ಬಿಜೆಪಿಯಲ್ಲಿ ಅಮಿತ್ ಶಾ ಮೌನದ್ದೇ ಚರ್ಚೆ
Team Udayavani, May 5, 2017, 12:05 PM IST
ಬೆಂಗಳೂರು: ಬಿಜೆಪಿ ರಾಜ್ಯ ಘಟಕದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೌನ ಪಕ್ಷದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದ್ದು, ಮೌನದ ಹಿಂದೆ ಏನು ಕಾರ್ಯತಂತ್ರವಿರಬಹುದು ಎಂಬ ಪ್ರಶ್ನೆಯನ್ನೂ ಹುಟ್ಟು ಹಾಕಿದೆ.
ಬಿಜೆಪಿಯಲ್ಲಿರುವ ಅಸಮಾಧಾನ ಮತ್ತು ಅದಕ್ಕೆ ಕಾರಣಗಳ ಕುರಿತು ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ವರದಿ
ನೀಡಿ ಮೂರು ದಿನ ಕಳೆದರೂ ಅಮಿತ್ ಶಾ ಮಾತ್ರ ಈ ವಿಚಾರದಲ್ಲಿ ಇನ್ನೂ ಮೌನ ಮುರಿದಿಲ್ಲ. ಹೀಗಾಗಿ ಮೇ 6 ಮತ್ತು 7ರಂದು ಮೈಸೂರಿನಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಬರಲಿರುವ ಮುರಳೀಧರ ರಾವ್ ಅವರೊಂದಿಗೆ ಬಿಕ್ಕಟ್ಟು ಶಮನಕ್ಕೆ ಅಮಿತ್ ಶಾ ಅವರು ಸೂತ್ರವೊಂದನ್ನು ಕಳುಹಿಸಿಕೊಡಲಿದ್ದಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಧಾನದ ಮೂಲಕ ಬಿಕ್ಕಟ್ಟು
ಬಗೆಹರಿಸಲು ಪ್ರಯತ್ನ ನಡೆಯಲಿದೆ. ಒಂದು ವೇಳೆ ಈ ಪ್ರಯತ್ನ ಕೈಗೂಡದಿದ್ದಲ್ಲಿ ಮಾತ್ರ ಶಿಸ್ತು ಕ್ರಮದ ಬಗ್ಗೆ ರಾಷ್ಟ್ರೀಯ ನಾಯಕರು
ಯೋಚಿಸಲಿದ್ದಾರೆ. ಹೀಗಾಗಿ ಸಂಧಾನ ಸೂತ್ರ ಹೇಗಿರುತ್ತದೆ ಎಂಬ ಕುತೂಹಲ ಪಕ್ಷದಲ್ಲಿ ತೀವ್ರಗೊಂಡಿದೆ.
ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರ ಮಾತು ಕೇಳಿಕೊಂಡು ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಮೂಲ
ಕಾರ್ಯಕರ್ತರನ್ನು ದೂರವಿಟ್ಟು ತಮಗೆ ಬೇಕಾದವರನ್ನು ಪಕ್ಷದ ಪದಾಧಿಕಾರಿಗಳನ್ನಾಗಿ ನೇಮಕ ಮಾಡುತ್ತಿದ್ದಾರೆ. ಪ್ರಮುಖ
ನಿರ್ಧಾರ ಕೈಗೊಳ್ಳುವಾಗ ಕೋರ್ ಕಮಿಟಿ ಸಭೆಯಲ್ಲಾಗಲಿ, ಪಕ್ಷದ ಹಿರಿಯ ಮುಖಂಡರೊಂದಿಗಾಗಲಿ ಚರ್ಚಿಸುತ್ತಿಲ್ಲ ಎಂಬುದು
ಅವರ ವಿರುದ್ಧ ಮುನಿಸಿಕೊಂಡಿರುವವರ ಆರೋಪ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರದ್ದೂ
ಯಡಿಯೂರಪ್ಪ ವಿರುದ್ಧ ಇದೇ ದೂರು.
