Trees: ಆ್ಯಸಿಡ್ ದಾಳಿಗೆ ನೂರಾರು ಮರಗಳ ಕಗ್ಗೊಲೆ
Team Udayavani, Feb 12, 2024, 12:08 PM IST
ನಗರದಲ್ಲಿ ಮರಗಳಿಗೇ ವಿಷವುಣಿಸುವ ಕೀಚಕರಿದ್ದಾರೆ? ರಾಜಧಾನಿಯಲ್ಲಿ ಹಸಿರೆಲೆಗಳಿಂದ ಕಂಗೊಳಿಸಿ ಬೇಸಿಗೆ ಋತುವಿನಲ್ಲಿ ಬಣ್ಣ ಬಣ್ಣದ ಹೂವು ಬಿಟ್ಟು, ಕಾಮನಬಿಲ್ಲನ್ನೇ ಸೃಷ್ಟಿಸುವ ಮರಗಿಡಗಳಿಗೆ ಈಗ ಸಂಕಷ್ಟಕ್ಕೆ ಎದುರಾಗಿದೆ. ಮನೆ ಆವರಣದ ರಸ್ತೆ ಬದಿಯಲ್ಲಿ ಯಾರ ಹಂಗಿಲ್ಲದೆ ಆಳೆತ್ತರಕ್ಕೆ ಬೆಳೆದು ಸುಡು ಬಿಸಿಲಿನಲ್ಲಿ ತನ್ನರಸಿ ಬರುವವರಿಗೆ ನೆರಳು ನೀಡುವ ವೃಕ್ಷಗಳು ಆ್ಯಸಿಡ್ ದಾಳಿಗೆ ತುತ್ತಾಗುತ್ತಿವೆ. ಉದ್ಯಾನ ನಗರಿ ಹಸಿರೀಕರಣ ಅಪಾಯಕ್ಕೆ ಸಿಲುಕಿದೆ. ಈ ಕುರಿತ ವರದಿ ಸುದ್ದಿ ಸುತ್ತಾಟದಲ್ಲಿ…
ಬೆಂಗಳೂರು: ಭೂರಮೆಯ ಮಡಿಲ ಆಳದಲ್ಲಿ ಬೇರಿನ ಮೂಲಕ ನೀರು ಹೀರಿ ಬೆವರಿನಲ್ಲಿ ಬೆಂದ ಮಂದಿಗೆ ತನ್ನ ಹಸಿರೆಲೆಗಳ ಮೂಲಕ ತಣ್ಣನೆಯ ತಂಗಾಳಿ ಹೂರಸೂಸುವ ಗಿಡಮರಗಳು ಇದೀಗ “ದ್ರಾವಣ ದಾಳಿ’ಯ ಭೀತಿಗೆ ಸಿಲುಕಿವೆ. “ಉದ್ಯಾನನಗರಿ’ ಎಂಬ ಖ್ಯಾತಿ ಇರುವ ಬೆಂಗಳೂರಿನಲ್ಲಿ ಮನೆ ಸೌಂದರ್ಯಕ್ಕೆ ಮರ ಅಡ್ಡಿ, ಮನೆ ವಾಸ್ತು ಪ್ರಕಾರ ವೃಕ್ಷ ಅಡ್ಡಿ ಎಂದು ಮರದ ಒಡಲಿಗೆ ರಾಸಾಯಿನಿಕ ದ್ರಾವಣ (ಆ್ಯಸಿಡ್) ಸೇರಿಸಿ ಸದ್ದಿಲ್ಲದೆ ಸಾಯಿಸುವ ಕೆಲಸ ನಡೆದಿದೆ.
ನೆರೆ ಮನೆಯವರ ಕಾಂಪೌಂಡ್‌ನಲ್ಲಿರುವ ಮರ ಪಕ್ಕದ ಮನೆಯವರ ಆವರಣದ ತುಂಬೆಲ್ಲ ಎಲೆ ಉದುರಿಸುತ್ತಿದೆ, ಜಾಹೀರಾತು ಬೋರ್ಡ್‌ಗಳಿಗೆ ಅಡ್ಡಿಯಾಗಿದೆ ಎಂಬ ಕಾರಣಕ್ಕೆ ರಸ್ತೆ ಬದಿಯಲ್ಲಿರುವ ದೊಡ್ಡ ಮರಗಳ ತೊಗಟೆ ಸೀಳಿ, ರಂಧ್ರಗಳ ಕೊರೆದು ಮರದ ಒಡಲಿಗೆ ದ್ರಾವಣ ಸೇರಿಸುವ ಕೆಲಸ ನಡೆಯುತ್ತಿದೆ. ಅಂದಹಾಗೆ ಮರಗಿಡಗಳಿಗೆ ವಿಷವುಣಿಸುತ್ತಿರುವವರು ಅನಕ್ಷರಸ್ಥರೇನೂ ಅಲ್ಲ. ಅಕ್ಷರಸ್ಥರೆ ಆಗಿದ್ದಾರೆ. ದುಃಖದ ಸಂಗತಿ ಅಂದರೆ ವೈದ್ಯ ಸಹ ಸೇರಿದ್ದಾನೆ. ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಇದ್ದಾರೆ. ಅಕ್ಷರಸ್ಥರೇ ಹೀಗೆ ಮರದ ಒಡಲಿಗೆ ಸದ್ದಿಲ್ಲದೆ ವಿಷವುಣಿಸುವ ಕೆಲಸಕ್ಕೆ ಇಳಿದಿದ್ದು, ಪರಿಸರ ಪ್ರಿಯರಲ್ಲಿ ನೋವು ತರಿಸಿದೆ.
