ಅಗ್ನಿ ಶ್ರೀಧರ್ ಮನೆ ಮೇಲೆ ಪೊಲೀಸ್ ದಾಳಿ; ಶಸ್ತ್ರಾಸ್ತ್ರ ವಶ
Team Udayavani, Feb 8, 2017, 11:39 AM IST
ಬೆಂಗಳೂರು: ಪ್ರಕರಣವೊಂದರ ಆರೋಪಿಗಳಿಗೆ ಆಶ್ರಯ ನೀಡಿದ್ದಾರೆ ಎಂಬ ಮಾಹಿತಿ ಮೇರೆಗೆ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಪತ್ರಕರ್ತ ಅಗ್ನಿ ಶ್ರೀಧರ್ ಹಾಗೂ ಅವರ ಆಪ್ತ ಬಚ್ಚನ್ ಮನೆ ಮೇಲೆ ಮಂಗಳವಾರ ಬೆಳಗ್ಗೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಗ್ನಿ ಶ್ರೀಧರ್ ಮತ್ತು ಬಚ್ಚನ್ ಮನೆಯಲ್ಲಿ ನಾಲ್ಕು ಪಿಸ್ತೂಲ್, ಜೀವಂತ ಗುಂಡುಗಳು, ಮಾರಕಾಸ್ತ್ರ ಮತ್ತು 6.88 ಲಕ್ಷ ರೂ.ಹಣ ಪತ್ತೆಯಾಗಿವೆ. ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇರೆಗೆ ಬಚ್ಚನ್ ಸೇರಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರ ಹೆಚ್ಚುವರಿ ಪೊಲೀಸ್ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಮೂರು ಡಿಸಿಪಿಗಳ ತಂಡ ಕೋರ್ಟ್ ಸರ್ಚ್ ವಾರೆಂಟ್ ಹಿಡಿದು ಮಂಗಳವಾರ ಬೆಳಗ್ಗೆಯೇ ದಾಳಿ ನಡೆಸಿತು. ಪ್ರಕರಣವೊಂದರ ಆರೋಪಿಗಳು ಎನ್ನಲಾದ ರೋಹಿತ್ ಆಲಿಯಾಸ್ ಒಂಟೆ ಹಾಗೂ ಸೈಲಂಟ್ ಸುನೀಲ್ ಅವರಿಗೆ ಆಶ್ರಯ ನೀಡಿದ್ದ ಆರೋಪ ಅಗ್ನಿ ಶ್ರೀಧರ್ ವಿರುದ್ಧ ಕೇಳಿ ಬಂದಿತ್ತು. ಆದರೆ, ಅವರ ಮನೆ ಶೋಧದ ವೇಳೆ ಈ ಇಬ್ಬರೂ ಅಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ 9.30ರ ಸುಮಾರಿಗೆ ದಾಳಿ ನಡೆಸಿದ್ದು, ಸತತ ಆರು ಗಂಟೆಗಳ ಕಾಲ ಅಗ್ನಿ ಶ್ರೀಧರ್ ಮತ್ತು ಬಚ್ಚನ್ ಇನ್ನಿತರರನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಇತ್ತೀಚೆಗೆ ಯಲಹಂಕ ಕೋಗಿಲು ಕ್ರಾಸ್ ಬಳಿ ನಡೆದ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಅವರ ಹತ್ಯಾಯತ್ನ ಪ್ರಕರಣದ ಕುರಿತು ಪೊಲೀಸರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಅಗ್ನಿ ಶ್ರೀಧರ್ ಎದೆ ನೋವಿನಿಂದ ಕುಸಿದು ಬಿದ್ದಿದ್ದು, ಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಡೀ ದಿನ ನಡೆದ ಬೆಳವಣಿಗೆಯ ಬಳಿಕ ಆರೋಪಿ ಒಂಟೆ ರೋಹಿತ್ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಗ್ನಿಶ್ರೀಧರ್ ಅವರನ್ನು ನೋಡುವ ನೆಪದಲ್ಲಿ ಬಂದು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ. ಇದರ ಬಳಿಕ ಸೈಲೆಂಟ್ ಸುನೀಲ ಕೂಡ ಪೊಲೀಸರಿಗೆ ಶರಣಾಗಿದ್ದಾನೆ.
