ರಾಜಧಾನಿಯಲ್ಲಿ ಅಂಬರ್‌ಗ್ರೀಸ್ ಎಂಬ ತೇಲುವ ಚಿನ್ನ
Team Udayavani, Feb 7, 2022, 12:13 PM IST
ಅಂಬರ್‌ಗ್ರೀಸ್ ಅಥವಾ ತೇಲುವ ಚಿನ್ನ ಯಾವುದೋ ಡ್ರಗ್ಸ್ ಮಾದರಿಯ ವಸ್ತು ಎಂದು ಭಾವಿಸಿದ್ದ ಬೆಂಗಳೂರು ಪೊಲೀಸರಿಗೆ ಇದೊಂದು ಸಮುದ್ರದಲ್ಲಿ ಸಿಗುವ ಅಪರೂಪದ ವಸ್ತು; ಅದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಬೆಲೆಯಿದೆ ಎಂಬುದು ಗೊತ್ತಾಗಿದ್ದೇ, ಅದನ್ನು ಜಪ್ತಿ ಮಾಡಿದ 24 ಗಂಟೆಗಳ ಬಳಿಕ. ನಂತರ ಅಂಥ ಜಾಲಗಳನ್ನು ಬೇಧಿಸಿದ ನಗರ ಪೊಲೀಸರು ಕೇವಲ 8 ತಿಂಗಳಲ್ಲಿ ಬರೋಬ್ಬರಿ 150 ಕೋಟಿ ರೂ. ಮೌಲ್ಯದ ಅಂಬರ್ ಗ್ರೀಸ್ ಜಪ್ತಿ ಮಾಡಿದರು. ಅಂತಹ ಅಚ್ಚರಿ ಹಾಗೂ ಕುತೂಹಲಕಾರಿ ಅಂಬರ್‌ಗ್ರೀಸ್ ಕುರಿತು ಈ ವಾರದ ಸುದ್ದಿ ಸುತ್ತಾಟದಲ್ಲಿ…
“ಕಲ್ಲಿನ ಮಾದರಿಯಲ್ಲಿರುವ ಡ್ರಗ್ಸ್ ಉಂಡೆ ಅಥವಾ ವಜ್ರದ ಕಲ್ಲು. ಅದಕ್ಕೆ ಲಕ್ಷಾಂತರ ರೂ.ಬೆಲೆ ನಿಗದಿ ಮಾಡಿದ್ದ ಆರೋಪಿಗಳು. ಸ್ಥಳಕ್ಕೆ ಹೋಗಿ ನೋಡಿದಾಗ ಮೇಣದಂತಹ ಕಿತ್ತಲೆ, ಕಪ್ಪು ಮಿಶ್ರಿತ ಕಲ್ಲಿನಂತಹ ವಸ್ತುವಿಗೆ ಕಬ್ಬಿಣವನ್ನು ಕಾಯಿಸಿ ಅದರ ಮೇಲಿಟ್ಟರೆ ಹೊಗೆ, ಶಾಖಕ್ಕೆ ಜಿನುಗುತ್ತಿತ್ತು. ಅದನ್ನು ಜಪ್ತಿ ಮಾಡಿದ ಪೊಲೀಸರಿಗೂ ಅದು ಏನು ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲೂ ಏನೆಂಬುದು ಗೊತ್ತಾಗಲಿಲ್ಲ. ಆರಂಭದಲ್ಲಿ ಡ್ರಗ್ಸ್ ಎಂದು ಕೊಂಡೆವು. ಆದರೆ, ಅನಂತರ ಬಂಧಿತರೇಅದರ ಹೆಸರು “ಅಂಬರ್‌ಗ್ರೀಸ್’ ಎಂದು ಬಾಯಿಬಿಟ್ಟರು!
