ಅನಾಥನೆಂದು ಬಂದ, ಮಗಳನ್ನೇ ಪ್ರೇಮಿಸಿದ!
Team Udayavani, Dec 1, 2018, 12:33 PM IST
ಬೆಂಗಳೂರು: ಅನಾಥ ಎಂದು ಹೇಳಿಕೊಂಡವನಿಗೆ ಆಶ್ರಯ ಕೊಟ್ಟು ಮಗನಂತೆ ಆರೈಕೆ ಮಾಡಿ ಕೊನೆಗೆ ಆತನಿಂದಲೇ ತನ್ನ ಕರುಳ ಕುಡಿಯನ್ನು “ದೂರಮಾಡಿಕೊಂಡ’ ತಾಯಿಯೊಬ್ಬಳ ದುಃಖದ ಕಥಾನಕಕ್ಕೆ ಹೈಕೋರ್ಟ್ ಶುಕ್ರವಾರ ಸಾಕ್ಷಿಯಾಯಿತು.
ಅನಾಥ ಎಂದು ಹೇಳಿಕೊಂಡು ಮಹಿಳೆಯೊಬ್ಬರ ಮನೆಯಲ್ಲಿ ಆಶ್ರಯ ಪಡೆದ ಯುವಕನೊಬ್ಬ, ಆಕೆಯ ಮಗಳನ್ನೇ ಪ್ರೀತಿಸಿ ಕರೆದೊಯ್ದ. ಬಳಿಕ ಮಗಳು ಬೇಕೆಂದು ನೊಂದ ತಾಯಿ ಹೈಕೋರ್ಟ್ ಮೆಟ್ಟಿಲು ಹತ್ತಿದಳು. “ಅವನ ಬಿಟ್ಟು ಇರಲಾರೆ’ ಎಂದು ಮಗಳು ಹೇಳಿದಳು. ಕಾನೂನಿನ ಮುಂದೆ ತಾಯಿ-ಮಗಳ ಸಂಬಂಧದ ಮುಂದೆ ಪ್ರೀತಿಯೇ ಗೆದ್ದಿತು. ಅನಾಥನಿಗೆ ಆಶ್ರಯ ಕೊಟ್ಟ ತಾಯಿ, ಮಗಳನ್ನು ದೂರಮಾಡಿಕೊಂಡು ತಾನೇ ಅನಾಥಳಾದಳು.
ಹೇಬಿಯಸ್ ಕಾರ್ಪಸ್ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ನ್ಯಾ.ಕೆ.ಎನ್.ಫಣೀಂದ್ರ ನೇತೃತ್ವದ ನ್ಯಾಯಪೀಠದಲ್ಲಿ ಶುಕ್ರವಾರ ಈ ವೃತ್ತಾಂತ ನಡೆಯಿತು. ಹೈಕೋರ್ಟ್ ನಿರ್ದೇಶನದಂತೆ ಪೊಲೀಸರು ಆರೋಪಿ ಯುವಕ ಹಾಗೂ ಯುವತಿಯನ್ನು ಹೈಕೋರ್ಟ್‌ಗೆ ಹಾಜರುಪಡಿಸಿದ್ದರು. “ಸ್ವಇಚ್ಛೆಯಿಂದ ನಾನು ಅವನ ಜತೆ ಹೋಗಿದ್ದೇನೆ.
ಅವನ್ನು ಬಿಟ್ಟು ಬಾಳಲಾರೆ’ ಯುವತಿ ಗಟ್ಟಿ ಧ್ವನಿಯಲ್ಲಿ ಕೋರ್ಟ್‌ಗೆ ಹೇಳಿದಳು. “ತಾಯಿಯ ನೋವು ಅರ್ಥವಾಗುತ್ತೆ, ಆದರೆ, ಇಬ್ಬರೂ ವಯಸ್ಕರಾಗಿರುವ ಹಿನ್ನೆಲೆಯಲ್ಲಿ ಅವರಿಬ್ಬರೂ ತಮ್ಮಿಷ್ಟದಂತೆ ಬದುಕುವ ಹಕ್ಕು ಹೊಂದಿದ್ದಾರೆ. ಇಬ್ಬರನ್ನೂ ಜತೆಗೆ ಕಳಿಸದೇ ವಿಧಿಯಿಲ್ಲ’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.
