ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ
Team Udayavani, Nov 26, 2018, 6:00 AM IST
ಬೆಂಗಳೂರು/ಮಂಡ್ಯ: ನೆಚ್ಚಿನ ನಾಯಕ, ಹೃದಯ ಸಾಮ್ರಾಟ ಅಂಬರೀಶ್ ನಿಧನ ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತ್ತು. ಅಂಬರೀಶ್ ನಿಧನದ ಸುದ್ದಿ ತಿಳಿದು ಶೋಕಸಾಗರದಲ್ಲಿ ಮುಳುಗಿದ್ದ ಅಭಿಮಾನಿಗಳು ಅವರ ಪಾರ್ಥಿವ ಶರೀರ ಕಂಡ ಕೂಡಲೇ ದುಃಖದ ಕಟ್ಟೆ ಒಡೆದು ಮಂಡ್ಯ ಅಕ್ಷರಶಃ ಕಣ್ಣೀರ ಕಡಲಾಯಿತು.
ಬೆಂಗಳೂರಿನಿಂದ ರಕ್ಷಣಾ ಹೆಲಿಕಾಪ್ಟರ್‌ನಲ್ಲಿ ಅಂಬರೀಶ್ ಪಾರ್ಥಿವ ಶರೀರವನ್ನು ಸಂಜೆ 4.58ರ ವೇಳೆಗೆ ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಕರೆತರಲಾಯಿತು. ಪಾರ್ಥಿವ ಶರೀರದ ಜತೆ ಮುಖ್ಯಮಂತ್ರಿ ಕುಮಾಸ್ವಾಮಿ, ಅಂಬರೀಶ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ನಟ ನಿಖೀಲ್ ಕುಮಾರಸ್ವಾಮಿ ಹಾಗೂ ಸಚಿವ ಸಾ.ರಾ.ಮಹೇಶ್ ಆಗಮಿಸಿದರು. ಮತ್ತೂಂದು ಹೆಲಿಕಾಪ್ಟರ್ ತೂಬಿನಕೆರೆ ಹೆಲಿಪ್ಯಾಡ್‌ನಲ್ಲಿ ಇಳಿಯಿತು. ಅದರಲ್ಲಿ ಸುಮಲತಾ ಸಂಬಂಧಿಕರು ಆಗಮಿಸಿ, ಅಲ್ಲಿಂದ ಕಾರುಗಳ ಮೂಲಕ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಆಗಮಿಸಿದರು.
ಕ್ರೀಡಾಂಗಣದ ಧ್ವಜ ಕಟ್ಟೆ ಎದುರು ನಿರ್ಮಿಸಲಾಗಿದ್ದ ಪುಷ್ಪಗಳಿಂದ ಅಲಂಕರಿಸಿದ ಮಂಟಪದಲ್ಲಿ ಅಂಬರೀಶ್ ಪಾರ್ಥಿವ ಶರೀರ ಇಡಲಾಯಿತು. ಈ ಮಂಟಪಕ್ಕೆ ಸುಂದರವಾದ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕ ದರ್ಶನಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡ ಬಳಿಕ 5.18ರ ವೇಳೆಗೆ ಅವರನ್ನು ಕ್ರೀಡಾಂಗಣದ ಒಳಗೆ ಬಿಡಲಾಯಿತು.
ಕ್ರೀಡಾಂಗಣದ ಒಂದು ಗೇಟ್‌ನಿಂದ ಸಾರ್ವಜನಿಕರಿಗೆ ಪ್ರವೇಶಾವಕಾಶ ಕಲ್ಪಿಸಲಾಯಿತು. ಒಮ್ಮೆಲೆ ನುಗ್ಗಿಬಂದ ಅಭಿಮಾನಿಗಳ ಪ್ರವಾಹವನ್ನು ನಿಯಂತ್ರಿಸಲು ಪೊಲೀಸರಿಂದ ಸಾಧ್ಯವಾಗಲಿಲ್ಲ. ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಅಭಿಮಾನಿಗಳು ಒಳನುಗ್ಗಿ ಪಾರ್ಥಿವ ಶರೀರದತ್ತ ದೌಡಾಯಿಸಿದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು. ಸ್ವಲ್ಪ ಸಮಯದ ಬಳಿಕ ಪರಿಸ್ಥಿತಿಯನ್ನು ಹತೋಟಿಗೆ ತಂದು ಸುಗಮವಾಗಿ ಪಾರ್ಥಿವ ಶರೀರದ ದರ್ಶನ ಪಡೆಯುವುದಕ್ಕೆ ಅವಕಾಶ ಮಾಡಿಕೊಡಲಾಯಿತು.