ಇದು “ತೇಲುವ ಚಿನ್ನ’ ಎಂದು ಕರೆಸಿಕೊಳ್ಳುವ “ಅಂಬರ್‌ಗ್ರೀಸ್’ ಮೊದಲ ಬಾರಿಗೆ ಕಂಡ ಬೆಂಗಳೂರಿನ ಕಾಡುಗೊಂಡನಹಳ್ಳಿ ಪೊಲೀಸರಿಗೆ ಅಚ್ಚರಿಯನ್ನುಂಟು ಮಾಡಿತ್ತು. ಆಗತಾನೇ ಕೊರೊನಾ 2ನೇ ಅಲೆಯ ಲಾಕ್‌ಡೌನ್(ಜೂನ್‌ನಲ್ಲಿ) ಜಾರಿಯಾಗಿತ್ತು. ಒಂದೆಡೆ ಕೊರೊನಾ ಕರ್ತವ್ಯ ನಿರ್ವಹಣೆ ಮತ್ತೂಂದೆಡೆ ಕಳ್ಳಕಾಕರ ಮೇಲೆ ನಿಗಾ. ಇದೇ ವೇಳೆ ನಾಲ್ವರು ಕೆ.ಜಿ.ಹಳ್ಳಿಯ ಎಂಆರ್‌ಕೆ ಟೆಂಟ್‌ಹೌಸ್ ಬಳಿ ಉಂಡೆ ಗಾತ್ರ ವಸ್ತು ಇಟ್ಟುಕೊಂಡು ಲಕ್ಷಾಂತರ ರೂ. ಮಾರಾಟಕ್ಕೆ ಮೂವರು ಮುಂದಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಕೂಡಲೇ ಸ್ಥಳಕ್ಕೆ ದಾವಿಸಿದಾಗ ಮೇಣದಂಥ ವಸ್ತು ಪತ್ತೆಯಾಗಿತ್ತು. ಅನುಮಾನದ ಮೇರೆಗೆ ಅವರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಅಂಬರ್‌ಗ್ರೀಸ್ ಎಂದಿದ್ದರು. ಗೂಗಲ್ ಸರ್ಚ್ ಮಾಡಿದಾಗ ಅನೇಕ ಮಾಹಿತಿ ತೆರೆದುಕೊಂಡವು. ಇನ್ನು ಮಡಿವಾಳ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಇದ್ಯಾವುದೋ ಹೊಸ ವಸ್ತು ಎಂದು ಕೈಚೆಲ್ಲಿದ್ದರು. ನಂತರ ಗುಜರಾತ್‌ನ ಅಹಮದ ಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅಂಬರ್‌ಗ್ರೀಸ್ ಎಂದು ವರದಿ ನೀಡಿದರು.
ಪ್ರತಿ ಕೆ.ಜಿ.ಗೆ ಕೋಟಿ ರೂ.: ವಿಚಾರಣೆಯಲ್ಲಿ ಆರೋಪಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. 1ರಿಂದ 2 ಕೋಟಿ ರೂ. ಬೆಲೆ ಇದೆ ಎಂದು ಹೇಳುತ್ತಿದ್ದಂತೆ ತನಿಖಾಧಿಕಾರಿಗಳೇ ಚಕಿತರಾದರು. ಪ್ರಕರಣದ ಕಿಂಗ್‌ಪಿನ್ ಕೋಲಾರದ ಮುಳಬಾಗಿಲಿನ ಸಲ್ಮಾನ್ ಬಂಧನ ಬಳಿಕ ಅಂಬರ್‌ಗ್ರೀಸ್ ಕರ್ನಾಟಕಕ್ಕೆ ಎಂಟ್ರಿ ಕೊಟ್ಟ ಬಗ್ಗೆ ಹೇಳಿಕೆ ನೀಡಿದ್ದ. ಅದರ ಮೂಲ ಜಾಡು ಹಿಡಿದು ಹೊರಟಾಗ ತಮಿಳುನಾಡಿನ ಚೆನ್ನೈ ಕಡಲ ತೀರ ತಲುಪಿತ್ತು. ಅಲ್ಲಿ ವಿಚಾರಣೆ ನಡೆಸಿದಾಗ ಇದೊಂದು ಸಮುದ್ರದಲ್ಲಿ ಸಿಗುವ ತೆಲುವ ಚಿನ್ನ. ಸ್ಪರ್ಮ್ ವೇಲ್‌ಎಂಬ ತಿಮಿಂಗಲ ಹೊರ ಹಾಕುವ ವಾಂತಿ. ವಿದೇಶದಲ್ಲಿ ಕೋಟ್ಯಂತರ ರೂ.ಗೆ ಮಾರಾಟವಾಗುತ್ತದೆ ಎಂದಿದ್ದರು.
