ಅನಂತಕುಮಾರ್ ಅವಿಸ್ಮರಣೀಯ ನಾಯಕ
Team Udayavani, Nov 13, 2018, 12:00 PM IST
ಸರ್ವ ಸಮ್ಮತ ನಾಯಕರೆಂದು ಕರೆಸಿಕೊಂಡು, ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಪೂರಕವಾಗಿ ನಡೆದು, ರಾಜಕೀಯ ಕ್ಷೇತ್ರದಲ್ಲಿ ಮೇಲ್ಪಂಕ್ತಿಯನ್ನು ಹಾಕಿದ ಅಜಾತಶತ್ರು, ಅವಿಸ್ಮರಣೀಯ ನಾಯಕ ನಮ್ಮ ಕೇಂದ್ರ ಸಚಿವ ಅನಂತಕುಮಾರ್. ಕರ್ನಾಟಕವು ದಕ್ಷಿಣ ಭಾರತದ ಬಿಜೆಪಿ ಹೆಬ್ಟಾಗಿಲು ಎಂದು ಕರೆಸಿಕೊಂಡ ಕ್ಷಣಕ್ಕೆ ಕಾರಣರಾದವರು ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮತ್ತು ಅನಂತಕುಮಾರ್.
ಈ ಅಪ್ರತಿಮ ನಾಯಕರಿಬ್ಬರೂ ಬಿಜೆಪಿ ರಥದ ಎರಡು ಚಕ್ರಗಳಾಗಿ ಸ್ವಾರ್ಥರಹಿತ ಸೇವೆ ಸಲ್ಲಿಸಿದ ಪರಿಣಾಮ ರಾಜ್ಯದಲ್ಲಿ, ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿದೆ. ಅಷ್ಟೇ ಅಲ್ಲದೆ, ಅನಂತಕುಮಾರ್ ಅವರ ಗರಡಿಯಲ್ಲಿ ಅದೆಷ್ಟೋ ನಾಯಕರುಗಳು, ಕಾರ್ಯಕರ್ತರು ರೂಪುಗೊಂಡಿದ್ದಾರೆ. ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರರಾದರೆ, ಅನಂತಕುಮಾರ್ ಒಬ್ಬ ಸಾಟಿಯಿಲ್ಲದ ತಂತ್ರಗಾರರಾಗಿದ್ದರು.
ಕಾಶ್ಮೀರದಲ್ಲಿ ನಡೆಸಿದ ಸಿಂಧೂ ದರ್ಶನ, ವಂದೇ ಮಾತರಂ ಮುಂತಾದ ಅಭಿಯಾನ, ಬಡವರಿಗೆ ವಾಲ್ಮೀಕಿ ಮತ್ತು ಅಂಬೇಡ್ಕರ್ ಮನೆಗಳು, ಬೇವು ಮಿಶ್ರಿತ ಗೊಬ್ಬರ ಮತ್ತು ಜನೌಷಧ ಕೇಂದ್ರಗಳು ನಂತಕುಮಾರ್ ಅವರ ಪ್ರಮುಖ ಯೋಜನೆಗಳು. ಜತೆಗೆ ಬೆಂಗಳೂರಿಗೆ ಕುಡಿಯುವ ನೀರಿನ ಯೋಜನೆ, ಮೆಟ್ರೋ ರೈಲು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ರಾಜಧಾನಿ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ,
ಕಾರ್ಯಕ್ರಮಗಳಿಗೆ ಅನಂತಕುಮಾರ್ ಅವರು ಪಟ್ಟ ಶ್ರಮ, ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಕಾವೇರಿ ಮತ್ತು ಕೃಷ್ಣಾ ನದಿ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಕುಳಿತು ಕರ್ನಾಟಕದ ಪರವಾಗಿ ಹೋರಾಡಿ, ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ ಕೀರ್ತಿ ಅನಂತಕುಮಾರ್ ಅವರಿಗೆ ಸಲ್ಲುತ್ತದೆ.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವರಾಗಿದ್ದಾಗಲೂ ಎಲ್ಲಾ ಕಾರ್ಯಕರ್ತರ ಜತೆ ಸರಳವಾಗಿ ಬೆರೆಯುವಷ್ಟು ಸರಳ ಹಾಗೂ ಸಜ್ಜನಿಕೆಯ ಸ್ವಭಾವ ಅನಂತ್ ಅವರದ್ದಾಗಿತ್ತು. ಎಷ್ಟೇ ಎತ್ತರದ ಸ್ಥಾನದಲ್ಲಿದ್ದರೂ ಅತ್ಯಂತ ಸಲುಗೆಯ ಒಡನಾಟದಿಂದ ಅವರು ಎಲ್ಲರಿಗೂ ಬೇಕಾದವರಾಗಿದ್ದರು.