ಕುಮಾರಸ್ವಾಮಿ ಲೇಔಟ್‌ನ ಸಯ್ಯದ್ ಅಮಾನ್ ಅಲಿಯಾಸ್ ಬಚ್ಚನ್ (54), ಅಗ್ನಿ ಶ್ರೀಧರ್ ಮನೆಯಲ್ಲಿದ್ದ ಖಾಸಗಿ ಭದ್ರತಾ ಸಿಬ್ಬಂದಿಗಳಾದ ವರುಣ್‌ಕುಮಾರ್ (20), ಉತ್ತರ ಪ್ರದೇಶದ ಬ್ರಿಜ್ ಭೂಷಣ್ (38), ರಾಮ್‌ಕುಮಾರ್ (37), ಸಾಬೀರ್ ಅಲಿ (51), ಬನಶಂಕರಿಯ ತನ್ವೀರ್ (34), ಕನಕಪುರದ ಅರುಣ್ ಕುಮಾರ್ ಅಲಿಯಾಸ್ ಲಕ್ಷ್ಮಣ್ (24) ಬಂಧಿತರು.
ಆರೋಪಿಗಳ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಪ್ರೈವೆಟ್ ಸೆಕ್ಯೂರಿಟಿ ರೆಗ್ಯೂಲೆಷನ್ ಕಾಯ್ದೆಯಡಿ ಕುಮಾರ ಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಯಲಹಂಕದ ಟಾಟಾ ರಮೇಶ್‌ಗೆ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾದ ರೌಡಿಶೀಟರ್ ರೋಹಿತ್ ಅಲಿಯಾಸ್ ಒಂಟೆ ರೋಹಿತ್ ಹಾಗೂ ಸೈಲೆಂಟ್ ಸುನೀಲ ಅಗ್ನಿ ಶ್ರೀಧರ್ ಅವರ ಮನೆಯಲ್ಲಿದ್ದಾರೆ ಎಂಬ ಮಾಹಿತಿ ಮೇರೆಗೆ ಕೋರ್ಟ್‌ನಿಂದ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಲಾಯಿತು.
ಪ್ರಕರಣದಲ್ಲಿ ಅಗ್ನಿ ಶ್ರೀಧರ್ ಕೂಡ ಆರೋಪಿಯಾಗಿದ್ದು, ವಿಚಾರಣೆ ವೇಳೆ ಅವರು ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದಾರೆ. ಚಿಕಿತ್ಸೆ ಪಡೆದು ಗುಣಮುಖವಾದ ಬಳಿಕ ಅವರನ್ನು ಬಂಧಿಸಲಾಗುವುದು ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ. ವಿಚಾರಣೆ ವೇಳೆ ಸೋಮವಾರ ತಡರಾತ್ರಿ ಅಗ್ನಿ ಶ್ರೀಧರ್ ಮನೆಗೆ ಒಂಟೆ ರೋಹಿತ್ ಹಾಗೂ ಸೈಲೆಂಟ ಸುನೀಲ ಬಂದು ಹೋಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಏನಿದು ಪ್ರಕರಣ?: ಕಾಂಗ್ರೆಸ್ ಮುಖಂಡ ಹಾಗೂ ಕಡಬಗೆರೆ ಶ್ರೀನಿವಾಸ್ ಸಹಚರ ಟಾಟಾ ರಮೇಶ್ ಎಂಬುವರಿಗೆ ಯಲಹಂಕ ಶಾಸಕ ವಿಶ್ವನಾಥ್ ಬೆಂಬಲಿಗ ಜೀವ ಬೆದರಿಕೆ ಹಾಕಿದ್ದ ಪ್ರರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳ ಹಿಂದೆ ಯಲಹಂಕ ಪೊಲೀಸರು ನಾಗಶೆಟ್ಟಿಹಳ್ಳಿ ನಿವಾಸಿ ಸತೀಶ್ ಎಂಬಾತನನ್ನು ಬಂಧಿಸಿದ್ದರು. ಈತನ ಜತೆ ಸೇರಿ ರೌಡಿ ರೋಹಿತ್ ಅಲಿಯಾಸ್ ಒಂಟೆ ಕೂಡ ಟಾಟಾ ರಮೇಶ್ ಹಾಕಿದ್ದ ಎನ್ನಲಾಗಿದೆ.
