ವಿಮಾನ ಯಾನಕ್ಕೆ ಆಧಾರ ಸಾಕು
Team Udayavani, Feb 15, 2018, 3:10 PM IST
ಬೆಂಗಳೂರು: ವಿಮಾನಯಾನಕ್ಕೆ ಈಗ ಮುದ್ರಿತ ಟಿಕೆಟ್, ಗುರುತಿನ ಚೀಟಿ, ಬೋರ್ಡಿಂಗ್ ಪಾಸು ಇದಾವುದೂ ಬೇಕಿಲ್ಲ. ಕೇವಲ ನಿಮ್ಮ ಬಯೋಮೆಟ್ರಿಕ್ ಗುರುತು ಸಾಕು! ಹೌದು, ವಿಮಾನ ಪ್ರಯಾಣಿಕರು ಇನ್ಮುಂದೆ ಮುದ್ರಿತ ಟಿಕೆಟ್, ಗುರುತಿನ ಚೀಟಿಯನ್ನು ಕೈಯಲ್ಲಿ ಹಿಡಿದು ಸರದಿಯಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಆನ್ ಲೈನ್‌ಲ್ಲಿ ಟಿಕೆಟ್ ಬುಕ್ ಮಾಡಿ, ಬಯೋಮೆಟ್ರಿಕ್ ಯಂತ್ರದಲ್ಲಿ ಬೆರಳು ಒತ್ತಿ ವಿಮಾನ ನಿಲ್ದಾಣ ಪ್ರವೇಶಿಸಬಹುದು. ಅಲ್ಲಿಂದ ಮುಂದೆ ನಿಲ್ದಾಣದಲ್ಲಿನ ಕ್ಯಾಮೆರಾಗಳು ಅಟೋಮ್ಯಾಟಿಕ್ ಆಗಿ ನಿಮ್ಮ ಮುಖ ಸ್ಕ್ಯಾನ್ ಮಾಡುತ್ತವೆ. ಆಗ ತಾನಾಗಿಯೇ ಬೋರ್ಡಿಂಗ್ ಪಾಸ್ ಗೇಟುಗಳು ತೆರೆದುಕೊಳ್ಳುತ್ತವೆ.
ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್), ಬಯೋಮೆಟ್ರಿಕ್ ಆಧಾರಿತ ತಂತ್ರಜ್ಞಾನ ಪರಿಚಯಿಸಲು ಮುಂದಾಗಿದೆ. ಇಂತಹದ್ದೊಂದು ಅತ್ಯಾಧುನಿಕ ವ್ಯವಸ್ಥೆಯನ್ನು “ಆಧಾರ್’ ಮೂಲಕ ಸಾಕಾರಗೊಳಿಸಲಾಗುತ್ತಿದೆ. ಇದನ್ನು ಸ್ವತಃ ಬಿಐಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ತಿಳಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ (ಎಫ್ಕೆಸಿಸಿಐ) ಬುಧವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಈ ಮಾಹಿತಿ ನೀಡಿದರು. ಈಗಾಗಲೇ ದೇಶದ ಬಹುತೇಕ ಎಲ್ಲರೂ ವಿಶೇಷ ಗುರುತಿನ ಸಂಖ್ಯೆ “ಆಧಾರ್’ ಹೊಂದಿದ್ದಾರೆ. ಇದು ಪ್ರತಿ ವ್ಯಕ್ತಿಯ ಬಯೋಮೆಟ್ರಿಕ್ ಮಾಹಿತಿಯನ್ನು ಒಳಗೊಂಡಿದೆ. ಇದನ್ನು ಟ್ರಾವೆಲ್ ದಾಖಲೆ (ಟಿಕೆಟ್) ಗಳೊಂದಿಗೆ ಲಿಂಕ್ ಮಾಡಲಾಗುವುದು. ಇದರಿಂದ ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡಿದ ತಕ್ಷಣ ಪ್ರಯಾಣಿಕರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಪ್ರಯಾಣಿಕರು ಬಯೋಮೆಟ್ರಿಕ್ ಮಾಹಿತಿ ಒಂದಕ್ಕೊಂದು ಹೋಲಿಕೆ ಆಗುತ್ತಿದ್ದಂತೆ ಅಟೋಮೆಟಿಕ್ ಆಗಿ ಬೋರ್ಡಿಂಗ್ ಗೇಟುಗಳು ತೆರೆದುಕೊಳ್ಳುತ್ತವೆ ಎಂದು ವಿವರಿಸಿದರು.