ಬೆಂಗಳೂರಿನಲ್ಲಿ ಮಾರುಕಟ್ಟೆ? : ಕಳೆದ 8 ತಿಂಗಳಲ್ಲಿ ನಗರ ಪೊಲೀಸರು ಸುಮಾರು 30ಕ್ಕೂ ಅಧಿಕ ಪ್ರಕರಣಗಳಲ್ಲಿ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಬೇರೆ ಜಿಲ್ಲೆ, ರಾಜ್ಯದವರಾದರೂ ಮೈಸೂರು, ಕೋಲಾರ ಹಾಗೂ ರಾಜ್ಯದ ಗಡಿ ಭಾಗದಿಂದಲೇ ಅಂಬರ್‌ಗ್ರೀಸ್ ತಂದು ಬೆಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ. ಹೀಗಾಗಿ ಬೆಂಗಳೂರಿ ನಲ್ಲಿ ಅಂಬರ್‌ಗ್ರೀಸ್ ಮಾರಾಟ ಜಾಲ ನಿಧಾನವಾಗಿ ತಲೆ ಎತ್ತುತ್ತಿದೆಯೇ ಎಂಬ ಅನುಮಾನ ಕಾಡಿದೆ. ಆದರೆ, ಬೆಂಗಳೂರು ಎಲ್ಲ ವ್ಯವಹಾರಗಳಿಗೂ “ಹಬ್’ ಆಗಿರುವುದರಿಂದ ಮಾರಾಟ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈ ಮಧ್ಯೆ ರಾಜ್ಯದ ಬಳ್ಳಾರಿ, ಶಿರಸಿ ಹಾಗೂ ಮುರುಡೇಶ್ವರದಲ್ಲಿ ಅಂಬರ್‌ಗ್ರೀಸ್ ಮಾರಾಟ ದಂಧೆ ಬೆಳಕಿಗೆ ಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಹಡಗಿನಲ್ಲಿ ಬರುತ್ತೆ ಅಂಬರ್‌ಗ್ರೀಸ್! :
ಕರ್ನಾಟಕಕ್ಕೂ ಮುನ್ನ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ತಲಾ ಒಂದು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅವರ ಜತೆ ಇಲ್ಲಿನ ಮಾಹಿತಿ ಹಂಚಿಕೊಂಡಾಗ ಅಂಬರ್‌ಗ್ರೀಸ್ ಎಂಬುದು ಕರಾವಳಿ ಅಥವಾ ಸಮುದ್ರ ಭಾಗದಲ್ಲಿ ಹೆಚ್ಚು ಸಿಗುತ್ತದೆ. ಆದರೆ, ದೇಶದಲ್ಲಿರುವ ಸಮುದ್ರಗಳಲ್ಲಿ ಸ್ಪರ್ಮ್ ವೇಲ್ ಜಾತಿಯ ತಿಮಿಂಗಿಲಗಳು ತುಂಬ ಕಡಿಮೆ. ಆದರೆ, ಇತ್ತೀಚೆಗೆ ಪಶ್ಚಿಮ ಬಂಗಾಳ, ಒಡಿಶಾ, ಮುಂಬೈ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ ಹೀಗೆ ಎಲ್ಲೆಲ್ಲಿ ಸಮುದ್ರಗಳಿವೆಯೋ ಅಲ್ಲೆಲ್ಲ ಅಂಬರ್‌ಗ್ರೀಸ್ ಮಾರಾಟ ಹಂತ-ಹಂತವಾಗಿ ತಲೆ ಎತ್ತುತ್ತಿದೆ. ಅದಕ್ಕಾಗಿಯೇ ಮೀನುಗಾರರು ಹಾಗೂ ಸಮುದ್ರ ಸಮೀಪದ ನಿವಾಸಿಗಳು ಸಮುದ್ರದಲ್ಲಿ ಶೋಧಿಸಲು ಮುಂದಾಗಿದ್ದಾರೆ. ಇನ್ನು ಹಡಗಿನ ಕಂಟೈನರ್‌ಗಳಲ್ಲಿ ಅಂಬರ್‌ಗ್ರೀಸ್ ಎಂಟ್ರಿ ಕೊಡುತ್ತಿದ್ದು, ಕರಾವಳಿ ಪ್ರದೇಶದಿಂದ ನೇರವಾಗಿ ಚೆನ್ನೈ, ಬೆಂಗಳೂರು, ಗುಜರಾತ್‌ನ ಅಹಮದಬಾದ್, ಮುಂಬೈನಂತಹ ನಗರ ಪ್ರದೇಶಗಳಿಗೆ ಬರುತ್ತಿದೆ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದೇಶದ ವಿವಿಧೆಡೆ ಅಕ್ರಮ ಮಾರಾಟ :