ಕಂಠೀರವದಲ್ಲೂ ಜನಸಾಗರ:
ಇದಕ್ಕೂ ಮೊದಲು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯ ವಿವಿಧ ಭಾಗಗಳಿಂದ ಬಂದ ಸಾವಿರಾರು ಅಭಿಮಾನಿಗಳು ಅಂಬಿಯನ್ನು ಕಾಣಲು ಬೆಳಗ್ಗೆ 6.30ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಮುಂದೆ ಜಮಾಯಿಸಿದ್ದರು. ಬೆಳಗ್ಗೆ 8 ಗಂಟೆಗೆ ದರ್ಶನಕ್ಕೆ ಅವಕಾಶ ನೀಡಿದ ಕೂಡಲೇ ಕೆರೆ ಕೋಡಿ ಹೊಡೆದು ನೀರು ಹರಿಯುವಂತೆ ನೂರಾರು ಜನರು ಕಲಿಯುಗದ ಕರ್ಣನನ್ನು ಕಾಣಲು ನುಗ್ಗಿದರು. ಅಂಬಿಯವರ ದೇಹವನ್ನು ಕಂಡು ಅಭಿಮಾನಿಗಳು ಕಣ್ಣೀರಿಡುತ್ತಾ, ಅಕ್ರಂದನದಲ್ಲಿಯೇ ಜೈಕಾರ ಹಾಕಿದ್ದು ಮನಕಲಕುವಂತಿತ್ತು. ಶೀಘ್ರ ದರ್ಶನ ಪಡೆಯಲು ನೂಕು-ನುಗ್ಗಲು ಆರಂಭವಾಗಿ ಸಾಲಿನಲ್ಲಿದ್ದವರಿಗೆ ಉಸಿರುಗಟ್ಟಿದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
ಅಂಬರೀಷ್ ಅವರ ಅಂತಿಮ ದರ್ಶನ ಪಡೆಯಲು ಬಂದ ಅಭಿಮಾನಿಗಳ ಪೈಕಿ ಒಬ್ಬರು ನಾಟಿ ಕೋಳಿ ಸಾರು, ಮುದ್ದೆ ತೆಗೆದುಕೊಂಡು ಬಂದಿದ್ದರು. ಪಾರ್ಥಿವ ಶರೀರದ ಬಳಿಗೆ ಬಂದ ಅವರು “ಅಣ್ಣ ನಿನ್ನಿಷ್ಟದ ನಾಟಿ ಕೋಳಿ ಸಾರು, ಮುದ್ದೆ ತಂದಿದ್ದೀನಿ ಎದ್ದೇಳಣ್ಣಾ ಎಂದು ಕಣ್ಣೀರು ಹಾಕುವ ಮೂಲಕ ಅಭಿಮಾನ ಪ್ರದರ್ಶಿಸಿದರು. ನೂರಾರು ಅಭಿಮಾನಿಗಳು ಬ್ಯಾರಿಕೇಡ್ ದಾಟಿ ದರ್ಶನ ಪಡೆಯಲು ಮುಂದಾಗುತ್ತಿದ್ದರು. ಇನ್ನು ಕೆಲ ಅಭಿಮಾನಿಗಳು ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಬರುತ್ತಿದ್ದ ದೃಶ್ಯಗಳು ಕಂಡು ಬಂದವು.
ಮಂಡ್ಯ ಮಿಠಾಯಿ ಅಂದ್ರೆ ಅಂಬಿಗೆ ಬಲು ಪ್ರೀತಿ
ಅಂಬರೀಶ್‌ಗೆ ಬಹಳ ಇಷ್ಟವಾದ ಸಿಹಿ ಎಂದರೆ ಅದು ಮಂಡ್ಯ ಮಿಠಾಯಿ. ತವರು ಜಿಲ್ಲೆಗೆ ಭೇಟಿ ನೀಡಿದ ಬಹುತೇಕ ಸಂದರ್ಭಗಳಲ್ಲಿ ತಮಗಿರುವ ಮಧುಮೇಹ ರೋಗವನ್ನು ಮರೆತು ಮಿಠಾಯಿಯನ್ನು ಬಾಯ್ತುಂಬ ಚಪ್ಪರಿಸಿ ತಿಂದು ಹೋಗುತ್ತಿದ್ದರು.
