ಜಾಹೀರಾತು ನಿಷೇಧ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕುತ್ತು
Team Udayavani, Dec 18, 2018, 12:18 PM IST
ಬೆಂಗಳೂರು: ನಗರದಲ್ಲಿ ಎಲ್ಲ ಮಾದರಿಯ ಜಾಹೀರಾತುಗಳನ್ನು ನಿಷೇಧಿಸಿರುವ ಬಿಬಿಎಂಪಿಯ ಕ್ರಮ ಸಾಂವಿಧಾನಿಕ ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಜೀವಿಸುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಖಾಸಗಿ ಜಾಹೀರಾತುದಾರರು ಸೋಮವಾರ ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ಹಾಗೂ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ಮತ್ತು ಬ್ಯಾನರ್‌ಗಳ ತೆರವು ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾ. ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಎಸ್. ಸುಜಾತ ಅವರಿದ್ದ ನ್ಯಾಯಪೀಠ ನಡೆಸಿತು.
ವಿಚಾರಣೆ ವೇಳೆ ಖಾಸಗಿ ಜಾಹೀರಾತುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ಜಾಹೀರಾತು ಪ್ರದರ್ಶನವು ಸಂವಿಧಾನದ ಪರಿಚ್ಛೇದ 19 (1) (ಅ) ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ವಾಪ್ತಿಗೆ ಬರುತ್ತದೆ. ಇಲ್ಲಿ ವಾಣಿಜ್ಯ ಉದ್ದೇಶದ ಜಾಹೀರಾತು ಪ್ರದರ್ಶನವನ್ನು “ವಾಣಿಜ್ಯ ಅಭಿವ್ಯಕ್ತಿ’ (ಕಮರ್ಷಿಯಲ್ ಸ್ಪೀಚ್) ಎಂದು ಪರಿಭಾಷಿಸಲಾಗಿದೆ.
ಸಂವಿಧಾನದ ಈ ಪರಿಚ್ಛೇದ ಪ್ರಕಾರ ಕಾನೂನುಬದ್ಧ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಲು ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಕೌನ್ಸಿಲ್ ಸಭೆಯ ನಿರ್ಣಯದಂತೆ ಬಿಬಿಎಂಪಿ ಜಾಹೀರಾತುಗಳನ್ನು ನಿಷೇಧಿಸಿದೆ. ಆದರೆ. ಕೌನ್ಸಿಲ್ ಸಭೆಯ ನಿರ್ಣಯ ಕಾನೂನು ಅಲ್ಲ. ಅರ್ಜಿದಾರ ಜಾಹೀರಾತುದಾರರು ಕಾನೂನು ಬದ್ಧ ಪರವಾನಗಿ ಪಡೆದುಕೊಂಡವರಾಗಿದ್ದಾರೆ.
ಈ ಜಾಹೀರಾತುದಾರರು ಅಳವಡಿಸಿರುವ ಜಾಹೀರಾತು ಫಲಕಗಳು ಖಾಸಗಿ ಆಸ್ತಿಗಳಲ್ಲಿವೆ. ಅಲ್ಲದೇ ಎಲ್ಲ ರೀತಿಯ ತೆರಿಗೆಗಳನ್ನು, ಶುಲ್ಕಗಳನ್ನು ನಿಯಮಿತವಾಗಿ ಪಾವತಿಸಲಾಗುತ್ತಿದೆ. ಆದರೆ, ಕೌನ್ಸಿಲ್ ಸಭೆಯ ನಿರ್ಣಯ ಹಾಗೂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಆಸರೆಯಾಗಿಟ್ಟುಕೊಂಡು ಬಿಬಿಎಂಪಿ ತಮ್ಮ ಕಕ್ಷಿದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳುತ್ತಿದೆ. ನ್ಯಾಯಾಲಯದ ತಡೆಯಾಜ್ಞೆ ಇರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗುತ್ತಿದೆ ನ್ಯಾಯಪೀಠಕ್ಕೆ ವಿವರಿಸಿದರು.
ಹಕ್ಕು ಉಲ್ಲಂಘನೆ: ಬಿಬಿಎಂಪಿ ಜಾಹೀರಾತು ನಿಷೇಧ ಮಾಡಿರುವುದು ಸಂವಿಧಾನದ ಪರಿಚ್ಛೇದ 21ರ “ಜೀವಿಸುವ ಹಕ್ಕಿನ’ ಉಲ್ಲಂಘನೆಯಾಗಿದೆ. ನಗರದಲ್ಲಿ ಸುಮಾರು 2 ಸಾವಿರ ಜಾಹೀರಾತು ಸಂಸ್ಥೆಗಳಿವೆ. ಸುಮಾರು 1.50 ಲಕ್ಷ ಕುಟುಂಬಗಳು ಈ ಉದ್ಯಮವನ್ನು ನೆಚ್ಚಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ವಹಿವಾಟು ಸ್ಥಗಿತಗೊಂಡಿದ್ದರಿಂದ ಬಡ ಹಾಗೂ ಮಧ್ಯಮ ವರ್ಗದ 1.50 ಲಕ್ಷ ಕುಟುಂಬಗಳು ಬೀದಿಗೆ ಬಿದ್ದಿವೆ.
