ಎಂಟು ಸಾವಿರ ಮೀರಿದ ದೂರುಗಳ ಸರಮಾಲೆ


Team Udayavani, Jun 12, 2019, 3:10 AM IST

8savira

ಬೆಂಗಳೂರು: ಬಡವರು, ಮಧ್ಯಮ ವರ್ಗದ ಜನರ ನಂಬಿಕೆಯನ್ನು ಬಂಡವಳವಾನ್ನಾಗಿಸಿಕೊಂಡು ಐಎಂಎ ಸಂಸ್ಥಾಪಕ ಮನ್ಸೂರ್‌ ಖಾನ್‌ ನಡೆಸಿದ ಅಧಿಕ ಲಾಭಾಂಶ ನೀಡುವ ಆಮಿಷದ ಕೋಟ್ಯಂತರ ರೂ. ಹಣಕಾಸು ವಹಿವಾಟಿನ ಸಾಮ್ರಾಜ್ಯಕ್ಕೆ ತೆರೆಬಿದ್ದ ಬೆನ್ನಲ್ಲೇ, ಐಎಂಎ ಹಣಕಾಸು ಹೂಡಿಕೆದಾರರ ಸಂಕಷ್ಟಗಳ ಸರಮಾಲೆಯ ಸುರುಳಿ ಬಿಚ್ಚಿದಷ್ಟು ಹಿರಿದಾಗುತ್ತಿದೆ.

ಎರಡು ದಿನಗಳಲ್ಲಿ ಐಎಂಎ ವಂಚನೆ ಮಾಡಿದೆ ಎಂದು ದಾಖಲಾಗಿರುವ ಎಂಟು ಸಾವಿರಕ್ಕೂ ಅಧಿಕ ದೂರುಗಳೇ ಇದಕ್ಕೆ ಸಾಕ್ಷಿ. ದಿನಕ್ಕೆ ಐದು ನೂರು ರೂ. ಸಂಪಾದಿಸುವ ಟೀ ವ್ಯಾಪಾರಿ, ಗುಜರಿ ಅಂಗಡಿ ಕೆಲಸಗಾರ, ಸ್ವಂತ ಉದ್ಯಮ ಹೊಂದಿರುವ ಮಹಿಳೆ, ಆಟೋ ಚಾಲಕರಿಂದ ಹಿಡಿದು ಖಾಸಗಿ ಕಂಪನಿಗಳಲ್ಲಿ ಐದಂಕಿ ಸಂಬಳ ಎಣಿಸುವ ವಿದ್ಯಾವಂತರು, ವಿದ್ಯಾರ್ಥಿಗಳು, ಶಿಕ್ಷಕರು, ನಿವೃತ್ತ ಅಧಿಕಾರಿಗಳು ಹೀಗೆ ಎಲ್ಲ ಕ್ಷೇತ್ರದವರೂ ವಂಚನೆಗೊಳಗಾದವರ ಪಟ್ಟಿಯಲ್ಲಿದ್ದಾರೆ.

ಕನಿಷ್ಠ ಒಂದು ಲಕ್ಷ ರೂ.ಗಳಿಂದ ಆರಂಭವಾಗಿ ಎರಡರಿಂದ ಎರಡೂವರೆ ಕೋಟಿ ರೂ.ವರೆಗೂ ಹೂಡಿಕೆ ಮಾಡಿದವರು ಹಣ ವಾಪಸ್‌ ಬರಬಹುದು ಎಂಬ ನಿರೀಕ್ಷೆ, ಹಣ ಬರದಿದ್ದರೆ ಮುಂದೇನು ಎಂಬ ಆತಂಕದಿಂದ ದೂರು ಸಲ್ಲಿಸುತ್ತಿದ್ದಾರೆ.

