿದ್ದು, ಒಂದು ವಾರದೊಳಗೆ ಈ ಕುರಿತು ಸುತ್ತೋಲೆ ಹೊರಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
ಬಿಬಿಎಂಪಿಯ 2019-20ನೇ ಸಾಲಿನ ಬಜೆಟ್ ಮೇಲಿನ ಶುಕ್ರವಾರದ ಚರ್ಚೆಯ ವೇಳೆ ಕಂದಾಯ ನಿವೇಶನಗಳಿಗೆ ಖಾತಾ ನೀಡಿದ ಪರಿಣಾಮ ಪಾಲಿಕೆಗೆ ನಷ್ಟವಾಗುತ್ತಿದೆ. ಜತೆಗೆ ಅಧಿಕಾರಿಗಳು ಲಕ್ಷಾಂತರ ಹಣ ಪಡೆದು ಅಕ್ರಮವಾಗಿ ಖಾತಾ ಮಾಡಿಕೊಡುತ್ತಿದ್ದಾರೆ ಎಂದು ಹಲವಾರು ಸದಸ್ಯರು ಆರೋಪಿಸಿ, ಪಾಲಿಕೆಯಿಂದ ಕೈಗೊಂಡಿರುವ ಕ್ರಮವೇನು ಎಂದು ಪ್ರಶ್ನಿಸಿದರು.
ಆಸ್ತಿ ತೆರಿಗೆ ಸಂಗ್ರಹ ಸಮರ್ಪಕವಾಗಿ ಆಗುತ್ತಿಲ್ಲ: ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಆಯುಕ್ತರು, ಕಂದಾಯ ವ್ಯಾಪ್ತಿಯ ಜಾಗದಲ್ಲಿ ನಿವೇಶನ ರಚನೆ ಮಾಡಿಕೊಂಡಿದ್ದು, ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಅವರಿಗೆ ಪಾಲಿಕೆಯಿಂದ ಖಾತಾ ನೀಡದ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಸಮರ್ಪಕವಾಗಿ ಆಗುತ್ತಿಲ್ಲ.
ಜತೆಗೆ ಕೆಲವೆಡೆ ಅನಧಿಕೃತವಾಗಿ ಖಾತೆ ನೀಡಿರುವ ದೂರುಗಳು ಕೇಳಿಬಂದಿವೆ. ಆ ಹಿನ್ನೆಲೆಯಲ್ಲಿ ಕಂದಾಯ ನಿವೇಶನಗಳಿಗೆ ಖಾತೆ ನೀಡುವ ಬಗ್ಗೆ ಅಡ್ವೋಕೇಟ್ ಜನರಲ್ ಅವರ ಸಲಹೆ ಕೇಳಲಾಗಿತ್ತು ಎಂದು ಹೇಳಿದರು. ಪಾಲಿಕೆಯ ಪ್ರಸ್ತಾವನೆಗೆ ಅಡ್ವೋಕೇಟ್ ಜನರಲ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಇದರೊಂದಿಗೆ ಕಂದಾಯ ನಿವೇಶನಗಳಿಗೆ ಖಾತೆ ನೀಡಲು ನಗರಾಭಿವೃದ್ಧಿ ಇಲಾಖೆಯಿಂದಲೂ ಅನುಮತಿ ಸಿಕ್ಕಿದ್ದು, ಇನ್ನೊಂದು ವಾರದಲ್ಲಿ ಇದಕ್ಕೆ ಸಂಬಂಧಿಸಿದ ಸುತ್ತೋಲೆ ಹೊರಡಿಸಲಾಗುವುದು ಎಂದರು. ಈ ವೇಳೆ ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಮೇಜು ಕುಟ್ಟಿ ನಿರ್ಧಾರವನ್ನು ಸ್ವಾಗತಿಸಿದರು.
ಅನುದಾನ ಕೇಳುವುದು ಪಾಲಿಕೆಯ ಹಕ್ಕು: ಪಾಲಿಕೆಯ ವ್ಯಾಪ್ತಿಯಲ್ಲಿ ಕೈಗೊಳ್ಳುವಂತಹ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಕೇಳುವುದು ಪಾಲಿಕೆ ಹಕ್ಕಾಗಿದೆ ಎಂದು ಮಾಜಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್ ತಿಳಿಸಿದರು. ಹಿಂದೆ ಪಾಲಿಕೆಗೆ ಸಾಕಷ್ಟು ಆದಾಯಗಳು ಮೂಲಗಳಿದ್ದವು. ಆಕ್ಟ್ರಾಯ್ ಸೇರಿ ಹಲವು ಮೂಲಗಳಿಂದ ತೆರಿಗೆ ಪಾಲಿಕೆಗೆ ಬರುತ್ತಿದ್ದವು.
