ನಡುರಾತ್ರಿ ಬಾಗಿಲು ಬಡಿದ ಆಗಂತುಕ!
Team Udayavani, Aug 13, 2019, 3:07 AM IST
ಬೆಂಗಳೂರು: ನಡುರಾತ್ರಿ ಹಲವು ಮನೆಗಳ ಬಾಗಿಲು ಬಡಿದ ಆಗಂತುಕ, ಹಿಡಿಯಲು ಬಂದವರ ಕಡೆಯೇ ಪಿಸ್ತೂಲ್‌ನಿಂದ ಗುಂಡು ಹಾರಿಸಿ ತಪ್ಪಿಸಿಕೊಂಡ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಗೋವಿಂದಶೆಟ್ಟಿ ಪಾಳ್ಯದಲ್ಲಿ ನಡೆದಿದೆ.
ಶನಿವಾರ ತಡರಾತ್ರಿ ಸುಮಾರು 2.10ರ ಸುಮಾರಿಗೆ ಅಪರಿಚಿತ ದುಷ್ಕರ್ಮಿಯ ಈ ಅನಿರೀಕ್ಷಿತ ಕೃತ್ಯಕ್ಕೆ ಲಗುಮಪ್ಪ ಲೇಔಟ್‌ನ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ದುಷ್ಕರ್ಮಿಯ ಗುಂಡೇಟಿನಿಂದ ಸ್ವಲ್ಪದರಲ್ಲಿಯೇ ಬಚಾವಾದ ಸ್ಥಳೀಯ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ದುಷ್ಕರ್ಮಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದು, ಅಷ್ಟರಲ್ಲಾಗಲೇ ಆರೋಪಿ ಪರಾರಿಯಾಗಿದ್ದ.
ಆತ ಬಿಟ್ಟು ಹೋಗಿರುವ ಪಲ್ಸರ್ ಬೈಕನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಘಟನೆ ಕುರಿತು ಗುಂಡೇಟಿನಿಂದ ತಪ್ಪಿಸಿಕೊಂಡ ಆರ್.ಲೋಕೇಶ್ ಎಂಬಾತ ನೀಡಿರುವ ದೂರಿನ ಅನ್ವಯ ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
ದುಷ್ಕರ್ಮಿಯು ಪಿಸ್ತೂಲ್‌ನಿಂದ ಹಾರಿಸಿರುವ ಕಾಟ್ರೇಜ್ ಸ್ಥಳದಲ್ಲಿ ದೊರೆತಿದೆ. ಘಟನಾ ಸ್ಥಳದಲ್ಲಿನ ಸಿಸಿ ಕ್ಯಾಮೆರಾದಲ್ಲಿ ದುಷ್ಕರ್ಮಿಯ ಮುಖಚಹರೆ ಕೂಡ ಅಸ್ಪಷ್ಟವಾಗಿ ದಾಖಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಜಪ್ತಿ ಮಾಡಿಕೊಂಡಿರುವ ಪಲ್ಸರ್ ಬೈಕ್ ನೋಂದಣಿ ಸಂಖ್ಯೆ ಆಧರಿಸಿ ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ನೀಡಿರುವ ಮಾಹಿತಿ ಅನ್ವಯ ಇದುವರೆಗೂ ಆ ಭಾಗದಲ್ಲಿ ಆರೋಪಿ ಒಮ್ಮೆ ಕೂಡ ಕಾಣಿಸಿಕೊಂಡಿರಲಿಲ್ಲ. ಜತೆಗೆ, ಪಾನಮತ್ತನಾಗಿ ಲೇಔಟ್‌ಗೆ ನುಗ್ಗಿದ್ದ ಆತ, ಹಲವರ ಹೆಸರುಗಳನ್ನು ಕರೆದು ಬಾಗಿಲು ಬಡಿದಿದ್ದಾನೆ. ಹೀಗಾಗಿ, ಯಾವ ಉದ್ದೇಶಕ್ಕೆ ಆತ ಬಂದಿದ್ದ, ಕಳವಿಗೆ ಸಂಚು ರೂಪಿಸಿಕೊಂಡು ಆಗಮಿಸಿದ್ದನೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ನಡೆದಿದ್ದೇನು?: ಲಗುಮಪ್ಪ ಲೇಔಟ್‌ನಲ್ಲಿ ಲೋಕೇಶ್, ಶಂಕರ್ ಸೇರಿದಂತೆ ಅವರ ಸಹೋದರರಿಗೆ ಸೇರಿದ 100ಕ್ಕೂ ಅಧಿಕ ಮನೆಗಳನ್ನು ಒಳಗೊಂಡ ವಠಾರಗಳಿವೆ. ಎಲ್ಲ ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಶನಿವಾರ ತಡರಾತ್ರಿ 1.30ರ ಸುಮಾರಿಗೆ ಪಲ್ಸರ್ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿ, ಕೆಲವು ಮನೆಗಳ ಬಾಗಿಲು ಬಡಿದು, ಲತಾ, ಪುರುಷೋತ್ತಮ್ ಇದ್ದಾರಾ? ಎಂದು ಕೇಳಿದ್ದಾನೆ. ಜತೆಗೆ ಕೂಗಾಟ ಕೂಡ ನಡೆಸಿದ್ದಾನೆ. ಇದರಿಂದ ಆತಂಕಗೊಂಡ ಬಾಡಿಗೆದಾರರು ಲೋಕೇಶ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಲೋಕೇಶ್ ಸ್ಥಳಕ್ಕೆ ತೆರಳಿ ಬಾಡಿಗೆದಾರರ ಬಳಿ ಅಪರಿಚಿತನ ಬಗ್ಗೆ ವಿಚಾರಿಸುತ್ತಿರುವಾಗಲೇ ಮತ್ತೂಂದು ಮನೆಯ ಮಹಡಿಯ ಮೆಟ್ಟಿಲುಗಳಿಂದ ದುಷ್ಕರ್ಮಿ ಇಳಿದು ಬರುತ್ತಿದ್ದುದನ್ನು ನೋಡಿದ ಲೋಕೇಶ್ ಹಾಗೂ ಇತರರು ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಕೂಡಲೇ ಕಾಂಪೌಂಡ್ ಹಾರಿದ ದುಷ್ಕರ್ಮಿ ಓಡತೊಡಗಿದ್ದಾನೆ.
