ಹೂಗಳಲ್ಲಿ ಅರಳಿದ ಬಾಪು ಬದುಕು
Team Udayavani, Jan 19, 2019, 6:11 AM IST
ಬೆಂಗಳೂರು: ಗಣರಾಜೋತ್ಸವದ ಹಿನ್ನೆಲೆಯಲ್ಲಿ ಸಸ್ಯಕಾಶಿ ಲಾಲ್‌ಬಾಗ್‌ನ ಗಾಜಿನಮನೆ ಆವರಣದಲ್ಲಿ ತಹರೇವಾರಿ ಹೂವುಗಳ ವೈಯಾರ ಶುಕ್ರವಾರದಿಂದ ಶುರುವಾಗಿದೆ. ಬಣ್ಣ ಬಣ್ಣದ ಹೂವಿನ ದಳಗಳು ಲವಲವಿಕೆಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಂದೇಶ ಸಾರುತ್ತಿವೆ. ಸಬರಮತಿ ಆಶ್ರಮ, ರಾಜ್‌ಘಾಟ್‌ನ ಗಾಂಧಿ ಸ್ಮಾರಕ, ಬಾಪು ಕುಟೀರ, ಬಾಪು ದಂಡಿಯಾತ್ರೆ ಸೇರಿದಂತೆ ಗಾಂಧೀಜಿ ಅವರ ಬದುಕಿನ ನೂರಾರು ಪುಟಗಳು ಹೂವಿನಲ್ಲಿ ಅರಳಿವೆ.
ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಮೊದಲ ದಿನ ಸಸ್ಯಕಾಶಿಗೆ 10,200 ವಯಸ್ಕರು ಹಾಗೂ 1400 ಮಕ್ಕಳು ಸೇರಿ ಒಟ್ಟು 11,600 ಮಂದಿ ಭೇಟಿ ನೀಡಿದ್ದರು. ಪ್ರವೇಶ ಶುಲ್ಕದ ರೂಪದಲ್ಲಿ ಶುಕ್ರವಾರ 4.22 ಲಕ್ಷ ರೂ. ಸಂಗ್ರಹವಾಗಿದೆ.
ಸೇವಂತಿಗೆ, ಗ್ಲಾಕ್ಸಿನಿಯಾ, ಪಾಯಿನ್ ಸಿಟಿಯಾ, ಪೆರೆನಿಯಲ್ ಸನ್‌ಫ್ಲವರ್, ಮೆಡಿನೆಲ್ಲಾ, ಅಂಥೊರಿಯಂ, ಆರ್ಕಿಡ್ಸ್, ವಿಂಕಾ, ಗುಲಾಬಿ, ಲಿಲ್ಲಿ, ಬೆಗೋನಿಯಾ, ಕಾರ್ನೇಷಲ್, ಸೈಕ್ಲೊಮನ್, ಮೆಟೊನಿಯಾ, ಡೇಲಿಯಾ ಸೇರಿದಂತೆ 81 ಜಾತಿಯ ದೇಸಿ ಮತ್ತು ವಿದೇಶಿ ಹೂವುಗಳು ಉಪ್ಪಿನ ಸತ್ಯಾಗ್ರಹದ ಕತೆಗೆ ಜೀವಂತಿಕೆ ನೀಡಿವೆ.
ಗಣರಾಜ್ಯೋತ್ಸವದ ಹಿನ್ನೆಯಲ್ಲಿ ತೋಟಗಾರಿಕೆ ಇಲಾಖೆ ಜ.18ರಿಂದ 27ರವರೆಗೆ ಲಾಲ್ ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದ್ದು, ಶುಕ್ರವಾರ ಆರಂಭವಾದ ಫಲಪುಷ್ಪ ಪ್ರದರ್ಶನಕ್ಕೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಶಾಲಾ ಮಕ್ಕಳು, ವಿದೇಶಿ ಪ್ರವಾಸಿಗರು ಮನಸೋತರು.
2.4 ಲಕ್ಷ ಕೆಂಪು ಗುಲಾಬಿ, 1.6 ಲಕ್ಷ ಬಿಳಿ ಸೇವಂತಿಗೆ, 3.2 ಲಕ್ಷ ಶ್ವೇತ ವರ್ಣದ ಸೇವಂತಿಗೆ 80 ಸಾವಿರ ಕಿತ್ತಳೆ ಬಣ್ಣದ ಗುಲಾಬಿ ಸೇರಿದಂತೆ ಸುಮಾರು 6.4 ಲಕ್ಷ ಹೂವುಗಳಲ್ಲಿ ನಿರ್ಮಾಣವಾದ ಸಬರಮತಿ ಆಶ್ರಮ, 6 ಅಡಿ ಎತ್ತರ ಮತ್ತು 5 ಅಡಿ ಅಗಲದ ಧ್ಯಾನಸ್ಥ ಗಾಂಧಿ ಪ್ರತಿಮೆ, ಬೃಹತ್ ಗಾತ್ರದ ಗಾಂಧಿ ಕನ್ನಡ ಮತ್ತು ಗಾಂಧಿ ಚರಕ ನೋಡಗರ ಚಿತ್ತಾಕರ್ಷಿಸುತ್ತಿವೆ.