ಜತೆಗೆ ಅಷ್ಟೇ ಪ್ರಬುದ್ಧವಾದ ರಾಜಕೀಯ ಚಿಂತನೆಗಳು, ತೂಕದ ವ್ಯಕ್ತಿತ್ವ ಹೊಂದಿದ್ದ ಅವರು, ಕರ್ನಾಟಕದ 224 ಧಾನಸಭೆ ಕ್ಷೇತ್ರಗಳ ಕಾರ್ಯಕರ್ತರ ಜತೆ ಸಂಪರ್ಕವನ್ನು ಹೊಂದಿದ್ದರು. ವಿಶೇಷವೆಂದರೆ ಸಾವಿರಾರು ಕಾರ್ಯಕರ್ತರ ಹೆಸರು ಹೇಳಿ ಕರೆಯುವಷ್ಟು ಆತ್ಮೀಯತೆ, ಸ್ಮರಣ ಶಕ್ತಿಯಿಂದಾಗಿಯೇ ಅನಂತಕುಮಾರ್ ಇಂದಿಗೂ ಕಾರ್ಯಕರ್ತರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.
ರಾಜ್ಯ ಹಾಗೂ ದೇಶದ ಅಂಕಿ-ಅಂಶಗಳು, ಘಟಿಸಿ ಹೋದ ಘಟನೆಗಳ ವಿವರ ಹಾಗೂ ಪಡೆದ ಮತಗಳ ಲೆಕ್ಕಾಚಾರವನ್ನು ಕಂಪ್ಯೂಟರಿನಂತೆ, ಕೇಳಿದ ಕೂಡಲೆ ಪ್ರಸ್ತುತ ಪಡಿಸುತ್ತಿದ್ದ ಅನಂತಕುಮಾರ್, ಎದುರಿದ್ದವರ ಮನಸ್ಥಿತಿ ಅರಿತು, ಅವರನ್ನು ಎದುರಿಸಲು ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಕ್ಷಣಾರ್ಧದಲ್ಲೇ ಮಾಡಿಕೊಳ್ಳುವಷ್ಟು ಚಾಕಚಕ್ಯತೆ ಅವರಲ್ಲಿತ್ತು.
ವಿರೋಧಿಗಳು ಮತ್ತು ಪ್ರತಿಪಕ್ಷದವರು ನೀಡುವ ಒಂದೊಂದು ಹೇಳಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅದರಿಂದ ಪಕ್ಷಕ್ಕೆ ಲಾಭಕ್ಕೆ ಬಳಸಿಕೊಳ್ಳುವುದು ಹೇಗೆ ಎಂಬ ಕಲೆ ಅನಂತಕುಮಾರ್ ಅವರಿಗೆ ಕರಗತವಾಗಿತ್ತು. ಯಾರಾದರೂ ತಪ್ಪು ಮಾಡಿದರೆ, ಅವರನ್ನು ಎಚ್ಚರಿಸಿ ತಿದ್ದುವ ಕಾರ್ಯವನ್ನು ಅನಂತ್, ನಾಲ್ಕು ಗೋಡೆ ನಡುವೆಯೇ ಮಾಡಿ ಮುಗಿಸುತ್ತಿದ್ದರು.
ಅನಾರೋಗ್ಯದಿಂದ ಬಳಲುವಂತೆ ಕಂಡಿದ್ದರು: 2018ರ ಜುಲೈ 24ರಂದು ದೆಹಲಿಯಲ್ಲಿ ನಾನು ಅವರನ್ನು ಕೊನೆಯ ಬಾರಿ ಭೇಟಿ ಮಾಡಿದ್ದೆ. ಅನಂತಕುಮಾರ್ ಅವರ ಬಳಿ ನಮ್ಮ ಜಿಲ್ಲೆ ಮತ್ತು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದೆ.
ಅಂದು ಅವರು ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡಿಸಿದ್ದರು. ನಂತರ ಒಟ್ಟಿಗೆ ಊಟ ಮಾಡಿದ್ದೆವು. ಆ ಸಂದರ್ಭ ಮೇಲ್ನೋಟಕ್ಕೆ ಅನಾರೋಗ್ಯದಿಂದ ಬಳಲುವಂತೆ ಕಂಡರು. ಆರೋಗ್ಯ ಹೇಗಿದೆ ಸರ್? ಎಂದು ಪ್ರಶ್ನಿಸಿದಾಗ ದಿಟ್ಟಿಸಿ ನೋಡಿದ್ದರು. ಅವರ ಮುಖದಲ್ಲಿರುವ ಗಂಭೀರತೆ ಕಂಡು ನಾನು ಮತ್ತೆ ಪ್ರಶ್ನಿಸುವ ಧೈರ್ಯ ಮಾಡಲಿಲ್ಲ.
* ಸುನಿಲ್ ಕುಮಾರ್, ವಿಧಾನ ಸಭೆ ಪ್ರತಿಪಕ್ಷದ ಮುಖ್ಯ ಸಚೇತಕರು ಹಾಗೂ ಕಾರ್ಕಳ ಕ್ಷೆತ್ರದ ಶಾಸಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.