ರೋಹಿತ್ ಬಂಧನಕ್ಕೆ ಪೊಲೀಸರು ಮುಂದಾದಗ ಆತನ ಮೊಬೈಲ್ ಕುಮಾರಸ್ವಾಮಿ ಲೇಔಟ್‌ನಲ್ಲಿ ಸಂಪರ್ಕ ಪಡೆಯುತ್ತಿರುವುದು ಪೊಲೀಸರಿಗೆ ತಿಳಿದಿತ್ತು. ಬಳಿಕ ಆರೋಪಿ ರೋಹಿತ್‌ಗೆ ಅಗ್ನಿ ಶ್ರೀಧರ್ ಆಶ್ರಯ ನೀಡಿದ್ದಾರೆ ಎಂಬುದನ್ನು ತಿಳಿದು ಕೋರ್ಟ್‌ನಿಂದ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗ್ನಿ ಮನೆಯಲ್ಲಿ 70ಕ್ಕೂ ಹೆಚ್ಚು ಸ್ಕಾಚ್‌ಗಳು: ದಾಳಿ ವೇಳೆ ಅಗ್ನಿ ಶ್ರೀಧರ್ ಮನೆಯಲ್ಲಿ 70 ಮದ್ಯದ ಬಾಟಲ್‌ಗಳು ಪತ್ತೆಯಾಗಿವೆ. ವಿದೇಶಿ ಮದ್ಯ 9 ಲೀಟರ್‌ಗಿಂತ ಹೆಚ್ಚು ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವಂತಿಲ್ಲ. ಮನೆಯಲ್ಲಿ 70 ಬಾಟಲ್ ವಿದೇಶಿ ಮದ್ಯ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಮನೆಗೆ ಧಾವಿಸಿ ಅಗ್ನಿಶ್ರೀಧರ್ ಅವರನ್ನು ವಿಚಾರಣೆಗೊಳಪಡಿಸಿದರು ಎಂದು ಅಧಿಕಾರಿ ವಿವರಿಸಿದರು.
ಶ್ರೀನಿವಾಸ್ ಪ್ರಕರಣದ ಹಿನ್ನೆಲೆ ದಾಳಿ?
ಇತ್ತೀಚೆಗೆ ಯಲಹಂಕದ ಕೋಗಿಲು ಕ್ರಾಸ್ ಬಳಿ ದಾಸನಪುರ ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿದ್ದರು. ಈ ಘಟನೆಯ ಬಳಿಕ ಶ್ರೀನಿವಾಸ್ ಸಹಚರ ಕಾಂಗ್ರೆಸ್ ಮುಖಂಡ ಟಾಟಾ ರಮೇಶ್ ಯಲಹಂಕ ಪೊಲೀಸರೆದುರು ರೌಡಿಶೀಟರ್ ರೋಹಿತ್ ಅಲಿಯಾಸ್ ಒಂಟೆ ರೋಹಿತನ ವಿರುದ್ಧ ಜೀವ ಬೆದರಿಕೆಯ ವಿಚಾರವಾಗಿ ದೂರು ನೀಡಿದ್ದರು. ಶ್ರೀನಿವಾಸ್ ಶೂಟೌಟ್ ಪ್ರಕರಣದಲ್ಲಿ ರೋಹಿತ್ ಮತ್ತು ಸೈಲಂಟ್ ಸುನೀಲ ಭಾಗಿಯಾಗಿದ್ದಾರೆ ಎಂಬುದು ತನಿಖೆ ವೇಳೆ ಪತ್ತೆಯಾಗಿದ್ದು, ಆ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಖಚಿತ ಪಡಿಸುತ್ತಿಲ್ಲ.
ಸುನೀಲನ ಹೆಸರಲ್ಲಿ ಸಿನಿಮಾ!
