ಮಾರ್ಗದುದ್ದಕ್ಕೂ ವಸ್ತುಗಳ ಎಸೆದು ಹೋದ ಹಂತಕರು
Team Udayavani, Mar 22, 2019, 6:36 AM IST
ಬೆಂಗಳೂರು: ಕುಖ್ಯಾತ ರೌಡಿ ಲಕ್ಷ್ಮಣನ ಹತ್ಯೆಗೈದ ಆರೋಪಿಗಳು, ಹತ್ಯೆ ವೇಳೆ ಬಳಸಿದ ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಸುಬ್ರಹ್ಮಣ್ಯ, ತಮಿಳುನಾಡಿನ ಕನ್ಯಾಕುಮಾರಿ ಹಾಗೂ ಇತರೆಡೆ ಬಿಸಾಡಿರುವುದು ಸಿಸಿಬಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ 12 ಮಂದಿ ಆರೋಪಿಗಳ ಪೈಕಿ ಆರು ಮಂದಿಯನ್ನು ಹೆಚ್ಚಿನ ವಿಚಾರಣೆಗಾಗಿ ಮಾ.25ರವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಮಾ.7ರಂದು ಕೃತ್ಯ ಎಸಗಿದ ಬಳಿಕ ಆರೋಪಿಗಳು ಎರಡು ಕಾರುಗಳಲ್ಲಿ ತಲೆಮರೆಸಿಕೊಂಡಿದ್ದರು. ಮಾರ್ಗ ಮಧ್ಯೆ ಕಾರುಗಳನ್ನು ಬಿಟ್ಟು, ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಬಸ್‌ಗಳ ಮೂಲಕ ಕುಕ್ಕೆಸುಬ್ರಹ್ಮಣ್ಯ ಹಾಗೂ ಕನ್ಯಾಕುಮಾರಿಗೆ ತೆರಳಿದ್ದಾರೆ.
ಈ ವೇಳೆ ಮಾರ್ಗದುದ್ದಕ್ಕೂ ತಮ್ಮ ಮೊಬೈಲ್‌ಗಳು, ಬಟ್ಟೆ, ಮಾರಕಾಸ್ತ್ರಗಳು ಹಾಗೂ ಇತರೆ ವಸ್ತುಗಳನ್ನು ಅಲ್ಲಲ್ಲಿ ಬಿಸಾಡಿದ್ದಾರೆ. ಅಷ್ಟೇ ಅಲ್ಲದೆ, ರೂಪೇಶ್ ಮತ್ತು ವರ್ಷಿಣಿ ಮೊಬೈಲ್‌ಗಳಲ್ಲಿ ಎರಡರಿಂದ ಮೂರು ಜಿಬಿಯಷ್ಟು ಎಸ್‌ಎಂಎಸ್, ವ್ಯಾಟ್ಸ್‌ಆ್ಯಪ್ ಮತ್ತು ಕರೆ ವಿವರಗಳ ಮಾಹಿತಿ ಇದೆ.
ಜತೆಗೆ ಕೊಲೆಗೂ ಒಂದು ವಾರ ಮೊದಲು ಬೇರೆ-ಬೇರೆ ವ್ಯಕ್ತಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಹಣಕಾಸಿನ ವ್ಯವಸ್ಥೆ ಮಾಡಿಕೊಂಡಿರುವುದು ಕಂಡು ಬಂದಿದೆ. ಆದರೆ, ಆರೋಪಿಗಳು ಬಳಸಿದ ಕಾರುಗಳ ಮೂಲ ಮಾಲೀಕರ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಆರೋಪಿಗಳ ಪೈಕಿ ರೂಪೇಶ್ ಕೃತ್ಯ ಎಸಗಿದ ಬಳಿಕ ಚನ್ನಪಟ್ಟಣದ ಎಲೆತೋಟದಹಳ್ಳಿಯಲ್ಲಿರುವ ಆತನ ಜಮೀನಲ್ಲಿ ತನ್ನ ಮೊಬೈಲ್‌ನ್ನು ಬಚ್ಚಿಟ್ಟಿದ್ದ. ಹಲಗೂರಿನ ರಾಧಕೃಷ್ಣ ಬಟ್ಟೆ ಅಂಗಡಿಯಲ್ಲಿ ಎಲ್ಲ ಆರೋಪಿಗಳು ಬಟ್ಟೆಗಳನ್ನು ಖರೀಸಿದಿದ್ದಾರೆ.
ನಂತರ ದೇವೀರಹಳ್ಳಿಯಲ್ಲಿ ನಾಗೇಶ್ ಎಂಬುವರ ರೇಷ್ಮೆಹುಳದ ಮನೆ ಸಮೀಪದಲ್ಲಿ ಮಾರಕಾಸ್ತ್ರಗಳನ್ನು ತೊಳೆದು, ಬಟ್ಟೆ ಬದಲಿಸಿದ್ದಾರೆ. ಅನಂತರ ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ಕಾರನ್ನು ಸಾತನೂರಿನ ಹೊನ್ನಾಗಾನಹಳ್ಳಿಯ ಬಿಡಬ್ಲ್ಯೂಎಸ್‌ಎಸ್‌ಬಿ ಪೈಪ್‌ಲೈನ್ ರಸ್ತೆ ಪಕ್ಕದಲ್ಲಿರುವ ಖಾಲಿ ಜಮೀನಲ್ಲಿ ಬಿಟ್ಟು ಹೋಗಿದ್ದರು.