ಆದರೆ, ಮೂಲ ಕಾರ್ಯಕರ್ತರನ್ನು ದೂರವಿಟ್ಟಿಲ್ಲ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಅನುಕೂಲವಾಗುವಂತೆ ಸಂಘಟನೆ ಬಲಪಡಿಸುತ್ತಿದ್ದೇನೆ. ಅಸಮಾಧಾನಿತರ ಕೋರಿಕೆಯಂತೆ ಈಗಾಗಲೇ ಮೂರು ಜಿಲ್ಲೆಗಳ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಆದರೂ ಅವರು ಒಪ್ಪುತ್ತಿಲ್ಲ. ಇನ್ನೊಂದೆಡೆ, ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಪಕ್ಷದಲ್ಲಿ ಒಡಕುಂಟುಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬುದು ಯಡಿಯೂರಪ್ಪ ಅವರ ಒತ್ತಾಯ. ಈ ಎರಡೂ ಅಂಶಗಳನ್ನು ಪರಿಶೀಲಿಸಿ ಎರಡೂ ಕಡೆಯವರಿಗೆ ಅಸಮಾಧಾನವಾಗದಂತೆ ಮತ್ತು ಸಂಘಟನೆಗೂ ಕ್ಕೆಯಾಗದಂತೆ ಪಕ್ಷದಲ್ಲಿ ಮೂಡಿರುವ ಭಿನ್ನಾಭಿಪ್ರಾಯಕ್ಕೆ ಅಮಿತ್ ಶಾ ತಮ್ಮದೇ ಆದ ಸೂತ್ರವೊಂದನ್ನು ಸಿದಟಛಿಪಡಿಸುತ್ತಿದ್ದಾರೆ. ಅದನ್ನು ರಾಜ್ಯ ಕಾರ್ಯಕಾರಿಣಿಗೆ ಆಗಮಿಸಲಿರುವ ಮುರಳೀಧರ ರಾವ್ ಅವರ ಮೂಲಕ ಕಳುಹಿಸಿಕೊಟ್ಟು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಈಶ್ವರಪ್ಪ ಬಣ ಗೈರಾದರೆ
ಪರಿಹಾರ ಕಷ್ಟಸಾಧ್ಯ
ಈ ಮಧ್ಯೆ ರಾಜ್ಯ ಕಾರ್ಯಕಾರಿಣಿಯಿಂದ ದೂರ ಉಳಿಯಲು ಕೆ.ಎಸ್.ಈಶ್ವರಪ್ಪ ಬಣ ಚಿಂತನೆ ನಡೆಸಿದೆ. ಒಂದು ವೇಳೆ ಅವರು ಕಾರ್ಯಕಾರಿಣಿಗೆ ಗೈರು ಹಾಜರಾದರೆ ಮುರಳೀಧರ ರಾವ್ ಅವರು ಬಿಕ್ಕಟ್ಟು ಪರಿಹಾರ ಸೂತ್ರವನ್ನು ಪ್ರಕಟಿಸುವುದಿಲ್ಲ. ದೆಹಲಿಗೆ ಹಿಂತಿರುಗಿದ ಬಳಿಕ ಅಮಿತ್ ಶಾ ಅವರ ಮೂಲಕವೇ ಪರಸ್ಪರ ಮುನಿಸಿಕೊಂಡಿರುವ ರಾಜ್ಯದ ಮುಖಂಡರಿಗೆ ನಿರ್ದೇಶನ ಕೊಡಿಸಿ ಸಮಸ್ಯೆ ಬಗೆಹರಿಸುವ ಪ್ರ ತ್ನ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಬ್ರಿಗೇಡ್‌ನಿಂದ ದೂರವಿರಲು
ಈಶ್ವರಪ್ಪ ಷರತ್ತು?
ತಾವು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ದೂರ ಉಳಿಯಬೇಕು ಎಂಬ ಯಡಿಯೂರಪ್ಪ ಅವರ ಬೇಡಿಕೆಗೆ ಸ್ಪಂದಿಸಲು ರಾಷ್ಟ್ರೀಯ ನಾಯಕರ ಮುಂದೆ ಕೆ.ಎಸ್.ಈಶ್ವರಪ್ಪ ಅವರು ಕೆಲವು ಷರತ್ತುಗಳನ್ನು ಮುಂದಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲಿ ಬದಲಾವಣೆ ಮಾಡಬೇಕು.
ನಿಷ್ಠಾವಂತರು ಮತ್ತು ಮೂಲ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು. ಯಡಿಯೂರಪ್ಪ ಅವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಕೋರ್ ಕಮಿಟಿ ಸಭೆಯಲ್ಲಾಗಲಿ, ಹಿರಿಯ ಮುಖಂಡರೊಂದಿಗಾಗಲಿ ಚರ್ಚಿಸಬೇಕು ಎಂಬ ಬೇಡಿಕೆಯನ್ನು ಮುಂದಿಡಲು ತೀರ್ಮಾನಿಸಿದ್ದಾರೆ.
ಇದರೊಂದಿಗೆ ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರ ವಿರುದ್ಧ ನೀಡಿದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಬೇಕು ಹಾಗೂ ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡಿರುವ ಭಾನುಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುರಾನಾ ಅವರಿಗೆ ಮತ್ತೆ ಅವಕಾಶ ಮಾಡಿಕೊಡಬೇಕು ಎಂಬ ಕೋರಿಕೆಯನ್ನೂ ಮುಂದಿಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.