ಐಎಂಎ ಹೂಡಿಕೆದಾರರ ವ್ಯಾಪ್ತಿ ಬೆಂಗಳೂರು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ವಿದೇಶ ನೆರೆರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣಕ್ಕೂ ಬಳ್ಳಿಯಂತೆ ಹಬ್ಬಿದೆ. ಐಎಂಎ ಬಾಗಿಲು ಬಂದ್‌ ವಿಚಾರ ಕೇಳುತ್ತಲೇ ದೂರು ದೌಡಾಯಿಸಿ ಬಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ದಕ್ಷಿಣ ಭಾರತದಲ್ಲಿ ಸದ್ದುಮಾಡಿದ್ದ ವಿನಿವಿಂಕ್‌ ಶಾಸ್ತ್ರೀ ಹಗರಣ, ಅಗ್ರಿಗೋಲ್ಡ್‌ ಕಂಪನಿಯ ಭಾರೀ ವಂಚನೆಗಳು ಅರಿವಿದ್ದರೂ ಮೋಸ ಹೋದೆವಲ್ಲಾ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಬೆಂಗಳೂರು, ಮೈಸೂರು, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಆಂಧ್ರ, ತಮಿಳುನಾಡು ಸೇರಿದಂತೆ ನೆರೆರಾಜ್ಯಗಳಿಂದ ಆಗಮಿಸಿದ್ದ ಹೂಡಿಕೆದಾರರು ಮಂಗಳವಾರ ಸರತಿ ಸಾಲಿನಲ್ಲಿ ನಿಂತು ದೂರುಗಳನ್ನು ಸಲ್ಲಿಸಿದರು.

ಬಾಗಿಲು ಮುಚ್ಚಿದ ಐಎಂಎ ಕಚೇರಿಯನ್ನು ನೋಡುತ್ತಿದ್ದ ಅವರು ಮತ್ತೆ ಕಚೇರಿ ಆರಂಭವಾಗಿ ಹಣ ಬರಬಹುದೇ ಎಂಬ ನಿರೀಕ್ಷೆಯೂ ಅವರ ಕಣ್ಣುಗಳಿತ್ತು. ಇನ್ನೂ ಕೆಲವರು ಕಚೇರಿ ಆರಂಭವಾಗಲ್ಲವೇ ಎಂದು ಪೊಲಿಸರನ್ನೇ ಪ್ರಶ್ನಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಮಹಿಳೆಯರು ಸೇರಿದಂತೆ ಗುಂಪು ಗುಂಪುಗಳಾಗಿ ಕಚೇರಿ ಮುಂದೆ ಜಮಾವಣೆಯಾಗುತ್ತಿದ್ದ ಹೂಡಿಕೆದಾರರು ಮನ್ಸೂರ್‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸುತ್ತಿದ್ದರು.

“ಮನ್ಸೂರ್‌ ಎಲ್ಲಿದ್ದಾನೆ’ ಕರೆಸಿ ಎಂಬ ಪಟ್ಟು ಅವರದ್ದಾಗಿತ್ತು. ಅವರನ್ನು ಸಮಾಧಾನ ಪಡಿಸಿ ದೂರು ನೀಡಿ ಕಾನೂನು ಪ್ರಕ್ರಿಯೆಗಳು ಮೊದಲು ಪೂರ್ಣಗೊಳ್ಳಬೇಕು. ಮನ್ಸೂರ್‌ ಪತ್ತೆಗಾಗಿ ತನಿಖೆ ನಡೆಯುತ್ತಿದೆ ಎಂದು ಹೇಳುವಷ್ಟರಲ್ಲಿ ಪೊಲೀಸರೇ ಹೈರಾಣಾಗುತ್ತಿದ್ದರು. ಒಂದು ಗುಂಪನ್ನು ಸಮಾಧಾನಪಡಿಸಿ ಸ್ಥಳದಿಂದ ಕಳಿಸುವಷ್ಟರಲ್ಲಿ ಕೆಲವೇ ನಿಮಿಷಗಳಲ್ಲಿ ಮತ್ತೂಂದು ಗುಂಪು ಜಮಾವಣೆಗೊಳ್ಳುತ್ತಿತ್ತು.

