75 ಎಕರೆ ಭೂಮಿಗೆ ಪರ್ಯಾಯ ಬೇಡಿಕೆ
Team Udayavani, Aug 8, 2018, 12:21 PM IST
ಬೆಂಗಳೂರು: ತನ್ನ ಜಾಗದಲ್ಲಿ ಕೈಗೆತ್ತಿಕೊಂಡ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಲು ರಕ್ಷಣಾ ಇಲಾಖೆ ಕೊನೆಗೂ ಒಪ್ಪಿಗೆ ನೀಡಿದ್ದು, ಈ ಮೂಲಕ ಸರ್ಕಾರಕ್ಕೆ “ಬಿಗ್ ರಿಲೀಫ್’ ಸಿಕ್ಕಿದೆ. ಆದರೆ, ಬೆನ್ನಲ್ಲೇ ಇದಕ್ಕೊಂದು ಪ್ರಮುಖ ಷರತ್ತು ವಿಧಿಸಿದೆ.
ನಗರ ಸೇರಿದಂತೆ ರಾಜ್ಯದ ವಿವಿಧೆಡೆ ದಶಕಗಳಿಂದ ಸರ್ಕಾರಿ ಸಂಸ್ಥೆಗಳು ಹಲವು ದಶಕಗಳಿಂದ ರಕ್ಷಣಾ ಇಲಾಖೆಗೆ ಸೇರಿದ ಸುಮಾರು 75 ಎಕರೆ ಭೂಮಿಯನ್ನು ಅನುಭವಿಸುತ್ತಿವೆ. ಈ ಜಾಗದ ಮಾರುಕಟ್ಟೆ ದರ ಸಾವಿರಾರು ಕೋಟಿ ರೂ. ಆಗುತ್ತದೆ. ಈ ಜಾಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಷರತ್ತು ವಿಧಿಸಿದೆ. ಇದು ಸರ್ಕಾರಕ್ಕೆ ಮತ್ತೂಂದು ರೀತಿಯ ತಲೆನೋವಾಗಿದೆ.
ಎಲ್ಲೆಲ್ಲಿ ಎಷ್ಟು ಬಳಕೆ?: ರಕ್ಷಣಾ ಇಲಾಖೆಯು ಒಟ್ಟಾರೆ 17 ಜಾಗಗಳಲ್ಲಿ 75 ಎಕರೆ ಭೂಮಿಯನ್ನು ಗುರುತಿಸಿದೆ. ಅದರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ 18 ಎಕರೆ, ಪೊಲೀಸ್ ವೈರ್‌ಲೆಸ್ ಹೆಡ್‌ಕಾÌಟ್ರìಸ್ 12 ಎಕರೆ, ಪೊಲೀಸ್ ಮೀಸಲು ಪಡೆ 20 ಎಕರೆ, ಕದರೇನಪಾಳ್ಯದಲ್ಲಿರುವ ಪಾಲಿಕೆಗೆ ಸೇರಿದ ಬಿಸಿಸಿ ಕಾಂಪ್ಲೆಕ್ಸ್ 4 ಎಕರೆ, ಮಾಯಾಬಜಾರ್ 1 ಎಕರೆ ಒಳಗೊಂಡಂತೆ ನಗರದ ಆರು ಕೊಳಚೆ ಪ್ರದೇಶಗಳು, ಐದು ರಸ್ತೆಗಳು ಬರುತ್ತವೆ.
ಈ ಎಲ್ಲ ಭೂಮಿಯ ಪ್ರಸ್ತುತ ಮಾರುಕಟ್ಟೆ ಬೆಲೆ ಮೂರೂವರೆ ಸಾವಿರ ಕೋಟಿ ರೂ. ಎಂದು ಅಂದಾಜು ಮಾಡಿದೆ. ಹಾಗೆಂದು, “ಈ ಜಾಗವನ್ನು ಬಿಟ್ಟುಕೊಡಿ ಎಂದು ನಾವು ಕೇಳುವುದಿಲ್ಲ. ಆದರೆ, ಇದಕ್ಕೆ ಸಮಾನವಾದದ್ದನ್ನು ಕೊಡಿ’ ಎಂದು ರಕ್ಷಣಾ ಇಲಾಖೆ ಬೇಡಿಕೆ ಇಟ್ಟಿದೆ.