ಜಾಹೀರಾತು ಕಂಪನಿಗಳು ನಷ್ಟ ಅನುಭವಿಸುವಂತಾಗಿದೆ. ಕನಿಷ್ಠ ಕ್ರಿಸ್‌ಮಸ್ ಹಬ್ಬಕ್ಕಾದರೂ ಅವಕಾಶ ಮಾಡಿಕೊಡಲು, ಜಾಹೀರಾತು ಪ್ರದರ್ಶನಕ್ಕೆ ಅನುಮತಿ ಕೊಡಬೇಕು ಎಂದು ವಕೀಲರು ಕೋರಿದರು. ಇದೇ ವೇಳೆ ಫ್ಲೆಕ್ಸ್ ತಯಾರಕರ ಪರ ವಕೀಲರು ವಾದಿಸಿ, “ಫ್ಲೆಕ್ಸ್ ಪ್ಲಾಸ್ಟಿಕ್ ಅಲ್ಲ. ಆದರೆ, ಪ್ಲಾಸ್ಟಿಕ್ ನಿಷೇಧದಡಿ ಫ್ಲೆಕ್ಸ್ ಪರಿಗಣಿಸಿ ಅದನ್ನೂ ನಿಷೇಧಿತ ಎಂದು ಭಾವಿಸಲಾಗಿದೆ.
ಫ್ಲೆಕ್ಸ್ ಪುನರ್ಬಳಕೆ ಮಾಡಬಹುದಾದ ಮತ್ತು ಪರಿಸರಕ್ಕೆ ಹೆಚ್ಚು ಹಾನಿಕಾರ ವಸ್ತು ಅಲ್ಲ ಎಂದು “ರಾಷ್ಟೀಯ ಹಸಿರು ನ್ಯಾಯಾಧೀಕರಣ’ ತೀರ್ಪು ನೀಡಿದೆ. ಆದ್ದರಿಂದ ಫ್ಲೆಕ್ಸ್ ತಯಾರಿಸಲು ಅನುಮತಿ ಕೊಡಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಂಗಳವಾರ (ಡಿ.18) ಮುಂದೂಡಿತು.
ಡಿ.20ರೊಳಗೆ ಬೊಮ್ಮನಹಳ್ಳಿ ವಲಯ ರಸ್ತೆ ಗುಂಡಿ ಮುಕ್ತವಾಗಲಿ: ಇದೇ ವೇಳೆ ಬೊಮ್ಮನಹಳ್ಳಿ ವಲಯವನ್ನು ಡಿ.20ರೊಳಗೆ ಸಂಪೂರ್ಣ ರಸ್ತೆ ಗುಂಡಿ ಮುಕ್ತ ಮಾಡಬೇಕು ಎಂದು ಬಿಬಿಎಂಪಿಗೆ ಗಡುವು ನೀಡಿದ ಹೈಕೋರ್ಟ್, ಈ ಕಾಮಗಾರಿಗೆ ಸಂಬಂಧಿಸಿದಂತೆ ಆ ವಲಯದ ಮುಖ್ಯ ಇಂಜಿನಿಯರ್‌ಗಳು ಪರಿಶೀಲಿಸಿ ಸಹಿ ಮಾಡಿದ “ಮೇಜರ್‌ವೆುಂಟ್ ಬುಕ್’ ಕೋರ್ಟ್‌ಗೆ ಹಾಜರುಪಡಿಸುವಂತೆ ನಿರ್ದೇಶನ ನೀಡಿತು.
ಅರ್ಜಿ ವಿಚಾರಣೆ ವೇಳೆ, ಬಿಬಿಎಂಪಿ ಪರ ವಕೀಲರು ಮಹದೇವಪುರ ವಲಯದ ಕಾರ್ಯಪ್ರಗತಿ ವರದಿಯನ್ನು ನ್ಯಾಯಪೀಠಕ್ಕೆ ಮಂಡಿಸಿದರು. ರಸ್ತೆ ಗುಂಡಿ ಮುಚ್ಚುವ ಬಿಬಿಎಂಪಿ ಕೆಲಸ ಪೂರ್ಣಗೊಂಡಿದೆ. ಆದರೆ, ಜಲಮಂಡಳಿಯ ಕಾಮಗಾರಿಗಳಿಂದಾಗಿ ಕೆಲವೊಂದು ಕಡೆ ಆಗಿಲ್ಲ ಎಂದರು. ಅಲ್ಲದೇ ಬೆಸ್ಕಾಂ, ಬಿಎಂಆರ್‌ಸಿಎಲ್, ಜಿಎಐಎಲ್ ಕಾಮಗಾರಿಗಳಿಂದಲೂ ಒಂದಿಷ್ಟು ಕಡೆ ಹಿನ್ನಡೆಯಾಗಿದೆ ಎಂದರು.
ಇದಕ್ಕೆ ಆಕ್ಷೇಪಿಸಿದ ಜಲಮಂಡಳಿ ಪರ ವಕೀಲರು, ಸೂರಿಕೆ, ದುರಸ್ತಿ ಹೊಸ ಪೈಪ್‌ಗ್ಳ ಅಳವಡಿಕೆ ಕುರಿತ ಬಿಬಿಎಂಪಿಯ ಎಲ್ಲ ದೂರುಗಳನ್ನು ಜಲಮಂಡಳಿ ಪೂರ್ಣಗೊಳಿಸಿದೆ. ನಗರದ ಪ್ರತಿಷ್ಠಿತ ವಾಣಿಜ್ಯ ಪ್ರದೇಶಗಳಲ್ಲಿ ದೊಡ್ಡ ರೆಸ್ಟೋರೆಂಟ್‌ಗಳು ಮಧ್ಯರಾತ್ರಿ ಮ್ಯಾನ್‌ಹೋಲ್‌ನ ಮುಚ್ಚಳ ತೆರೆದು ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ ಎಂದು ಇದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಆಲೋಚಿಸಿ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.