ಬಣ್ಣ ಹಚ್ಚಿದ ಸ್ಥಳದಲ್ಲೇ ಅಂಬಿ ಚಿರನಿದ್ರೆ
Team Udayavani, Nov 26, 2018, 12:29 PM IST
ಬೆಂಗಳೂರು: ವರನಟ ಡಾ. ರಾಜ್‌ಕುಮಾರ್ ಹಾಗೂ ನಟ ಅಂಬರೀಶ್ “ಒಡಹುಟ್ಟಿದವರು’ ಚಿತ್ರದಲ್ಲಿ ಸಹೋದರರಾಗಿ ಕಾಣಿಸಿಕೊಂಡು ಚಿತ್ರರಂಗ ಎಂದೂ ಮರೆಯಲಾಗದ ರೀತಿಯಲ್ಲಿ ಛಾಪೊತ್ತಿದ್ದು ಇತಿಹಾಸ. ಚಿತ್ರ ಬದುಕಿನ ಆಚೆಗೂ ಸಹೋದರರ ಬಾಂಧವ್ಯ ಕಾಪಾಡಿಕೊಂಡಿದ್ದ ಈ ಇಬ್ಬರು ಸಿನಿ ದಿಗ್ಗಜರು ಚಿರನಿದ್ರೆಗೆ ಜಾರಿದ ಬಳಿಕವೂ ಹತ್ತಿರವಾಗುತ್ತಿದ್ದಾರೆ!
ಹೌದು, ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ಕುಮಾರ್ ಸಮಾಧಿ ಹಾಗೂ ಸ್ಮಾರಕ ಸ್ಥಳದ ಬಲಭಾಗಕ್ಕೆ ಇರುವ ಪ್ರದೇಶದಲ್ಲೇ ಸೋಮವಾರ ಅಂಬರೀಶ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಅಲ್ಲೇ, ಅಂಬರೀಶ್ ಸಮಾಧಿ ಸ್ಥಳವನ್ನು ಸ್ಮಾರಕವನ್ನಾಗಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಸಂಸ್ಕಾರ ನಡೆಯುವ ಜಾಗದಲ್ಲಿ ಭಾನುವಾರ ಬಿರುಸಿನ ಸಿದ್ಧತೆ ನಡೆದಿತ್ತು. ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು. ಸ್ಥಳೀಯ ಶಾಸಕ ಕೆ. ಗೋಪಾಲಯ್ಯ ಸ್ಥಳದಲ್ಲಿದ್ದುಕೊಂಡೇ ಅಂತ್ಯಕ್ರಿಯೆಗೆ ಅಗತ್ಯ ಸಿದ್ಧತೆ ಕಾರ್ಯದ ಉಸ್ತುವಾರಿ ನೋಡಿಕೊಂಡಿದ್ದರು.
ಅಂಬರೀಶ್ ವಿಧಿವಶರಾದ ಸುದ್ದಿ ಕೇಳಿ ಅಸಂಖ್ಯಾತ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಕಡೆ ಧಾವಿಸಲಾರಂಭಿಸಿದ್ದರು. ಹಲವು ಮಂದಿ ಭಾನುವಾರವೇ ಅಂತ್ಯಕ್ರಿಯೆ ನಡೆಯಬಹುದೆಂಬ ನಿರೀಕ್ಷೆಯಿಂದ ಆಗಮಿಸಿದ್ದರು. ಬಳಿಕ ಪೊಲೀಸ್ ಸಿಬ್ಬಂದಿ ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿದ ಬಳಿಕ ಅಲ್ಲಿಂದ ಹೊರಟ ದೃಶ್ಯ ಕಂಡುಬಂತು.
ಸ್ಟುಡಿಯೋ ಸುತ್ತಮುತ್ತ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಭದ್ರತೆಯ ಮೇಲ್ವಿಚಾರಣೆಯಲ್ಲಿ ನಿರತರಾಗಿದ್ದರು.
ಕಂಠೀರವ ಸ್ಟುಡಿಯೋಗೆ ಬಿಗಿ ಬಂದೋಬಸ್ತ್ಗಾಗಿ 1,500ಕ್ಕಿಂತಲೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಎಸಿಪಿಗಳು, ಇನ್ಸ್‌ಪೆಕ್ಟರ್‌ಗಳಿಗೆ ಸೂಕ್ತ ಜವಾಬ್ದಾರಿ ವಹಿಸಲಾಗಿದೆ. ಉಳಿದಂತೆ ಕೆಎಸ್‌ಆರ್‌ಪಿ ಪಡೆಯೂ ಭದ್ರತೆಗೆ ಇರಲಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚು ಕ್ರಮ ವಹಿಸಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳಿದರು.
