ಆಹಾರ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ
Team Udayavani, Oct 22, 2018, 12:56 PM IST
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮು ಆಶಾದಾಯಕವಾಗಿತ್ತು. ಅದೇ ರೀತಿ ಹಿಂಗಾರು ಕೂಡ ಉತ್ತಮವಾಗಿರುತ್ತದೆ ಎಂಬ ನಿರೀಕ್ಷೆಯಿದೆ. ಆದರೆ, ಇದರ ಮಧ್ಯೆಯೇ ಆವರಿಸಿರುವ ಬರ ಮತ್ತು ನೀರಿನ ಕೊರತೆ ಈ ಬಾರಿಯೂ ಆಹಾರ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಕಾಣಿಸಿಕೊಂಡಿದೆ.
2018-19ನೇ ಸಾಲಿನಲ್ಲಿ ಒಟ್ಟಾರೆ 111.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 135 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ಗುರಿ ಹೊಂದಲಾಗಿದೆ. ಅದರಂತೆ ಮುಂಗಾರು ಹಂಗಾಮಿನಲ್ಲಿ (ಸೆಪ್ಟೆಂಬರ್ ಅಂತ್ಯದವರೆಗೆ) ಒಟ್ಟು ಕೃಷಿ ಬಿತ್ತನೆ ಗುರಿ 74.89 ಲಕ್ಷ ಹೆಕ್ಟೇರ್ ಪೈಕಿ 67.99 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 2017ರ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರಮಾಣ 64.37 ಲಕ್ಷ ಹೆಕ್ಟೇರ್‌ನಷ್ಟಿತ್ತು.
ಆದರೆ, ಮುಂಗಾರು ಹಂಗಾಮಿನಲ್ಲಿ ಕೆಲವೆಡೆ ಅತಿವೃಷ್ಠಿ ಮತ್ತು ತೇವಾಂಶ ಕೊರತೆಯಿಂದಾಗಿ 14.68 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದಾಗಿ ಈ ಹಂಗಾಮಿನಲ್ಲಿ ನಿರೀಕ್ಷಿತ 99.71 ಲಕ್ಷ ಟನ್ ಆಹಾರ ಉತ್ಪಾದನೆ ಗುರಿ ಕಷ್ಟಸಾಧ್ಯ ಎನ್ನುವ ಪರಿಸ್ಥಿತಿ ಇದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಒಟ್ಟಾರೆ 32.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ರಾಗಿ ಮತ್ತಿತರ ಆಹಾರ ಧಾನ್ಯಗಳ ಬಿತ್ತನೆಯಾಗಿದ್ದು, ಇದರಲ್ಲಿ ತೇವಾಂಶ ಕೊರತೆ ಮತ್ತು ಭಾರೀ ಮಳೆಯಿಂದ 4.97 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಅದೇ ರೀತಿ 14.91 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾದ ದ್ವಿದಳ ಧಾನ್ಯ ಪೈಕಿ 6.18 ಲಕ್ಷ ಹೆಕ್ಟೇರ್ ಹಾಗೂ 9.46 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾದ ಎಣ್ಣೆಕಾಳುಗಳ ಪೈಕಿ 2.67 ಲಕ್ಷ ಹೆಕ್ಟೇರ್ ಬೆಳೆ ತೇವಾಂಶ ಕೊರತೆ ಮತ್ತು ಭಾರೀ ಮಳೆಯಿಂದ ಹಾನಿಗೊಳಗಾಗಿದೆ.
ವಾಣಿಜ್ಯ ಬೆಳೆ ಗುರಿಮೀರಿ ಬಿತ್ತನೆ: ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು ಮತ್ತು ತಂಬಾಕು ಉತ್ಪನ್ನಗಳನ್ನು ಈ ಮುಂಗಾರಿನಲ್ಲಿ 11.28 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿದ್ದು, ಗುರಿ ಮೀರಿ 11.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಈ ಪೈಕಿ ಒಣಹವೆ ಮತ್ತು ಮಳೆಯಿಂದಾಗಿ 83,523 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ವಿಶೇಷವೆಂದರೆ ತೇವಾಂಶ ಕೊರತೆ ಮತ್ತು ಮಳೆಯಿಂದ ಹಾನಿಗೊಳಗಾಗಿರುವುದು ಹತ್ತಿ ಬೆಳೆ ಮಾತ್ರ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಗಾರು ಹಂಗಾಮಿನಲ್ಲಿ (ಅ.1ರಿಂದ) 31.80 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ 15 ದಿನಗಳಲ್ಲಿ ಸುಮಾರು 7.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 2017ರಲ್ಲಿ ಇದೇ ಅವಧಿಗೆ 8.02 ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು.
ಮುಂಗಾರು ಹಂಗಾಮಿನಲ್ಲಿ ಮಳೆ ಬಿದ್ದರೂ ಕೆಲವು ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಾಗಿರುವುದು ಮತ್ತು ಸುಮಾರು 100 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿರುವುದು ಕೃಷಿ ಚಟುವಟಿಕೆಗಳ ಆರಂಭ ನಿಧಾನಗತಿಯಾಗಲು ಕಾರಣ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ತೋಟಗಾರಿಕಾ ಬೆಳೆಗಳಿಗೂ ಅಪಾಯ: ಬರ ಪರಿಸ್ಥಿತಿ ಮತ್ತು ಸಮಯಕ್ಕೆ ಸರಿಯಾಗಿ ಮಳೆ ಬಾರದಿರುವುದರಿಂದ ತೋಟಗಾರಿಕಾ ಬೆಳೆಗಳೂ ಅಪಾಯ ಎದುರಿಸುವ ಆತಂಕ ಎದುರಾಗಿದೆ. ಈ ಹಿಂದಿನ 5 ವರ್ಷದಲ್ಲಿ ತೋಟಗಾರಿಕಾ ಬೆಳೆ ಪ್ರದೇಶ ಮತ್ತು ಬೆಳೆ ಪ್ರಮಾಣ ಏರುಮುಖವಾಗಿತ್ತು. ಸತತ ಬರದ ನಡುವೆಯೂ ಬೆಳೆ ರೈತರ ಕೈ ಹಿಡಿದಿತ್ತು.
ಅದೇ ರೀತಿ ಈ ಬಾರಿಯೂ ಉತ್ತಮ ಬೆಳೆ ಬರುವ ನಿರೀಕ್ಷೆ ಇತ್ತಾದರೂ ಇದೀಗ ಬೆಳೆಗಳು ಒಣಗುತ್ತಿರುವುದು ರೈತರಿಗೆ ಸಮಸ್ಯೆ ತಂದೊಡ್ಡಿದೆ. ಮುಂಗಾರು ಹಂಗಾಮಿನಲ್ಲಿ ಕಬ್ಬು ಬೆಳೆ ರೈತರ ಪಾಲಿಗೆ ಆಶಾದಾಯಕ ಬೆಳವಣಿಗೆಯ ನಿರೀಕ್ಷೆ ಮೂಡಿಸಿದೆ. ಒಟ್ಟಾರೆ ನಿರೀಕ್ಷಿತ ಗುರಿ 4.56 ಲಕ್ಷ ಹೆಕ್ಟೇರ್ ಪೈಕಿ 4.63 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಕೃಷಿ ಆರಂಭವಾಗಿದೆ. ಅತಿಯಾದ ಮಳೆಯಿಂದ ಸುಮಾರು 4,600 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.