ಅಂದ ಹಾಗೆ ಅಂಬರೀಶ್ ತಿನ್ನುತ್ತಿದ್ದ ಆ ಮಿಠಾಯಿ ಯಾವುದೋ ಸ್ಟಾರ್ ಹೋಟೆಲ್ ಅಥವಾ ಬೇಕರಿಯಲ್ಲಿ ತಯಾರಾದ ಮಿಠಾಯಿಯಲ್ಲ. ಅದೊಂದು ಪುಟ್ಟ ಮನೆಯಲ್ಲಿ ತಯಾರಾಗುತ್ತಿದ್ದ ಕೊಬ್ಬರಿ ಮಿಠಾಯಿ. ಮಂಡ್ಯ ನಗರದಿಂದ ಚಿಕ್ಕಮಂಡ್ಯಕ್ಕೆ ಹೋಗುವ ಮಾರ್ಗದ ಕಾರೇಮನೆ ಗೇಟ್ ಬಳಿ ಮಾದಯ್ಯ ಎಂಬುವರು ತಯಾರಿಸುತ್ತಿದ್ದ ಮಿಠಾಯಿ ಅಂಬರೀಶ್‌ಗೆ ಬಹಳ ಅಚ್ಚುಮೆಚ್ಚು. ಆ ಮಾರ್ಗದಲ್ಲಿ ಹೋಗುವಾಗ ಅಂಬರೀಶ್ ಕಾರಿನಿಂದ ಇಳಿದು ಬಂದು ಮಿಠಾಯಿ ತೆಗೆದುಕೊಂಡು ಸವಿಯುತ್ತಿದ್ದರು. ಜತೆಗೆ, ಪ್ಯಾಕೆಟ್‌ಗಳಲ್ಲಿ ಕಟ್ಟಿಸಿಕೊಂಡು ಹೋಗುತ್ತಿದ್ದರು.
ಗಣ್ಯರ ಕಂಬನಿ
ಅಂಬರೀಶ್ ಅವರು ನಟ, ರಾಜಕಾರಣಿ ಎನ್ನುವುದಕ್ಕಿಂತ ಒಬ್ಬ ಉತ್ತಮ ವ್ಯಕ್ತಿ. ನಮ್ಮ ಕುಟುಂಬದೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅವರು ನಮ್ಮನ್ನು ಬಿಟ್ಟು ಹೋಗಿಲ್ಲ, ನಮ್ಮ ಜೊತೆಯಲ್ಲೇ ಇದ್ದಾರೆ ಎಂಬ ಭಾವನೆಯಲ್ಲಿ ಇರಬೇಕು. ಚಿತ್ರರಂಗಕ್ಕೆ ಅವರು ಮಾಡಿದ ಸೇವೆ ಮೂಲಕ ಜನರ ಮನಸ್ಸಲ್ಲಿ ಸದಾ ಇರುತ್ತಾರೆ. ಅವರ ಕುಟುಂಬದೊಂದಿಗೆ ನಾವಿದ್ದೇವೆ.
– ಶಿವರಾಜ್ ಕುಮಾರ್, ನಟ
ಕನ್ನಡ ಚಿತ್ರರಂಗದ ಡೈನಾಮಿಕ್ ವ್ಯಕ್ತಿ ನಮ್ಮೊಂದಿಗಿಲ್ಲ. ಅವರ ಮಾತು ಅವರ ನೇರ ನುಡಿಯನ್ನು ನಾವು ಮಿಸ್ ಮಾಡುಕೊಳ್ಳುತ್ತಿದ್ದೇವೆ.
– ಸುಧಾರಾಣಿ, ಹಿರಿಯ ನಟಿ
ಅಂಬಿ ಮಾಮ ಇಲ್ಲ ಅಂಥ ನಂಬಲಾಗುತ್ತಿಲ್ಲ. ಅಪ್ಪಾಜಿ ತೀರಿಕೊಂಡಾಗ 24 ಗಂಟೆ ನಮ್ಮೊಂದಿಗಿದ್ದರು. ಕಷ್ಟ ಎಂದು ಮನೆಗೆ ಬಂದವರಿಗೆ ತಮ್ಮ ಕೈಯಲ್ಲಿದ್ದಷ್ಟು ಹಣ ನೀಡುತ್ತಿದ್ದರು. ಕಲಾವಿದರಿಗೆ ಒಂದು ಗೂಡು ಕಟ್ಟಬೇಕೆಂದು ಬಯಸಿದ್ದ ಅವರು ಕಟ್ಟಡ ಉದ್ಘಾಟನೆ ವೇಳೆಗೆ ನಮ್ಮನ್ನು ಅಗಲಿದ್ದು, ಸಂಘದ ಕಟ್ಟಡವನ್ನು ಅಚ್ಚುಕಟ್ಟಾಗಿ ಉದ್ಘಾಟಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುವುದು. ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯಕ್ರಿಯೆ ನಡೆಸುವ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ.
