ಬುದ್ಧನ ವಿಗ್ರಹ ಮಾರಾಟಕ್ಕೆ ಯತ್ನ: ಐವರ ಬಂಧನ
Team Udayavani, Dec 19, 2022, 4:05 PM IST
![tdy-18](https://www.udayavani.com/wp-content/uploads/2022/12/tdy-18-16-620x372.jpg)
![tdy-18](https://www.udayavani.com/wp-content/uploads/2022/12/tdy-18-16-620x372.jpg)
ಬೆಂಗಳೂರು: ಪ್ರಾಚೀನ ಕಾಲದ ಬುದ್ಧನ ವಿಗ್ರಹವನ್ನು ವಿದೇಶಕ್ಕೆ ರಫ್ತು ಮಾಡಲು ಹೈದರಾಬಾದ್‌ನಿಂದ ಬಂದಿದ್ದ ಐವರನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್‌ನ ಕೋಂಪಲ್ಲಿ ನಿವಾಸಿ ಪಂಚಮರ್ತಿ ರಘುರಾಮ ಚೌದರಿ (45), ಹೊರಮಾವಿನ ಉದಯಕುಮಾರ್(37), ವಿವೇಕನಗರದ ಫ್ರೆಡ್ಡಿ ಡಿಸೋಜಾ(44), ಹೆಣ್ಣೂರು ಬಂಡೆಯ ಶರಣ್ ನಾಯರ್(41) ಹಾಗೂ ಕೊತ್ತನೂರಿನ ಎಂ.ಕೆ.ಪ್ರಸನ್ನ(40) ಬಂಧಿತರು.
ಆರೋಪಿಗಳಿಂದ 38 ಸೆ.ಮಿ. ಉದ್ದದ ಬುದ್ಧನ ವಿಗ್ರಹ, ಬ್ರಿàಫ್ಕೇಸ್, ಐದು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಇತ್ತೀಚೆಗೆ ನಗರದ ರಾಜರಾಮಮೋಹನ ರಾಯ್ ರಸ್ತೆ ವುಡ್‌ಲ್ಯಾಂಡ್ಸ್ ಹೋಟೆಲ್ ಬಳಿ ಕೆಲ ವ್ಯಕ್ತಿಗಳು ಸುಮಾರು 200 ವರ್ಷದ ಪುರಾತನ ಬುದ್ಧನ ವಿಗ್ರಹವನ್ನು ಹೊರದೇಶಕ್ಕೆ ರಫ್ತು ಮಾಡುವ ಉದ್ದೇಶದಿಂದ ವಿಗ್ರಹ ಮಾರಾಟಕ್ಕೆ ಬಂದಿದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಹೈದರಾಬಾದ್ ಮೂಲದ ಆರೋಪಿ ಪಂಚಮರ್ತಿ ರಘುರಾಮ ಚೌದರಿಗೆ ಶ್ರೀಕಾಂತ ಎಂಬಾತ ಈ ವಿಗ್ರಹವನ್ನು 30 ಲಕ್ಷ ರೂ.ಗೆ ಮಾರಾಟ ಮಾಡಿದ್ದ. ಆನಂತರ ಈತ ಈ ವಿಗ್ರಹವನ್ನು ಹೊರ ದೇಶಕ್ಕೆ ರಫ್ತು ಮಾಡಿ ಮಾರಿದರೆ ಕೋಟ್ಯಂತರ ರೂ. ಸಿಗಲಿದೆ. ಈ ಹಣವನ್ನು ಎಲ್ಲರೂ ಹಂಚಿಕೊಳ್ಳಬಹುದು ಎಂದು ಸಹಚರರಿಗೆ ಆಮಿಷವೊಡ್ಡಿ ಈ ವಿಗ್ರಹ ಮಾರಾಟಕ್ಕೆ ಯತ್ನಿಸಿದ್ದರು ಎಂದು ಪೊಲೀಸರು ಹೇಳಿದರು.
ಪ್ರಾಥಮಿಕ ತನಿಖೆಯಲ್ಲಿ ಈ ವಿಗ್ರಹವನ್ನು ಹೈದರಾಬಾದ್‌ನಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಪಂಚಮರ್ತಿ ರಘುಗೆ ಈ ವಿಗ್ರಹ ಮಾರಾಟ ಮಾಡಿದ್ದ ಹೈದರಾಬಾದ್ ಮೂಲದ ಶ್ರೀಕಾಂತ್ ಬಂಧನದ ಬಳಿಕ ಈ ವಿಗ್ರಹದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಶ್ರೀಕಾಂತ್ ಹಿನ್ನೆಲೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.