ಬೆಂಗ್ಳೂರಲ್ಲಿಂದು ಅಮಿತ್ ಶಾ ಸಭೆ
Team Udayavani, Jan 9, 2018, 6:00 AM IST
ಬೆಂಗಳೂರು: ವಿಧಾನಸಭೆ ಚುನಾವಣೆ ಸಿದ್ಧತೆಗಳ ಕುರಿತಂತೆ ಚರ್ಚಿಸಲು ಮತ್ತು ತಂತ್ರಗಾರಿಕೆ ರೂಪಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದು, ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ. ವಿಶೇಷವೆಂದರೆ ಪರಿವರ್ತನಾ ಯಾತ್ರೆಯಲ್ಲಿ ತೊಡಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.
ಈ ಮೂಲಕ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಲು ಗಮನಕೊಡಿ ಎಂಬ ತಮ್ಮ ನಿರ್ದೇಶನವನ್ನು ಯಡಿಯೂರಪ್ಪ ಅವರ ಮೂಲಕವೇ ರಾಜ್ಯದಲ್ಲಿ ಜಾರಿಗೆ ತರಲು ಅಮಿತ್ ಶಾ ಮುಂದಡಿ ಇಟ್ಟಿದ್ದಾರೆ. ಅಲ್ಲದೆ, ರಾಜ್ಯ ಬಿಜೆಪಿಯನ್ನು ಸಂಪೂರ್ಣ ತಮ್ಮ ಹಿಡಿತದಲ್ಲಿಟ್ಟುಕೊಳ್ಳುತ್ತಿರುವುದನ್ನೂ ಅವರು ದೃಢಪಡಿಸಿದ್ದಾರೆ.
ಕಳೆದ ಡಿ. 31ರಂದು ಅಮಿತ್ ಶಾ ಅವರು ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು. ಆದರೆ, ಹವಾಮಾನ ವೈಪರೀತ್ಯದಿಂದ ಅಂದು ಬೆಳಗ್ಗೆ ಆಗಮಿಸಬೇಕಾಗಿದ್ದ ಶಾ ಸಂಜೆ ವೇಳೆ ಬಂದಿದ್ದರು. ಹೀಗಾಗಿ ಪ್ರಮುಖವಾದ ವಿಧಾನಸಭಾ ಉಸ್ತುವಾರಿಗಳೊಂದಿಗಿನ ಸಭೆಯನ್ನು ಸರಿಯಾಗಿ ನಡೆಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಆ ಸಭೆಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಸಂಜೆ 4.45ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನೆಲಮಂಗಲ ಬಳಿಯ ಖಾಸಗಿ ಹೋಟೆಲ್‌ಗೆ ಆಗಮಿಸಲಿರುವ ಅಮಿತ್ ಶಾ, ಸಂಜೆ 5.30ಕ್ಕೆ ಉತ್ತರ ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳು ಮತ್ತು ಜಿಲ್ಲಾ ಸಂಚಾಲಕರ ಸಭೆ ನಡೆಸಲಿದ್ದಾರೆ. ರಾತ್ರಿ 8 ಗಂಟೆಯಿಂದ ದಕ್ಷಿಣ ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳು ಮತ್ತು ಜಿಲ್ಲಾ ಸಂಚಾಲಕರೊಂದಿಗೆ ಚರ್ಚಿಸಲಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಸಂಸದರು, ರಾಜ್ಯಸಭೆ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಪ್ರಮುಖ ಪದಾಧಿಕಾರಿಗಳನ್ನು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳಾಗಿ ನೇಮಿಸಿದ್ದರು. ಸಂಸದರು, ರಾಜ್ಯಸಭೆ ಸದಸ್ಯರಿಗೆ ಎರಡು ವಿಧಾನಸಭಾ ಕ್ಷೇತ್ರಗಳು, ಶಾಸಕರಿಗೆ ಅವರ ಕ್ಷೇತ್ರ ಮತ್ತು ಪಕ್ಕದ ಇನ್ನೊಂದು ಕ್ಷೇತ್ರ, ವಿಧಾನ ಪರಿಷತ್ ಸದಸ್ಯರು ಮತ್ತು ಪ್ರಮುಖ ಪದಾಧಿಕಾರಿಗಳಿಗೆ ತಲಾ ಒಂದು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ವಹಿಸಲಾಗಿತ್ತು.
