ಮೆಟ್ರೋ ನಿಲ್ದಾಣದಾಚೆ ಮಹಿಳೆಯರು ಸುರಕ್ಷಿತರೇ?


Team Udayavani, Nov 12, 2018, 11:56 AM IST

metro5.jpg

“ನಮ್ಮ ಮೆಟ್ರೋ’ ಆರಂಭವಾದ ಬಳಿಕ ರಾಜಧಾನಿಯಲ್ಲಿ ಪ್ರಯಾಣಿಕರಿಗೆ ಒಂದು ಸ್ಥಳದಿಂದ ಇನ್ನೊಂದೆಡೆ ತಲುಪುವುದು ಸುಲಭವಾಗಿದೆ. ಅದರಲ್ಲೂ  ಮಧ್ಯರಾತ್ರಿವರೆಗೆ ಮೆಟ್ರೋ ರೈಲು ಸಂಚಾರ ಇರುವುದರಿಂದ ಸಾಕಷ್ಟು ಪ್ರಯಾಣಿಕರು ಅದರ ಅನುಕೂಲವಾಗಿದೆ. ಆದರೆ, ರಾತ್ರಿ 9 ಗಂಟೆ ನಂತರ ಮೆಟ್ರೋ ರೈಲಿನಿಂದ ಇಳಿದು ತಮ್ಮ ಸ್ಥಳ ತಲುಪಲು ಹರಸಾಹಸ ಪಡುವಂತಾಗಿದೆ. ಅದರಲ್ಲೂ ಮಹಿಳಾ ಪ್ರಯಾಣಿಕರು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ “ಉದಯವಾಣಿ’ ರಿಯಾಲಿಟಿ ಚೆಕ್‌ ನಡೆಸಿದಾಗ ಕಂಡ ಸಂಗತಿಗಳು ನಿಮ್ಮ ಮುಂದೆ.

ನಮ್ಮ ಮೆಟ್ರೋ ಶುರುವಾದ ಮೇಲೆ ನಗರದ ನಾಗರಿಕರ ಪ್ರಯಾಣಕ್ಕೆ ವೇಗ ಸಿಕ್ಕಿದೆ. ನೌಕರ ವರ್ಗಕ್ಕಂತೂ ತಮ್ಮ ಕಚೇರಿಗಳನ್ನು ತಲುಪುವುದು ಸಲಭವಾಗಿದೆ. ಮೆಟ್ರೋ ವ್ಯವಸ್ಥೆ ಮಧ್ಯರಾತ್ರಿವರೆಗೂ ಇರುವ ಕಾರಣ ಸ್ವಲ್ಪ ಸಮಯವಾದರೂ ಪರವಾಗಿಲ್ಲ ಮನೆ ಸೇರಬಹುದು ಎಂಬ ನೆಮ್ಮದಿ ಪ್ರಯಾಣಿಕರದ್ದು, ಆದರೆ, ಈ ಪ್ರಯಾಣ ಯುವತಿಯರಿಗೆ, ಮಹಿಳೆಯರಿಗೆ ಇದು ಅನುಕೂಲವಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. 

ತಡರಾತ್ರಿವರೆಗೆ ಮೆಟ್ರೋ ರೈಲು ಇರುವುದರಿಂದ ಬಹಳಷ್ಟು ಮಂದಿ ಅದನ್ನು ಅವಲಂಬಿಸಿದ್ದಾರೆ. ಆದರೆ, ರಾತ್ರಿ 9 ಗಂಟೆ ನಂತರ ಮೆಟ್ರೋ ನಿಲ್ದಾಣಗಳಿಂದ ನಗರದ ಇತರೆ ಭಾಗಗಳಿಗೆ ಸಂಪರ್ಕ ಒದಗಿಸುವ ಬಸ್‌ಗಳ ಸಂಚಾರ ವಿರಾಳವಾಗಿದೆ. ಇದರಿಂದ ಮೆಟ್ರೋ ನಿಲ್ದಾಣದ ಸುತ್ತಮುತ್ತ ಇರುವ ಕೆಲವು ಪ್ರದೇಶಗಳಿಗೆ ನಡೆದುಕೊಂಡೇ ಹೋಗುವ ಪರಿಸ್ಥಿತಿ ಇದೆ. ಅಲ್ಲದೆ ಕೆಲ ಆಟೋ ಚಾಲಕರಿಂದ ದುಪ್ಪಟ್ಟು ಹಣ ವಸೂಲಿ, ಅಸಭ್ಯ ವರ್ತನೆ, ಕಿಡಿಗೇಡಿಗಳಿಂದ ತೊಂದರೆ ಸೇರಿದಂತೆ ಮೆಟ್ರೋ ನಿಲ್ದಾಣದ ಆಚೆಗೆ ಪ್ರಯಾಣಿಕರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ.