ಪುನಃ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸುತ್ತಿದ್ದರು, ಒಂದು ಹಂತದಲ್ಲಿ ಪೊಲೀಸರ ನಡುವೆಯೇ ವಾಕ್ಸಮರಕ್ಕೆ ಇಳಿಯುತ್ತಿದ್ದ ದೃಶ್ಯಗಳು ಕಂಡು ಬಂದವು. ಪ್ರತಿಭಟನಾಕಾರರ ದಿಢೀರ್‌ ಗುಂಪುಗಳಿಂದ ಬೌರಿಂಗ್‌ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಸಂಬಂಧಿಕರ ಮಾತು ನಂಬಿ ಕೆಟ್ಟೆವು…: “ಐಎಂಎ ಕಂಪನಿ ಬಗ್ಗೆ ನಮಗೇನೂ ಗೊತ್ತಿರಲಿಲ್ಲ… ನಮ್ಮ ಸಂಬಂಧಿಕರೊಬ್ಬರು ಐದು ವರ್ಷಗಳ ಹಿಂದೆ ಐದು ಲಕ್ಷ ರೂ. ಹೂಡಿಕೆ ಮಾಡಿದ್ದರು. ಅವರಿಗೆ ಪ್ರತಿ ತಿಂಗಳು ತಪ್ಪದೇ ಶೇ.5ರವರೆಗೆ ಲಾಭಾಂಶ ಬರುತ್ತಿತ್ತು. ಹೀಗಾಗಿ ನಮಗೂ ಹೂಡಿಕೆ ಮಾಡುವಂತೆ ಸಲಹೆ ನೀಡಿದರು. ಅದರಂತೆ 10 ಲಕ್ಷ ರೂ. ಹೂಡಿಕೆ ಮಾಡಿದೆ.

ಐದಾರು ತಿಂಗಳು ಬಡ್ಡಿ ಬಂತು ಈಗ ಮೋಸ ಹೋಗಿದ್ದೇವೆ,’ ದೂರು ನೀಡಲು ಬಂದಿದ್ದ ಬಹುತೇಕ ಹೂಡಿಕೆದಾರರು ಅಳಲು ತೋಡಿಕೊಂಡರು. ಐಎಎಂನಲ್ಲಿ ಹಣ ಹೂಡಿಕೆಗೆ ಜನ ಮುಗಿಬೀಳಲು ಪ್ರಮುಖ ಕಾರಣ 13 ವರ್ಷಗಳ ಕಾಲ ಐಎಂಎ ಗಳಿಸಿಕೊಂಡಿದ್ದ ನಂಬಿಕೆ ಎನ್ನಲಾಗುತ್ತಿದೆ. ಜತೆಗೆ, ಚೈನ್‌ ಲಿಂಕ್‌ ನೆಟ್‌ವರ್ಕ್‌ ಪ್ರಮುಖ ಪಾತ್ರ ವಹಿಸಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಐಎಂಎ ಸಂಸ್ಥಾಪಕ ಮನ್ಸೂರ್‌, ಕಂಪನಿ ಆರಂಭಿಸಿದ ಮೊದಲ ಮೂರು ವರ್ಷಗಳಲ್ಲಿ ಶೇ.7ರಷ್ಟು ಲಾಭಾಂಶ ನೀಡಿದ್ದಾನೆ. ಇದರಿಂದ ಸಾಕಷ್ಟು ಜನ ಲಾಭ ಮಾಡಿಕೊಂಡಿದ್ದಾರೆ. ಗ್ರಾಹಕರ ಸಂಖ್ಯೆ ಅಪರಿಮಿತವಾಗಿ ಬೆಳೆದ ಕೂಡಲೇ ಶೇ.3ರಷ್ಟು ಬಡ್ಡಿ ನೀಡಲು ಆರಂಭಿಸಿದ್ದು, ಶೇ.7ರಷ್ಟು ಲಾಭಾಂಶ ನೀಡಿದವರು ಮೂರು ಪರ್ಸೆಂಟ್‌ ನೀಡುವುದಿಲ್ಲವೇ ಎಂದು ನಂಬಿ, ಗ್ರಾಹಕರ ಸಂಖ್ಯೆ ದುಪ್ಪಟ್ಟಾಗಿದೆ. ಜತೆಗೆ, ಹಣ ಹೂಡಿಕೆ ಮಾಡಿದವರು ತಮ್ಮ ಸಂಬಂಧಿಕರು, ಪರಿಚಿತರಿಗೆ ಐಎಂಐ ಬಗ್ಗೆ ತಿಳಿಸಿ ಹೂಡಿಕೆ ಮಾಡಿಸಿದ್ದಾರೆ. 2019ರ ಏಪ್ರಿಲ್‌ನಿಂದ ಲಾಭಾಂಶ ಬರುವುದು ಸ್ಥಗಿತಗೊಂಡಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ವಿವರಿಸಿದರು.