ಅವೆಲ್ಲವನ್ನೂ ಸರ್ಕಾರ ಮೊಟಕುಗೊಳಿಸಿದರಿಂದ ಅನುದಾನಕ್ಕಾಗಿ ಸರ್ಕಾರದ ಕಡೆಗೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಬೆಂಗಳೂರು ನಗರದಿಂದಲೇ ವಾರ್ಷಿಕ 60 ಸಾವಿರ ಕೋಟಿ ರೂ.ಗೂ ಹೆಚ್ಚಿನ ತೆರಿಗೆ ಸರ್ಕಾರಕ್ಕೆ ಸಂಗ್ರಹವಾಗುತ್ತಿದೆ. ಆದರೆ, ರಾಜ್ಯ ಸರ್ಕಾರದ ಹಣಕಾಸು ಆಯೋಗದಿಂದ ಪಾಲಿಕೆಗೆ ದೊರೆಯುತ್ತಿರುವ ಅನುದಾನ ತೀರಾ ಕಡಿಮೆಯಿದ್ದು, ಅದನ್ನು ಹೆಚ್ಚಿಸಬೇಕಾಗಿದೆ ಎಂದರು.
ಅನುದಾನ ಅಗತ್ಯವಿದೆ: ಬೆಂಗಳೂರು ಸಾಕಷ್ಟು ಬೆಳೆದಿರುವುದರಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಅನುದಾನ ಅಗತ್ಯವಿದೆ. ಹೀಗಾಗಿ ಜಿಎಸ್‌ಟಿಯಲ್ಲಿ ಶೇ.25ರಷ್ಟು ಪಾಲನ್ನು ಪಾಲಿಕೆಗೆ ನೀಡಬೇಕೆಂದು ಒತ್ತಾಯಿಸಿದ ಅವರು, ಈ ಕುರಿತು ಪಾಲಿಕೆಯ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನ ಹೆಚ್ಚಿಗೆ ನೀಡುವಂತೆ ಕೋರಬೇಕಾಗಿದೆ ಎಂದು ಸಲಹೆ ನೀಡಿದರು.
ಕರಗ ಉತ್ಸವಕ್ಕೆ ಕಡಿಮೆ ಅನುದಾನ: ಬಿಜೆಪಿಯ ಅವಧಿಯಲ್ಲಿ ಪಾಲಿಕೆಗೆ 6,702 ಕೋಟಿ ರೂ. ಅನುದಾನ ಮಾತ್ರ ಲಭ್ಯವಾಗಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 12,346 ಕೋಟಿ ರೂ. ಅನುದಾನ ದೊರಕಿದೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ ನಗರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಆದ್ಯತೆ ನೀಡಿರುವುದು ಕಂಡುಬಂದಿದೆ ಎಂದ ಅವರು, ಬಜೆಟ್‌ನಲ್ಲಿ ಕರಗ ಉತ್ಸವಕ್ಕೆ ಕಡಿಮೆ ಅನುದಾನ ಮೀಸಲಿಡಲಾಗಿದ್ದು, ಕನಿಷ್ಠ 1 ಕೋಟಿ ರೂ.ಗಳನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.
ಮುಖಚಹರೆ ಬಯೋಮೆಟ್ರಿಕ್ ಅವಶ್ಯ: ಬಜೆಟ್‌ನಲ್ಲಿ ಘೋಷಿಸಿರುವಂತೆ ಪಾಲಿಕೆಯ ಅಧಿಕಾರಿಗಳಿಗೆ ಮುಖ ಚಹರೆಯಿರುವ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರೆ ಮಾತ್ರವೇ ಪಾಲಿಕೆಯಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಸಲಹೆ ನೀಡಿದರು.
ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಬೆಳಗ್ಗೆ 11 ಗಂಟೆಗೆ ಮಹಾರಾಜರಂತೆ ಕಚೇರಿ ಬಂದ ಕೆಲ ಹೊತ್ತಿನಲ್ಲೇ ಮತ್ತೆ ಕಾಫಿ-ಟೀ ಕುಡಿಯಲು ಹೋಗುತ್ತಾರೆ. ಶುಕ್ರವಾರ ಮಧ್ಯಾಹ್ನದ ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈಗೆ ಸಿಗುವುದೇ ಇಲ್ಲ. ಆ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಅನಿವಾರ್ಯವಾಗಿದೆ ಎಂದು ಅವರು, ಪಾಲಿಕೆಯ ಕೇಂದ್ರ ಕಚೇರಿಯಲ್ಲಿರುವ ಕ್ಯಾಂಟೀನ್ ಸ್ಥಳಕ್ಕೆ ಮಹಿಳೆಯರು ಹೋಗದಂತಹ ಪರಿಸ್ಥಿತಿಯಿದೆ. ಹೀಗಾಗಿ ಪಾಲಿಕೆಯಿಂದಲೇ ಸುಸಜ್ಜಿತ ಕೆಫೆ ತೆರೆಯಬೇಕು ಎಂದು ಆಗ್ರಹಿಸಿದರು.
ಅನುದಾನ ಹಂಚಿಕೆ ಜಟಾಪಟಿ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಸಮರ್ಪಕವಾಗಿ ಅನುದಾನ ಹಂಚಿಕೆ ಮಾಡಲಾಗಿದೆ ಎಂಬ ವಿಷಯವಾಗಿ ಬಿಜೆಪಿ ಮಹಿಳಾ ಸದಸ್ಯರು ಹಾಗೂ ಆಡಳಿತ ಪಕ್ಷ ಸದಸ್ಯರ ನಡುವೆ ತೀವ್ರ ಜಟಾಪತಿ ನಡೆಯಿತು. ಶುಕ್ರವಾರ ಮೊದಲಿಗೆ ಗುಣಶೇಖರ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮಹಿಳಾ ಸದಸ್ಯರಿಗೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ ಎಂದಾಗ, ಬಿಜೆಪಿಯ ವೀಣಾರಾವ್ ಹಾಗೂ ಮೀನಾಕುಮಾರಿ ಆಕ್ಷೇಪಿಸಿದರು.
ಬಿಜೆಪಿ ಸದಸ್ಯರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದ್ದು, ಕಾಂಗ್ರೆಸ್, ಜೆಡಿಎಸ್ ಸದಸ್ಯರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ವಾಗ್ಧಾಳಿ ನಡೆಸಿದರು. ಇದಕ್ಕೆ ಉತ್ತರಿಸಿದ ಆಡಳಿತ ಪಕ್ಷ ನಾಯಕ ಅಬ್ದುಲ್ ವಾಜಿದ್, ಎಂ.ಶಿವರಾಜು ಅವರು, ಸಾಕಷ್ಟು ಅನುದಾನ ನೀಡಿದರೂ ಏಕೆ ಸುಳ್ಳು ಮಾಹಿತಿ ನೀಡುತ್ತೀರಾ? ನಿಮ್ಮ ವಾರ್ಡ್‌ಗಳಿಗೆ ಅನುದಾನ ನೀಡಿದ್ದರೆ ಅದನ್ನು ವಾಪಸ್ ಪಡೆಯಬಹುದೇ? ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಬಿಜೆಪಿಯಲ್ಲಿ 101 ಸದಸ್ಯರಿದ್ದರೂ ಕೇವಲ 311.60 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ, 75 ಸದಸ್ಯರಿರುವ ಕಾಂಗ್ರೆಸ್‌ನವರಿಗೆ 794.95 ಕೋಟಿ ರೂ. ಹಾಗೂ ಕೇವಲ 15 ಮಂದಿಯಿರುವ ಜೆಡಿಎಸ್ ಸದಸ್ಯರಿಗೆ ಬರೋಬ್ಬರಿ 409.80 ಕೋಟಿ ರೂ. ನೀಡಿದ್ದು, ಆರು ಮಂದಿ ಪಕ್ಷೇತರರಿಗೆ 62 ಕೋಟಿ ರೂ. ಅನುದಾನ ನೀಡಿರುವುದು ಎಷ್ಟು ಸರಿ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಈ ವೇಳೆ ಗುಣಶೇಖರ್ ಪ್ರತಿಕ್ರಿಯಿಸಿ, ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗ ಅವರ ಪಕ್ಷಕ್ಕೆ ಹೆಚ್ಚು ಅನುದಾನ ನಿಗದಿ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈಗ ನಮಗೆ ಹೆಚ್ಚು ಅನುದಾನ ಸಿಕ್ಕಿದೆ ಎಂದು ಸಮರ್ಥಿಸಿಕೊಳ್ಳುವ ಮೂಲಕ ಜಟಾಪಟಿಗೆ ತೆರೆ ಎಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.