ತನ್ನ ಮಗಳು ನಾಪತ್ತೆಯಾಗಿದ್ದಾಳೆ ಎಂದು ತಾಯಿ ಬನಶಂಕರಿ ಪೊಲೀಸ್ ಠಾಣೆಗೆ 2018ರ ನ.15ರಂದು ದೂರು ನೀಡಿದ್ದಳು. ತಾನು ಆಶ್ರಯ ಕೊಟ್ಟ ಅನಾಥ ಯುವಕನ ಬಗ್ಗೆಯೂ ಆಕೆ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿರುತ್ತಾಳೆ. 10 ದಿನ ಕಳೆದರೂ ಪೊಲೀಸರು ಕ್ರಮ ಕೈಗೊಳ್ಳದೇ ಇರುವುದರಿಂದ ಮಗಳನ್ನು ಹುಡುಕಿ ಕೋರ್ಟ್‌ಗೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಆಕೆ ಹೈಕೋರ್ಟ್‌ಗೆ ಹೇಬಿಯೆಸ್ ಕಾರ್ಪಸ್ ಅರ್ಜಿ ಸಲ್ಲಿಸುತ್ತಾಳೆ.
ಮಗಳನ್ನು ಕೋರ್ಟ್ ಎದುರು ಹಾಜರುಪಡಿಸುವಂತೆ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿತು. ಅದರಂತೆ, ಮಗಳು ಹಾಗೂ ಯುವಕನ್ನು ಶುಕ್ರವಾರ ಪೊಲೀಸರು ಹಾಜರುಪಡಿಸಿದ್ದರು. ನ್ಯಾಯಪೀಠ ವಿಚಾರಣೆ ನಡೆಸಿದಾಗ “ತಾನು ಆತನನ್ನು ಪ್ರೀತಿಸುತ್ತಿದ್ದೇನೆ. ಸ್ವ ಇಚ್ಛೆಯಿಂದ ಆತನ ಜೊತೆಗೆ ಹೋಗಿದ್ದೇನೆ, ಆತನನ್ನು ಬಿಟ್ಟು ಬದುಕಲಾರೆ’ ಎಂದು ಯುವತಿ ಹೇಳಿಕೆ ನೀಡಿದಳು. ಇದನ್ನು ದಾಖಳಿಸಿಕೊಂಡ ನ್ಯಾಯಪೀಠ “ತಂದೆ-ತಾಯಿಗಳ ನೋವು ಕೋರ್ಟ್‌ಗೆ ಅರ್ಥವಾಗುತ್ತದೆ.
ಆದರೆ, ಮಕ್ಕಳು ತಮ್ಮ ತಂದೆ-ತಾಯಿಗಳ ನೋವು ಅರ್ಥ ಮಾಡಿಕೊಳ್ಳಬೇಕು. ಈ ಪ್ರಕರಣದಲ್ಲಿ ಇಬ್ಬರು ಸಹ ವಯಸ್ಕರಾಗಿದ್ದಾರೆ. ಕೋರ್ಟ್‌ಗೆ ತನ್ನದೇ ಆದ ಪರಿಧಿ ಇದೆ. ತಾನು ಪ್ರೀತಿಸಿದವನ ಜೊತೆಗೆ ಹೋಗುವುದಾಗಿ ಯುವತಿ ಹೇಳುತ್ತಿರುವಾಗ, ಬಲವಂತವಾಗಿ ಆಕೆಯನ್ನು ತಾಯಿಯ ಜೊತೆಗೆ ಕಳಿಸಿಕೊಡಲು ಸಾಧ್ಯವಿಲ್ಲ ಎಂದು ಮೌಖೀಕ ಅಭಿಪ್ರಾಯಪಟ್ಟ ನ್ಯಾಯಪೀಠ, ಆಕೆಯ ಮಗಳನ್ನು ಯುವಕನ ಜೊತೆಗೆ ಹೋಗಲು ಅವಕಾಶ ಮಾಡಿಕೊಟ್ಟಿತು.
ಕುಸಿದು ಬಿದ್ದ ಮಹಿಳೆಗೆ ನೆರವಾಗಿದ್ದ ಯುವಕ: 55 ವರ್ಷದ ವಿಧವೆ, ಮಗ ಹಾಗೂ ಮಗಳ ಜತೆ ನಗರದ ಜಯನಗರದಲ್ಲಿ ವಾಸವಿದ್ದು, ಬೇರೆಯವರ ಮನೆಗಳಲ್ಲಿ ಅಡುಗೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಆ ಮಹಿಳೆ ಒಂದೂವರೆ ವರ್ಷದ ಹಿಂದೆ ವಾಯು ವಿಹಾರಕ್ಕೆ ಹೋದಾಗ ರಸ್ತೆಯಲ್ಲಿ ಕುಸಿದು ಬೀಳುತ್ತಾರೆ.