ಅಕೌಂಟ್‌ಗೆ ಹರಿದು ಬರುತ್ತಿದೆ ಹಣ?: ಐಎಂಎ ವಹಿವಾಟು ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕ ನಡೆದಿದೆ. ವಿದೇಶಗಳು ಹಾಗೂ ನೆರೆರಾಜ್ಯಗಳಲ್ಲಿಯೂ ಅಪಾರ ಪ್ರಮಾಣದ ಹೂಡಿಕೆದಾರರಿದ್ದಾರೆ. ಐಎಂಎ ಕಂಪನಿ ಮುಚ್ಚಿರುವ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲ. ಹೀಗಾಗಿ ಜೂ.10ರಂದು ಹಲವು ಮಂದಿ ಲಕ್ಷಾಂತರ ರೂ.ಗಳನ್ನು ಕಂಪನಿಯ ಅಕೌಂಟ್‌ಗೆ ಜಮಾ ಮಾಡಿದ್ದಾರೆ. ಮೂಲಗಳ ಪ್ರಕಾರ ಸುಮಾರು 2 ಕೋಟಿ ರೂ. ಜಮಾ ಆಗಿದೆ ಎಂಬ ಮಾಹಿತಿಯಿದೆ. ಸದ್ಯ, ಕಂಪನಿ, ಮನ್ಸೂರ್‌, ಸೇರಿದಂತೆ ಇತರೆ ನಾಲ್ವರು ನಿರ್ದೇಶಕರ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ನಾಲ್ವರು ಆರೋಪಿಗಳಿಗೆ ಶೋಧ: ಐಎಂಎ ಸಂಸ್ಥಾಪಕ ಮನ್ಸೂರ್‌ ಸೇರಿ ಕಂಪನಿಗೆ ನಾಲ್ವರು ನಿರ್ದೇಶಕರಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.

ಸಿಬ್ಬಂದಿ ಕಂಗಾಲು: ಐಎಂಎ ಕಂಪನಿ ಮುಚ್ಚಿರುವ ವಿಚಾರ ಸಿಬ್ಬಂದಿಗೂ ಶಾಕ್‌ ನೀಡಿದೆ. ರಂಜಾನ್‌ ಪ್ರಯುಕ್ತ ಐದು ದಿನ ರಜೆ ಪಡೆದು ಮಂಗಳವಾರ ಕೆಲಸಕ್ಕೆ ಬರಲು ಸಿದ್ಧರಾಗಿದ್ದ ಸಿಬ್ಬಂದಿಗೆ ಸೋಮವಾರವಷ್ಟೇ ಕಂಪನಿ ಮುಚ್ಚಲಾಗಿದೆ. ಬೇರೆ ಕೆಲಸ ನೋಡಿಕೊಳ್ಳಿ ಎಂದು ಮ್ಯಾನೇಜರ್‌ ತಿಳಿಸಿದ್ದಾರೆ. ದಿಢೀರ್‌ ಬೆಳವಣಿಗಳಿಂದ 1800ಕ್ಕೂ ಅಧಿಕ ಸಿಬ್ಬಂದಿ ಕಂಗಾಲಾಗಿದ್ದಾರೆ.

ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ ಐಎಂಎ ಸಿಬ್ಬಂದಿ ಶಹಬಾಜ್‌, “ಕಂಪನಿ ಮುಚ್ಚಿದೆ ಬೇರೆ ಕೆಲಸ ನೋಡಿಕೊಳ್ಳಿ’ ಎಂದು ಮ್ಯಾನೇಜರ್‌ ವ್ಯಾಟ್ಸಾಪ್‌ ಗ್ರೂಪ್‌ನಲ್ಲಿ ಸಂದೇಶ ಕಳಿಸಿದಾಗಲೇ ವಿಷಯ ಗೊತ್ತಾಗಿದ್ದು ಎಂದು ತಿಳಿಸಿದರು.