ಈಗಾಗಲೇ ಪ್ರಾಯೋಗಿಕವಾಗಿ ಇದು ಯಶಸ್ವಿಯಾಗಿದ್ದು, ಮುಂದಿನ ಐದಾರು ತಿಂಗಳಲ್ಲಿ ಈ ವಿನೂತನ ವ್ಯವಸ್ಥೆ ಜಾರಿಗೆ ಬರಲಿದೆ. ವಿದೇಶಗಳಲ್ಲಿ ಇಷ್ಟೊಂದು ಪ್ರಮಾಣದ ದಾಖಲೆಗಳ ಸಂಗ್ರಹ ಕಷ್ಟವಾಗಬಹುದು. ಆದರೆ, ನಮ್ಮಲ್ಲಿ ಈಗಾಗಲೇ “ಆಧಾರ್’ ಅಡಿ ಮಾಹಿತಿಗಳು ಲಭ್ಯ ಇರುವುದರಿಂದ ತಕ್ಷಣದಿಂದಲೇ ಈ ತಂತ್ರಜ್ಞಾನ ಜಾರಿಗೊಳಿಸಬಹುದು ಎಂದೂ ಅವರು ತಿಳಿಸಿದರು.
ಬಸ್‌ಗಳಲ್ಲೇ ಬೋರ್ಡಿಂಗ್ ಪಾಸು!: ಅಲ್ಲದೆ, ಶೀಘ್ರದಲ್ಲೇ ಬಿಎಂಟಿಸಿ ಬಸ್‌ಗಳಲ್ಲೇ ಬೋರ್ಡಿಂಗ್ ಪಾಸುಗಳನ್ನು ಪಡೆಯಬಹುದು. ಈ ಸಂಬಂಧದ ಚೆಕ್‌ಇನ್ ಯಂತ್ರಗಳನ್ನು ವಾಯುವಜ್ರದಲ್ಲಿ ಅಳವಡಿಸಲಾಗುತ್ತಿದೆ ಎಂದು ಹರಿ ಮರಾರ್ ಮಾಹಿತಿ ನೀಡಿದರು.
ಪ್ರಸ್ತುತ ನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ನಡುವೆ ಕಾರ್ಯಾಚರಣೆ ಮಾಡುವ “ವಾಯುವಜ್ರ’ದಲ್ಲಿ ವಿಮಾನಗಳ ವೇಳಾಪಟ್ಟಿ ಕುರಿತು ಮಾಹಿತಿ ನೀಡಲಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಈಗ ಮುದ್ರಿತ ಬೋರ್ಡಿಂಗ್ ಪಾಸುಗಳನ್ನು ವಿತರಿಸುವ ಚೆಕ್ ಇನ್ ಮಷಿನ್ ಅಳವಡಿಸಲಾಗುತ್ತಿದೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗುವುದರ ಜತೆಗೆ ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಿದಂತೆ ಆಗಲಿದೆ ಎಂದು ಹೇಳಿದರು.