ಕೃತ್ಯ ಸಿಸಿ ಕಾಮೆರಾದಲ್ಲಿ ಸೆರೆ: ಕಳೆದ ಜ.12ರಂದು ಕೋಟೆ “ಸಿ’ ಬೀದಿಯಲ್ಲಿ ವ್ಯಕ್ತಿಯೊಬ್ಬ ಮಧ್ಯರಾತ್ರಿ 1.30ರಲ್ಲಿ ಮರದ ಬುಡಕ್ಕೆ ರಾಸಾಯನಿಕ ಸಿಂಪಡಣೆ ಮಾಡಿದ್ದು, ಆ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಕೋಟೆ ಬೀದಿಯ ಇಬ್ಬರು ನಿವಾಸಿಗಳ ವಿರುದ್ಧ ಬಿಬಿಎಂಪಿ ದಕ್ಷಿಣ ವಲಯ ಉಪ ಅರಣ್ಯಾಧಿಕಾರಿಗಳು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯೊಬ್ಬರು ಮಾತನಾಡಿ, ಕಳೆದ ಎರಡ್ಮೂರು ವರ್ಷಗಳ ಹಿಂದೆ ನಮ್ಮ ಪ್ರದೇಶದಲ್ಲಿ ಸ್ಥಳೀಯರೇ ಸೇರಿ 15ರಿಂದ 20 ಹೊಂಗೆ ಮರ ನೆಟ್ಟಿದ್ದೇವೆ. ಅದಕ್ಕೆ ನೀರು ಹಾಕಿ, ತಡೆಬೇಲಿ ಹಾಕಿ ಮಕ್ಕಳಂತೆ ಪೋಷಿಸುತ್ತಿದ್ದೇವೆ. ಆದರೆ, ನಮ್ಮ ಪ್ರದೇಶದಲ್ಲಿ ವಾಸಿಸುವವರೇ ಈ ಕೃತ್ಯ ಎಸಗಿದ್ದಾರೆ. ಅದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಹೇಳಿದ್ದಾರೆ. ಮನೆಯ ನೋಟಕ್ಕೆ ಅಡ್ಡಿಯಾಗಿದೆ ಎಂಬ ಕಾರಣದಿಂದಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಮಣ್ಣಿನ ಪರೀಕ್ಷೆ ನಡೆಸಿದಾಗ ರಾಸಾಯನಿಕ ವಸ್ತು ಮರಕ್ಕೆ ಸಿಂಪಡಿಸಿರುವುದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಬುಡ ಸ್ವಲ್ಪ ಸುಟ್ಟು ಹೋದಂತಾಗಿದೆ. ಸದ್ಯ ಬುಡಕ್ಕೆ ಔಷಧಿ ಸಿಂಪಡಿಸಿ, ಮಣ್ಣು ತುಂಬಿದ್ದೇನೆ. ಮರಗಳಿಗೆ ಈ ರೀತಿಯ ದೌರ್ಜನ್ಯ ಎಸಗುವುದು ತಪ್ಪು. ಇಂತಹ ಘಟನೆ ಬೆಳಕಿಗೆ ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು “ಟ್ರೀ ಡಾಕ್ಟರ್’ ವಿಜಯ್ ನಿಶಾಂತ್ ಮನವಿ ಮಾಡುತ್ತಾರೆ. ಹೊಂಗೆ ಮರದ ಬುಡಕ್ಕೆ ಆ್ಯಸಿಡ್ ಹಾಕಿ ಮರ ಒಣಗುವಂತೆ ಮಾಡಲಾಗಿದೆ ಎಂದು ಹೇಳುತ್ತಾರೆ.
