ಜಾಹೀರಾತು ವಿರುದ್ಧ ಆ್ಯಪ್ ಸಮರ
Team Udayavani, Aug 9, 2018, 12:17 PM IST
ಬೆಂಗಳೂರು: ನಗರದ ಖಾಸಗಿ ಆಸ್ತಿಗಳಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳ ಪತ್ತೆಗೆ ವಿಶೇಷ ಆ್ಯಪ್ ಅಭಿವೃದ್ಧಿಪಡಿಸುತ್ತಿರುವ ಬಿಬಿಎಂಪಿ, ಮತ್ತೂಂದೆಡೆ ಅಕ್ರಮ ಪತ್ತೆ ಹಚ್ಚುವಲ್ಲಿ ವಿಫಲವಾಗಿರುವ ಕಂದಾಯ ವಿಭಾಗದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ತೀರ್ಮಾನಿಸಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ವರ್ಷದ ಮಟ್ಟಿಗೆ ಎಲ್ಲ ರೀತಿಯ ಜಾಹೀರಾತು ಪ್ರದರ್ಶನ ನಿಷೇಧಿಸಿರುವ ಪಾಲಿಕೆ, ಇದೀಗ ಅನಧಿಕೃತ ಜಾಹೀರಾತು ಫಲಕಗಳ ಸಾಧನಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸಿದ್ಧತೆ ನಡೆಸಿದೆ. ಆ ಹಿನ್ನೆಲೆಯಲ್ಲಿ ಪ್ರತಿಯೊಂದು ವಾರ್ಡ್‌ನಲ್ಲಿರುವ ಜಾಹೀರಾತು ಫಲಕಗಳ ನಿಖರ ಮಾಹಿತಿ ಪಡೆಯಲು ಪಾಲಿಕೆ ಅಧಿಕಾರಿಗಳಿಗಾಗಿಯೇ ವಿಶೇಷ ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಆ್ಯಪ್‌ನಿಂದ ಪಾಲಿಕೆಯಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳ ಮಾಹಿತಿ ಲಭ್ಯವಾಗಲಿದ್ದು, ಜಾಹೀರಾತು ಫಲಕ ಅಳವಡಿಸಿರುವ ಆಸ್ತಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಸಹಾಯಕವಾಗಲಿದೆ.
ಆ್ಯಪ್ ಕಾರ್ಯಾಚರಣೆ: ಪಾಲಿಕೆಯ ಎಲ್ಲಾ ಸಹಾಯಕ ಕಂದಾಯ ಅಧಿಕಾರಿಗಳು ಕಡ್ಡಾಯವಾಗಿ (ಎಆರ್‌ಒ) ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ತಮ್ಮ ವ್ಯಾಪ್ತಿಗೆ ಬರುವ ಪ್ರತಿಯೊಂದು ಜಾಹೀರಾತು ಫಲಕಗಳನ್ನು ಹತ್ತಿರದಿಂದ ಫೋಟೋ ತೆಗೆದು ಸ್ಥಳದ ಪೂರ್ಣ ಮಾಹಿತಿ ಆ್ಯಪ್‌ಗೆ ಅಪ್‌ಲೋಡ್ ಮಾಡಬೇಕು. ಫಲಕವಿರುವ ಖಾಸಗಿ ಕಟ್ಟಡದ ಹತ್ತಿರ ಹೋಗಿ “ಲೊಕೇಷನ್’ ಅಪ್‌ಲೋಡ್ ಮಾಡಬೇಕು. ಇದರೊಂದಿಗೆ ಆ ಜಾಗದ ಮಾಲೀಕರ ಹೆಸರು ಹಾಗೂ ಆಸ್ತಿಯ ಪಿಐಡಿ ಸಂಖ್ಯೆಯ ಮಾಹಿತಿ ನೀಡಬೇಕಾಗುತ್ತದೆ.