ಕಳೆದ ವರ್ಷದಲ್ಲಿ ಮಹಾರಾಷ್ಟ್ರ ಪೊಲೀಸರು ಮುಂಬೈ ಮತ್ತು ಪುಣೆಯಲ್ಲಿ ಅಂಬರ್ ಗ್ರೀಸ್‌ಸಾಗಿಸುತ್ತಿದ್ದ ಗುಂಪುಗಳನ್ನು ಬಂಧಿಸಿದ್ದರು. ಮುಂಬೈ ಪೊಲೀಸರು ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು 9 ಕೆ.ಜಿ. ಅಂಬರ್ ಗ್ರೀಸ್‌ವಶಪಡಿಸಿಕೊಂಡಿದ್ದು, ಗುಜರಾತ್‌ನಿಂದ ಬಂದಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಪುಣೆಯಲ್ಲಿ 550 ಗ್ರಾಂ ಗಳಷ್ಟು ಅಂಬರ್‌ಗ್ರೀಸ್‌ನ್ನು ಮಾರಲು ಸಿದ್ಧರಾಗಿದ್ದ ಇಬ್ಬರನ್ನುಬಂಧಿಸಿದ್ದು, ಅಧಿಕಾರಿಗಳ ಪ್ರಕಾರ ಒಂದುಕೆ.ಜಿ. ಅಂಬರ್ ಗ್ರೀಸ್‌ಗೆ ಅಂತಾರಾಷ್ಟ್ರೀಯಮಾರುಕಟ್ಟೆಯಲ್ಲಿ ಒಂದು ಕೋಟಿ ಮೊತ್ತವನ್ನುನೀಡಲಾಗುತ್ತದೆ. ಗುಜರಾತ್ ಸೇರಿ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರದ ಕಡಲತೀರದಲ್ಲಿ ಈ ಅಕ್ರಮ ಸಾಗಾಣಿಕೆ ಹೆಚ್ಚಾಗಿ ನಡೆಯುತ್ತದೆ.
ತೇಲುವ ಚಿನ್ನದ ಉಪಯೋಗವೇನು? :
ಅಂಬರ್‌ಗ್ರೀಸ್‌ಗೆ ಅರಬ್ ರಾಷ್ಟ್ರ ದುಬೈನಂತಹ ರಾಷ್ಟ್ರಗಳ ಸುಗಂಧ ದ್ರವ್ಯ ಮಾರುಕಟ್ಟೆ ಯಲ್ಲಿ ಅಧಿಕ ಬೇಡಿಕೆ ಇದ್ದು, ಸುಗಂಧ ದ್ರವ್ಯ ತಯಾರಿಕೆಯಲ್ಲಿ ಅದನ್ನು ಹೆಚ್ಚು ಉಪಯೋಗಿಸಲಾಗುತ್ತದೆ. ಕೆಲ ಸಾಂಪ್ರದಾಯಿಕ ಔಷಧಿ ತಯಾರಿಕೆಯಲ್ಲೂ ಅದನ್ನು ಬಳಸ ಲಾಗುತ್ತದೆ. ಅಮೇರಿಕ, ಯುರೋಪ್ ದೇಶಗಳು ಇದನ್ನು ಸುಗಂಧ ದ್ರವ್ಯಗಳಿಗಾಗಿ ಉಪಯೋಗಿಸುತ್ತಿದ್ದವು. ಟರ್ಕಿ ದೇಶದ ಇಸ್ತಾಂಬುಲ್ ಕಾಫಿ ಹೌಸ್‌ಗಳಲ್ಲಿ ಅಂಬರ್ ಗ್ರೀಸ್ ಅನ್ನು ಸುವಾಸನೆ ವರ್ಧಕವಾಗಿ ಬಳಸಲಾಗು ತ್ತದೆ.ಇನ್ನು ಕೇಲ ವೈನ್‌ಗಳಲ್ಲಿ ಸುವಾಸನೆ ಉದ್ದೇಶದಿಂದ ಇದನ್ನುಬಳಸುವುದು ಉಂಟು. ಪ್ಲೇಗ್ ಸೋಂಕಿನ ರೋಗ ನಿರೋಧಕ ಔಷಧವಾಗಿಯೂ ಬಳಸಬಹುದು ಎಂಬ ನಂಬಿಕೆ ಇದೆ.