ಮನಸೆಳೆದ ಗಾಂಧಿ ವೇಷಧಾರಿ: ಪ್ರದರ್ಶನ ವೀಕ್ಷಣೆಗೆಂದು ಆಗಮಿಸಿದ ಪುಟಾಣಿಗಳನ್ನು ವಿಶೇಷವಾಗಿ ಆಕರ್ಷಿಸಿದ್ದು, ಗಾಂಧಿ ವೇಷಧಾರಿ ವೇಮಗಲ್ ಸೋಮಶೇಖರ್. ಗಾಜಿನಮನೆ ಆವರಣದ ಸಬರಮತಿ ಆಶ್ರಮದ ಎದುರು ಗಾಂಧಿ ಚಿಂತಕ, ಕೆಂಪೇಗೌಡ ನಗರದ ನಿವಾಸಿ ವೇಮಗಲ್ ಸೋಮಶೇಖರ್, ಗಾಂಧಿ ವೇಷ ತೊಟ್ಟು ಆಸೀನರಾಗಿದ್ದರು. ಅವರನ್ನು ನೋಡಿದ ಪುಟಾಣಿ ಮಕ್ಕಳು ಗಾಂಧಿ ತಾತ… ಗಾಂಧಿ ತಾತ, ಎಂದು ಚಪ್ಪಾಳೆ ತಟ್ಟಿ ಖುಷಿಪಟ್ಟರು.
ಕೆಲವರು, ತಾತನ ಬಳಿ ಹೋಗಿ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಗಾಂಧಿ ತಾತನನ್ನು ಚಿತ್ರದಲ್ಲಷ್ಟೇ ನೋಡಿದ್ದೇವೆ. ಆದರೆ ಅವರನ್ನೇ ಹೋಲುವ ವೇಷಧಾರಿ ಕಂಡು ಸಂತಸವಾಗಿದೆ ಎಂದು ಆಸ್ಟ್ರೇಲಿಯಾದ ಮೆಲ್ಬೋರ್ನೆ ನಿವಾಸಿ, ಅನಿವಾಸಿ ಭಾರತೀಯ ಪ್ರಜೆ ಜೆಪಿ ನಗರದ ದಿಯಾಕ್ಷಿ ಖುಷಿ ಪಟ್ಟರು.
ಗಾಂಧೀಜಿ ಅವರ ಚಿಂತನೆಗಳಿಗೆ ಮಾರು ಹೋಗಿರುವ ನಾನು, ಗಾಂಧಿ ಕುರಿತ ಕೆಲವು ಪುಸ್ತಕಗಳನ್ನು ಬರೆದಿದ್ದೇನೆ. ಜತಗೆ ನಂದಿಬೆಟ್ಟದಲ್ಲಿ ಗಾಂಧೀಜಿ ತಂಗಿದ್ದಾಗ ಮತ್ತು ಬೆಂಗಳೂರಿಗೆ ಭೇಟಿ ನೀಡಿದಾಗ ತೆಗೆದ ಹಲವು ಫೋಟೋಗಳನ್ನು ಸಂಗ್ರಹಿಸಿದ್ದೇನೆ. ಶಾಂತಿಧೂತನ ವೇಷ ಧರಿಸುವುದೇ ಒಂದು ಪುಣ್ಯ ಎಂದು ವೇಮಗಲ್ ಸೋಮಶೇಖರ್ ಆನಂದಪಟ್ಟರು. ಪ್ರದರ್ಶನ ಮುಗಿಯುವ ತನಕ ಈ ವೇಷದಲ್ಲಿರುವುದಾಗಿ ಅವರು ತಿಳಿಸಿದರು.
ಕತೆ ಹೇಳುವ ಛಾಯಾಚಿತ್ರಗಳು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಾಂಧೀಜಿ ಅವರು ಕರ್ನಾಟಕಕ್ಕೆ ಭೇಟಿ ನೀಡಿದ ಫೋಟೊಗಳನ್ನು ಪ್ರದರ್ಶನಕ್ಕೆ ಇರಿಸಿದ್ದು, ನೋಡುಗರ ಪ್ರಶಂಸೆಗೆ ಪಾತ್ರವಾಗಿದೆ. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿಗೆ ಬಾಪು ಅವರು ಪತ್ನಿ ಕಸ್ತೂರ ಬಾ ಅವರೊಂದಿಗೆ ಭೇಟಿ ನೀಡಿದ ಅನುಪಮ ಕ್ಷಣಗಳು ಫೋಟೋದಲ್ಲಿ ಸೆರೆಯಾಗಿವೆ.