ಖಾಸಗಿ ಜಾಗದ ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಬಿಬಿಎಂಪಿ ಆಯುಕ್ತರು 15 ದಿನಗಳ ಕಾಲಾವಕಾಶ ನೀಡಿದ್ದು ಆ ವೇಳೆಗೆ ನಗರದಲ್ಲಿರುವ ಎಲ್ಲ ಖಾಸಗಿ ಜಾಗಗಳಲ್ಲಿರುವ ಜಾಹೀರಾತು ಫಲಕಗಳ ಕುರಿತು ಪಾಲಿಕೆಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ನಿಗದಿತ ಅವಧಿಯಲ್ಲಿ ಖಾಸಗಿಯವರು ಬುಡಸಮೇತ ಜಾಹೀರಾತು ಫಲಕ ಸಾಧನಗಳನ್ನು (ಸ್ಟ್ರಕ್ಚರ್) ತೆರವುಗೊಳಿಸದಿದ್ದರೆ, ಫಲಕವಿರುವ ಆಸ್ತಿಯ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಮಾಹಿತಿ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ, ಪಾಲಿಕೆಯ ಜಾಹೀರಾತು ವಿಭಾಗದ ವಿಶೇಷ ಆಯುಕ್ತರಾಗಿದ್ದ ರಶ್ಮಿ ಮಹೇಶ್ ಅವರು, 2016-17ನೇ ಸಾಲಿನಲ್ಲಿ ಫಲಕಗಳ ಸರ್ವೇಗೆ ಆದೇಶಿಸಿದ್ದರು. ಅದರಂತೆ ಪಾಲಿಕೆಯ ಅಧಿಕಾರಿಗಳು ಪ್ರತಿ ವಾರ್ಡ್‌ನ ಪ್ರತಿ ರಸ್ತೆಯಲ್ಲಿರುವ ಜಾಹೀರಾತು ಫಲಕಗಳ ಮಾಹಿತಿಯನ್ನು ವಿಡಿಯೋ ಚಿತ್ರೀಕರಣ ಸಮೇತವಾಗಿ ಸಂಗ್ರಹಿಸಿದ್ದರು. ಆವೇಳೆ ಪಾಲಿಕೆಯಲ್ಲಿ 10 ಸಾವಿರಕ್ಕೂ ಹೆಚ್ಚಿನ ಅನಧಿಕೃತ ಜಾಹೀರಾತು ಫಲಕಗಳಿರುವುದು ಕಂಡುಬಂದಿತ್ತು.
ಅಧಿಕಾರಿಗಳ ಲೋಪ: ಕಂದಾಯ ವಿಭಾಗದ ಅಧಿಕಾರಿಗಳು ಪ್ರತಿವರ್ಷ ಆಸ್ತಿ ತೆರಿಗೆ ನಿಗದಿಪಡಿಸುವ ವೇಳೆ ಕಟ್ಟಡ ಅಥವಾ ನಿವೇಶನ ಸಂಪೂರ್ಣವಾಗಿ ಪರಿಶೀಲಿಸಿ, ವಿಸ್ತೀರ್ಣ, ನಿಯಮ ಉಲ್ಲಂಘನೆ, ಆಸ್ತಿಯ ಬಳಕೆಯ ಉದ್ದೇಶ ಸೇರಿದಂತೆ ಇತರೆ ವಿಷಯಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕಿತ್ತು. ಆದರೆ, ಅಧಿಕಾರಿಗಳು ಈ ಯಾವುದೇ ಕೆಲಸ ಮಾಡಿಲ್ಲ. ಇದರಿಂದಾಗಿ ಅಕ್ರಮ ಜಾಹೀರಾತು ಫಲಕಗಳು ಹೆಚ್ಚಾಗಿವೆ. ಜತೆಗೆ ಪಾಲಿಕೆಗೆ ನಷ್ಟವೂ ಆಗಿದೆ. ಜತೆಗೆ ನಗರದ ಸೌಂದರ್ಯಕ್ಕೂ ಧಕ್ಕೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಕ್ರಮಗಳ ತಡೆಗೆ ವಿಶೇಷ ಆ್ಯಪ್ ಸಿದ್ಧವಾಗುತ್ತಿದೆ.
ಅಧಿಕಾರಿಗಳ ವಿರುದ್ಧ ಕ್ರಮ ಪಾಲಿಕೆಯ ಅನುಮತಿ ಪಡೆಯದೆ ನಗರದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿದರೂ ಯಾವುದೇ ಕ್ರಮಕ್ಕೆ ಮುಂದಾಗದ ಹಾಗೂ ಅಕ್ರಮದ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಅಕ್ರಮದಲ್ಲಿ ಶಾಮೀಲಾದ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಬಿಬಿಎಂಪಿ ಆಯುಕ್ತರು ತೀರ್ಮಾನಿಸಿದ್ದಾರೆ.
ಪಾಲಿಕೆಯಿಂದ ಅಭಿವೃದ್ಧಿಪಡಿಸುತ್ತಿರುವ ಆ್ಯಪ್‌ಗೆ ಎಲ್ಲ ಸಹಾಯಕ ಕಂದಾಯಾಧಿಕಾರಿಗಳು ತಮ್ಮ ವಾರ್ಡ್‌ನ ಅನಧಿಕೃತ ಫಲಕಗಳ ಮಾಹಿತಿ ಅಪ್‌ಲೋಡ್ ಮಾಡಬೇಕು.ಆ ಫಲಕಗಳ ವಿರುದ್ಧ ಕ್ರಮಕೈಗೊಳ್ಳದಿರಲು
ಕಾರಣವನ್ನು ತಿಳಿಸಬೇಕು. ಅಧಿಕಾರಿಗಳ ಕಡೆಯಿಂದ ಲೋಪವಾಗಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಖಾಸಗಿ ಆಸ್ತಿಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಕಾಲಾವಕಾಶ
ನೀಡಲಾಗಿದೆ. ಪಾಲಿಕೆಯಿಂದಲೂ ಜಾಹೀರಾತು ಫಲಕಗಳ ಪತ್ತೆಗಾಗಿ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಫಲಕಗಳ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತರು
ವೆಂ. ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.