– ರಾಘವೇಂದ್ರ ರಾಜಕುಮಾರ್, ನಟ
ಅಂಬಿ ಅಗಲಿಕೆ ತೀವ್ರ ನೋವುಂಟು ಮಾಡಿದ್ದು, ಮುಂದೆ ಅಂಬರೀಶ್‌ರಂತಹ ನಟ ಬರಬಹುದು. ಆದರೆ, ಅವರಂತಹ ವ್ಯಕ್ತಿತ್ವ ಯಾರಲ್ಲಿಯೂ ಬರಲು ಸಾಧ್ಯವಿಲ್ಲ. ಯಾವಾಗ ಬೆಂಗಳೂರಿಗೆ ಬಂದರೂ ಭೇಟಿಯಾಗುತ್ತಿದ್ದೆವು. ಏಳು ದಿನಗಳ ಹಿಂದೆ ಬಂದಾಗ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಮುಂದಿನ ಬಾರಿ ಬಂದಾಗ ಮನೆಗೆ ಬರಲಿಲ್ಲ ಅಂದ್ರೆ ಸರಿಯಿರಲ್ಲ ಬಡ್ಡಿಮಗನೇ ಎಂದು ಬೈದಿದ್ರು.
– ರಜನಿಕಾಂತ್, ನಟ
ಅಂಬಿ ಅವರು ಸಹೃದಯಿ ವ್ಯಕ್ತಿ, ನಾನು ಅಂಬರೀಶ್ ಜತೆ ನಟಿಸಿಲ್ಲ. ಆದರೂ ನಮ್ಮ ನಡುವೆ ಉತ್ತಮ ಸ್ನೇಹವಿತ್ತು. ಸಾವಿನ ಸುದ್ದಿ ಕೇಳಿ ತೀವ್ರ ಆಘಾತವಾಯಿತು.
– ರಾಧಿಕಾ, ತಮಿಳು ನಟಿ
ಅಂಬಿಯವರೊಂದಿಗೆ ನಾಲ್ಕು ದಶಕಗಳ ಸ್ನೇಹವಿತ್ತು. ಅನೇಕ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದೇವೆ. ಸಾಕಷ್ಟು ವರ್ಷಗಳಿಂದ ಆರೋಗ್ಯ ಸರಿ ಇಲ್ಲದಿದ್ದರೂ ಚೈತನ್ಯ ಕುಗ್ಗಿರಲಿಲ್ಲ. ಭೇಟಿಯಾದಾಗ ಆರೋಗ್ಯ ವಿಚಾರ ಕೇಳಿದರೆ ಮಾತು ಬದಲಿಸಿ ಬೇರೆ ಮಾತಿಗೆಳೆಯುತ್ತಿದ್ದರು. ನನಗೆ ಸರಿಯಾಗಿ ತಿಂದು ಗಟ್ಟಿಯಾಗು ಎನ್ನುತ್ತಿದ್ದರು. ಪ್ರೀತಿ ನೀಡುವುದು ಎಂದರೇನು ಎಂಬುದನ್ನು ಅವರನ್ನು ನೋಡಿ ಕಲಿಯಬೇಕು. ಅಂಬಿ ಚಿತ್ರರಂಗ ಮೀರಿ ಬೆಳೆದ ಅಜಾತಶತ್ರು.
– ಅನಂತ್‌ನಾಗ್, ಹಿರಿಯ ನಟ
ನಮ್ಮಿಬ್ಬರದು 48 ವರ್ಷಗಳ ಸ್ನೇಹ. ಕಷ್ಟ ಸುಖ, ಮೋಜು ಮಸ್ತಿ ಎಲ್ಲದರಲ್ಲೂ ಪಾಲುದಾರರಾಗಿದ್ದೆವು. ಸಾಕಷ್ಟು ಜನರಿಗೆ ಅನ್ನ, ಉದ್ಯೋಗ, ಹಣ ಕೊಟ್ಟು ಧರ್ಮರಾಯ ಎನಿಸಿಕೊಂಡಿದ್ದ. ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಪಾರದರ್ಶಕತೆ ಹಾಗೂ ಪಕ್ಷಾತೀತ ನಿಲುವು ಹೊಂದಿದ್ದ ಅಂಬಿ ದೊಡ್ಡ ಸ್ನೇಹ ಬಳಗ ಹೊಂದಿದ್ದ. ಪ್ರಪಂಚದ ಎಲ್ಲಾ ದೇಶಗಳಲ್ಲೂ ಒಬ್ಬೊಬ್ಬರು ಸ್ನೇಹಿತರಿದ್ದಾರೆ. ತನ್ನ ವರ್ಚಸ್ಸಿನಿಂದ 20 ಕೋಟಿ ರೂ. ಸಂಗ್ರಹಿಸಿ ವಿಶ್ವವೇ ಹುಬ್ಬೇರಿಸಿ ನೋಡುವಂತಹ ಕಲಾವಿದರ ಭವನ ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಆ ಭವನಕ್ಕೆ ಅಂಬರೀಶ್ ಕಲಾವಿದರ ಸಂಘ ಎಂದು ನಾಮಕರಣ ಮಾಡಬೇಕು.
