ಮರಗಣತಿಗೆ ಇನ್ನೆಷ್ಟು ವರ್ಷಗಳು ಬೇಕು?
Team Udayavani, Apr 19, 2021, 1:27 PM IST
ನಗರದಲ್ಲಿ ಮರಗಣತಿ ನಡೆಸುವಂತೆ ಪಾಲಿಕೆಗೆ ಹೈಕೋರ್ಟ್ ಸೂಚನೆ ನೀಡಿ ಮೂರು ವರ್ಷಗಳೇ ಕಳೆದಿವೆ. ಆದರೆ, ಈ ನಿಟ್ಟಿನಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ. ಮರಗಳ ಗಣತಿ ವಿಚಾರದಲ್ಲಿ ಅಷ್ಟೇ ಅಲ್ಲ, ಮರಗಳ ಸಂರಕ್ಷಣೆ ಮತ್ತು ಸಸಿಗಳನ್ನು ನೆಡುವ ವಿಚಾರದಲ್ಲೂ ಪಾಲಿಕೆ ಎಡವುತ್ತಲ್ಲೇ ಇದೆ ಎನ್ನುವುದು ತಜ್ಞರ ವಾದ.
ಒಬ್ಬ ವ್ಯಕ್ತಿ ಜೀವಿಸುವುದಕ್ಕೆ ಕನಿಷ್ಠ ಎಂಟು ಮರಗಳು ಅವಶ್ಯ. ಆದರೆ, ನಗರದಲ್ಲಿ ಎಂಟು ವ್ಯಕ್ತಿಗೆ ಒಂದು ಮರದ ಇದೆ. ಈ ಅಂಕಿ- ಅಂಶ ಗಂಭೀರ ಪರಿಸ್ಥಿತಿ ಪರಿಚಯಿಸುತ್ತದೆ ಎನ್ನುತ್ತಾರೆ ಪರಿಸರ ತಜ್ಞ ಡಾ. ಕ್ಷಿತಿಜ್ ಅರಸ್.
ನಗರದಲ್ಲಿ ತಾಪಮಾನ ಹೆಚ್ಚಾಗುತ್ತಿರುವುದಕ್ಕೆ ಮರಗಳ ಸಂಖ್ಯೆ ಗಣ ನೀಯ ಪ್ರಮಾಣದಲ್ಲಿ ಇಳಿಕೆ ಆಗುತ್ತಿರುವುದು ಸಹ ಒಂದು ಕಾರಣ. ಮರಗಳ ಕೆಳಗೆ ಗರಿಷ್ಠ ತಾಪಮಾನ ಕನಿಷ್ಠ ಮೂರು ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತದೆ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ. ನಮ್ಮಲ್ಲಿ ಎಷ್ಟು ಮರಗಳಿವೆ, ಯಾವ ಪ್ರಭೇದದ ಮರ ಮತ್ತು ಯಾವ ಮಾದರಿಯ ಮರ ನಗರದ ವಾತಾವರಣಕ್ಕೆ ಪೂರಕ ಎನ್ನುವ ಬಗ್ಗೆ ಮರಗಳ ಗಣತಿ ಮತ್ತು ಸರ್ವೆ ನಡೆಯದೆ ಇದ್ದರೆ, ಮುಂದಿನ ಯೋಜನೆ ರೂಪಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದರು.
ಮರಗಳ ಗಣತಿ ವಿಚಾರದಲ್ಲಿ ಪಾಲಿಕೆ ಕ್ರಮ: ಪಾಲಿಕೆ ವ್ಯಾಪ್ತಿಯಲ್ಲಿರುವ ಮರಗಳ ಬಗ್ಗೆ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐಡಬ್ಲ್ಯುಎಸ್‌ಟಿ)ಯ ನೇತೃತ್ವದಲ್ಲಿ ಮಾಡಲು ಪಾಲಿಕೆ ಮುಂದಾಗಿತ್ತು. ಆದರೆ, ತಾಂತ್ರಿಕ ಕಾರಣ ಮತ್ತು ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮರಗಣತಿ ಸಾಧ್ಯವಿಲ್ಲ ಎಂದು ಸಂಸ್ಥೆ ಹೇಳಿದೆ ಎನ್ನಲಾಗಿದೆ.
“ನಗರದಲ್ಲಿ ಮರಗಣತಿ ಮಾಡಿಕೊಡುವಂತೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮರಗಣತಿ ಕಾರ್ಯಕ್ಕೆ 2 ಕೋಟಿ ರೂ. ಮೀಸಲಿಡಲಾಗಿದೆ’ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ರಂಗನಾಥಸ್ವಾಮಿ ತಿಳಿಸಿದ್ದಾರೆ.
