ಮೆಟ್ರೋ 2ನೇ ಹಂತದ ಯೋಜನೆಗೆ ಒಪ್ಪಂದ
Team Udayavani, Jan 12, 2019, 7:09 AM IST
ಬೆಂಗಳೂರು: ಮೆಟ್ರೋ 2ನೇ ಹಂತದ ಯೋಜನೆಗೆ ಯುರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ (ಇಐಬಿ) 500 ಮಿಲಿಯನ್ ಯುರೋ ಹೂಡಿಕೆಗೆ ಮುಂದಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಇಐಬಿ 200 ಮಿಲಿಯನ್ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಬೆಂಗಳೂರಿನಲ್ಲಿ 11 ಮಿಲಿಯನ್ ಜನಸಂಖ್ಯೆಯಿದ್ದು, ಮೆಟ್ರೋ ಯೋಜನೆ ಸಹಕಾರಿಯಾಗಿದೆ. ಮೆಟ್ರೋ 2ನೇ ಹಂತದ ಯೋಜನೆಗೆ ಸುಮಾರು 26,405 ಕೋಟಿ ರೂ. ವೆಚ್ಚವಾಗಲಿದ್ದು, 12,141 ಕೋಟಿ ರೂ. ಸಾಲದ ಅಗತ್ಯವಿದೆ. ಇಐಬಿ ಒಟ್ಟು 3,800 ಕೋಟಿ ರೂ. ಹೂಡಿಕೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಇಐಬಿ ಯಾವುದೇ ಷರತ್ತು ಇಲ್ಲದೆ ಸುಲಭ ಬಡ್ಡಿ ದರದಲ್ಲಿ 200 ಮಿಲಿಯನ್ ಯುರೋ (ಸುಮಾರು 1700 ಕೋಟಿ ರೂ.) ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿದೆ. ಇದಕ್ಕಾಗಿ ಯುರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಸಹಾಯ ಶ್ಲಾಘನೀಯ ಎಂದು ಹೇಳಿದರು.
ಸ್ಥಿರ ಸರ್ಕಾರ: ಡಾ.ಜಿ.ಪರಮೇಶ್ವರ್ ಮಾತನಾಡಿ, ಯುರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಮೆಟ್ರೋ ಯೋಜನೆಗೆ ಸುಮಾರು 3,800 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ. ಯಾವುದೇ ಹಣಕಾಸು ಸಂಸ್ಥೆಯು ರಾಜ್ಯವೊಂದರಲ್ಲಿ ಇಷ್ಟು ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಬೇಕೆಂದರೆ ಆ ರಾಜ್ಯ ಸರ್ಕಾರ ಸ್ಥಿರವಾಗಿದೆ ಎಂದರ್ಥ.
ಈ ಒಡಂಬಡಿಕೆ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎನ್ನುವವರಿಗೆ ತಕ್ಕ ಉತ್ತರದಂತಿದೆ ಎಂದು ಹೇಳಿದರು. ಇಐಎ ನಿರ್ದೇಶಕರಾದ ಮರಿಯಾ ಮಾತನಾಡಿದರು.ಯುರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ನ ಉಪನಿರ್ದೇಶಕಿ ಸುನೀತಾ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿದೇಶಕ ಅಜಯ್ ಸೇಠ್ ಇತರರು ಉಪಸ್ಥಿತರಿದ್ದರು.