– ಜೈ ಜಗದೀಶ್, ನಟ
ಅಂಬಿ ಅಪ್ಪಾಜಿ ಇಲ್ಲ ಎನ್ನುವುದು ಅರಗಿಸಿಕೊಳ್ಳಲಾಗುತ್ತಿಲ್ಲ. ನಾವು ಸ್ವೀಡನ್‌ನಲ್ಲಿ “ಯಜಮಾನ’ ಚಿತ್ರ ಶೂಟಿಂಗ್‌ನಲ್ಲಿದ್ದು, ಅದನ್ನು ರದ್ದುಗೊಳಿಸಿ ಇಡೀ ತಂಡವೇ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತೇವೆ.
– ದರ್ಶನ್, ನಟ (ವಾಟ್ಸ್‌ಆ್ಯಪ್ ಸಂದೇಶ)
ರಾಜಕೀಯ ಮುಖಂಡರ ಹೇಳಿಕೆ
ಅಪ್ರತಿಮ ನಟ ಅಂಬರೀಶ್ ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ. ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದ ಧೀಮಂತ ನಾಯಕ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನಾನು ಸತ್ಯಾಗ್ರಹ ಮಾಡುವಾಗ ಪಕ್ಕದಲ್ಲಿ ಕುಳಿತು ಸಮಸ್ಯೆ ಬಗೆಹರಿಸೋಣ ಎಂದು ಹೇಳಿ, ಕುರ್ಚಿಯಲ್ಲಿ ಕೂರಿಸಿ ಸಮಾಧಾನ ಮಾಡಿದ್ದರು.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ರಾಜ್ಯದ ಜನರಿಗೆ ಬಹಳ ನೋವುಂಟು ಮಾಡಿದ ಸಾವು ಇದು. ಕನ್ನಡ ಚಿತ್ರರಂಗದ ಪಾಲಿಗೆ ಅವರು ಟ್ರಬಲ್ ಶೂಟರ್ ಆಗಿದ್ದರು. ಚಿತ್ರರಂಗದ ಎಲ್ಲಾ ಸಮಸ್ಯೆಗಳನ್ನು ಅವರು ಇತ್ಯರ್ಥ ಮಾಡುತ್ತಿದ್ದರು. ಅವರ ಮಾತಿಗೆ ಚಿತ್ರರಂಗದ ಪ್ರತಿಯೊಬ್ಬರು ಬೆಲೆಕೊಡುತ್ತಿದ್ದರು. ಮೈಸೂರಿನಲ್ಲಿ ನಾನು ವಕೀಲನಾಗಿದ್ದಾಗಿಲಿಂದಲೂ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದರು. ಜನಪರ ಕಾಳಜಿ ಹೊಂದಿದ್ದ ಅವರು ನನ್ನ ಸಂಪುಟದಲ್ಲಿಯೂ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ನಾಯಕತ್ವ ಗುಣ ಹೊಂದಿದ್ದ ಶ್ರೇಷ್ಠ ಸಹೋದರ. ಪಕ್ಷ, ಜಾತಿ, ಧರ್ಮ ಮೀರಿ ಎಲ್ಲರೊಂದಿಗೆ ಗೆಳೆತನ ಹೊಂದಿದ್ದರು. ವಿದ್ಯಾರ್ಥಿ ಮುಖಂಡನಾಗಿದ್ದಾಗಿನಿಂದ ನಮ್ಮಿಬ್ಬರ ಸ್ನೇಹವಿದೆ. ಅವರ ಮದುವೆ ಸಂದರ್ಭದಲ್ಲಿ ನಾವೆಲ್ಲ ಜತೆಗಿದ್ದೆವು, ಕಾವೇರಿ ನೀರಿಗಾಗಿ ಕೇಂದ್ರ ಸಚಿವ ಸ್ಥಾನ ತ್ಯಾಗ ಮಾಡಿದ ಕರ್ಣ, ಸ್ನೇಹ ಜೀವಿ. ನಮ್ಮಿಬ್ಬರ ನಡುವೆ ಉತ್ತಮ ಸಲುಗೆ ಇದ್ದು, ನನ್ನನ್ನು ಏಕ ವಚನಲ್ಲಿ ಮಾತಾಡಿಸುತ್ತಿದ್ದರು. ಇಂದು ನಾಡಿನ ದೊಡ್ಡ ಬಳಗವನ್ನು ಬಿಟ್ಟು ಹೋಗಿದ್ದಾರೆ, ಅವರ ಕುಟುಂಬ ಬಳಗಕ್ಕೆ ನೋವಿ ತುಂಬುವ ಶಕ್ತಿ ದೇವರು ನೀಡಲಿ.