ನಗರದ ವಿವಿಧೆಡೆ 14 ಎಕರೆ ಭೂಮಿ ಬಿಟ್ಟುಕೊಟ್ಟ ರಕ್ಷಣಾ ಇಲಾಖೆಗೆ ಪ್ರತಿಯಾಗಿ ಸರ್ಕಾರವು 209 ಎಕರೆ ಭೂಮಿಯನ್ನು ಹೊಂದಿಸಿಕೊಡಬೇಕಾಯಿತು. ಈಗ 75 ಎಕರೆ ಭೂಮಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಅದು ಹಣ ಅಥವಾ ಭೂಮಿಯ ರೂಪದಲ್ಲಿ ಎನ್ನುವುದು ಸ್ಪಷ್ಟವಾಗಿಲ್ಲ.
ಹಾಗೊಂದು ವೇಳೆ ಭೂಮಿಯ ಮೊತ್ತ ಭರಿಸಿಕೊಡುವಂತೆ ಕೇಳಿದರೆ, ಸರ್ಕಾರ ಸಂಕಷ್ಟಕ್ಕೆ ಸಿಲುಕಲಿದೆ. ಯಾಕೆಂದರೆ, ಈಗಾಗಲೇ ರೈತರ ಸಾಲಮನ್ನಾ, ಸರ್ಕಾರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಪಾಸು ಮತ್ತಿತರ ಯೋಜನೆಗಳಿಂದ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಆದರೆ, ಸಾಮಾನ್ಯವಾಗಿ ರಕ್ಷಣಾ ಇಲಾಖೆ ಪರ್ಯಾಯ ಭೂಮಿಗೆ ಬೇಡಿಕೆ ಇಡುತ್ತದೆ. ಅಷ್ಟೊಂದು ಪ್ರಮಾಣದ ಭೂಮಿಯನ್ನು ಬೆಂಗಳೂರು ಹೊರತುಪಡಿಸಿ, ಉಳಿದೆಡೆ ಪೂರೈಸಲು ಸಮಸ್ಯೆ ಆಗದು. ನಗರದಲ್ಲೇ ನೀಡುವಂತೆ ಕೇಳಿದರೆ, ಸರ್ಕಾರಕ್ಕೆ ಅದು ಕೂಡ ನುಂಗಲಾರದ ತುತ್ತು ಆಗಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.
ಸರ್ಕಾರಿ ಸಂಸ್ಥೆಗಳು ಅನುಭವಿಸುತ್ತಿರುವ 75 ಎಕರೆ ಭೂಮಿಗೆ ಸರಿಸಮನಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ರಕ್ಷಣಾ ಇಲಾಖೆ ಬೇಡಿಕೆ ಇಟ್ಟಿದ್ದು ನಿಜ. ಆದರೆ, ಆ ಪರ್ಯಾಯ ವ್ಯವಸ್ಥೆ ಇಂತಹದ್ದೇ ಆಗಿರಬೇಕು ಎಂದು ಸ್ಪಷ್ಟವಾಗಿ ಹೇಳಿಲ್ಲ.
ಅಷ್ಟಕ್ಕೂ ಯಲಹಂಕ ಸೇರಿದಂತೆ ರಾಜ್ಯಕ್ಕೆ ಸೇರಿದ ಅರಣ್ಯ ಭೂಮಿಯನ್ನೂ ರಕ್ಷಣಾ ಇಲಾಖೆ ಅನುಭವಿಸುತ್ತಿದೆ. ಹಾಗಾಗಿ, ಈ ಬಗ್ಗೆಯೂ ಸರ್ಕಾರ ಮಾಹಿತಿ ಕಲೆಹಾಕಿ, ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಲು ಚಿಂತನೆ ನಡೆಸಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
ಸಿಎಂ ಸಮ್ಮತಿ: ಈ ಮಧ್ಯೆ ರಕ್ಷಣಾ ಇಲಾಖೆಯ ಷರತ್ತಿಗೆ ಮುಖ್ಯಮಂತ್ರಿ ಮೌಖೀಕವಾಗಿ ಸಮ್ಮತಿ ಸೂಚಿಸಿದ್ದು, ಜಾಗ ಗುರುತಿಸಿದರೆ, ಅಂತಹ ಕಡೆ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಸರ್ಕಾರ ಮತ್ತು ರಕ್ಷಣಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಒಂದು ಸಮಿತಿ ರಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅದೇನೇ ಇರಲಿ, ಭೂಮಿಯಲ್ಲಿ ವಸತಿ, ವಾಣಿಜ್ಯ, ಗೋಮಾಳ, ಖರಾಬು, ಅರಣ್ಯ, ಕೃಷಿ ಸೇರಿದಂತೆ ಏಳೆಂಟು ವರ್ಗೀಕರಣ ಇರುತ್ತದೆ.