ಬಿಎಂಟಿಸಿ ಸಂಪರ್ಕ ಒದಗಿಸಿ: ಲಾಲ್‌ಬಾಗ್‌, ಜಯನಗರ, ನ್ಯಾಷನಲ್‌ ಕಾಲೇಜು, ಯಲಚೇನಹಳ್ಳಿ, ಬನಶಂಕರಿ, ಸಿಟಿ ರೈಲ್ವೆ ನಿಲ್ದಾಣ, ಮಾಗಡಿ ರಸ್ತೆ, ಮಹಾಲಕ್ಷ್ಮೀ ಲೇಔಟ್‌, ಪೀಣ್ಯ ಸೇರಿದಂತೆ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿವೇಳೆ ಸುತ್ತಮುತ್ತ ಪ್ರದೇಶಗಳಿಗೆ ಸಂಚಾರಿಸಲು ಬಸ್‌ಗಳ ಸಂಚಾರ ವಿರಳವಾಗಿರುವುದರಿಂದ ಖಾಸಗಿ ಕ್ಯಾಬ್‌, ಆಟೋರಿಕ್ಷಾಗಳನ್ನು ಅವಲಂಬಿಸಬೇಕಾಗುತ್ತದೆ. ಆದರೆ, ಆಟೋ ಚಾಲಕರು ದುಬಾರಿ ದರ ಕೇಳುವುದರಿಂದ ಜನ ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. ಇದರ ಮಧ್ಯೆ ಮಹಿಳೆಯರು ಸುರಕ್ಷಿತವಾಗಿ ಮನೆ ತಲುಪಿದರೆ ಸಾಕಪ್ಪಾ ಎಂದು ಆತಂಕದಲ್ಲೇ ಸಾಗುವಂತಾಗಿದೆ.

ನ್ಯಾಷನಲ್‌ ಕಾಲೇಜು ಮೆಟ್ರೋ ನಿಲ್ದಾಣದಿಂದ ಹತ್ತಿರದ ಪ್ರದೇಶಗಳಿಗೆ ಹೋಗಬೇಕೆಂದರೆ ರಾಮಕೃಷ್ಣ ಆಶ್ರಮದವರೆಗೂ ನಡೆದುಕೊಂಡು ಹೋಗಿ ಬಸ್‌ಗಳ ಸಂಪರ್ಕ ಪಡೆದುಕೊಳ್ಳಬೇಕು ಅಥವಾ ಆಟೋಗಳಲ್ಲಿ ಸಂಚರಿಸಬೇಕು. ಸೌಂತ್‌ಎಂಡ್‌ ಮೆಟ್ರೋ ನಿಲ್ದಾಣ, ಕೆ.ಆರ್‌.ಮಾರುಕಟ್ಟೆ , ಚಿಕ್ಕಪೇಟೆ  ನಿಲ್ದಾಣ, ಸಿಟಿರೈಲ್ವೆ , ಸ್ವಾಮಿ ವಿವೇಕಾನಂದ ನಿಲ್ದಾಣ, ಕಬ್ಬನ್‌ ಪಾರ್ಕ್‌ ನಿಲ್ದಾಣ, ಸರ್‌ ಎಂ ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಗಳಿಂದ ನಗರದ ಸುತ್ತಮುತ್ತಲಿನ ಪ್ರದೇಶಗಳಿಗೆ ರಾತ್ರಿ ವೇಳೆ ತೆರಳಬೇಕೆಂದರೆ ಬಸ್‌ ಸೌಲಭ್ಯ ದುರ್ಲಭ.

