Bengaluru Airport: ನಗರದಲ್ಲಿ ಶೀಘ್ರವೇ ಏರ್‌ಟ್ಯಾಕ್ಸಿ ಸೇವೆ
Team Udayavani, Oct 17, 2024, 10:19 AM IST
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಬೆಂಗಳೂರು ನಗರ ಮತ್ತು ಹೊರಭಾಗದ ಪ್ರಮುಖ ಜಾಗಗಳಿಗೆ ಏರ್ ಟ್ಯಾಕ್ಸಿ ಸೇವೆ ನೀಡುವ ಬಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಮತ್ತು ಸರ್ಲಾ ಏವಿಯೇಷನ್ ಮಧ್ಯೆ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ನಗರದ ಕೇಂದ್ರ ಭಾಗದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಕೆಐಎಯನ್ನು ತಲುಪಲು, ಹಾಗೆಯೇ ಕೆಐಎನಿಂದ ದಟ್ಟ ಟ್ರಾಫಿಕ್ ನಡುವೆ ನಗರಕ್ಕೆ ಅಥವಾ ಇನ್ನಿತರ ಪ್ರಮುಖ ಐಟಿ ಹಬ್, ವ್ಯವಹಾರ ಕೇಂದ್ರಗಳಾದ ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಕೋರಮಂಗಲ, ಇಂದಿರಾನಗರ ಮುಂತಾ ದೆಡೆ ತಲುಪಲು ಪ್ರಯಾಣಿಕರು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುವುದು ಸಾಮಾನ್ಯ. ಇದರಿಂದಾಗಿ ವ್ಯವಹಾರ ನಿಮಿತ್ತ ನಗರಕ್ಕೆ ಆಗಮಿಸುವ ಮತ್ತು ತುರ್ತಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕಾದ ಸಂದರ್ಭದಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುವ ಪ್ರಸಂಗ ಬೆಂಗಳೂರಿಗರಿಗೆ ಹೊಸದಲ್ಲ. ಈ ಸಮಸ್ಯೆಗೆ ಸ್ಪಂದಿಸಲು ನಗರದ ಹಲವು ಭಾಗಗಳಿಗೆ ಏರ್ ಟ್ಯಾಕ್ಸಿ (ಹೆಲಿಕಾಫ್ಟರ್ ಸೇವೆ) ಆರಂಭಿ ಸಲು ಸರ್ಲಾ ಏವಿಯೇಷನ್ ಸಂಸ್ಥೆಯು ಮುಂದೆ ಬಂದಿ ದ್ದು ಬಿಐಎಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ನಗರದ ಪ್ರಮುಖ ಐಟಿ ಮತ್ತಿತ್ತರ ಉದ್ದಿಮೆ ತಾಣವಾದ ಎಲೆಕ್ಟ್ರಾನಿಕ್ ಸಿಟಿಯಿಂದ ಕೆಐಎಗೆ ಹೆಲಿಕಾಪ್ಟರ್‌ನಲ್ಲಿ ಗರಿಷ್ಠ 19 ನಿಮಿಷದಲ್ಲಿ ಪ್ರಯಾಣಿಸಬಹುದು. ಅದೇ ರಸ್ತೆ ಮಾರ್ಗದಲ್ಲಿ ಒಂದೂವರೆ ಗಂಟೆಯಿಂದ ಎರಡು ಗಂಟೆ ಸಮಯ ಟ್ರಾಫಿಕ್ ದಟ್ಟಣೆಯ ಅವಧಿಯಲ್ಲಿ ಬೇಕಾಗುತ್ತದೆ. ನಗರದ ಬೇರೆ ಭಾಗಗಳಿಂದ ರಸ್ತೆ ಮಾರ್ಗದಲ್ಲಿ ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳುವ ಪ್ರಯಾಣ ವನ್ನು ಹೆಲಿಕಾಪ್ಟರ್ ಮೂಲಕ 15 ನಿಮಿಷದಲ್ಲಿ ಮುಗಿಸಬಹುದು. ಇಂದಿರಾ ನಗರದಿಂದ ಕೆಐಎಗೆ ರಸ್ತೆ ಮಾರ್ಗದಲ್ಲಿ ಒಂದೂವರೆ ಗಂಟೆ ತೆಗೆದುಕೊಳ್ಳುವ ಪ್ರಯಾಣವನ್ನು ಏರ್ ಟ್ಯಾಕ್ಸಿ ಯ ಮೂಲಕ 5 ನಿಮಿಷದಲ್ಲಿ ಮುಗಿಸಬಹುದು ಎಂದು ಸರ್ಲಾ ಏವಿಯೇಷನ್ ಹೇಳುತ್ತದೆ.