ಕಂಪನಿ ಚೆನ್ನಾಗಿ ನಡೆಯುತ್ತಿದ್ದು, ಕಳೆದ ಎರಡು ತಿಂಗಳಿನಿಂದ ಸ್ವಲ್ಪ ಸಮಸ್ಯೆ ಉಂಟಾಗಿತ್ತು. ಕಂಪನಿಯನ್ನು ನಂಬಿ ಹಲವರು ಸಿಬ್ಬಂದಿಯೂ ಹಣ ಹೂಡಿಕೆ ಮಾಡಿದ್ದರು. ಸಿಬ್ಬಂದಿಗೆ ಸಹಾಯ ಮಾಡುತ್ತಾ ಸ್ನೇಹಿತರಂತೆ ಇದ್ದ ಮನ್ಸೂರ್‌ ಅವರು ಈ ರೀತಿ ಮಾಡಿದ್ದಾರೆ ಎಂದರೆ ಅಚ್ಚರಿಯಾಗುತ್ತಿದೆ. ಈದ್‌ ದಿನ ಕಚೇರಿಗೆ ಬಂದವರು ಮತ್ತೆ ಸಿಕ್ಕಿರಲಿಲ್ಲ ಎಂದರು. ಮನ್ಸೂರ್‌ ಅವರು ಕಚೇರಿಗೆ ಬಂದಾಗ ಹಣ ಕೇಳಿಕೊಂಡು ಹಲವರು ಬರುತ್ತಿದ್ದರು. ಇದನ್ನು ನಾವು ನೋಡಿದ್ದೇವೆ ಎಂದು ಆರೋಪಿಸಿದರು.

ಜಮೀನು ಮಾರಿದ ದುಡ್ಡು ಹೋಯ್ತು…: ಆಂಧ್ರದ ಕರೂ°ಲು ಜಿಲ್ಲೆಯ ಗ್ರಾಮವೊಂದರಲ್ಲಿ 10 ಎಕರೆ ಜಮೀನಿದ್ದು, ಕಳೆದ ಎರಡು ವರ್ಷಗಳ ಹಿಂದೆ ಆರು ಎಕರೆ ಜಮೀನು ಮಾರಾಟ ಮಾಡಿದ್ದೆವು. ಅದರಲ್ಲಿ 10 ಲಕ್ಷ ರೂ. ಹಣ ತಂದು ಐಎಂಎನಲ್ಲಿ ಹೂಡಿಕೆ ಮಾಡಿದ್ದೆ. ಈಗ ಜಮೀನೂ ಇಲ್ಲ ಹಣವೂ ಇಲ್ಲದಾಯಿತು ಎಂದು ನೋವಿನಲ್ಲಿಯೇ ಮಾತು ಆರಂಭಿಸಿದರು ಬಿಟೆಕ್‌ ಪದವೀಧರ ಅಯಾಜ್‌.

ಜಮೀನು ಮಾರಿದ ದುಡ್ಡಿತ್ತು ಬೇರೆ ಆದಾಯವೂ ಕುಟುಂಬಕ್ಕಿರಲಿಲ್ಲ. ನನ್ನ ವಿಧ್ಯಾಭ್ಯಾಸ ಕೂಡ ನಡೆಯಬೇಕಿತ್ತು. ಹೀಗಾಗಿ ಸಂಬಂಧಿಕರೊಬ್ಬರ ಶಿಫಾರಸಿನ ಮೇಲೆ 10 ಲಕ್ಷ ರೂ. ಹೂಡಿಕೆ ಮಾಡಿದೆ. ಶೇ.3ರಷ್ಟು ಲಾಭಾಂಶ ಫೆಬ್ರವರಿಯವರೆಗೂ ಬಂದಿದೆ. ಮಾರ್ಚ್‌ನಲ್ಲಿ ಬರಲಿಲ್ಲ. ಹೀಗಾಗಿ ಏಪ್ರಿಲ್‌ನಲ್ಲಿ ಹೂಡಿಕೆ ಹಣ ವಾಪಾಸ್‌ ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದೆ. ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸಿಬ್ಬಂದಿ ಹೇಳುತ್ತಿದ್ದರು.

ಆದರೆ, ಸೋಮವಾರ (ಜೂನ್‌ 10) ಮನ್ಸೂರ್‌ ನಾಪತ್ತೆ, ಕಂಪನಿ ಲಾಕ್‌ಔಟ್‌ ಎಂದು ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ನೋಡಿ ಆಘಾತವಾಗಿದೆ. ದೂರು ನೀಡಲು ಬಂದಿದ್ದೇನೆ. ಹೂಡಿಕೆ ಹಣ ಬಂದರೆ ಸಾಕು ಎಂದು ನಿಟ್ಟುಸಿರು ಬಿಟ್ಟರು ಅಯಾಜ್‌.