ನಿಲ್ದಾಣಕ್ಕೂ, ಬಸ್‌ ನಿಲುಗಡೆಗೂ ದೂರ: ಬಹುತೇಕ ಎಲ್ಲ ಮೆಟ್ರೋ ನಿಲ್ದಾಣಗಳು ಪ್ರಮುಖ ರಸ್ತೆಗಳಿಗೆ ಹೊಂದಿಕೊಂಡಿದ್ದು, ಬಸ್‌ ನಿಲ್ದಾಣಗಳ ಆಸುಪಾಸಿನಲ್ಲಿಯೇ ಇವೆ. ಆದರೆ, ಬಸ್‌ ನಿಲ್ದಾಣಗಳಲ್ಲಿ ಬಸ್‌ಗಳು ನಿಲ್ಲುವುದಿಲ್ಲ. ನಿಲ್ದಾಣವೇ ಒಂದು ಕಡೆಯಾದರೆ, ಬಸ್‌ ನಿಲ್ಲಿಸುವುದೇ ಒಂದು ಕಡೆ ಎನ್ನುವ ಸ್ಥಿತಿ ಅನೇಕ ಕಡೆ ಇದೆ. ನ್ಯಾಷನಲ್‌ ಕಾಲೇಜಿಂದ ಎನ್‌.ಆರ್‌ ಕಾಲೋನಿ, ಯಡಿಯೂರು, ಬನಶಂಕರಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಹೋಗುವ ಬಸ್‌ಗಳು ಬಸ್‌ ನಿಲ್ದಾಣ ಬಿಟ್ಟು ಸಿಗ್ನಲ್‌ ಬಳಿ ಹೋಗಿ ನಿಲ್ಲುತ್ತವೆ.

ಪೀಣ್ಯ ಮತ್ತು ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಇರುವ ಬಸ್‌ ನಿಲ್ದಾಣದಲ್ಲಿಯೂ ಇದೇ ಪರಿಸ್ಥಿತಿ ಇದೆ. ಬನಶಂಕರಿ ಬಸ್‌ ನಿಲ್ದಾಣಕ್ಕೆ ವಿವಿಧ ಭಾಗಗಳಿಂದ ಬಸ್‌ಗಳು ಆಗಮಿಸಿ ವಿವಿಧ ಕಡೆಗಳಲ್ಲಿ ತೆರಳುತ್ತವೆ. ಬಸ್‌ ಸಂಚಾರ ವ್ಯವಸ್ಥೆ ಕ್ರಮಬದ್ಧ ರೀತಿಯಲ್ಲಿ ಇರದಿರುವುದರಿಂದ ಬನಶಂಕರಿ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ಹೊರಬಂದ ಬಳಿಕ ಯಾವ ಕಡೆ ಹೋಗಬೇಕೆಂದು ಪರದಾಡುವುದುಂಟು.

ಆಟೋ ಚಾಲಕರಿಂದ ಸಮಸ್ಯೆ: ಆಟೋ ಚಾಲಕರು ಕನಿಷ್ಠ ದರಕ್ಕಿಂತ ಹೆಚ್ಚು ಬಾಡಿಗೆ ನೀಡಿದರೆ ಬರುವಂಥ ಸ್ಥಿತಿಯಿದೆ. ಹೆಚ್ಚಿನ ಬಾಡಿಗೆ ಸಿಗುವ ಪ್ರದೇಶಗಳು ದೂರವಿದ್ದರೆ ಅಲ್ಲಿಗೂ ಅವರು ಹೋಗುವುದಿಲ್ಲ. ಪ್ರಯಾಣಿಕರು ಮೃದುಸ್ವಭಾವದವರಾದರೆ, ಮಳೆ ಬಂದರೆ, ಬಸ್‌ನಿಲ್ದಾಣ ದೂರವಿದ್ದರೆ, ಮೆಟ್ರೋ ಕೊನೆ ನಿಲ್ದಾಣಗಳಲ್ಲಿ ಆಟೋದವರು ದುಪಟ್ಟು ವಸೂಲಿ ಮಾಡುವ ಪರಿಪಾಟವಿದೆ. ಮೆಟ್ರೋದಿಂದ ಹೊರಬಂದ ಪ್ರಯಾಣಿಕರು ಮುಂದಿನ ಸುರಕ್ಷತೆ ಬಗ್ಗೆ ಕ್ರಮ ವಹಿಸಬೇಕು ಎನ್ನುತ್ತಾರೆ ಕಾರ್ಪೋರೇಟ್‌ ಉದ್ಯೋಗಿ ನಿಶಾ.