ಸರ್ಕಾರದ ಈ ರೀತಿಯ ಭೂಮಿ ಸಾಮಾನ್ಯವಾಗಿ “ಗೋಮಾಳ’ ಆಗಿರುತ್ತದೆ. ಹೀಗಿರುವಾಗ, ಉದ್ದೇಶಿತ 75 ಎಕರೆಯನ್ನು “ವಾಣಿಜ್ಯ’ ವಿಭಾಗದಲ್ಲಿ ಲೆಕ್ಕಹಾಕಿ ಭೂಮಿಯ ಮೌಲ್ಯ ಅಂದಾಜಿಸಲಾಗಿದೆ. ಇನ್ನೂ ವಿಚಿತ್ರವೆಂದರೆ, ರಕ್ಷಣಾ ಇಲಾಖೆ ತನ್ನದು ಎಂದು ಹೇಳುತ್ತಿರುವ ಭೂಮಿಯ ದಾಖಲೆಗಳ ಪ್ರಕಾರ ಮಾಲಿಕತ್ವ ರಾಜ್ಯ ಸರ್ಕಾರದ್ದೇ ಇದೆ ಎಂದು ಹೆಸರು ಹೇಳಲಿಚ್ಛಿಸದ ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
9 ವರ್ಷಗಳಲ್ಲಿ 5,235 ಎಕರೆ ಭೂಮಿ: ಕಳೆದ ಒಂಬತ್ತು ವರ್ಷಗಳಲ್ಲಿ ಸರ್ಕಾರವು ವಿವಿಧ ಉದ್ದೇಶಗಳಿಗೆ ರಕ್ಷಣಾ ಇಲಾಖೆಗೆ ರಾಜ್ಯದಲ್ಲಿ ಒಟ್ಟಾರೆ 5,235 ಎಕರೆ ಭೂಮಿಯನ್ನು ನೀಡಿದೆ. ಚಳ್ಳಕೆರೆಯಲ್ಲಿ 4,300 ಎಕರೆ, ದೇವನಹಳ್ಳಿಯಲ್ಲಿ 85 ಎಕರೆ, ತುಮಕೂರಿನ ಗುಬ್ಬಿಯಲ್ಲಿ 610 ಎಕರೆ, ಬೆಳಗಾವಿಯಲ್ಲಿ 250 ಎಕರೆ ಸೇರಿದಂತೆ ಒಟ್ಟಾರೆ 5,235 ಎಕರೆ ಭೂಮಿಯನ್ನು ಉಚಿತವಾಗಿ ರಕ್ಷಣಾ ಇಲಾಖೆಗೆ ಹಸ್ತಾಂತರಿಸಿದ್ದು, ಇದರ ಮೌಲ್ಯ ಅಂದಾಜು 600 ಕೋಟಿ ರೂ. ದಾಟುತ್ತದೆ. ಆದರೆ, ರಕ್ಷಣಾ ಇಲಾಖೆಗೆ ಹೀಗೆ ಭೂಮಿ ನೀಡುವುದು ಆಯಾ ರಾಜ್ಯ ಸರ್ಕಾರಗಳ ಕರ್ತವ್ಯವೂ ಆಗಿದೆ.
ರಾಜಸ್ವ ವಿನಾಯ್ತಿಗೂ ಬೇಡಿಕೆ?: ಕಾರವಾರ ನೌಕಾನೆಲೆ (ಸೀ ಬರ್ಡ್ ಮೊದಲ ಹಂತ) ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾದ ಗ್ರ್ಯಾನೆಟ್‌ಗೆ ಪ್ರತಿಯಾಗಿ ರಾಜ್ಯ ಸರ್ಕಾರಕ್ಕೆ ಪಾವತಿಸಬೇಕಾದ ರಾಜಸ್ವದಿಂದ ವಿನಾಯ್ತಿ ನೀಡಬೇಕು ಎಂದೂ ರಕ್ಷಣಾ ಇಲಾಖೆ ಬೇಡಿಕೆ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಹಂತದ ಯೋಜನೆಯಲ್ಲಿ ಗ್ರ್ಯಾನೆಟ್ ಅನ್ನು ಪುಡಿ ಮಾಡಿ ಬಳಸಿಕೊಳ್ಳಲಾಗಿತ್ತು. ಇದರ ರಾಜಸ್ವ ಮೊತ್ತ 30ರಿಂದ 40 ಕೋಟಿ ರೂ. ಆಗುತ್ತದೆ. ಇದರಿಂದ ವಿನಾಯ್ತಿ ನೀಡಬೇಕು ಎಂದೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಮನವಿ ಮಾಡಲಾಯಿತು. 2005-06ರಲ್ಲಿ 2,629 ಕೋಟಿ ವೆಚ್ಚದಲ್ಲಿ ಈ ನೌಕಾನೆಲೆ ನಿರ್ಮಿಸಲಾಗಿದೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.