ಅಂಬರ್ ಗ್ರೀಸ್ ಎಲ್ಲಿ ಕಂಡು ಬರುತ್ತದೆ? :
ಸಾಮಾನ್ಯವಾಗಿ ಅಟ್ಲಾಂಟಿಕ್‌ನ ಬಹಮಾಸ್ ಪ್ರದೇಶದಲ್ಲಿ ಕಂಡುಬರುವ ಅಂಬರ್ ಗ್ರೀಸ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಮಡಗಾಸ್ಕರ್, ಈಸ್ಟ್ ಇಂಡೀಸ್, ಮಾಲ್ಡೀವ್ಸ್, ಚೀನಾ, ಜಪಾನ, ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಕರಾವಳಿ ಪ್ರದೇಶದಲ್ಲಿ ಅಂಬರ್ ಗ್ರೀಸ್ ಕಾಣಬಹುದು.
ಉಪ್ಪಿನ ನೀರಿನಲ್ಲಿ ತೇಲುತ್ತದೆ! : ಮೊದಲ ಬಾರಿಗೆ ಅಂಬರ್‌ಗ್ರೀಸ್ ಎಂಬ ಹೆಸರು ಕೇಳಿದಾಗ, ಅದು ಎಲ್ಲಿ ಸಿಗುತ್ತದೆ? ಏನು ಎಂಬ ಮಾಹಿತಿ ಸಂಗ್ರಹಿಸಲಾಯಿತು. ನಂತರ ಅದನ್ನು ಅಂತರ್ಜಾಲದ ಮೂಲಕ ಹೇಗೆ ಪರೀಕ್ಷೆ ನಡೆಸಬೇಕು ಎಂಬ ಮಾಹಿತಿಪಡೆದುಕೊಂಡು, ಉಪ್ಪಿನ ನೀರಿನಲ್ಲಿ ಹಾಕಿದಾಗ ಅದು ತೆಲುತ್ತಿತ್ತು. ಆದರೆ, ಬೇರೆ ನೀರಿನಲ್ಲಿ ಹಾಕಿದರೆ ಅದು ಮುಳುಗುತ್ತದೆ. ಇದು ಹಲವು ವರ್ಷ ಸಮುದ್ರದಲ್ಲಿಯೇ ಇದ್ದರೆ ಅದು ಬೆಳ್ಳಗಾಗುತ್ತದೆ. ಇದು ಅದರವಿಶೇಷ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸವಾಲು :
ಅಂಬರ್‌ಗ್ರೀಸ್ ಅನ್ನು ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ, ಪ್ರಯೋಗಾಲಯದ ತಜ್ಞರು, ಅದನ್ನು ಕಂಡುಸಂಶೋಧನೆ ನಡೆಸಬೇಕು. ಈ ರೀತಿಯ ವಸ್ತು ಇದುವರೆಗೂ ಕಂಡಿಲ್ಲ ಎಂದೆಲ್ಲಹೇಳಿದರು. ನಂತರ ಗುಜರಾತ್‌ಗೆ ಕಳುಹಿಸಿದಾಗ ಅದರ ಮೂಲ ಹೆಸರು ಗೊತ್ತಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಂಬರ್‌ಗ್ರೀಸ್‌ನ ಮೂಲ :
ಅಂಬರ್‌ಗ್ರೀಸ್ ಎಂಬ ಪದ ಮೂಲತಃ ಫ್ರೆಂಚ್ ಪದ. ಅಂಬರ್ ಮತ್ತು ಗ್ರೀಸ್‌ಪದದಿಂದ ಬಂದಿದ್ದು. ಅದಕ್ಕೆ”ತೇಲುವ ಚಿನ್ನ’ (ಫ್ಲೋಟಿಂಗ್‌ಗೋಲ್ಡ್), ಸ್ಪರ್ಮ್ವೇಲ್‌ಎಂಬ ತಿಮಿಂಗಿಲದ ವಾಂತಿ ಎಂದು ಸಹ ಕರೆಯಲಾಗುತ್ತದೆ. ಈಜಿಪ್ಟ್ ಮತ್ತು ಅರಬ್ ದೇಶದಲ್ಲಿನ ಹಳೆಯ ನಾಗರಿಕತೆಗಳುಅಂಬರ್ ಗ್ರೀಸ್ ಅನ್ನು “ಅನ್ಬಾರ್’ ಎಂದು ಕರೆಯುತ್ತಿದ್ದರು.
