ಅಂದುಕೊಂಡದ್ದನ್ನೆಲ್ಲಾ ಅನುಷ್ಠಾನ ಮಾಡಲಾಗಲಿಲ್ಲ
Team Udayavani, Sep 21, 2019, 3:10 AM IST
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 52ನೇ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರ ಅಧಿಕಾರವಧಿ ಇದೇ ಸೆ.27ರಂದು ಮುಗಿಯಲಿದೆ. ಹಲವು ವರ್ಷಗಳಿಂದ ಕಗ್ಗಂಟಾಗಿದ್ದ ಯೋಜನೆಗಳನ್ನು ಜಾರಿ ಮಾಡಿರುವ ಹೆಚ್ಚುಗಾರಿಕೆಗೆ ಮೇಯರ್ ಗಂಗಾಂಬಿಕೆ ಪಾತ್ರರಾಗಿದ್ದಾರೆ ಅವರೊಂದಿಗೆ “ಉದಯವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.
* ಮೇಯರ್ ಆಡಳಿತಾವಧಿ ಹೇಗಿತ್ತು?
ಮೇಯರ್ ಒಂದು ವರ್ಷದ ಅವಧಿ ಕಡಿಮೆ. ಮೇಯರ್ ಆಗಿ ಆಯ್ಕೆಯಾದಾಗ ಹಲವು ಮಹತ್ವದ ಕಾರ್ಯ ಅನುಷ್ಠಾನ ಮಾಡಬೇಕು ಎಂದು ಯೋಜನೆ ರೂಪಿಸಿಕೊಳ್ಳಲಾಗಿತ್ತು. ಆದರೆ, ಅನುಷ್ಠಾನ ಮಾಡುವುದಕ್ಕೆ ಪೂರ್ಣಪ್ರಮಾಣದಲ್ಲಿ ಸಾಧ್ಯವಾಗಲಿಲ್ಲ.
* ಈ ಅವಧಿಯಲ್ಲಿ ನೀವು ಎದುರಿಸಿದ ಸವಾಲುಗಳೇನು?
ಲೋಕಸಭಾ ಚುನಾವಣೆ ನಡೆದ ವರ್ಷವಾದ್ದರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದದ್ದು, ಸರ್ಕಾರಗಳ ಬದಲಾವಣೆ ಅದರಿಂದ ಉಂಟಾದ ಗೊಂದಲಗಳು ಹಾಗೂ ಬಜೆಟ್ ತಡೆಯಿಂದ ಆಡಳಿತಾತ್ಮಕ ಕೆಲಸಗಳಿಗೆ ಹಿನ್ನಡೆಯಾಯಿತು. ವರ್ಷದ ಅವಧಿಯಲ್ಲಿ ಆಡಳಿತ ನಡೆಸಿದ್ದು, ಏಳು ತಿಂಗಳು ಮಾತ್ರ.
* ಹೊಸ ಸರ್ಕಾರ ಪಾಲಿಕೆ ಆಡಳಿತದ ಮೇಲೆ ಪರಿಣಾಮ ಬೀರಿತೇ?
ಪಕ್ಷಗಳ ಬದಲಾವಣೆ ಯಾವುದೇ ಪರಿಣಾಮ ಬೀರಲಿಲ್ಲ. ಮೇಯರ್ ಆಡಳಿತ ಅವಧಿಯ ಕೊನೆಯ ಹಂತವಾದಲ್ಲಿ ಬಜೆಟ್ ತಡೆಯಿಂದ ಬಿಬಿಎಂಪಿಯಲ್ಲಿ ಅನುಷ್ಠಾನದ ಹಂತದಲ್ಲಿದ್ದ ಯೋಜನೆಗಳಿಗೆ ಹಿನ್ನಡೆಯಾಯಿತು.
* ಯಾವ ಯೋಜನೆ ನಿಮ್ಮಿಂದ ಅನುಷ್ಠಾನ ಮಾಡಲಾಗಲಿಲ್ಲ?
ಡಿ ಅಡಿಕ್ಷನ್ ಸೆಂಟರ್ ಸ್ಥಾಪನೆ, ಕ್ಯಾನ್ಸರ್ ಡಿಡೆಕ್ಷನ್ ಮೊಬೈಲ್ ಸೆಂಟರ್ ಹಾಗೂ ಕೆಲವು ಮಹಿಳಾ ಪರಯೋಜನೆಗಳನ್ನು ಜಾರಿಮಾಡಲು ಸಾಧ್ಯವಾಗಲಿಲ್ಲ.