20 ವರ್ಷಗಳ ಕಾಲಾವಕಾಶ: ಕೇಂದ್ರ ಸರ್ಕಾರ ಹಾಗೂ ಯುರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ 300 ಮಿಲಿಯನ್ ಯುರೋ ಮೊದಲನೇ ಟ್ರಾಂಚ್ ಸಾವರಿನ್ ಸಾಲಕ್ಕೆ 2017ರಲ್ಲೇ ಒಪ್ಪಂದ ಮಾಡಿಕೊಂಡಿತ್ತು. ಎರಡನೇ ಟ್ರಾಂಚ್ 200 ಮಿಲಿಯನ್ ಯುರೋ ಸಾಲದ ಒಪ್ಪಂದಕ್ಕೆ ಕಳೆದ ಸೆ.29ಕ್ಕೆ ಸಹಿ ಹಾಕಲಾಗಿದೆ. ಈ ಸಾಲವು ಅನ್‌ಟೈಡ್ ಸಾಲವಾಗಿದ್ದು, ಮೂಲ ಸಾಲವನ್ನು ಮರುಪಾವತಿಸಲು 20 ವರ್ಷಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ನಾಲ್ಕು ವರ್ಷಗಳ ಮೊರಟೋರಿಯಂ ಕೂಡ ಒಳಗೊಂಡಿರುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಮಾರ್ಗ ಬದಲಾವಣೆ ಸವಾಲು: ಮೆಟ್ರೋ ಎರಡನೇ ಹಂತದ ಯೋಜನೆಯಲ್ಲಿ ನಾಗವಾರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದವರೆಗೆ ಸಂಪರ್ಕಿಸುವ ಮೆಟ್ರೋ ಮಾರ್ಗವನ್ನು ತಾಂತ್ರಿಕ ಕಾರಣಕ್ಕೆ ರಾಮಕೃಷ್ಣ ಹೆಗಡೆ ನಗರ ಮಾರ್ಗದ ಬದಲಿಗೆ ಹೆಬ್ಟಾಳ ಮಾರ್ಗವಾಗಿ ನಿರ್ಮಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ರಾಮಕೃಷ್ಣ ಹೆಗಡೆ ನಗರದ ಭಾಗದಲ್ಲಿ ಈಗಾಗಲೇ ನಾನಾ ಸೇವಾ ಜಾಲಗಳ ಜತೆಗೆ ಜಿಎಐಎಲ್ ಸಂಸ್ಥೆಯು ಅಡುಗೆ ಅನಿಲ ಪೂರೈಕೆ ಕೊಳವೆ ಅಳವಡಿಸಿದ್ದು, ಮನೆಗಳಿಗೂ ಸಂಪರ್ಕ ಕಲ್ಪಿಸಿದೆ. ಹಾಗಾಗಿ ಇದೇ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ಕೈಗೊಂಡರೆ ಸೇವಾ ಜಾಲಗಳನ್ನು ಸ್ಥಳಾಂತರಿಸುವುದು ಸವಾಲಾಗಲಿದೆ.
ಜತೆಗೆ ಅಡುಗೆ ಅನಿಲ ಕೊಳವೆ ಮಾರ್ಗ ಹಾದು ಹೋಗಿರುವ ಕಡೆ ಬೃಹತ್ ಕಾಮಗಾರಿ ಕೈಗೊಳ್ಳಲು ಕೆಲ ನಿಬಂಧನೆಗಳಿವೆ. ಆ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಮಾರ್ಗ ಬದಲಾವಣೆಯಂತೆ ನಾಗವಾರದಿಂದ ಮೆಟ್ರೋ ಮಾರ್ಗವು ಹೆಬ್ಟಾಳ ಜಂಕ್ಷನ್ ಕಡೆಯಿಂದ ವಿಮಾನನಿಲ್ದಾಣದ ಕಡೆಗೆ ತೆರಳಲಿದೆ ಎಂದು ತಿಳಿಸಿದರು.
ಹೈಕೋರ್ಟ್ ಉಕ್ಕಿನ ಮೇಲುಸೇತುವೆ ನಿರ್ಮಿಸಬೇಡಿ ಎಂದು ಹೇಳಿಲ್ಲ. ಬದಲಿಗೆ ಪರಿಸರ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವಂತೆ ತಿಳಿಸಿದೆ. ಅದರಂತೆ ಯೋಜನೆ ಬಗ್ಗೆ ಸಮಗ್ರ ಮಾಹಿತಿಯನ್ನು ಜನತೆಯ ಮುಂದಿಡಲಾಗುವುದು. ಹೈಕೋರ್ಟ್ ಸೂಚನೆಯಂತೆ ಮುಂದುವರಿಯಲಾಗುವುದು
-ಡಾ.ಜಿ.ಪರಮೇಶ್ವರ್, ನಗರಾಭಿವೃದ್ಧಿ ಸಚಿವ, ಡಿಸಿಎಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.