ಇನ್ನು ಹೇಮಂತ್ ಅಲಿಯಾಸ್ ಹೇಮಿ, ಆಕಾಶ್ ಮತ್ತು ದೇವರಾಜ್ ತಮ್ಮ ರಕ್ತದ ಕಲೆಯಿದ್ದ ಬಟ್ಟೆಗಳನ್ನು ನಂಜನಗೂಡಿನ ಕಪಿಲಾ ನದಿ ಸಮೀಪದ ಸೇತುವೆ ಕೆಳಗೆ ಬಿಸಾಡಿದ್ದರು. ಈ ಪೈಕಿ ರೂಪೇಶ್ ಮೊಬೈಲ್, ಸ್ಕಾರ್ಪಿಯೋ, ಮಾರಕಾಸ್ತ್ರಗಳು ಹಾಗೂ ಆರೋಪಿಗಳ ರಕ್ತದ ಕಲೆಗಳಿರುವ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಕೃತ್ಯಕ್ಕೆ ಬಳಸಲಾಗಿದ್ದ ಟಾಟಾ ಇಂಡಿಕಾ ಕಾರನ್ನು ಉಲ್ಲಾಳ ಉಪನಗರದಲ್ಲಿ ವಶಕ್ಕೆ ಪಡೆಯಲಾಗಿದೆ.
ಕ್ಯಾಟ್‌ರಾಜನ ಮೂವರು ಸಹಚರರ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಟ್‌ರಾಜನ ಮೂವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆ ನಿವಾಸಿ ಉದಯ್(23), ಪೀಣ್ಯ ನಿವಾಸಿ ಚೇತನ್ ಅಲಿಯಾಸ್ ಕರಿಯ ಚೇತು (21), ಕುರುಬರಹಳ್ಳಿಯ ಚೇತನ್ ಅಲಿಯಾಸ್ ಹಂದಿಚೇತು (25)ಬಂಧಿತರು.
ಈ ಮೂಲಕ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಆರೋಪಿಗಳ ಪೈಕಿ ಹಂದಿ ಚೇತು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಅಲ್ಲಿಂದಲೇ ಲಕ್ಷ್ಮಣನ ಕೊಲೆಗೆ ಸಹಕಾರ ನೀಡಿದ್ದಾನೆ. ಪ್ರಕರಣದಲ್ಲಿ ಇತರೆ ಆರೋಪಿಗಳ ಕೈವಾಡ ಕೂಡ ಇದ್ದು, ಶೋಧ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಆರು ಮಂದಿ ಪೊಲೀಸರ ವಶಕ್ಕೆ: ಬಂಧಿತ ಹನ್ನೆರಡು ಮಂದಿ ಆರೋಪಿಗಳ ಪೈಕಿ ಆರು ಮಂದಿಯನ್ನು ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮಾ.25ರವರಗೆ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ. ರೂಪೇಶ್, ವರ್ಷಿಣಿ, ದೇವರಾಜು, ವರುಣ್ ಕುಮಾರ್, ಮಧುಕುಮಾರ್, ಅಲೋಕ ಆರೋಪಿಗಳನ್ನು ಗುರುವಾರ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು, ಮಾ.25ರವರೆಗೆ ವಶಕ್ಕೆ ಪಡೆದುಕೊಂಡಿದ್ದಾರೆ.
ಕೋಕಾ ಕಾಯ್ದೆ ಜಾರಿ?: ಬಂಧಿತ ಎಲ್ಲ ಆರೋಪಿಗಳ ವಿರುದ್ಧ “ಕೋಕಾ ಕಾಯ್ದೆ’ ಅಡಿ ಪ್ರಕರಣ ದಾಖಲಿಸಲು ಸಿಸಿಬಿ ಪೊಲೀಸರು ಸಿದ್ದತೆ ನಡೆಸಿದ್ದಾರೆ. ಆರೋಪಿಗಳು ಸಂಘಟಿತವಾಗಿ ವ್ಯವಸ್ಥಿತ ರೀತಿಯಲ್ಲಿ ಕೃತ್ಯ ಎಸಗಿರುವುದು ಇದುವರೆಗಿನ ತನಿಖೆಯಲ್ಲಿ ಕಂಡು ಬಂದಿದೆ. ಅಲ್ಲದೆ, ಪ್ರಕರಣದಲ್ಲಿ ಭಾಗಿಯಾಗಿರುವ 12 ಮಂದಿ ಪೈಕಿ 11 ಮಂದಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಕೋಕಾ ಕಾಯ್ದೆ ಜಾರಿ ಮಾಡಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.