ಪ್ರತಿಷ್ಠೆಗೆ ಮೈತ್ರಿ ಅಭ್ಯರ್ಥಿ ಸ್ಪರ್ಧೆ
Team Udayavani, Oct 1, 2019, 3:06 AM IST
ಬೆಂಗಳೂರು: ರಾಜ್ಯ ಮಟ್ಟದಲ್ಲಿ ಮೈತ್ರಿ ಮುರಿದುಕೊಂಡು ಆರೋಪ ಪ್ರತ್ಯಾರೋಪದಲ್ಲಿ ತೊಡಗಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತ್ತೆ ದೋಸ್ತಿ ಶಕ್ತಿ ಪರೀಕ್ಷೆಗೆ ಮುಂದಾಗಿದ್ದಾರೆ.
ಎರಡೂ ಪಕ್ಷಗಳ ನಾಯಕರು ಸೇರಿ ಮುನಿಸು ಮರೆತು ಬಿಬಿಎಂಪಿಯಲ್ಲಿ ಒಂದಾಗುವ ಪ್ರಯತ್ನ ನಡೆಸಿದ್ದು, ಕಾಂಗ್ರೆಸ್‌ನಿಂದ ದತ್ತಾತ್ರೆಯ ವಾರ್ಡ್‌ನ ಸತ್ಯನಾರಾಯಣ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ಜೆಡಿಎಸ್‌ನ ಪಾದರಾಯನಪುರ ವಾರ್ಡ್‌ನ ಇಮ್ರಾನ್ ಪಾಷ ಉಪ ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಆದರೆ, ಒಲ್ಲದ ಮನಸಿನಿಂದ ಮೇಯರ್ ಚುನಾವಣೆ ಸ್ಪರ್ಧೆಗೆ ಮುಂದಾಗಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು, ಚುನಾವಣೆ ಗೆಲ್ಲಲು ಬೇಕಾದ ಅಗತ್ಯ ಕಾರ್ಯತಂತ್ರ ಮಾಡುವಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಪ್ರಮುಖವಾಗಿ ಎರಡೂ ಪಕ್ಷಗಳಿಗೂ ಪಕ್ಷೇತರ ಕಾರ್ಪೊರೇಟರ್‌ಗಳ ಅಗತ್ಯತೆ ಇದೆ. ಆದರೆ, ಏಳೂ ಜನ ಪಕ್ಷೇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
ರಾಮಲಿಂಗಾ ರೆಡ್ಡಿ ನಿರ್ಲಕ್ಷ್ಯ: ಪ್ರಮುಖವಾಗಿ ಬಿಬಿಎಂಪಿಯಲ್ಲಿ ಆರಂಭದಿಂದಲೂ ಮೈತ್ರಿ ಗಟ್ಟಿಯಾಗಿ ಮುಂದುವರೆಯಲು ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಪ್ರಯತ್ನ ಪ್ರಮುಖವಾಗಿತ್ತು. ಕಳೆದ ನಾಲ್ಕು ವರ್ಷದಿಂದಲೂ ಪಕ್ಷೇತರ ಕಾರ್ಪೋರೇಟರ್‌ಗಳನ್ನು ವಿಶ್ವಾಸದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಕಾರ್ಪೋರೇಟರ್‌ಗಳು ಮೇಯರ್ ಹಾಗೂ ಜೆಡಿಎಸ್‌ನಿಂದ ಉಪ ಮೇಯರ್ ಆಗುವಂತೆ ನೋಡಿಕೊಳ್ಳುವಲ್ಲಿ ರಾಮಲಿಂಗಾ ರೆಡ್ಡಿ ಯಶಸ್ವಿಯಾಗಿದ್ದರು.
ಆದರೆ, ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಮಲಿಂಗಾ ರೆಡ್ಡಿ ಅವರನ್ನು ಕಡೆಗಣಿಸಿ, ತುಮಕೂರಿನವರಾದ ಡಾ.ಜಿ. ಪರಮೇಶ್ವರ್ ಅವರಿಗೆ ಬೆಂಗಳೂರು ಉಸ್ತುವಾರಿ ನೀಡಿದ್ದರಿಂದ ರಾಮಲಿಂಗಾರೆಡ್ಡಿ ಬೇಸರಗೊಂಡು ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದರು. ಇದೇ ಕಾರಣಕ್ಕೆ ಒಂದು ಹಂತದಲ್ಲಿ ಪಕ್ಷದ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು.
ಪಕ್ಷದ ನಾಯಕರ ನಡವಳಿಕೆಯಿಂದ ಬೇಸರ ಗೊಂಡಿರುವ ರಾಮಲಿಂಗಾ ರೆಡ್ಡಿ ಬಿಬಿಎಂಪಿಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಹೆಚ್ಚು ಆಸಕ್ತಿ ವಹಿಸಲಿಲ್ಲ ಎಂದು ಹೇಳಲಾಗುತ್ತಿದೆ. ಆದರೂ, ಪಕ್ಷದ ಅಧ್ಯಕ್ಷರ ಸೂಚನೆಯ ಮೇರೆಗೆ ಮೈತ್ರಿ ಮುಂದುವರೆಸಲು ಜೆಡಿಎಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಆದರೆ, ಮೊದಲಿನ ಆಸಕ್ತಿ ತೋರಿಸಿಲ್ಲ ಎಂದು ತಿಳಿದು ಬಂದಿದೆ.
ಗೈರು ಸಾಧ್ಯತೆ: ಪ್ರಸಕ್ತ ಸಂಖ್ಯಾ ಬಲದಲ್ಲಿ ಜೆಡಿಎಸ್‌ನ ಜೆಡಿಎಸ್‌ನ ಮೂವರು ಕಾರ್ಪೊರೇಟರ್‌ಗಳು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಐವರು ಪಕ್ಷೇತರ ಕಾರ್ಪೊರೇಟರ್‌ಗಳು ಹಾಗೂ ಐವರು ಅನರ್ಹ ಶಾಸಕರ ಕ್ಷೇತ್ರಗಳಲ್ಲಿನ ಸುಮಾರು 15 ಕಾರ್ಪೊರೇಟರ್ ಗಳು ಚುನಾವಣೆಗೆ ಗೈರು ಹಾಜರಾಗುವ ಸಾಧ್ಯತೆ ಇದೆ. ಹೀಗಾಗಿ ಸಂಖ್ಯಾ ಬಲದಲ್ಲಿ ಮೈತ್ರಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದ್ದು, ಆದರೂ, ಪ್ರತಿಷ್ಠೆಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮೇಯರ್ ಸ್ಪರ್ಧೆಗೆ ಅಭ್ಯರ್ಥಿ ಹಾಕಲು ನಿರ್ಧರಿಸಿದ್ದೇವೆ. ಈಗಾಗಲೇ ಜೆಡಿಎಸ್ ನಾಯಕರ ಜತೆ ಮಾತುಕತೆ ನಡೆಸಿದ್ದೇವೆ. ಬಿಜೆಪಿಯಲ್ಲಿಯೂ ಗೊಂದಲ ಇರುವುದರಿಂದ ನಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಇದೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.