ಅತಿ ಗಣ್ಯರಿಗೆ ಪ್ರತ್ಯೇಕ ಗೇಟ್: ಅಂಬರೀಶ್ ಅವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಚಿತ್ರರಂಗದ ಗಣ್ಯರು, ಜನಪ್ರತಿನಿಧಿಗಳು, ಅತಿ ಗಣ್ಯರಿಗೆ ಪ್ರತ್ಯೇಕ ದ್ವಾರದ ಮೂಲಕ ಪ್ರವೇಶ ಅವಕಾಶ ಕಲ್ಪಿಸಲಾಗುತ್ತದೆ. ಜತೆಗೆ, ಸಾರ್ವಜನಿಕರನ್ನು ಪ್ರತ್ಯೇಕ ಮಾರ್ಗದಲ್ಲಿ ಒಳಗೆ ಬಿಡಲಾಗುತ್ತದೆ ಎಂದು ಹೇಳಲಾಗಿದೆ.
ಸ್ಟುಡಿಯೋದಲ್ಲಿ ಮೌನ: ಚಿತ್ರೀಕರಣ ಚಟುವಟಿಕೆಗಳಿಂದ ಸದಾ ಕಳೆಗಟ್ಟಿರುತ್ತಿದ್ದ ಕಂಠೀರವ ಸ್ಟುಡಿಯೋದಲ್ಲಿ ಭಾನುವಾರ ಸೂತಕದ ಛಾಯೆ ಆವರಿಸಿತ್ತು. ಅಂತ್ಯಕ್ರಿಯೆ ನಡೆಯುವ ಸ್ಥಳವನ್ನು ಜೆಸಿಬಿ ಯಂತ್ರದ ನೆರವಿನೊಂದಿಗೆ ಸಮತಟ್ಟುಗೊಳಿಸುತ್ತಿದ್ದರೆ, ಇನ್ನಿತರೆ ಕಾರ್ಯಗಳಲ್ಲಿ ನಿರತರಾಗಿದ್ದವರು ಸೂತಕ ಮೌನದಲ್ಲಿ ಕಾಯಕ ಮುಂದುವರಿಸಿದ್ದರು. ಚಿತ್ರೀಕರಣದ ವೇಳೆ ಅಂಬರೀಶ್ ಅವರ ಗುಣ, ಸಾಮಾನ್ಯರೊಂದಿಗೆ ಅವರು ಬೆರೆಯುತ್ತಿದ್ದ ರೀತಿಯನ್ನು ಹತ್ತಿರದಿಂದ ಕಂಡಿದ್ದ ಸ್ಟುಡಿಯೋ ಸಿಬ್ಬಂದಿ ದುಃಖದಿಂದಲೇ ಕೆಲ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದರು.
ಅಂಬಿ ಅಣ್ಣನ ನೆನೆದ ಸ್ಟುಡಿಯೋ ಸಿಬ್ಬಂದಿ: ಅಂಬರೀಶ್ ಅವರ ಅಂತ್ಯಕ್ರಿಯೆ ನಡೆಯಲಿರುವ ಸ್ಥಳದಲ್ಲೇ ಈ ಹಿಂದೆ ಹಲವು ಚಲನಚಿತ್ರಗಳಲ್ಲಿ ಸನ್ನಿವೇಶಕ್ಕೆ ಪೂರಕವಾಗಿ ಸ್ಮಶಾನದ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಕಡಿಮೆಯಾಗಿತ್ತು. ಚಿತ್ರೀಕರಣಕ್ಕೆ ಬಂದಾಗ ಬಾಯ್ತುಂಬಾ ಮಾತನಾಡಿಸಿ ಎಂದಿನ ಸ್ಟೈಲ್‌ನಲ್ಲೇ ಊಟ ಮಾಡ್ರೋ… ಎಂದು ಹೇಳುತ್ತಿದ್ದ ಅಂಬರೀಶಣ್ಣ ಇದೀಗ ಶಾಶ್ವತವಾಗಿ ಇಲ್ಲಿಗೆ ಬಂದಿದ್ದಾರೆ. ಬಣ್ಣ ಹಚ್ಚಿದ ಸ್ಥಳದಲ್ಲೇ ಅಣ್ಣ ಮಣ್ಣಾಗುತ್ತಿದ್ದಾರೆ ಎಂದು ಸ್ಟುಡಿಯೋದ ಉದ್ಯೋಗಿಯೊಬ್ಬರು ಕಣ್ಣೀರು ಹಾಕಿದರು.
* ಮಂಜುನಾಥ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್ ಇರಾನಿವರೆಗೆ
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Viral Video: ಟಿಕ್‌ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.