* ಮೇಯರ್ ಸ್ಥಾನ ನಿರ್ವಹಣೆ ಮಹಿಳೆಯರಿಗೆ ಕಷ್ಟವೇ?
ಮಹಿಳೆಯರು ಪುರುಷರಷ್ಟೇ ಸರ್ಮಥವಾಗಿ ಅಧಿಕಾರ ನಿರ್ವಹಿಸಬಲ್ಲರು. ಇದನ್ನು ಈ ಹಿಂದೆ ಮೇಯರ್ ಆದವರೂ ಸಾಬೀತು ಮಾಡಿದ್ದಾರೆ. ಮಹಿಳೆಯರಿಗೆ ಕಮಿಟ್‌ಮೆಂಟ್ ಹೆಚ್ಚು ಇರುತ್ತದೆ. ತಾಳ್ಮೆ, ಸಮಯ ಪ್ರಜ್ಞೆ ಹಾಗೂ ನಿಭಾಯಿಸುವ ಶಕ್ತಿಯೂ ಇದೆ.
* ಅಧಿಕಾರಿಗಳ ಬಗ್ಗೆ ಮೃದುಧೋರಣೆ ಆರೋಪ ನಿಮ್ಮ ಮೇಲಿದೆ ಹೌದಾ?
ಅಧಿಕಾರಿಗಳು ಕೆಲಸ ಮಾಡುವುದಕ್ಕೆ ಬೈಯುವುದು ಅಥವಾ ಮೃದುವಾಗಿ ಹೇಳುವುದು ಮುಖ್ಯವಲ್ಲ. ಅಧಿಕಾರಿಗಳಿಂದ ಕೆಲಸ ಮಾಡಿಸುವುದು ಚಾಣಾಕ್ಷತೆ. ನಿಜಕ್ಕೂ ಲೋಪವಾಗಿದ್ದರೆ ಮಾತ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದೆ. ಅದು ಮೃದುಧೋರಣೆಯಲ್ಲ.
* ನಿಮಗೆ ತೃಪ್ತಿತಂದ ಯೋಜನೆಗಳು ಯಾವುವು?
ತ್ಯಾಜ್ಯ ನಿರ್ವಹಣೆ (ಹಸಿ ಮತ್ತು ಒಣ ಕಸ ಪ್ರತ್ಯೇಕ)ಟೆಂಡರ್ ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಈ ಟೆಂಡರ್ ಜಾರಿ ಮಾಡುವಲ್ಲಿ ನಾನು ಯಶಸ್ವಿಯಾಗಿದ್ದೇನೆ ಎನ್ನುವ ಸಮಾಧಾನವಿದೆ. ಆಟೋ, ಟಿಪ್ಪರ್ ಲಾರಿಗಳ ಸಂಖ್ಯೆಯಲ್ಲಿ ನಡೆಯುತ್ತಿದ್ದ ವಂಚನೆ ಮತ್ತು ಮಿಶ್ರ ತ್ಯಾಜ್ಯದ ಸಮಸ್ಯೆಗಳಿತ್ತು. ಹೊಸ ಟೆಂಡರ್‌ನಲ್ಲಿ ಇದಕ್ಕೆ ಯಾವುದೇ ಅವಕಾಶವಿಲ್ಲ. ಬಿಬಿಎಂಪಿಯ ವಿಶೇಷ ಆಯುಕ್ತರಾದ ರಂದೀಪ್ ಮತ್ತು ಅವರ ತಂಡದ ನೆರವಾಗಿದೆ.
* ತ್ಯಾಜ್ಯ ವಿಲೇವಾರಿ ಟೆಂಡರ್ ತಡವಾಗಿದ್ದೇಕೆ ?
ತ್ಯಾಜ್ಯ ವಿಲೇವಾರಿ ಟೆಂಡರ್ ಅನುಷ್ಠಾನದಲ್ಲಿ ನಾನು ಹಾಕಿಕೊಂಡಿದ್ದ ಬದ್ಧತೆಗೆ ಅನುಗುಣವಾಗಿ ಅಂದಿನ ಉಸ್ತುವಾರಿ ಸಚಿವರೂ ಸಹಕಾರ ನೀಡಿದ್ದರೆ, ಇಷ್ಟು ಕಡಿಮೆ ಅವಧಿಯಲ್ಲೂ ಹೊಸ ಟೆಂಡರ್‌ಗೆ ಕಾರ್ಯದೇಶ ನೀಡಿ ಕೆಲಸ ಪ್ರಾರಂಭಿಸಿರಬಹುದಾಗಿತ್ತು.
* ಮೇಯರ್ ಪರಿಶೀಲಿಸಿದ ಹಲವು ಪ್ರದೇಶಗಳು ಸ್ವರೂಪ ಬದಲಾಗಲಿಲ್ಲ?