ಕಾಂಪೌಂಡ್ ಒಳಗೆ ಎಲೆ ಉದುರಿಸುತ್ತಿದೆ ಎಂಬ ಕಾರಣಕ್ಕೆ ಕೃತ್ಯ: ಜಯನಗರದ 4ನೇ ಬ್ಲಾಕ್‌ನಲ್ಲಿ ಕೂಡ ಕೆಲ ತಿಂಗಳ ಹಿಂದಷ್ಟೇ ಮರದ ಬುಡಕ್ಕೆ ಆ್ಯಸಿಡ್ ದಾಳಿ ನಡೆದಿತ್ತು. ಇದು ಸಹಜ ಸಾವು ಎಂಬ ರೀತಿಯಲ್ಲಿ ಬಿಂಬಿಸುವ ಯತ್ನ ಕೂಡ ಆಗಿತ್ತು. ನಂತರ ಆ್ಯಸಿಡ್ ದಾಳಿಯ ಹಿಂದಿನ ಕೃತ್ಯ ಬಯಲಾಗಿತ್ತು. ಮನೆ ಆವರಣಕ್ಕೆ ಉದುರಿದ ಎಲೆಗಳು ಬೀಳುತ್ತವೆ ಎಂಬ ಉದ್ದೇಶದಿಂದ ಮರದ ಮೇಲೆ ರಾಸಾಯನಿಕ ದಾಳಿ ನಡೆದಿತ್ತು. ಪಾಲಿಕೆಯ ಮರ ಸಂರಕ್ಷಣಾ ತಂಡ ಮತ್ತು ಮರ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಆ ಮರವನ್ನು ಸಂರಕ್ಷಣೆ ಮಾಡುವಲ್ಲಿ ಸಫಲವಾಗಿತ್ತು.
ವಿಜಯನಗರದಲ್ಲಿ ವಾಸ್ತು ದೋಷ ಕಾರಣ: ವಿಜಯನಗರದಲ್ಲಿ 2015ರಲ್ಲಿ ಮರಕ್ಕೆ ವಿಷವುಣಿಸುವ ಕಾರ್ಯ ನಡೆದಿತ್ತು. ಮನೆ ಮುಂಭಾಗದಲ್ಲಿದ್ದ ನೇರಳೆ ಹಣ್ಣಿನ ಮರ ವಾಸ್ತು ದೋಷಕ್ಕೆ ಅಡ್ಡಿಯಾಗಿದೆ ಎಂದು ಮರದ ತೊಗಟೆಯ ಸುತ್ತ ಆಳವಾದ ಡ್ರೀಲ್ (ಹೋಲ್) ಮಾಡಿ ವಿಷಯುಕ್ತ ರಾಸಾಯನಿಕ ಮರದ ಒಡಲಿಗೆ ತುಂಬುವ ಕೃತ್ಯ ನಡೆದಿತ್ತು. ಸ್ಥಳೀಯ ಶಾಸಕರ ನೆರವಿನಿಂದಾಗಿ ಪರಿಸರ ಪ್ರೇಮಿಗಳು ಆ ಮರಕ್ಕೆ ಮತ್ತೆ ಮರುಜೀವ ನೀಡಿದ್ದಾರೆ. ಇದೀಗ ಆ ಮರಕ್ಕೆ ಹೊಸ ಜೀವ ಬಂದಿದ್ದು ನೆರಳಿನ ಜತೆಗೆ, ಹಣ್ಣೂ ನೀಡುತ್ತಿದೆ.
ಜಾಹೀರಾತು ಕಾಣಿಸುತ್ತಿಲ್ಲ ಎಂದು ಮರಕ್ಕೆ ಆ್ಯಸಿಡ್ ಹಾಕಿದ ಕೀಚಕರು : ಐದಾರು ವರ್ಷಗಳ ಹಿಂದೆ ಮಾರತ್ತಹಳ್ಳಿ ಸಮೀಪದ ದೊಡ್ಡನೆಕ್ಕುಂದಿ ವಾರ್ಡ್‌ನ ಚಿನ್ನಪ್ಪನಹಳ್ಳಿ ಬಳಿಯ ಕಲಾಮಂದಿರ ಸರ್ವೀಸ್ ರಸ್ತೆ ಬದಿಯಲ್ಲಿರುವ ಜಾಹೀರಾತು ಫಲಕಗಳು ರಸ್ತೆಗೆ ಕಾಣುವುದಿಲ್ಲ ಎಂಬ ಕಾರಣಕ್ಕೆ ಕಿಡಿಗೇಡಿಗಳು 17 ಹೂವರಸಿ ಮರಗಳಿಗೆ ಆ್ಯಸಿಡ್ ದಾಳಿ ನಡೆಸಿದ್ದರು. ಇದರಲ್ಲಿ 14 ಮರ ಸಂಪೂರ್ಣ ಒಣಗಿದ್ದು, ಮೂರು ಮಾತ್ರ ಚಿಕಿತ್ಸೆಗೆ ಸ್ಪಂದಿ ಸುತ್ತಿವೆ. ಈಗ ಅವು ಹೂಬಿಟ್ಟು ಕಂಗೊಳಿಸುತ್ತಿವೆ. ಮರಗಳನ್ನು ಕೊಲ್ಲಲು ವಿಷ ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ಜಾಹೀರಾತು ಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಮರಗಳಿಗೆ ಆ್ಯಸಿಡ್ ಚುಚ್ಚುತ್ತಿರುವ ಅಪರಾಧಿಗಳ ವಿರುದ್ಧ ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ನಗರದ ಆರ್‌ಟಿಐ ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿದ್ದು ಭಾರೀ ಸುದ್ದಿಯಾಗಿತ್ತು.