ಲೋಕೇಶ್ ಹಾಗೂ ಇತರೆ ಯುವಕರು ಆತನ ಬೆನ್ನುಬಿದ್ದಾಗ ಗಾಣಿಗರ ಬಡವಾಣೆಯ ರಸ್ತೆಯಲ್ಲಿ ನಿಂತು ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ನೇರವಾಗಿ ಲೋಕೇಶ್ ಕಡೆಗೆ ಒಂದು ಗುಂಡು ಹಾರಿಸಿದ್ದಾನೆ. ಲೋಕೇಶ್ ತಪ್ಪಿಸಿಕೊಂಡಿದ್ದಾರೆ. ಗುಂಡಿನ ದಾಳಿ ಕಂಡು ಲೋಕೇಶ್ ಹಾಗೂ ಇತರರು ಹೆದರಿದ್ದಾರೆ. ಕೂಡಲೇ ದುಷ್ಕರ್ಮಿ ಸ್ಥಳದಿಂದ ಚಪ್ಪಲಿ ಕೂಡ ಅಲ್ಲಿಯೇ ಬಿಟ್ಟು ಕತ್ತಲಲ್ಲಿ ಪರಾರಿಯಾಗಿದ್ದಾನೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಸ್ಥಳೀಯರ ನೆರವಿನೊಂದಿಗೆ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಆರೋಪಿಯ ಸುಳಿವು ಸಿಕ್ಕಿಲ್ಲ. ಆತ ಬಿಟ್ಟು ಹೋಗಿರುವ ಪಲ್ಸರ್ ಬೈಕ್ ಜಪ್ತಿಯಾಗಿದೆ ಎಂದು ಹಿರಿಯ ಅಧಿಕಾರಿ ವಿವರಿಸಿದರು.
ಹದಿನೈದು ಜನರ ಕೈ ಬದಲಾಗಿರುವ ಬೈಕ್!: ಜಪ್ತಿಯಾಗಿರುವ ಬೈಕ್ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ ಮೂಲ ಮಾಲೀಕರು ಸೇರಿ 15 ಮಂದಿಯ ಕೈ ಬದಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬೈಕ್ ಸುಳಿವನ್ನೇ ಆಧರಿಸಿ ಕೆಲವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ ಎಂದು ಅಧಿಕಾರಿ ಹೇಳಿದರು.
ಆತ ನನ್ನನ್ನು ಕೊಲ್ಲಲೆಂದೇ ಬಂದಿದ್ದ!: “ರಿಯಲ್ ಎಸ್ಟೇಟ್, ಕ್ಯಾಬ್ ಚಾಲನೆ ಸೇರಿ ಹಲವು ವ್ಯವಹಾರ ಮಾಡಿಕೊಂಡಿರುವ ನಾನು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಹಲವರಿಗೆ ಸಹಾಯ ಮಾಡಿದ್ದೇನೆ. ರಾತ್ರಿ ನಾವು ಬೆನ್ನುಹತ್ತಿದಾಗ ದುಷ್ಕರ್ಮಿ ನನ್ನ ಕಡೆಯೇ ಗುರಿ ಇಟ್ಟು ಗುಂಡು ಹಾರಿಸಿದ್ದು, ಆತ ನನ್ನನ್ನು ಕೊಲ್ಲುವ ಉದ್ದೇಶಕ್ಕೆ ಆಗಮಿಸಿದ್ದ ಎಂಬುದು ಸ್ಪಷ್ಟವಾಗುತ್ತದೆ ಎಂದು ದೂರುದಾರ ಲೋಕೇಶ್ “ಉದಯವಾಣಿ’ಗೆ ತಿಳಿಸಿದರು.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ದುಷ್ಕರ್ಮಿ ಗುಂಡು ಹಾರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ಆರೋಪಿ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
-ಇಶಾ ಪಂತ್, ಆಗ್ನೇಯ ವಿಭಾಗ ಡಿಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.