ಅಲ್ಲದೆ, ರಾತ್ರಿ ವೇಳೆ ಮಹಿಳೆಯರು ಮೆಟ್ರೋ ಇಳಿದು ಹೊರ ಬಂದ ನಂತರ ತಮ್ಮ ಆಟೋಗಳಿಗೆ ಬರಬೇಕೆಂದು ಒತ್ತಾಯ ಮಾಡುವ ಆಟೋ ಚಾಲಕರಿಂದ ಹಲವು ಮಂದಿ ಕಿರಿಕಿರಿ ಅನುಭವಿಸಿದ್ದಾರೆ. ಪೀಣ್ಯ, ದಾಸರಹಳ್ಳಿ, ಯಲಚೇನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿರುವ ಆಟೋ ಚಾಲಕರು ನಮ್ಮದೇ ಆಟೋಗಳಿಗೆ ಬರಬೇಕೆಂದು ಮಹಿಳೆಯರ ಕೈ ಹಿಡಿದು ಎಳೆದಿರುವ ಘಟನೆಗಳು ನಡೆದಿವೆ.

ರಸ್ತೆ ದೀಪಗಳಿಲ್ಲ: ಲಾಲ್‌ಬಾಗ್‌, ವಿಧಾನಸೌಧ, ಸಿಟಿ ರೈಲ್ವೆ ನಿಲ್ದಾಣ ಮೆಟ್ರೋ ನಿಲ್ದಾಣ, ದೀಪಾಂಜಲಿನಗರ, ಜಯಪ್ರಕಾಶನಗರ ಮೆಟ್ರೋ ನಿಲ್ದಾಣಗಳಲ್ಲಿ ಸ್ವಲ್ಪ ದೂರದವರೆಗೂ ಮಾತ್ರವೇ ವಿದ್ಯುತ್‌ ದೀಪಗಳಿವೆ. ಅಲ್ಲಿಂದ ಸಾಕಷ್ಟು ದೂರದವರೆಗೂ ರಸ್ತೆ ದೀಪಗಳಿಲ್ಲ. ಕತ್ತಲಲ್ಲಿಯೇ ನಡೆಯಬೇಕಾಗುತ್ತದೆ. ಶ್ರೀರಾಂಪುರ, ಕಬ್ಬನ್‌ ಪಾರ್ಕ್‌, ಸರ್‌.ಎಂ.ವಿಶ್ವೇಶ್ವರಯ್ಯ ಸೆಂಟ್ರಲ್‌ ಕಾಲೇಜು, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಪೀಣ್ಯ ಇಂಡಸ್ಟ್ರಿ, ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಮಂದ ಬೆಳಕಿನ ರಸ್ತೆ ದೀಪಗಳಿದ್ದರೂ ಅವು ಪ್ರಯೋಜನಕ್ಕೆ ಬಾರದು.

ಕಿಡಿಗೇಡಿಗಳಿಂದ ತೊಂದರೆ: ರಾತ್ರಿ ವೇಳೆ ಮೈಸೂರು ರಸ್ತೆ,  ಸಿಟಿ ರೈಲು ನಿಲ್ದಾಣ, ಟ್ರಿನಿಟಿ, ಬನಶಂಕರಿ, ಯಲಚೇನಹಳ್ಳಿ, ನಾಗಸಂದ್ರ, ಪೀಣ್ಯ ಮೆಟ್ರೋ ನಿಲ್ದಾಣಗಳಲ್ಲಿ ಒಬ್ಬಂಟಿ ಮಹಿಳಾ ಪ್ರಯಾಣಿಕರಿಗೆ ಅಪಾಯ. ವಾರಾಂತ್ಯದಲ್ಲಿ ಈ ನಿಲ್ದಾಣಗಳಲ್ಲಿ ಕಿಡಿಗೇಡಿಗಳು ಹಾಗೂ ದುಷ್ಕರ್ಮಿಗಳಿಂದ ತೊಂದರೆಗೆ ಸಿಲುಕಿರುವುದಾಗಿ ಸಾಕಷ್ಟು ಮಹಿಳೆಯರು ಹೇಳುತ್ತಾರೆ. ವಾರದ ದಿನಗಳಿಗಿಂತ ವಾರಾಂತ್ಯದಲ್ಲಿ ಬಸ್‌ ಸಂಪರ್ಕವಿಲ್ಲದೆ ಹಾಗೂ ಆಟೋ ಮತ್ತು ಕ್ಯಾಬ್‌ಗಳ ಸಂಚಾರ ಕಡಿಮೆ ಇರುತ್ತವೆ. ಹೀಗಾಗಿ ಮಹಿಳೆಯರು ಕಿಡಿಗೇಡಿಗಳಿಂದ ಹಲವು ಸಮಸ್ಯೆ ಎದುರಿಸುವಂತಾಗಿದೆ.

* ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಇರುವ ಪ್ರದೇಶಗಳಿಗೆ ಬಿಎಂಟಿಸಿ ಸೌಲಭ್ಯ.
* ಮೆಟ್ರೋ ಸಂಚಾರ ಇರುವವರೆಗೂ ಮೆಟ್ರೋ ನಿಲ್ದಾಣಗಳಲ್ಲಿ ಮಹಿಳಾ ಸುರಕ್ಷತೆಗೆ ಆದ್ಯತೆ.
* ಸ್ವಾಮಿ ವಿವೇಕಾನಂದ ನಿಲ್ದಾಣದಲ್ಲಿ  ಬೈಕ್‌ ವ್ಹೀಲಿಂಗ್‌ ಮಾಡುವವರಿಂದ ಕಿರಿಕಿರಿ.
* ನ್ಯಾಷನಲ್‌ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಕಿಡಿಗೇಡಿಗಳಿಂದ ಆತಂಕ.
* ರಾತ್ರಿ 9 ರ ನಂತರ ಕೆಲ ಆಟೋಚಾಲಕರಿಂದ ದುಪ್ಪಟ್ಟು ಹಣ ವಸೂಲಿ.
* ನಿಲ್ದಾಣಗಳ ಹೊರಗೆ ಸಿಸಿಟಿವಿ ಹಾಗೂ ಬೀದಿದೀಪಗಳ ಅಳವಡಿಕೆ ಅತ್ಯಗತ್ಯ.

ನ್ಯಾಷನಲ್‌ ಕಾಲೇಜು ಮೆಟ್ರೋ ಆಚೆಗಿಲ್ಲ ಬೀದಿದೀಪ: ಬಸವನಗುಡಿ ನ್ಯಾಷನಲ್‌ ಕಾಲೇಜು ಮೆಟ್ರೋ ನಿಲ್ದಾಣದಿಂದ ರಾತ್ರಿ ವೇಳೆ ಸಜ್ಜನ್‌ರಾವ್‌ ವೃತ್ತದ ಸುತ್ತಮುತ್ತ ಪ್ರದೇಶಗಳು,  ಕೆಂಪೇಗೌಡನಗರ, ಗುಟ್ಟಹಳ್ಳಿ, ಗಣೇಶ ಭವನ, ಹನುಮಂತನಗರ, ಶ್ರೀನಗರ, ನಿರ್ಮಲ ಸ್ಟೋರ್‌ ಸೇರಿದಂತೆ 2 ಕಿ.ಮೀ. ಸುತ್ತಮುತ್ತ ಇರುವ ನಗರಗಳಿಗೆ ಬಸ್‌ ಸೌಲಭ್ಯ ಒದಗಿಸುವ ಅಗತ್ಯವಿದೆ.

ನ್ಯಾಷನಲ್‌ ಕಾಲೇಜು ಬಳಿ ಇರುವ ಮೇಲ್ಸೇತುವೆಯ ಅಕ್ಕಪಕ್ಕದಲ್ಲಿರುವ ಬೀದಿ ದೀಪಗಳು ಉರಿಯದಿದ್ದರೆ ಸಾಕಷ್ಟು ದೂರ ಕತ್ತಲಿನಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ. ಕತ್ತಲಿನಲ್ಲಿ ನಡೆಯುವಾಗ ಕಳ್ಳರು ಬಂದು ಬ್ಯಾಗ್‌, ಮೊಬೈಲ್‌ ಕಿತ್ತುಕೊಂಡು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಕಿಡಿಗೇಡಿಗಳು ಹಿಂದಿನಿಂದ ಬಂದು ಹೊಡೆಯುವುದು, ಅಸಭ್ಯವಾಗಿ ವರ್ತಿಸುವುದು ಹೆಚ್ಚಾಗಿ ಇರುತ್ತದೆ ಎನ್ನುತ್ತಾರೆ ಪದ್ಮಾ. 