ಮನೆ ಸೌಂದರ್ಯಕ್ಕೆ ಅಡ್ಡಿ ಎಂದು ಮರಕ್ಕೆ ವಿಷ ಹಾಕಿದ ವೈದ್ಯ: ರಸ್ತೆ ಬದಿಯಲ್ಲಿರುವ ಮರಗಳನ್ನು ಮನೆ ಸೌಂದರ್ಯಕ್ಕೆ ಅಡ್ಡಿಯಾಗಿವೆ ಎಂಬ ಕಾರಣಕ್ಕೆ ವಿಷವುಣಿಸುವ ಕೃತ್ಯ ನಡೆಯುತ್ತಿದೆ. ಹೆಣ್ಣೂರು, ರಾಜರಾಜೇಶ್ವರಿ ನಗರದಲ್ಲಿ ಮನೆ ಸೌಂದರ್ಯಕ್ಕೆ ಮರ ಅಡ್ಡಿಯಾಗಿದೆ, ಹೊರಗಡೆ ನೋಟ ಕಾಣಸಿಗುತ್ತಿಲ್ಲ ಎಂಬ ಕಾರಣಕ್ಕೆ ಆ್ಯಸಿಡ್ ದಾಳಿ ನಡೆದಿತ್ತು. ಬೇಜಾರಿನ ಸಂಗತಿ ಅಂದರೆ ಆ್ಯಸಿಡ್ ಹಾಕಿದ ವ್ಯಕ್ತಿ ಸರ್ಕಾರಿ ವೈದ್ಯ ಎಂದು ಮರ ತಜ್ಞರು ಹೇಳುತ್ತಾರೆ.
ಒಂದು ಮರದ ಎಲೆ ಒಬ್ಬ ಮನುಷ್ಯ ಐದು ನಿಮಿಷ ಉಸಿರಾಡುವಷ್ಟೇ ಆಮ್ಲಜನಕ ನೀಡುತ್ತದೆ. ಜತೆಗೆ ತಂಪಾದ ನೆರಳು ಹಣ್ಣು-ಹಂಪಲುಗಳನ್ನು ಕೂಡ ನೀಡುತ್ತದೆ. ಅಷ್ಟಾದರೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಕ್ಕೆ ವಿಷವುಣಿ ಸುತ್ತಿರುವುದು ಹೇಯ ಕೃತ್ಯ. ಈ ಸಂಬಂಧ ಪಾಲಿಕೆ ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕು. -ಯಲ್ಲಪ್ಪ ರೆಡ್ಡಿ, ಹಿರಿಯ ಪರಿಸರವಾದಿ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಕಾರಣಗಳಿಗೆ ಮರಗಳಿಗೆ ಆ್ಯಸಿಡ್‌ಹಾಕುವ ಕೆಲಸ ನಡೆದಿದೆ. ವಾಸ್ತು, ಜಾಹೀರಾತು ಮಾμಯಾ, ಇತರೆ ಕಾರಣಗಳು ಇದರಲ್ಲಿ ಸೇರಿದೆ. ಹತ್ತು ವರ್ಷಗಳಲ್ಲಿ ನಾನು 100ಕ್ಕೂ ಅಧಿಕ ಮರಗಳನ್ನು ರಕ್ಷಣೆ ಮಾಡಿದ್ದೇನೆ. ಭಾರತೀಯ ರೆಲ್ಲರೂ ಪರಿಸರ ಪೂಜೆಸುವ ವರು. ಹೀಗಾಗಿ ಯಾರೂ ಮರಕ್ಕೆ ವಿಷವುಣಿಸುವ ಕೆಲಸ ಮಾಡಬೇಡಿ. – ವಿಜಯ್ ನಿಶಾಂತ್, ಮರ ವೈದ್ಯ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕೋಟೆ “ಸಿ’ ಬೀದಿ ಯಲ್ಲಿ ನಡೆದ ಮರ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. -ಹರೀಶ್, ಪಾಲಿಕೆ ಅರಣ್ಯ ವಿಭಾಗದ ಅಧಿಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.