ಸಂಪೂರ್ಣ ಬದಲಾಗದಿರಬಹುದು. ಆದರೆ, ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯಲ್ಲಿ ಖಂಡಿತವಾಗಿಯೂ ಬದಲಾಗಿದೆ. ಹಿಂದೆಗಿಂತಲೂ ಹಲವು ಸಮಸ್ಯೆಗಳ ತೀವ್ರತೆ ಕಡಿಮೆಯಾಗಿದೆ.
* ಮೇಯರ್ ಸಾಧನೆಗಳು ಏನು?
-ಇದು ಸಾಧನೆ ಎಂದು ನಾನು ಹೇಳಿಕೊಳ್ಳುವುದಿಲ್ಲ. ನಾನು ಅಚ್ಚುಕಟ್ಟಾಗಿ ಮಾಡಿದ ಯೋಜನೆಗಳಿವು.
-ಪರಿಸರ ಸ್ನೇಹಿ ಗಣಪ ಜಾಗೃತಿ ಜಾಥಾ, ಪ್ಲಾಸ್ಟಿಕ್ ನಿಷೇಧ ಕಾರ್ಯಕ್ರಮಗಳು ಯಶಸ್ವಿಯಾಯಿತು. ಈ ಬಾರಿ ಶೇ.5ಕ್ಕಿಂತ ಕಡಿಮೆ ಪಿಒಪಿ ಗಣೇಶ ಮೂರ್ತಿಗಳನ್ನು ನಗರದಲ್ಲಿ ಬಳಸಲಾಗಿದೆ. ಇದಕ್ಕೆ ಶಾಲಾ ಮಕ್ಕಳು ಮತ್ತು ನಗರದ ಸಾರ್ವಜನಿಕರಿಗೆ ಋಣಿ.
-ಕೆಂಪೇಗೌಡ ಪ್ರಶಸ್ತಿ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ.
-ತೆರಿಗೆ ಹಣ ಸಂಗ್ರಹ ಪ್ರಮಾಣ ಹೆಚ್ಚಾಗಿರುವುದರಿಂದ ಬಿಬಿಎಂಪಿಯ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ.
-ವಾರ್ಡ್ ಮಟ್ಟದ ಕಮಿಟಿ ಸಭೆಯಲ್ಲಿ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ.
ಕಾಡಿತ್ತು ಮಹಿಳೆಯೊಬ್ಬಳ ದುಃಖ: ಪಿಂಕ್‌ಬೇಬಿ ಯೋಜನೆ ಅನುಷ್ಠಾನ ನನಗೆ ಇಂದಿಗೂ ಮರೆಯಲಸಾಧ್ಯ. ಈ ಹಿಂದೆ ಬಿಬಿಎಂಪಿಯ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿಗೆ ಪಿಂಕ್ ಬೇಬಿ ಯೋಜನೆಯಡಿ ಐದು ಲಕ್ಷದ ಬಾಂಡ್ ನೀಡಲಾಗುತ್ತಿತ್ತು. ಆದರೆ, ಮಹಿಳೆಯೊಬ್ಬರು ನನ್ನ ಮಗು ಐದು ನಿಮಿಷ ಮುಂಚೆ ಹುಟ್ಟಿದ್ದರೆ ಅವಳಗೂ ನೀಡಬಹುದಿತ್ತು ಎಂದು ದು:ಖ ತೋಡಿಕೊಂಡರು. ಅದು ನನ್ನನ್ನು ತುಂಬಾ ಕಾಡಿತು. ಹೀಗಾಗಿ,ಯಾವ ಹೆಣ್ಣು ಮಗುವಿಗೂ ಅನ್ಯಾಯವಾಗದಂತೆ. ಯೋಜನೆ ವಿಸ್ತರಿಸಲಾಗಿದ್ದು, ಏ.1 2019ರಿಂದ ಮಾ.31ರ 2020ರ ಅವಧಿಯಲ್ಲಿ ಬಿಬಿಎಂಪಿಯ ಹೆರಿಗೆ ಆಸ್ಪತ್ರೆಯಲ್ಲಿ ಜನಿಸುವ ಎಲ್ಲ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಒಂದು ಲಕ್ಷರೂ. ಬಾಂಡ್ ನೀಡಲಾಗುತ್ತಿದ್ದು, ಬಜೆಟ್‌ನಲ್ಲಿ 60 ಕೋಟಿ ರೂ. ಮೀಸಲಿಡಲಾಗಿದೆ.
* ಹಿತೇಶ್ ವೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.