ನ್ಯಾಷನಲ್‌ ಕಾಲೇಜು ಮೆಟ್ರೋ ನಿಲ್ದಾಣದಿಂದ ಮೇಲ್ಸೇತುವೆವರೆಗೂ ಬೀದಿ ದೀಪದ ವ್ಯವಸ್ಥೆ ಇಲ್ಲ. ಹೀಗಾಗಿ ಅಲ್ಲಿರುವ ಬಸ್‌ ನಿಲ್ದಾಣಗಳಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರೆ ಅನುಚಿತವಾಗಿ ವರ್ತಿಸುವವರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ಇಲ್ಲಿ ರಾತ್ರಿವೇಳೆ ಪಿಂಕ್‌ ಹೊಯ್ಸಳ ಇರಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಕೆಂಪೇಗೌಡ ಮೆಟ್ರೋ ಹೊರಗಿದೆ ಸಮಸ್ಯೆ: ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಹೊರಬರಲು ಕೆಎಸ್‌ ಆರ್‌ಟಿಸಿ, ಭಾರತೀಯ ರೈಲ್ವೆ ಹಾಗೂ ಚಿಕ್ಕ ಲಾಲ್‌ಬಾಗ್‌ ಮೂರು ಕಡೆಗಳಲ್ಲಿ ನಿರ್ಗಮನ ದ್ವಾರಗಳಿವೆ. ಇದರಲ್ಲಿ ಭಾರತೀಯ ರೈಲ್ವೆ ಹಾಗೂ ಚಿಕ್ಕ ಲಾಲ್‌ಬಾಗ್‌ ನಿರ್ಗಮನ ದ್ವಾರದಿಂದ ಮಹಿಳೆಯರು ರಾತ್ರಿ ವೇಳೆ ಹೊರಗೆ ಬಂದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಚಿಕ್ಕಲಾಲ್‌ಬಾಗ್‌ ನಿರ್ಗಮನ ದ್ವಾರದಿಂದ ಬಿಎಂಟಿಸಿ ಬಸ್‌ ನಿಲ್ದಾಣ ಬಹುದೂರವಿದ್ದು ಅಲ್ಲಿಂದ ಮಹಿಳೆಯರು ರಾತ್ರಿ ಒಬ್ಬಂಟಿಯಾಗಿ ನಡೆದುಕೊಂಡು ಬರುವುದು ಅಪಾಯಕಾರಿ. ದರೋಡೆಗಳು ಹೆಚ್ಚಾಗಿ ನಡೆಯುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಉದ್ಯೋಗಿ ಸ್ಮಿತಾ. ಕೆಂಪೇಗೌಡ ಮೆಟ್ರೋ ನಿಲ್ದಾಣ ಸೇರಿದಂತೆ ಇತರೆ ಮೆಟ್ರೋ ನಿಲ್ದಾಣಗಳಿಂದ ರಾತ್ರಿ ವೇಳೆ ದುಬಾರಿ ಬಾಡಿಗೆ ನೀಡಲು ಇಚ್ಛಿಸದೆ ಪೊಲೀಸರ ಸಹಾಯ ಪಡೆದು ಆಟೋ ಹತ್ತಿದ್ದ ಪ್ರಯಾಣಿಕರನ್ನು ಮಧ್ಯದಲ್ಲಿಯೇ ಬಿಟ್ಟು ಹೋಗಿರುವ ಅನೇಕ ಪ್ರಸಂಗಗಳಿವೆ. 