– ಡಿ.ಕೆ.ಶಿವಕುಮಾರ್,ಸಚಿವ
ಮಂಡ್ಯದ ಗಂಡು ಎಂದು ಹೆಸರಾದ ಅಂಬರೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಮುಂಚೂಣಿ ಸ್ಥಾನದಲ್ಲಿದ್ದರು. ನಾಡಿನ ಯಾವುದೇ ವಿಚಾರ ಬಂದಾಗ ಅವರು ಹೋರಾಟಕ್ಕೆ ಮುಂದೆ ಬರುತ್ತಿದ್ದರು.
– ವೀರಪ್ಪ ಮೋಯಿಲಿ, ಮಾಜಿ ಮುಖ್ಯಮಂತ್ರಿ
ಅಂಬರೀಶ್ ಅವರ ಜತೆಗೆ 13-14 ವರ್ಷಗಳ ಒಡನಾಡವಿತ್ತು. ನನ್ನ ಕಷ್ಟದ ಜೀವನದಲ್ಲಿ ಜತೆಗಿದ್ದು, ಕಷ್ಟ ಸಂದರ್ಭದಲ್ಲಿ ಅಣ್ಣನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡಿದ್ದರು. ಅಣ್ಣನನ್ನು ಕಳೆದ ವಾರ ಭೇಟಿ ಮಾಡಿದ್ದೆ, ಇಂದು ಅವರಿಲ್ಲ ಎಂದು ನಂಬಲಾಗುತ್ತಿಲ್ಲ.
– ಜರ್ನಾದನ ರೆಡ್ಡಿ, ಮಾಜಿ ಸಚಿವ
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪಡುವಾರಹಳ್ಳಿ ಪಾಂಡವರು ಚಿತ್ರಕ್ಕೆ ಹಾಡು ಬರೆಯುವ ಮೂಲಕ ಅಂಬರೀಶ್ ಅವರೊಂದಿಗಿನ ಒಡನಾಟ ಆರಂಭವಾಯಿತು. ಅವರೊಬ್ಬ ಮಾನವೀಯ ಗುಣವುಳ್ಳ ವ್ಯಕ್ತಿ. ಕನ್ನಡ ಚಿತ್ರರಂಗದ ಹಲವು ಮಂದಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.
– ದೊಡ್ಡರಂಗೇಗೌಡ, ಸಾಹಿತಿ
ಕನ್ನಡ ಚಿತ್ರರಂಗದ ಹಿರಿಯ ನಟರಾಗಿದ್ದ ಅಂಬರೀಶ್, ನಮ್ಮನ್ನು ದುಃಖದ ಮಡುವಿನಲ್ಲಿ ಬಿಟ್ಟು ಹೊಗಿ¨ªಾರೆ. ಅಂಬಿ ನಿಜವಾದ ರೆಬೆಲ… ಆಗಿದ್ದು, ಜೀವನದಲ್ಲಿ ಎಲ್ಲವನ್ನೂ ಹೋರಾಟದಿಂದ ಪಡೆದಿದ್ದಾರೆ. ಪ್ರೀತಿ ಕೊಡುವುದು ಮಾತ್ರ ಅವರಿಗೆ ಗೊತ್ತಿತ್ತು. ಮನುಷ್ಯ ಒರಟಾದರೂ ಮಲ್ಲಿಗೆಯಂತಹ ಮನಸ್ಸು ಅವರದು.
-ಬಸವರಾಜು ಬೊಮ್ಮಾಯಿ, ಮಾಜಿ ಸಚಿವ
ತಮ್ಮ ಕಲೆ ಹಾಗೂ ರಾಜಕೀಯದ ಮೂಲಕ ದೇಶಾದ್ಯಂತ ಖ್ಯಾತಿ ಪಡೆದಿದ್ದರು, ನಾನು ಅವರ ಅಭಿಮಾನಿಯಾಗಿದ್ದು, ಅವರ ಚಲನಚಿತ್ರಗಳನ್ನು ತಪ್ಪದೇ ವೀಕ್ಷಿಸುತ್ತಿದ್ದೆ. ಅವರ ಅಗಲಿಗೆ ರಾಜ್ಯಕ್ಕೆ ತುಂಬಲಾದರ ನಷ್ಟ.