ಮಗನ ಮದುವೆಗೆ ಹಣ ಸಿಗುತ್ತೆ ಎಂದು ಬಯಸಿದ್ದೆ!: ಕಣ್ಣಂಚಲ್ಲಿ ಬರುತ್ತಿದ್ದ ಕಣ್ಣೀರು ಒರೆಸಿಕೊಂಡೇ ಹಣ ಕಳೆದುಕೊಂಡ ಬಗ್ಗೆ ದು:ಖ ತೋಡಿಕೊಂಡ ಶಿವಾಜಿನಗರದ ರಹೀಮಾ ಉನ್ನೀಸಾ, ” ಮಗನ ಮದುವೆಗೆ ಹಣ ವಾಪಾಸ್‌ ಪಡೆಯೋಣ ಎಂದು ಬಯಸಿದ್ದೆ. ಈ ಏನು ಮಾಡಬೇಕು ಎಂದು ದಿಕ್ಕುತೋಚದಂತಾಗಿದೆ ಎಂದರು.

ನಾನು ಕೂಡಿಟ್ಟಿದ್ದ 3.5 ಲಕ್ಷ ರೂ.ಗಳನ್ನು ಐಎಂಎನಲ್ಲಿ ಕಟ್ಟಿದ್ದೇನೆ. ಕೆಲ ತಿಂಗಳು ಲಾಭಾಂಶವೂ ಸಿಕ್ಕಿದೆ. ಮಗ ಇರ್ಫಾನ್‌ ಮದುವೆಗೆ ಹಣ ವಾಪಸ್‌ ಪಡೆದುಕೊಂಡರೆ ಅನುಕೂಲವಾಗಲಿದೆ ಎಂದು ಬಯಸಿದ್ದೆ. ಇದೀಗ ಹೂಡಿಕೆ ಹಣವೇ ಬರದಂತಾಗಿದೆ. ಯಾರನ್ನು ನಂಬಬೇಕು ಈ ಕಾಲದಲ್ಲಿ… ಎಂದು ಮೌನವಾದರು.

ಶಿಕ್ಷಕನಿಗೂ ವಂಚನೆ!: ಐಎಂಎ ಕಂಪನಿ ಮುಚ್ಚಿದೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಚೆನೈನಿಂದ ಆಗಮಿಸಿದ್ದ ಶಿಕ್ಷಕ ಆರೀಪ್‌, “ನಮ್ಮ ಹಣ ನಮಗೆ ಸಿಗುತ್ತದೆ ಅಲ್ಲವೇ’ ಎಂದು ಮಾತು ಆರಂಭಿಸಿದರು. ಸ್ನೇಹಿತನ ಮಾತು ನಂಬಿ 2.5 ಲಕ್ಷ ರೂ. ಹೂಡಿಕೆ ಮಾಡಿದ್ದೆ. ಮುಂದೆ ಜೀವನಕ್ಕೆ ಅನುಕೂಲವಾಗಲಿದೆ ಎಂಬ ಆಸೆಯಿಂದ ನಾಲ್ಕು ತಿಂಗಳ ಹಿಂದೆ ಹೂಡಿಕೆ ಮಾಡಿದ್ದೆ. ಈಗ ಕಂಪನಿಯೇ ಮುಚ್ಚಿಹೋಗಿದೆ. ಯಾರ ಮಾತನ್ನೂ ಕೇಳಬಾರದು ಎಂಬುದು ಈಗ ಅರಿವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕಾರಣಿಗಳ ಕೈವಾಡವಿದೆ: ಜನರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಮನ್ಸೂರ್‌ ಮೋಸ ಮಾಡಿದ್ದಾನೆ. ಆತನ ಜತೆಗೆ ದೊಡ್ಡ ದೊಡ್ಡ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ನಿಸ್ಪಕ್ಷಪಾತ ತನಿಖೆ ನಡೆದರೆ ಎಲ್ಲರ ಬಂಡವಾಳ ಬಯಲಾಗಿದೆ ಎಂದು ಐಎಂಎನಲ್ಲಿ ಹನ್ನೊಂದು ಲಕ್ಷ ರೂ. ಹೂಡಿಕೆ ಮಾಡಿದ್ದ ನಿವೃತ್ತ ಎಂಜಿನಿಯರ್‌ ಮೊಹಮದ್‌ ಆರಿಫ‌ುಲ್ಲಾ ಆರೋಪಿಸಿದರು.

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.