2ನೇ ರನ್‌ವೇ ಸೇವೆಯು 2019ರ ಅಕ್ಟೋಬರ್ ವೇಳೆಗೆ ಆರಂಭಗೊಳ್ಳಲಿದೆ. ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿಯೇ “ಮಾಸ್ಟರ್ ಪ್ಲಾನ್’ ಸಿದ್ಧಪಡಿಸಿದ್ದು, ಇದರಲ್ಲಿ ಅಷ್ಟಪಥದ ರಸ್ತೆ, ಫ್ಲೈಓವರ್‌ಗಳು, ಐಷಾರಾಮಿ ಹೋಟೆಲ್‌ಗಳು ನಿರ್ಮಾಣ ಆಗಲಿದೆ. ಬಹು ಹಂತದ ವಾಹನಗಳ ನಿಲುಗಡೆ ನಿರ್ಮಿಸಲಾಗುತ್ತಿದ್ದು, ಒಂದೇ ಕಟ್ಟಡದಲ್ಲಿ ಮೆಟ್ರೋ, ಖಾಸಗಿ ಕಾರುಗಳು, ಟ್ಯಾಕ್ಸಿ, ಬಸ್ ನಿಲ್ದಾಣಗಳು ಬರಲಿವೆ ಎಂದು ತಿಳಿಸಿದರು.
ಇದೇ ವೇಳೆ ಎಫ್ಕೆಸಿಸಿಐ, ಮಾವಿನ ರಫ್ತು ಶುಲ್ಕ ತಗ್ಗಿಸಬೇಕು, ಮಧ್ಯಮವರ್ಗದ ಪ್ರಯಾಣಿಕರ ಅನುಕೂಲಕ್ಕಾಗಿ ಕೈಗೆಟಕುವ ದರದಲ್ಲಿ ಹೋಟೆಲ್ ಸೇವೆ ಕಲ್ಪಿಸಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರಸ್ತಾವನೆ ಸಲ್ಲಿಸಿತು. ಎಫ್ ಕೆಸಿಸಿಐ ಅಧ್ಯಕ್ಷ ಕೆ. ರವಿ, ಉಪಾಧ್ಯಕ್ಷ ಸಿ.ಆರ್. ಜನಾರ್ಧನ, ಪ್ರವಾಸೋದ್ಯಮ ಸಮಿತಿ ಅಧ್ಯಕ್ಷ ಪ್ರಕಾಶ್ ಮಂಡೂತ್ ಮತ್ತಿತರರು ಉಪಸ್ಥಿತರಿದ್ದರು.
21ರಿಂದಹೆಲಿ ಟ್ಯಾಕ್ಸಿ ಸೇವೆ
ಬಹುನಿರೀಕ್ಷಿತ “ಹೆಲಿ ಟ್ಯಾಕ್ಸಿ’ ಸೇವೆ ಫೆ.21ರಿಂದ ಆರಂಭಗೊಳ್ಳಲಿದೆ ಎಂದು ಹರಿ ಮರಾರ್ ಮಾಹಿತಿ ನೀಡಿದರು. ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ಹೆಲಿ ಟ್ಯಾಕ್ಸಿ ಪರಿಚಯಿಸಲಾಗುತ್ತಿದೆ. ಅದರಲ್ಲೂ ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರದೇಶಗಳಿಂದ ಬರುವವರು ಗಂಟೆಗಟ್ಟಲೆ ಸಂಚಾರದಟ್ಟಣೆಯಲ್ಲಿ ಕಳೆಯಬೇಕಿದೆ. ಆದ್ದರಿಂದ ಹೆಲಿ ಟ್ಯಾಕ್ಸಿ ಸೇವೆ ಆರಂಭಿಸಲಾಗುತ್ತಿದೆ. ಇದು ಇದೇ ತಿಂಗಳು 21ರಿಂದ ಶುರುವಾಗಲಿದೆ. ನಗರದಲ್ಲಿ 90 ಹೆಲಿಪ್ಯಾಡ್‌ಗಳಿವೆ ಎಂದು ಗುರುತಿಸಲಾಗಿದೆ. ಈಗ ಪ್ರಾಯೋಗಿಕವಾಗಿ ಎಲೆಕ್ಟ್ರಾನಿಕ್ ಸಿಟಿಯಿಂದ ಈ ಸೇವೆ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.