-ಸಾ.ರಾ.ಮಹೇಶ್, ಸಚಿವ
ಅಂಬರೀಶ್ ಅವರ ನಿಧನ ತೀವ್ರ ನೋವು ತಂದಿದ್ದು, ಕರ್ನಾಟಕ ಚಿತ್ರರಂಗ ಮಾತ್ರವಲ್ಲ. ರಾಜಕೀಯ ರಂಗವೂ ಒಬ್ಬ ಮಹನೀಯನನ್ನು ಕಳೆದುಕೊಂಡಿದೆ.
– ಶಿವಾನಂದ ಎಸ್. ಪಾಟೀಲ, ಸಚಿವ
ಸ್ನೇಹ ಜೀವಿಯಾಗಿದ್ದ ಅಂಬರೀಶ್ ಚಿತ್ರರಂಗದಲ್ಲಿ ಅನೇಕರಿಗೆ ದಾರಿ ದೀಪವಾಗಿದ್ದರು. ರಾಜಕೀಯ, ಸಿನಿಮಾ ಎರಡನ್ನು ಸಮನಾಗಿ ತೂಗಿಸಿಕೊಂಡು ಬಂದಿದ್ದರು. ಇಂದು ನಮ್ಮನ್ನು ಅಗಲಿರುವುದು ನೋವಿನ ಸಂಗತಿ.
– ವೆಂಕಟರಾವ್ ನಾಡಗೌಡ, ಸಚಿವ
ಅಂಬರೀಶ್ ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಎನ್ನುವುದಕ್ಕಿಂತ ನನ್ನ ಆತ್ಮೀಯ ಗೆಳೆಯ. ಅವರ ನಿಧನ ಸಾಕಷ್ಟು ನೋವು ತಂದಿದ್ದು, ಕರ್ನಾಟಕವು ಸರಳ ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಿದೆ.
– ಕೆ.ಜೆ.ಜಾರ್ಜ್, ಸಚಿವ
ಅಂಬರೀಶ್ ಇನ್ನಿಲ್ಲ ಎಂಬುದೇ ನಂಬಲು ಅಸಾಧ್ಯ ಸಂಗತಿ. ನನ್ನ ಆತ್ಮೀಯ ಸ್ನೇಹಿತ, ನಿಷ್ಕಲ್ಮಶ ಮನಸ್ಸಿನ ವ್ಯಕ್ತಿಯಾಗಿದ್ದ ಅವರ ಅಗಲಿಕೆ ರಾಜ್ಯದ ಪಾಲಿಗೆ ನಿಜಕ್ಕೂ ದೊಡª ದುರಂತ.
– ಎಂ.ಬಿ.ಪಾಟೀಲ…, ಮಾಜಿ ಸಚಿವ
ಎಲ್ಲರನ್ನು ಇಷ್ಟ ಪಡುವಂತಹ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದ್ದೇವೆ.
– ದಿನೇಶ್ ಗುಂಡೂರಾವ್, ಕೆಪಿಸಿಸಿಸಿ ಅಧ್ಯಕ್ಷ
ಮಂಡ್ಯ ಬಸ್ ದುರಂತದ ನೋವನ್ನು ಜೀರ್ಣಿಸಿಕೊಳ್ಳುವ ಮುಂಚೆಯೇ ಮಂಡ್ಯದ ಗಂಡು ಎಂದು ಜನಪ್ರಿಯರಾಗಿದ್ದ, ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ನಿಧನ ಆಘಾತವನ್ನುಂಟು ಮಾಡಿದೆ. ಚಿತ್ರರಂಗ ಹಾಗೂ ರಾಜಕೀಯವು ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಂತಾಯಿತು. ಇನ್ನು ಅಭಿಮಾನಿಗಳು ಸರ್ಕಾರಿ ಅಥವಾ ಖಾಸಗಿ ಆಸ್ತಿಗಳಿಗೆ ಹಾನಿ ಮಾಡಬಾರದು. ಅಗಲಿದ ಅಂಬಿಗೆ ಶಾಂತಿಯಿಂದ ಬೀಳ್ಕೊàಡೋಣ.
– ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ
ಅಂಬರೀಶ್ ಅವರನ್ನು ಕಳೆದುಕೊಂಡ ಸಿನಿಮಾ ಜಗತ್ತು ಅನಾಥವಾಗಿದೆ.
– ಬಿ.ಸಿ.ಪಾಟೀಲ…, ಶಾಸಕ
ನಾನು ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂಬರೀಶ್ ನನಗೆ ಬೆನ್ನೆಲುಬಾಗಿ ನಿಂತಿದ್ದರು. ಮಂಡ್ಯದ ಅಭಿವೃದ್ಧಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಅವರ ಅಗಲಿಕೆಯಿಂದ ರಾಜ್ಯ ಹಾಗೂ ಕನ್ನಡ ಚಿತ್ರರಂಗ ಒಬ್ಬ ಹೃದಯವಂತ ವ್ಯಕ್ತಿಯನ್ನು ಕಳೆದುಕೊಂಡು ಬಡವಾದಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.