ರಾಜ್ಯದಲ್ಲಿ 30ಕ್ಕೂ ಹೆಚ್ಚು ಪ್ರಕರಣ ಪತ್ತೆ ತನಿಖೆ ಮುಂದುವರಿಕೆ :
ಇಡೀ ದೇಶದಲ್ಲಿ ಮುಂಬೈ ಮತ್ತು ಗುಜರಾತ್‌ನಲ್ಲಿ ಮೊದಲು ಅಂಬರ್‌ಗ್ರೀಸ್ ಮಾರಾಟ ಪ್ರಕರಣಗಳು ಪತ್ತೆಯಾಗಿತ್ತು. ಆದರೆ, ಅತೀ ಹೆಚ್ಚು ಪ್ರಕರಣಗಳನ್ನು ಬೇಧಿಸಿದ ಕೀರ್ತಿ ಬೆಂಗಳೂರು ನಗರ ಪೊಲೀಸರದ್ದು. ಕಳೆದ ಜೂನ್‌ನಿಂದಇದುವರೆಗೂ ಅಂದಾಜು 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ 150 ಕೋಟಿ ರೂ.ಗೂ ಅಧಿಕ ಮೌಲ್ಯದ ಅಂಬರ್‌ಗ್ರೀಸ್ ಅನ್ನು ಬೆಂಗಳೂರು ನಗರ ಪೊಲೀಸರು ಜಪ್ತಿ ಮಾಡಿದ್ದಾರೆ. ಆದರೆ, ಇದುವರೆಗೂ ಮೂಲ ಜಾಡಿನ ಪತ್ತೆ ಆಗಿಲ್ಲ.
ವಿವಿಧ ದೇಶಗಳಲ್ಲಿ ಮಾರಾಟಕ್ಕೆ ನಿಷೇಧ :
ಭಾರತ ಸೇರಿ ಅಮೇರಿಕ, ಆಸ್ಟ್ರೇಲಿಯಾ ಸುಮಾರು 40 ದೇಶಗಳಲ್ಲಿ ಅಂಬರ್‌ಗ್ರೀಸ್ ವ್ಯಾಪಾರವನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, ಶೆಡ್ಯುಲ್ 2 ರ ಪ್ರಕಾರ ಸ್ಪರ್ಮ್ ವೇಲ್ ಎಂಬ ಪ್ರಭೇದ ತಿಮಿಂಗಿಲವನ್ನು ಭಾರತದಲ್ಲಿ ಸಂರಕ್ಷಿತ ಪ್ರಭೇದವಾಗಿ ಪ್ರತ್ಯೇಕಿಸಿದ್ದು, ಅದರಅಂಬರ್‌ಗ್ರೀಸ್ ಅಥವಾ ಯಾವುದೇ ಉಪಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ.ಇಂಗ್ಲೆಂಡ್ ಹಾಗೂ ಯುರೋಪಿಯನ್ ಒಕ್ಕೂಟ ದೇಶಗಳಲ್ಲಿ ಸಮುದ್ರತೀರದಿಂದ ಅಂಬರ್‌ಗ್ರೀಸ್ ಅನ್ನು ಮಾರಾಟ ಮಾಡಲು ಅವಕಾಶವಿದು,ª ಕೇವಲ ಕಾನೂನು ಬದ್ಧವಾಗಿ ಮಾತ್ರ ನಡೆಸಲಾಗುತ್ತದೆ.
ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕ ವಸ್ತುವನ್ನು ಮೊದಲಿಗೆ ಡ್ರಗ್ಸ್ ಎಂದು ಭಾವಿಸಿದ್ದೆವು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ 24 ಗಂಟೆಗಳ ಬಳಿಕವಷ್ಟೇ ಅದು ಅಂಬರ್‌ಗ್ರೀಸ್ ಎಂಬುದು ಗೊತ್ತಾಯಿತು. ನಂತರದ ತನಿಖೆಯಲ್ಲಿ ಸಮುದ್ರದಲ್ಲಿ ಸಿಗುವ ಬಲು ಅಪರೂಪದ ವಸ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂತು. -ಎಸ್.ಡಿ.ಶರಣಪ್ಪ, ಡಿಸಿಪಿ, ಸಿಸಿಬಿ
– ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.