ಪೊಲೀಸರಿಂದ ಕ್ರಮ: ಮಹಿಳಾ ಸುರಕ್ಷತೆಗಾಗಿ ಮೆಟ್ರೋ ನಿಲ್ದಾಣಗಳ ವ್ಯಾಪ್ತಿಯಲ್ಲಿರುವಂತಹ ಪೊಲೀಸ್‌ ಠಾಣೆಗಳು ಮಹಿಳಾ ಸುರಕ್ಷತ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಅಗತ್ಯ ಕ್ರಮ ಕೈಗೊಂಡಿವೆ. ನೆರಳೆ ಮತ್ತು ಹಸಿರು ಮಾರ್ಗಗಳ ಮೆಟ್ರೋ ಕೊನೆಯ ನಿಲ್ದಾಣಗಳಲ್ಲಿ ಪ್ರತಿ 10 ನಿಮಿಷಕೊಮ್ಮೆ ಪಿಂಕ್‌ ಹೊಯ್ಸಳ ಸಂಚಾರ ಮಾಡುವುದು, ಪ್ರತಿದಿನ ಮಹಿಳಾ ಸಿಬ್ಬಂದಿ ಮೆಟ್ರೋ ನಿಲ್ದಾಣದ ಸುತ್ತಮುತ್ತ ಸಮಸ್ಯೆಗಳಿವೆಯೇ ಎಂದು ಪರಿಶೀಲಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಪೊಲೀಸ್‌ ಇಲಾಖೆ ತೆಗೆದುಕೊಂಡಿದೆ. ಅಲ್ಲದೆ ಪ್ರತಿ 15 ದಿನಕೊಮ್ಮೆ ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಯಾವ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದು ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ನಮ್ಮ ವ್ಯಾಪ್ತಿಯಲ್ಲಿ 14 ಮೆಟ್ರೋ ನಿಲ್ದಾಣಗಳಿವೆ. ಕೆಲವು ನಿಲ್ದಾಣಗಳ ಸುತ್ತಮುತ್ತ ಬೆಳಕಿನ ವ್ಯವಸ್ಥೆಗಳಿಲ್ಲ ಎಂದು ತಿಳಿದು ಬಂದಿದೆ. ಇಂತಹ ನಿಲ್ದಾಣಗಳನ್ನು ಗುರುತಿಸಿ ಅಲ್ಲಿ ಬೆಳಕಿನ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುತ್ತೇನೆ. ಅಲ್ಲದೆ ಮೆಟ್ರೋ ನಿಲ್ದಾಣಗಳ ಹೊರಗೆ ಸಿಸಿಟಿವಿ ಅಳವಡಿಸುವಂತೆ ಬಿಎಂಆರ್‌ಸಿಎಲ್‌ಗ‌ೂ ಪತ್ರ ಬರೆಯಲಾಗುವುದು.
-ಕೆ.ಅಣ್ಣಾಮಲೈ, ಉಪ ಪೊಲೀಸ್‌ ಆಯುಕ್ತ, ದಕ್ಷಿಣ ವಿಭಾಗ

ಜನರೇ ಸ್ವತಂತ್ರವಾಗಿ ಅಪ್‌ಗಳ ಮೂಲಕ ಕ್ಯಾಬ್‌ಗಳ ಸೇವೆ ಪಡೆಯುತ್ತಿದ್ದಾರೆ. ಹೀಗಾಗಿ ಮೆಟ್ರೋ ನಿಲ್ದಾಣಗಳಲ್ಲಿದ್ದ ಖಾಸಗಿ ಕ್ಯಾಬ್‌ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸಿವೆ.
-ಯಶವಂತ ಚೌಹಾಣ್‌, ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ

ಬಹುತೇಕ ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ಫಿಡರ್‌ ಬಸ್‌ ಸೇವೆ ಒದಗಿಸಲಾಗಿದೆ. ಎಲ್ಲಿಯೂ ಮೆಟ್ರೋ ಸಂಪರ್ಕ ಕಲ್ಪಿಸುವ ಬಸ್‌ಗಳ ಸೌಲಭ್ಯ ಸ್ಥಗೀತಗೊಳಿಸಲಾಗಿಲ್ಲ. ಬಿಎಂಟಿಸಿಗೆ ತೀರಾ ಕಡಿಮೆ ಆದಾಯ ಬರುತ್ತಿದ್ದ ಕಡೆಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಬಸ್‌ ಸಂಚಾರ ವಿರಾಳ ಇರುವ ಕಡೆಗಳಲ್ಲಿ ಯಾವ ರೀತಿ ಸೌಲಭ್ಯ ಕಲ್ಪಿಸಬೇಕೆಂದು ಆಲೋಚಿಸಲಾಗುತ್ತಿದೆ.
-ವಿಶ್ವನಾಥ್‌, ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ

ರಾತ್ರಿ ವೇಳೆ ಪೊಲೀಸರ ಸಹಾಯ ಪಡೆದು ಮೆಟ್ರೋ ನಿಲ್ದಾಣದಿಂದ ಆಟೋ ಹತ್ತಿರುತ್ತವೆ. ಆದರೆ ಬಾಡಿಗೆ ಹೆಚ್ಚಿಗೆ ನೀಡುವುದಿಲ್ಲ ಎಂಬ ಕಾರಣಕ್ಕಾಗಿ ಮಧ್ಯ ದಾರಿಯಲ್ಲಿ ನಮ್ಮನ್ನು ಆಟೋ ಚಾಲಕರು ಬಿಟ್ಟು ಹೋಗಿದ್ದಾರೆ.
-ಅಮಿತಾ, ಖಾಸಗಿ ಕಂಪನಿ ಉದ್ಯೋಗಿ.

ಪ್ರತಿ ಮೆಟ್ರೋ ನಿಲ್ದಾಣಗಳಲ್ಲೂ ರಾತ್ರಿ 9.30ರ ನಂತರ ಪಿಂಕ್‌ ಹೊಯ್ಸಳ ಅಥವಾ ಒಬ್ಬರು ಪೊಲೀಸರನ್ನು ಮೆಟ್ರೋ ನಿಲ್ದಾಣಗಳಲ್ಲಿ ಬಳಿ ನಿಯೋಜನೆ ಮಾಡುವುದು ಉತ್ತಮ.
-ಈಶ್ವರಿ, ಖಾಸಗಿ ಕಂಪನಿ ಉದ್ಯೋಗಿ.

ಪೀಣ್ಯ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿವೇಳೆ ನೀವು ನಮ್ಮ ಆಟೋಗಳಿಗೆ ಬರಬೇಕೆಂದು ಕೈಹಿಡಿದು ಎಳೆಯುತ್ತಾರೆ. ಇದೇ ಸಮಸ್ಯೆ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಬಳಿಯೂ ಇದೆ. ರಾತ್ರಿ ವೇಳೆ ಆಟೋ ಚಾಲಕರು ಕುಡಿದು ಅಸಭ್ಯವಾಗಿ ವರ್ತಿಸುತ್ತಾರೆ.
-ಷಹಾಜನ್‌, ವಿದ್ಯಾರ್ಥಿನಿ.

ಮೆಟ್ರೋ ಇಳಿದ ನಂತರ ಹಿರಿಯ ನಾಗರಿಕರಿಗೆ ಆಟೋ ಚಾಲಕರು ಪ್ರಾಮುಖ್ಯತೆ ನೀಡಬೇಕು. ಅವರಿಂದಲೂ ದುಪ್ಪಟ್ಟು ಹಣ ವಸೂಲಿ ಮಾಡುವುದು ಸರಿಯಲ್ಲ.
-ಮೇರಿ ಜಯಂತಿ, ಗೃಹಿಣಿ.

ಸ್ವಾಮಿ ವಿವೇಕಾನಂದ ನಿಲ್ದಾಣದಲ್ಲಿ ರಾತ್ರಿ ವೇಳೆ ಕುಡುಕರಿಂದ ಹೆಚ್ಚಿನ ತೊಂದರೆ ಅನುಭವಿಸಬೇಕಾಗಿದೆ. ಮೆಟ್ರೋ ನಿಲ್ದಾಣದ ಬದಿ ಇರುವ ರಸ್ತೆಗಳಲ್ಲಿ ಬಸ್‌ ಮತ್ತು ಮೆಟ್ರೋ ಸಂಚಾರಕ್ಕೆ ಮಾತ್ರವೇ ಅವಕಾಶ ನೀಡಬೇಕು. ಖಾಸಗಿ ವಾಹನಗಳು ಅತಿವೇಗವಾಗಿ ಸಂಚಾರ ಮಾಡುವುದರಿಂದ ರಸ್ತೆ ದಾಟಲು ಕಷ್ಟವಾಗುತ್ತದೆ.
-ಅರ್ಜುನ್‌, ಖಾಸಗಿ ಕಂಪನಿ ಉದ್ಯೋಗಿ.

* ಶ್ರುತಿ ಮಲೆನಾಡತಿ

ಟಾಪ್ ನ್ಯೂಸ್

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

3

Atul Subhash Case: ಮೊಮ್ಮಗನನ್ನು ಟೆಕಿ ಅತುಲ್‌ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.