Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು
Team Udayavani, Sep 16, 2024, 12:24 PM IST
ಬೆಂಗಳೂರು: ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಪಿಎಸ್‌ಐ ಸೇರಿ ನಾಲ್ವರು ಅಧಿಕಾರಿ-ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಬನಶಂಕರಿ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಧರ್ ಗುಗ್ರಿ, ಎಎಸ್‌ಐ ಎಸ್.ಕೆ.ರಾಜು, ಕಾನ್‌ಸ್ಟೇಬಲ್ ಸತೀಶ್ ಬಗಲಿ ಹಾಗೂ ತಿಮ್ಮಣ್ಣ ಪೂಜಾರ್ ಅಮಾನತುಗೊಳಿಸಿ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲಸಾರ ಆದೇಶ ಹೊರಡಿಸಿದ್ದಾರೆ.
ಆ.9ರಂದು ಕದಿರೇನಹಳ್ಳಿಯ ಸಿಮೆಂಟ್ ರಸ್ತೆಯಲ್ಲಿ ಡ್ರಗ್ಸ್ ಮಾರುತ್ತಿದ್ದ ಆರೋಪದಡಿ ಐದಾರು ಮಂದಿಯನ್ನು ಅಮಾನತುಗೊಂಡ ಅಧಿಕಾರಿ-ಸಿಬ್ಬಂದಿ ಬಾತ್ಮೀದಾರನ ಮಾಹಿತಿ ಆಧರಿಸಿ ಠಾಣೆಗೆ ಕರೆದೊಯ್ದಿದ್ದರು. ಆರೋಪಿತರ ದ್ವಿಚಕ್ರ ವಾಹನದಲ್ಲಿದ್ದ 400ಕ್ಕೂ ಅಧಿಕ ಗ್ರಾಂ ತೂಕದ ಅಫೀಮು ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಐದಾರು ಮಂದಿ ಪೈಕಿ ಇಬ್ಬರು ಯುವಕರನ್ನು ಮಾತ್ರ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು.
ಅದರಿಂದ ಆತಂಕಗೊಂಡ ಬಂಧಿತ ಯುವಕರ ಕುಟುಂಬ ಸದಸ್ಯರು, ಬಾತ್ಮೀದಾರ ರಾಜನ್ ಎಂಬಾತನ ಕೈವಾಡವಿದೆ ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರು ಮತ್ತು ದಕ್ಷಿಣ ವಿಭಾಗದ ಡಿಸಿಪಿಗೆ ದೂರು ನೀಡಿದ್ದರು. ಈ ಸಂಬಂಧ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಗಿರೀಶ್ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಆಗ ಬಂಧಿತ ಇಬ್ಬರು ಯುವಕರು ಅಮಾಯಕರಾಗಿದ್ದು, ಉದ್ದೇಶ ಪೂರ್ವಕವಾಗಿ ಬಂಧಿಸಲಾಗಿದೆ ಎಂದು ಎಸಿಪಿ ಗಿರೀಶ್ ವರದಿ ನೀಡಿದ್ದರು. ಈ ವರದಿ ಆಧರಿಸಿ ನಾಲ್ವರು ಅಧಿಕಾರಿಗಳ ವಿರುದ್ಧ ಇಲಾಖೆಗೆ ಆದೇಶಿದಲ್ಲದೆ, ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ತೋರಿದ ಆರೋಪದಡಿ ಅಮಾನತುಗೊಳಿಸಲಾಗಿದೆ. ಅಮಾನತುಗೊಂಡ ಪಿಎಸ್‌ಐ ಸೇರಿ ನಾಲ್ವರು ಮಂದಿಗೂ ಬಾತ್ಮೀದಾರ ರಾಜನ್‌ಗೂ ಹಣಕಾಸಿನ ವ್ಯವಹಾರ ಇದೆಯೇ? ಎಂಬ ಮಾಹಿತಿ ಪಡೆಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬಾತ್ಮೀದಾರ ಸೇರಿ ಇಬ್ಬರ ಬಂಧನ: ಸುಳ್ಳು ಮಾಹಿತಿ ನೀಡಿದ್ದ ರಾಜನ್ ಹಾಗೂ ಆತನ ಸ್ನೇಹಿತೆ ಚೈತ್ರಾಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜನ್ ಸೂಚನೆ ಮೇರೆಗೆ ಚೈತ್ರಾ ಅಮಾಯಕ ಯುವಕರ ಬೈಕ್‌ನಲ್ಲಿ ಮಾದಕ ವಸ್ತು ಇಟ್ಟಿದ್ದಳು. ಹೀಗಾಗಿ ಇಬ್ಬರನ್ನು ಬಂಧಿಸಲಾಗಿದ್ದು,ರಾಜನ್‌ಗೆ 400 ಗ್ರಾಂ ತೂಕದ ಮಾದಕ ವಸ್ತು ಹೇಗೆ ಸಿಕ್ಕಿತ್ತು. ಈತನೇ ಡ್ರಗ್ಸ್ ಪೆಡ್ಲರ್‌ಗಳ ಜತೆ ಸಂಪರ್ಕ ಹೊಂದಿದ್ದಾನೆಯೇ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ವೈಯಕ್ತಿಕ ದ್ವೇಷ ಕಾರಣ: ಪೊಲೀಸ್ ಬಾತ್ಮೀದಾರ ರಾಜನ್ ಮತ್ತು ಇಬ್ಬರು ಅಮಾಯಕ ಯುವಕರ ನಡುವೆ ವೈಯಕ್ತಿಕ ದ್ವೇಷ ಇತ್ತು. ಹೀಗಾಗಿ ಆ ಯುವಕರನ್ನು ಸಿಲುಕಿಸುವ ಉದ್ದೇಶದಿಂದ ಚೈತ್ರಾಳ ಮೂಲಕ ಯುವಕರ ಬೈಕ್‌ನಲ್ಲಿ ಮಾದಕ ವಸ್ತು ಇರಿಸಿದ್ದ. ನಂತರ ಪೊಲೀಸರಿಗೆ ಮಾಹಿತಿ ನೀಡಿ ದಾಳಿ ಮಾಡಿಸಿದ್ದ. ಬಾತ್ಮೀದಾರ ರಾಜನ್ ಮಾಹಿತಿಯನ್ನು ಪರಿಶೀಲಿಸದೆಯೇ ಪೊಲೀಸರು ನಾಮಕೆವಾಸ್ತೆಗೆ ಐದಾರು ಮಂದಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು, ಆ ಇಬ್ಬರು ಯುವಕರನ್ನು ಮಾತ್ರ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದರು.
ಕರ್ತವ್ಯಲೋಪ ಆರೋಪದಡಿ ಬನಶಂಕರಿ ಠಾಣೆಯ ಪಿಎಸ್‌ಐ ಸೇರಿನಾಲ್ವರು ಅಧಿಕಾರಿ-ಸಿಬ್ಬಂದಿ ಅಮಾನತು ಗೊಳಿಸಲಾಗಿದೆ. ಸುಳ್ಳು ಮಾಹಿತಿ ನೀಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. -ಲೋಕೇಶ್ ಬಿ.ಜಗಲಸಾರ, ದಕ್ಷಿಣ ವಿಭಾಗದ ಡಿಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.