ಇಷ್ಟೊಂದು ಸಮಯ ಪ್ರಯಾಣದಲ್ಲಿ ವ್ಯರ್ಥವಾಗು ವುದರ ಜೊತೆಗೆ ಅಗ್ರಿಗೇಟರ್‌ಗಳಲ್ಲಿನ ಪ್ರೀಮಿ ಯಂ ಕಾರುಗಳ ದರ ಸಹ ಅನೇಕ ಸಂದರ್ಭದಲ್ಲಿ 2 ಸಾವಿರ ರೂ. ದಾಟುವುದಿದೆ. ಹಾಗಾಗಿ 2 ಸಾವಿರ ರೂಗಳೊಳಗೆ ದರ ನಿಗದಿ ಮಾಡುವ ಚಿಂತನೆ ಸರ್ಲಾ ಏವಿಯೇಷನ್‌ನದ್ದು.
ಈ ಒಪ್ಪಂದದ ಬಗ್ಗೆ “ಎಕ್ಸ್’ನಲ್ಲಿ ಬರೆದುಕೊಂಡಿರುವ ಬಿಐಎಎಲ್, 7 ಆಸನಗಳ ಇವಿಟಿಒಲ್ (ಇಲೆಕ್ಟ್ರೀಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್) ಅಭಿಪ್ರದ್ಧಿ ಪಡಿಸುತ್ತಿದ್ದೇವೆ. ಇದು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮಾತ್ರವಲ್ಲದೆ ಸ್ವತ್ಛ, ವೇಗ ಮತ್ತು ಸುಧಾರಿತ ಸಂಪರ್ಕ ವ್ಯವಸ್ಥೆಯನ್ನು ಸಾಧ್ಯವಾಗಿಸುವ ಪ್ರಯತ್ನ ಎಂದು ಹೇಳಿದೆ.
ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಲಾ ಏವಿಯೇಷನ್, ನಮಗೆ ಈ ಒಪ್ಪಂದದ ಬಗ್ಗೆ ಹೆಮ್ಮೆಯಿದೆ. ಬೆಂಗಳೂರಿನ ಟ್ರಾಫಿಕ್ ದಟ್ಟಣೆ ನಿರ್ವಹಣೆಯ ದೃಷ್ಟಿಯಲ್ಲಿ ಇದು ಮಹತ್ವದ ಹೆಜ್ಜೆ ಎಂದು ಹೇಳಿದೆ.
1,700 ಆಸುಪಾಸು ದರ ನಿಗದಿ ಪ್ರಸ್ತಾವನೆ: ವಿಮಾನ ನಿಲ್ದಾಣಕ್ಕೆ ತೆರಳಲು ಏರ್ ಟ್ಯಾಕ್ಸಿಯನ್ನು ಒಂದು ವರ್ಗ ಇಷ್ಟ ಪಡಬಹುದು ಎಂಬ ಹಿನ್ನೆಲೆಯಲ್ಲಿ ಏರ್ ಟ್ಯಾಕ್ಸಿ ಆರಂಭಿಸುವ ಪ್ರಯತ್ನಕ್ಕೆ ಬಿಐಎಎಲ್ ಮತ್ತು ಸರ್ಲಾ ಏವಿಯೇಷನ್ ಮುಂದಾಗಿದ್ದು, ಸುಮಾರು 1,700 ರೂ.ಗಳ ಆಸುಪಾಸು ದರ ನಿಗದಿ ಮಾಡುವ ಪ್ರಸ್ತಾವವಿದೆ. ಪೈಲಟ್ ಸೇರಿ ಒಟ್ಟು 7 ಮಂದಿ ಈ ಬ್ಯಾಟರಿ ಆಧಾರಿತ ಏರ್ ಟ್ಯಾಕ್ಸಿಯಲ್ಲಿ ಪ್ರಯಾಣಿಸಬಹುದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.