ಆಗ ಯುವಕನೊಬ್ಬ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾನೆ. ಬಳಿಕ ಆತ ತಾನೊಬ್ಬ ಅನಾಥ ಎಂದು ಹೇಳಿಕೊಳ್ಳುತ್ತಾನೆ. ಕರುಣೆ ತೋರಿದ ಮಹಿಳೆ, ಆತನಿಗೆ ತನ್ನ ಮನೆಯಲ್ಲೇ ಅಶ್ರಯ ಕೊಟ್ಟು ಮಗನಂತೆ ನೋಡಿಕೊಳ್ಳುತ್ತಾಳೆ. ಮಹಿಳೆಯ 20 ವರ್ಷದ ಮಗಳೊಂದಿಗೆ ಸಲುಗೆಯಿಂದ ಇದ್ದ ಆ ಯುವಕ, ಯುವತಿಯನ್ನು ಬಾಯ್ತುಂಬ “ತಂಗಿ’ ಅಂತಲೇ ಕರೆಯುತ್ತಿದ್ದ ಎಂಬುದು ಮಹಿಳೆ ನೀಡಿರುವ ದೂರಿನ ಸಾರಾಂಶ.
ಈ ಮಧ್ಯೆ ನ.14ರಂದು ಬೆಳಗ್ಗೆ 8.45ಕ್ಕೆ ಸಾಕು ನಾಯಿಯೊಂದಿಗೆ ಒಬ್ಬಳೇ ಮನೆಯಿಂದ ಹೊರಟ ಮಗಳು, ಓದಿಕೊಳ್ಳಲು ಸ್ನೇಹಿತೆಯ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳುತ್ತಾಳೆ. ಸಂಜೆಯಾದರೂ ಆಕೆ ವಾಪಸ್ ಬಾರದ ಕಾರಣ ತಾಯಿ ಸಾಕಷ್ಟು ಹುಡುಕಾಟ ನಡೆಸುತ್ತಾಳೆ ಎಂಬ ಅಂಶ ದೂರಿನಲ್ಲಿದೆ. ಆದರೂ, ಆಕೆಯ ಸುಳಿವು ಸಿಗುವುದಿಲ್ಲ.
ಅದೇ ದಿನ ಬೆಳಗ್ಗೆ 6 ಗಂಟೆ ಸುಮಾರಿಗೆ ಯುವಕ ಕೂಡ ತನ್ನೆಲ್ಲ ವಸ್ತುಗಳೊಂದಿಗೆ ಮನೆ ಬಿಟ್ಟು ಹೋಗಿರುತ್ತಾನೆ. ಅನುಮಾನಗೊಂಡ ತಾಯಿ, ಬನಶಂಕರಿ ಪೊಲೀಸರಿಗೆ ಮಗಳ ನಾಪತ್ತೆ ಬಗ್ಗೆ ದೂರು ಕೊಟ್ಟಿರುತ್ತಾಳೆ. ಆ ಪ್ರಕರಣ ಹೇಬಿಯಸ್ ಕಾರ್ಪಸ್ ಅರ್ಜಿಯ ರೂಪದಲ್ಲಿ ಹೈಕೋರ್ಟ್ ಮೆಟ್ಟಿಲೇರುತ್ತದೆ.
ಡಿಸೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿತ್ತು: ದೂರದ ಸಂಬಂಧಿ ಜತೆ ಡಿಸೆಂಬರ್ 1 ಮತ್ತು 2ರಂದು ಮಗಳ ಮದುವೆ ನಿಶ್ಚಯವಾಗಿತ್ತು. ಈ ನಡುವೆ ಆಕೆ ಮನೆ ಬಿಟ್ಟು ಹೋಗಿದ್ದಳು. ಕೋರ್ಟ್‌ಗೆ ಬಂದ ಮಗಳು, ತಾನು ಪ್ರೀತಿಸಿದ ಯುವಕನ ಜತೆಗೇ ಹೋಗುವುದಾಗಿ ಹೇಳಿದಾಗ ತಾಯಿ ಅಸಹಾಯಕಳಾಗಿ ನಿಂತಳು. ಮಗಳು ಹೊರ ನಡೆದಾಗ “ನೀನು ನನ್ನ ಪಾಲಿಗೆ ಸತ್ತು ಹೋದೆ’ ಎಂದು ಹಿಡಿಶಾಪ ಹಾಕಿ ದುಃಖ ತಡೆಯಲಾರದೆ ಅತ್ತಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.