– ಎಸ್.ಎಂ.ಕೃಷ್ಣ , ಮಾಜಿ ಮುಖ್ಯಮಂತ್ರಿ
ಅಂಬರೀಶ್ ನಿಧನದಿಂದ ಇಡೀ ನಾಡಿ ಜನತೆಗೆ ಆಘಾತವಾಗಿದೆ. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ನಂತರದ ಸ್ಥಾನ ತುಂಬಿದ ಮೇರು ನಟ ಅಂಬರೀಶ್ ಎಂದರೆ ತಪ್ಪಾಗಲಾರದು. ಪಾರದರ್ಶಕ ರಾಜಕಾರಣಿ ಹಾಗೂ ಅತ್ಯುತ್ತಮ ನಟ.
– ಎಚ್.ಸಿ. ಮಹದೇವಪ್ಪ, ಮಾಜಿ ಸಚಿವ
ಅಂಬರೀಶ್ ರಾಜಕೀಯ ಹಾಗೂ ಚಿತ್ರರಂಗದಲ್ಲಿ ಬಲು ಎತ್ತರಕ್ಕೆ ಬೆಳೆದಿದ್ದರೂ, ಸಾಮಾನ್ಯ ಜನರೊಂದಿಗೆ ಸಹಜವಾಗಿ ಬೆರೆಯುತ್ತಿದ್ದರು. ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾಗದ ನಷ್ಟ. ಅಹಿತಕರ ಘಟನೆಗಳು ನಡೆಯದಂತೆ ಜನ ತಾಳ್ಮೆಯಿಂದ ವರ್ತಿಸಬೇಕು.
– ಎನ್.ಚೆಲುವರಾಯಣಸ್ವಾಮಿ, ಮಾಜಿ ಸಚಿವ
ಅಂಬರೀಶ್ ನನ್ನ ಶಾಲಾ ಸಹಪಾಠಿ. ಪಿಟೀಲ… ಚೌಡಯ್ಯ ಕುಟುಂಬದಿಂದ ಬಂದು ಎತ್ತರಕ್ಕೆ ಬೆಳೆದ ವ್ಯಕ್ತಿ. ಅವರ ಅಗಲಿಕೆ ವೈಯಕ್ತಿಕವಾಗಿ ನೋವು ತಂದಿದೆ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ.
-ಎಚ್. ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ
ನೇರ ನಡೆ ನುಡಿಯ ವ್ಯಕ್ತಿತ್ವ, ನಿಷ್ಠುರ ರಾಜಕಾರಣಿಯಾಗಿದ್ದ ಅಂಬರೀಶ್ ಜನರ ಮನಸ್ಸಿನಲ್ಲಿ ಸದಾ ಉಳಿಯುತ್ತಾರೆ. ಅವರ ನಿಧನದಿಂದ ಚಿತ್ರರಂಗ ಮತ್ತು ರಾಜಕಾರಣಕ್ಕೆ ತುಂಬಲಾರದ ನಷ್ಟ.
– ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಹಿರಿಯ ನಟ ಅಂಬರೀಶ್ ಅವರ ಅಗಲಿಗೆ ತೀವ್ರ ನೋವುಂಟು ಮಾಡಿದ್ದು, ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಜತೆಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ದೇವರು ಅವರ ಕುಟುಂಬದವರಿಗೆ ನೀಡಲಿ.
– ಡಾ. ವಿಜಯಲಕ್ಷ್ಮೀ ದೇಶಮಾನೆ, ವಿಶ್ವ ಹಿಂದು ಪರಿಷತ್
ಅಂಬರೀಶ್ ಕಲಾ ಸರಸ್ಪತಿ ಪುತ್ರರಾಗಿದ್ದು, ಅವರು ಕಲೆಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಕನ್ನಡ ಚಿತ್ರರಂಗದವರಿಗೆ ಇತ್ತೀಚಿನ ದಿನಗಳಲ್ಲಿ ಅಗತ್ಯ ಸಲಹೆ, ಸೂಚನೆ ನೀಡುತ್ತಾ ಮುನ್ನೆಡೆಸುತ್ತಿದ್ದರು. ಜತೆಗೆ ಸಚಿವರಾಗಿಯೂ ನಾಡಿಗೆ ಸಾಕಷ್ಟು ಸೇವೆ ನೀಡಿದ್ದಾರೆ.
– ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.