ನೀವೂ ಮರಗಣತಿಯಲ್ಲಿ ಭಾಗವಹಿಸಿ: ಮರಗಳ ಸರ್ವೇಗೆ ಟ್ರೀ ಆ್ಯಪ್ ಪರಿಚಯಿಸಲಾಗಿದ್ದು, ಇದರಲ್ಲಿ ಸಾರ್ವಜನಿಕರು ಸಹ ಭಾಗವಹಿಸಬಹು ದು. ಈ ಆ್ಯಪ್‌ನ ಮೂಲಕ ನಿರ್ದಿಷ್ಟ ಮರದ ಪೋಟೋ ಕ್ಲಿಕ್ಕಿಸಿ, ಅಪ್ ಲೋಡ್ ಮಾಡಬಹುದು. ಆ್ಯಪ್‌ನಲ್ಲಿರುವ ಆಯ್ಕೆಯ ಮೂಲಕವೇ ಜಿಯೋ ಮ್ಯಾಪಿಂಗ್ ಆಗಲಿದೆ. ಇದನ್ನು ಪರಿಶೀಲನೆ ಮಾಡಿ ಅನುಮತಿ ನೀಡಲಿದ್ದೇವೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಬೆಂಗಳೂರು ನಗರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿ ದರು.
ಎರಡು ವಿಭಾಗವಾಗಿ ಮರಗಣತಿ: ಮರಗಳ ಗಣತಿಗೆ ಎರಡು ವಿಭಾಗಗಳನ್ನಾಗಿ ವಿಂಗಡಿಸಿಕೊಳ್ಳಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಉದ್ಯಾನಗಳು ಮತ್ತು ರಸ್ತೆಗಳಲ್ಲಿರುವ ಮರಗಣತಿ ಬಿಬಿಎಂಪಿ ಅರಣ್ಯ ವಿಭಾಗ ಹಾಗೂ ಸರ್ಕಾರಿ, ಖಾಸಗಿ ಪ್ರದೇಶ ಸೇರಿದಂತೆ ಒಟ್ಟಾರೆ ವ್ಯಾಪ್ತಿಯಲ್ಲಿರುವ ಮರಗಣತಿ ಜವಾಬ್ದಾರಿಯನ್ನು ಕರ್ನಾಟಕ ಅರಣ್ಯ ಇಲಾಖೆಯ ಬೆಂಗಳೂರು ನಗರ ವಿಭಾಗಕ್ಕೆ ನೀಡಲಾಗಿದೆ. 59 ಸಾವಿರ ಮರಗಳ ಗಣತಿ ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ 59 ಸಾವಿರ ಮರಗಳ ಗಣತಿ ಕಾರ್ಯ ನಡೆದಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ಸಲ್ಲಿಸಿದೆ.
ಬೆಂಗಳೂರು ನಗರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿ 2021ರ ಫೆ.12ರವರೆಗೆ 40,242 ಮರಗಳ ಗಣತಿ ಪೂರ್ಣಗೊಳಿಸಿದ್ದಾರೆ. ಅದೇ ರೀತಿ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ 18,815 ಮರಗಳ ಗಣತಿ ಕಾರ್ಯ ನಡೆಸಿದ್ದಾರೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸರ್ಕಾರ ಹೇಳಿದೆ. ಕಾಯ್ದೆ ಏನು ಹೇಳುತ್ತೆ ? ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ-1976 ಸೆಕ್ಷನ್ 7ರಲ್ಲಿ ಮರ ಪ್ರಾಧಿಕಾರದ ಕರ್ತವ್ಯಗಳನ್ನು ವಿವರಿಸಲಾಗಿದೆ. ಸೆಕ್ಷನ್ 7ರ ಉಪಕಲಂ ಬಿ ಇದರಲ್ಲಿ “ಅಸ್ತಿತ್ವದಲ್ಲಿರುವ ಮರಗಳ ಗಣತಿ ನಡೆಸುವುದು ಮತ್ತು ಅಗತ್ಯವೆನಿಸಿದಾಗಲೆಲ್ಲ ಮರಗಳ ಸಂಖ್ಯೆಯ ಬಗ್ಗೆ ಎಲ್ಲಾ ಮಾಲೀಕರು ಅಥವಾ ನಿವಾಸಿಗಳಿಂದ ಅವರ ಜಾಗದಲ್ಲಿರುವ ಮರಗಳ ಬಗ್ಗೆ ಘೋಷಣೆ ಪಡೆದುಕೊಳ್ಳುವುದು’ ಮರ ಪ್ರಾಧಿಕಾರದ ಕರ್ತವ್ಯ ಎಂದು ಹೇಳಲಾಗಿದೆ.
ಮರಗಳ ಗಣತಿ ಎಂದರೆ ಕೇವಲ ಸಂಖ್ಯೆ ಎಣಿಕೆ ಮಾಡುವುದಲ್ಲ. ಪ್ರತಿಯೊಂದು ಮರದ ವೈಶಿಷ್ಟéತೆ, ಪ್ರಬೇಧ, ಅದರ ಬಾಳಿಕೆ ಇತ್ಯಾದಿ ವಿಷಯಗಳನ್ನೂ ದಾಖಲಿಸಬೇಕು
ಹಿತೇಶ್ ವೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.