ಸೈಲಂಟ್ ಸುನೀಲನ 17 ವರ್ಷ ಇದ್ದಾಗಲೇ ಪಾತಕ ಲೋಕ ಪ್ರವೇಶಿಸಿದ್ದ. ತನ್ನ 17ನೇ ವಯಸ್ಸಿನಲ್ಲಿ ರಾಜಾಜಿನಗರದ ಪೊಲೀಸ್ ಪೇದೆ ಶೆಟ್ಟಾಳಪ್ಪ ಎಂಬುವರನ್ನು ಹತ್ಯೆಗೈದಿದ್ದ. ಬಳಿಕ ಗಾಯತ್ರಿ ನಗರದ ಪ್ರಸಾದಿ, ಡಿಂಗ್ರಿ ಕೃಷ್ಣ, ಬೆಕ್ಕಿನ ಕಣ್ಣು ರಾಜೇಂದ್ರ ಕೊಲೆ ಪ್ರಕರಣಗಳಲ್ಲಿ ಜೈಲು ಸೇರಿದ್ದ. ಈತನ ಹೆಸರಿನಲ್ಲಿ ಇತ್ತೀಗೆ ಅಗ್ನಿ ಶ್ರೀಧರ್ ಹಾಗೂ ದುನಿಯಾ ಸೂರಿ ಸೇರಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಸೈಲಂಟ್ ಸುನೀಲ ಎನ್ನುವ ಹೆಸರಿನಲ್ಲೆ ಸಿನಿಮಾ ನಿರ್ಮಾಣವಾಗುತ್ತಿದೆ. ಬೆತ್ತನಗೆರೆ ಸೀನನ ಹತ್ಯೆ ಬಳಿಕ ರೋಹಿತ್ ಮತ್ತು ಸೈಲಂಟ್ ಸುನೀಲ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದರು. ರೋಹಿತ್ ಕರುನಾಡ ಸೇನೆ ಕಾರ್ಯಾಧ್ಯಕ್ಷನಾಗಿದ್ದ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ವಂಚನೆ ಪ್ರಕರಣಗಳು ದಾಖಲಾಗಿವೆ.
ಆಸ್ಪತ್ರೆ ಬಳಿ ಬಂದ ರೋಹಿತ್ ಸೆರೆ
ಸಾಗರ್ ಆಸ್ಪತ್ರೆಯಲ್ಲಿ ಅಗ್ನಿ ಶ್ರೀಧರ್ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಮಂಗಳವಾರ ಸಂಜೆ ಆಸ್ಪತ್ರೆ ಬಳಿ ಬಂದು ಅಗ್ನಿ ಶ್ರೀಧರ್ ಅವರನ್ನು ಬಿಡುವಂತೆ ಮನವಿ ಮಾಡಿದ್ದ. ಈ ವೇಳೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರಿಗೆ ಮನವರಿಕೆ ಮಾಡಿಕೊಡುತ್ತೇವೆ. ತನಿಖೆ ಎದುರಿಸಲು ಸಿದ್ಧ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ. ಆರೋಪಿಗಳನ್ನು ಬಂಧಿಸಿ ಕುಮಾರಸ್ವಾಮಿ ಲೇಔಟ್ ಪೊಲೀಸರು ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯದಿದ್ದಾರೆ.
ಟಾಟಾ ರಮೇಶ್‌ಗೆ ರೋಹಿತ್ ಕರೆ ಮಾಡಿ ಬೆದರಿಕೆ ಹಾಕಿದ್ದ. ರೋಹಿತ್ ಅಗ್ನಿ ಶ್ರೀಧರ್ ಮನೆಯಲ್ಲಿದ್ದ ಎಂಬ ಮಾಹಿತಿ ಮೇರೆಗೆ ಕೋರ್ಟ್‌ನಿಂದ ಸರ್ಚ್ ವಾರೆಂಟ್ ತೆಗೆದುಕೊಂಡು ದಾಳಿ ನಡೆಸಿದ್ದೇವೆ. ಈ ವೇಳೆ ಅಗ್ನಿ ಶ್ರೀಧರ್ ಮನೆಯಲ್ಲಿ ಹೊರ ರಾಜ್ಯದ ವ್ಯಕ್ತಿಗಳಿದ್ದರು. ಮಾರಕಾಸ್ತ್ರಗಳೂ ಪತ್ತೆಯಾಗಿದೆ.
-ಹೇಮಂತ್ ನಿಂಬಾಳ್ಕರ್, ಹೆಚ್ಚುವರಿ ಪೊಲೀಸ್ ಆಯುಕ್ತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.