ಎಟಿಎಂ ಹಲ್ಲೆಕೋರ 8 ದಿನ ಪೊಲೀಸ್ ವಶಕ್ಕೆ
Team Udayavani, Mar 8, 2017, 12:03 PM IST
ಬೆಂಗಳೂರು: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಎಟಿಎಂ ಹಲ್ಲೆ ಪ್ರಕರಣದ ಆರೋಪಿ ಮಧುಕರ್‌ರೆಡ್ಡಿಯನ್ನು ಎಸ್.ಜೆ ಪಾರ್ಕ್ ಪೊಲೀಸರು ಮಂಗಳವಾರ ಬೆಳಗ್ಗೆ 6ನೇ ಎಸಿಎಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂಟು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಮೂರು ವರ್ಷಗಳ ನಂತರ ಜ.31 ರಂದು ಆಂಧ್ರ ಚಿತ್ತೂರು ಜಿಲ್ಲೆ ಮದನಪಲ್ಲಿಯಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ ಮಧುಕರರೆಡ್ಡಿಯನ್ನು ನಗರ ಪೊಲೀಸರು ಬಾಡಿ ವಾರೆಂಟ್ ಮೇಲೆ ಆಂಧ್ರ ಪೊಲೀಸರಿಂದ ವಶಕ್ಕೆ ಪಡೆದು ನಗರಕ್ಕೆ ಕರೆ ತಂದಿದ್ದಾರೆ.
ಮಧುಕರ್ ರೆಡ್ಡಿಯನ್ನು ಮಂಗಳವಾರ 6ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಆರೋಪಿಯು ಎಟಿಎಂನಲ್ಲಿ ಜ್ಯೋತಿ ಉದಯ್ ಎಂಬ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಸಂಬಂಧ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಸ್ಥಳ ಮಹಜರು ಬಾಕಿ ಇರುವ ಹಿನ್ನೆಲೆಯಲ್ಲಿ ಪೊಲೀಸರು 14 ದಿನಗಳ ಕಾಲ ಆತನನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಅವರು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮಾ.14ರ ವರೆಗೆ ಪೊಲೀಸರ ವಶಕ್ಕೆ ನೀಡಿದರು. ಎಟಿಎಂ ಹಲ್ಲೆ ಪ್ರಕರಣದಲ್ಲಿ ವಿಚಾರಣೆಗಾಗಿ ಬೆಂಗಳೂರಿಗೆ ಕರೆತಂದಿರುವ ಮಧುಕರ್ ರೆಡ್ಡಿಯನ್ನು ಹಲಸೂರು ಗೇಟ್ ಎಸಿಪಿ ತಿಮ್ಮಯ್ಯ ನೇತೃತ್ವದ ತಂಡ ವಿಚಾರಣೆಗೊಳಪಡಿಸಲಿದೆ.
ಘಟನೆಯ ದಿನ ಕೃತ್ಯಕ್ಕೆ ಬಳಸಿದ್ದ ಮಚ್ಚು ಮತ್ತು ಆರೋಪಿ ಧರಿಸಿದ್ದ ಬಟ್ಟೆ ಹಾಗೂ ಬ್ಯಾಗ್‌ಗಳನ್ನು ತನಿಖೆಯ ದೃಷ್ಟಿಯಿಂದ ವಶಕ್ಕೆ ಪಡೆಯಬೇಕಿದೆ. ಇದಾದ ನಂತರ ಆರೋಪಿ ಮಧುಕರ್ ರೆಡ್ಡಿಯಿಂದ ಘಟನಾ ಸ್ಥಳದ ಮಹಜರ್ ಮಾಡುತ್ತಾರೆ. ಇದಾದ ಬಳಿಕ ಗುರುತು ಪತ್ತೆಗೆ ಪರೇಡ್ ನಡೆಸಲಿದ್ದಾರೆ.
ಚಪ್ಪಲಿ ಬಿಟ್ಟು ಕೋರ್ಟ್ ಹಾಲ್‌ಗೆ ಬರುವಂತೆ ಸೂಚಿಸಿದ ನ್ಯಾಯಾಧೀಶರು!
ಪೊಲೀಸರು ಆರೋಪಿಯನ್ನು ನ್ಯಾಯಾಧೀಶ ರಾಘವೇಂದ್ರ ಅವರ ಮುಂದೆ ಹಾಜರುಪಡಿಸಿದಾಗ ಮಧುಕರ್ ರೆಡ್ಡಿ ಚಪ್ಪಲಿ ಹಾಕಿಕೊಂಡು ನ್ಯಾಯಾಲಯ ಪ್ರವೇಶಿಸುತ್ತಿದ್ದ. ಇದನ್ನು ಕಂಡ ನ್ಯಾಯಾಧೀಶರು ಕೋರ್ಟ್ ಹಾಲ್ ಹೊರಗೆ ಚಪ್ಪಲಿ ಬಿಟ್ಟು ಬರುವಂತೆ ಸೂಚಿಸಿದರು.
ಇದರಿಂದ ಕೆಲಕಾಲ ಆರೋಪಿ ಮಧುಕರ್ ರೆಡ್ಡಿ ತಬ್ಬಿಬ್ಟಾದ. ಬಳಿಕ ಅವರ ಆಜ್ಞೆಯಂತೆ ಕೋರ್ಟ್ ಹಾಲ್‌ನ ಹೊರಗೆ ಚಪ್ಪಲಿ ಬಿಟ್ಟು ಒಳಗೆ ತೆರಳಿದ. ಆದರೆ ನ್ಯಾಯಾಧೀಶರು ಯಾವ ಉದ್ದೇಶಕ್ಕೆ ಕೋರ್ಟ್ ಹಾಲ್‌ನ ಹೊರಗೆ ಚಪ್ಪಲಿ ಬಿಡುವಂತೆ ಹೇಳಿದರು ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.