ಉಸ್ತುವಾರಿಗಳಿಗೆ ತಲೆಬಿಸಿ:
ಡಿ. 31ರಂದು ಅಮಿತ್ ಶಾ ಆಗಮನ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉಸ್ತುವಾರಿಗಳೊಂದಿಗೆ ಸಭೆ ಮಾಡಿದ್ದರು. ಸಂಸದರು ಮತ್ತು ಶಾಸಕರು ತಮಗೆ ವಹಿಸಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಜ. 15ರೊಳಗೆ ಉಸ್ತುವಾರಿ ಕ್ಷೇತ್ರಗಳಿಗೆ ತೆರಳಿ ಕಾರ್ಯಕರ್ತರೊಂದಿಗೆ ಚರ್ಚಿಸಿ ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದರು. ಅಂದು ಅಮಿತ್ ಶಾ ಕೈಯಿಂದ ಪಾರಾಗಿದ್ದರಾದರೂ ಮಂಗಳವಾರ ಮತ್ತೆ ಅಮಿತ್ ಶಾ ಅವರೇ ಸಭೆ ನಡೆಸುತ್ತಿರುವುದು ಉಸ್ತುವಾರಿಗಳಿಗೆ ತಲೆಬಿಸಿ ಉಂಟುಮಾಡಿದೆ.
ಉಸ್ತುವಾರಿಗಳ ಕಾರ್ಯಚಟುವಟಿಕೆಗಳ ಕುರಿತು ಅಮಿತ್ ಶಾ ಈಗಾಗಲೇ ಮಾಹಿತಿ ತರಿಸಿಕೊಂಡಿದ್ದಾರೆ. ಅಲ್ಲದೆ, ಕಳೆದ ಬಾರಿ ಸಭೆ ನಡೆಸಿದ್ದ ಪ್ರಕಾಶ್ ಜಾವಡೇಕರ್ ಅವರೂ ಅಂದಿನ ಸಭೆಯ ವಿವರಗಳನ್ನು ನೀಡಿದ್ದಾರೆ. ಹೀಗಾಗಿ ಸ್ವಲ್ಪ ಎಡವಟ್ಟಾದರೂ ಶಾ ಅವರಿಂದ ತರಾಟೆಗೊಳಗಾಗುವುದು ತಪ್ಪಿದ್ದಲ್ಲ. ಆದ್ದರಿಂದ ಉಸ್ತುವಾರಿ ಜವಾಬ್ದಾರಿ ಹೊಂದಿದ್ದವರು ಆತಂಕದೊಂದಿಗೆ ಮಂಗಳವಾರದ ಸಭೆಗೆ ಸಿದ್ಧರಾಗುತ್ತಿದ್ದಾರೆ.
ಬಿಎಸ್‌ವೈ ಗೈರಿನಲ್ಲಿ ಶಾ ಸಭೆ
ಬಿ.ಎಸ್.ಯಡಿಯೂರಪ್ಪ ಅವರಿಲ್ಲದೆ ಅಮಿತ್ ಶಾ ಅವರು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳೊಂದಿಗೆ ಮಂಗಳವಾರ ಸಭೆ ನಡೆಸುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.ಪಕ್ಷದ ಮೂಲಗಳ ಪ್ರಕಾರ ಇದು ಡಿ. 31ರಂದು ಅಪೂರ್ಣಗೊಂಡಿದ್ದ ಸಭೆಯ ಮುಂದುವರಿದ ಭಾಗವಾಗಿರುವುದರಿಂದ ಮತ್ತು ಯಡಿಯೂರಪ್ಪ ಅವರು ಪೂರ್ವನಿಗದಿಯಂತೆ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ ಸಭೆಗೆ ಬರುತ್ತಿಲ್ಲ. ಅಮಿತ್ ಶಾ ಅವರೇ ಯಾತ್ರೆ ಮುಂದುವರಿಸುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೂ ಯಡಿಯೂರಪ್ಪ ಅವರಿಲ್ಲದೆ ಅಮಿತ್ ಶಾ ಸಭೆ ನಡೆಸುತ್ತಿರುವುದು ತಪ್ಪು ಸಂದೇಶ ರವಾನಿಸುವ ಸಾಧ್ಯತೆ ಇದೆ ಎಂಬ ಆತಂಕ ಪಕ್ಷದಲ್ಲಿ ಕಾಣಿಸಿಕೊಂಡಿದೆ.
