ಮುಂದುವರಿದ ಚಾಲಕರ ಧರಣಿ
Team Udayavani, Jan 24, 2017, 11:42 AM IST
ಬೆಂಗಳೂರು: ಆ್ಯಪ್ ಆಧಾರಿತ ಟ್ಯಾಕ್ಸಿಗಳ ಚಾಲಕರಿಗೆ ಕಂಪನಿಗಳು ನೀಡುತ್ತಿರುವ ಕಿರುಕುಳದಿಂದ ಮುಕ್ತಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರವೂ ಟ್ಯಾಕ್ಸಿ ಚಾಲಕರ ಪ್ರತಿಭಟನೆ ಮುಂದುವರಿಯಿತು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಚಾಲಕರು ಭಾಗವಹಿಸಿ, ಗ್ರಾಹಕ ಪ್ರಯಾಣವನ್ನು ರದ್ದುಗೊಳಿಸಿದರೂ ಚಾಲಕರಿಗೆ ದಂಡ ವಿಧಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಚಾಲಕರಿಗೆ ಮೂಲಸೌಕರ್ಯಗಳಿಲ್ಲ. ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ದರದಲ್ಲಿ ಚಾಲಕರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರ ಭರವಸೆ: ನಂತರ ಪ್ರತಿಭಟನಾಕಾರರು ವಿಕಾಸಸೌಧಕ್ಕೆ ತೆರಳಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಶೀಘ್ರ ಓಲಾ ಮತ್ತು ಉಬರ್ ಸಂಸ್ಥೆಗಳ ಆಡಳಿತ ಮಂಡಳಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆ ಬಗೆಹರಿಸುವ ಭರವಸೆಯನ್ನು ಸಚಿವರು ನೀಡಿದರು ಎನ್ನಲಾಗಿದೆ. ಸಾರಿಗೆ ಆಯುಕ್ತ ಎಂ.ಕೆ. ಅಯ್ಯಪ್ಪ, ಬೆಂಗಳೂರು ನಗರ ಜಂಟಿ ಸಾರಿಗೆ ಆಯುಕ್ತ ಜೆ. ಜ್ಞಾನೇಂದ್ರಕುಮಾರ್‌ಗೆ ಸಭೆ ಕರೆಯುವಂತೆ ಸೂಚಿಸಿದ್ದಾರೆ.
ಸಭೆಯಲ್ಲಿ ಸ್ವತಃ ಸಚಿವರೂ ಭಾಗವಹಿಸುವ ಭರವಸೆ ನೀಡಿದ್ದಾರೆ ಎಂದು ಚಾಲಕರ ಸಂಘಟನೆ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದ್ದಾರೆ. ಕರುನಾಡ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ಒಟಿಯು ಚಾಲಕರು ಮತ್ತು ಮಾಲೀಕರ ಸಂಘ ಜಂಟಿಯಾಗಿ ಪುರಭವನದ ಮುಂದೆ ಭಾನುವಾರ ಪ್ರತಿಭಟನೆ ನಡೆಸಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.