ಈ ಮಧ್ಯೆ ವಹಿಸಿದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು ಅಮಿತ್ ಶಾ ಅವರ ಸೂಚನೆ. ಅದರಲ್ಲೂ ಮೊದಲು ಕೊಟ್ಟ ಕೆಲಸವನ್ನು ಮೊದಲು ಮಾಡಬೇಕು ಎಂಬುದು ಅವರು ವಿಧಿಸಿರುವ ನಿಬಂಧನೆ. ಡಿ. 31ರಂದು ಬೆಂಗಳೂರಿಗೆ ಬಂದಾಗಲೂ ಶಾ ಇದನ್ನು ಸ್ಪಷ್ಟವಾಗಿ ಹೇಳಿದ್ದರು. ಹೀಗಾಗಿ ಪರಿವರ್ತನಾ ಯಾತ್ರೆ ನಡೆಸುವ ಕೆಲಸವನ್ನು ಯಡಿಯೂರಪ್ಪ ಮುಂದುವರಿಸಲಿ, ಚುನಾವಣಾ ಸಿದ್ಧತೆಗಳನ್ನು ನಾನು ನೋಡಿಕೊಳ್ಳುತ್ತೇನೆ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರಿಲ್ಲದೆ ಸಭೆ ನಡೆಸುತ್ತಿದ್ದಾರೆ. ಈ ಮೂಲಕ ಯಾರೇ ಆಗಲಿ, ಅವರಿಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಲೇ ಬೇಕು ಎಂಬ ತಮ್ಮ ಸೂಚನೆ ಯಡಿಯೂರಪ್ಪ ಆದಿಯಾಗಿ ಎಲ್ಲರಿಗೂ ಅನ್ವಯಿಸುತ್ತದೆ ಎಂಬ ಸಂದೇಶವನ್ನು ಪಕ್ಷದ ರಾಜ್ಯ ಘಟಕಕ್ಕೆ ಮುಟ್ಟಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಅಮಿತ್ ಶಾ ಕಾರ್ಯಕ್ರಮ
ಮಂಗಳವಾರ ರಾಜ್ಯಕ್ಕೆ ಆಗಮಿಸುತ್ತಿರುವ ಅಮಿತ್ ಶಾ ಅವರು ಬೆಂಗಳೂರಿನಲ್ಲಿ ಪಕ್ಷದ ವಿಧಾನಸಭಾ ಉಸ್ತುವಾರಿಗಳೊಂದಿಗೆ ಸಭೆ ನಡೆಸಲಿದ್ದು, ಬುಧವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆಯುವ ಬಿಜೆಪಿ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಪಾಲ್ಗೊಳ್ಳುವರು.
ಮಂಗಳವಾರ ಸಂಜೆ 4.45ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಅಮಿತ್ ಶಾ, 5.30ಕ್ಕೆ ಯಲಹಂಕ ಬಳಿ ಇರುವ ಖಾಸಗಿ ಹೋಟೆಲ್‌ನಲ್ಲಿ ಪಕ್ಷದ ಸಭೆ ನಡೆಸಲಿದ್ದಾರೆ. 10.30ಕ್ಕೆ ಸಭೆ ಮುಗಿಸಿ ಕುಮಾರಕೃಪಾ ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಲಿರುವ ಅವರು ಅಲ್ಲೇ ವಾಸ್ತವ್ಯ ಹೂಡುವರು. ಬುಧವಾರ ಬೆಳಗ್ಗೆ ಅಲ್ಲಿಂದ ಜಕ್ಕೂರು ವಾಯುನೆಲೆ ಮೂಲಕ ಹೆಲಿಕಾಪ್ಟರ್‌ನಲ್ಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಗೆ ತೆರಳಿ ಮಧ್ಯಾಹ್ನ ನಡೆಯುವ ಬಿಜೆಪಿ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವರು. ಯಾತ್ರೆ ಮುಗಿದ ನಂತರ ಹೊಳಲ್ಕೆರೆ ಗೆಸ್ಟ್‌ಹೌಸ್‌ನಲ್ಲಿ ಭೋಜನ ಸೇವಿಸಿ, ಅಲ್ಲಿಯೇ ಯಡಿಯೂರಪ್ಪ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ಒಂದು ಸುತ್ತಿನ ಸಮಾಲೇಚನೆ ನಡೆಸಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸಾಗಿ ಸಂಜೆ ದೆಹಲಿಗೆ ಹಿಂತಿರುಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.