ಜತೆಗೆ ಬೆಳಗಾವಿ ಅಧಿವೇಶನ, 1927ರಲ್ಲಿ ಕೃಷ್ಣರಾಜ ಸಾಗರಕ್ಕೆ ಭೇಟಿ, ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರೊಂದಿಗಿನ ಮಾತುಕತೆ, ಚಿಕ್ಕಮಗಳೂರು ಜಿಲ್ಲೆಯ ಕಡೂರಿಗೆ ಭೇಟಿ ನೀಡಿದ್ದು, ಕೆ.ಸಿ.ರೆಡ್ಡಿ ಅವರೊಂದಿಗೆ ಕೋಲಾರದಲ್ಲಿ ನಡೆಸಿದ ಪಾದಯಾತ್ರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಹಾಗೂ ಯಲಚೇನಹಳ್ಳಿಯ ಕಸ್ತೂರ ಬಾ ಶಾಲೆಗೆ ಭೇಟಿ ನೀಡಿದಾಗಿನ ಫೋಟೋಗಳು ಸೇರಿದಂತೆ ಗಾಂಧೀಜಿ ಅವರು ಕರ್ನಾಟಕ್ಕೆ ಭೇಟಿ ನೀಡಿದಾಗ ಸೆರೆಹಿಡಿದಿರುವ ಛಾಯಾಚಿತ್ರಗಳನ್ನು ವಾರ್ತಾ ಇಲಾಖೆ ಪ್ರದರ್ಶನಕ್ಕಿರಿಸಿದೆ.
ಹೋರಾಟದ ಹಲವು ನೋಟಗಳು: ಅಸಹಕಾರ ಚಳವಳಿ ರೂವಾರಿಯ ಹೋರಾಟದ ಬದುಕಿನ ಹಲವು ನೋಟಗಳು ಲಾಲ್‌ಬಾಗ್‌ನಲ್ಲಿ ಅನಾವರಣಗೊಂಡಿವೆ. ಗಾಂಧೀಜಿ ಕುರಿತ ಅಂಚೆ ಚೀಟಿ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ, ಬಾಪು ಕುರಿತ ಚಿತ್ರರಚನೆ, ತರಕಾರಿಗಳಿಂದ ವಿನ್ಯಾಸ ಪಡಿಸಿದ ಮೂರ್ತಿಗಳು, ಚಂಡುಗಳಲ್ಲಿ ಮೂಡಿದ ಅಮೂರ್ತ ಗಾಂಧಿ, ಸೇರಿದಂತೆ ಹಲವು ಚಿತ್ರಗಳು ಗಾಂಧೀಜಿ ಅವರ ಹೋರಾಟದ ಬದುಕನ್ನು ಬಿಚ್ಚಿಟ್ಟಿವೆ.
ಮಕ್ಕಳಿಗೆ ಹಾಲುಣಿಸಲು ಗರ್ಭಗುಡಿ: ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುವ ತಾಯಂದಿರು, ತಮ್ಮ ಪುಟ್ಟ ಕಂದಮ್ಮಗಳಿಗೆ ಹಾಲುಣಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಲಾಲ್‌ಬಾಗ್‌ನ ಹಲವು ಕಡೆ “ಗರ್ಭಗುಡಿ’ ಹೆಸರಿನ ಮಕ್ಕಳಿಗೆ ಹಲುಣಿಸುವ ವಿಶೇಷ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೆ ಹಾಲುಣಿಸುವ ಕೇಂದ್ರಗಳಲ್ಲಿ ತಾಯಂದಿರು ಮತ್ತು ಮಕ್ಕಳು ಸುರಕ್ಷತೆಗಾಗಿ ಮಹಿಳಾ ಪೋಲಿಸರ ಭದ್ರತೆಯನ್ನು ಒದಗಿಸಿದ್ದು ಕಂಡುಬಂತು. ಹಾಲುಣಿಸಲು “ಗರ್ಭಗುಡಿ’ ಕೇಂದ್ರ ನಿರ್ಮಿಸಿರುವುದಕ್ಕೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲೀಟರ್ ನೀರಿಗೆ 40 ರೂ. ಸುಲಿಗೆ!: ಪಾಸ್ಟಿಕ್ ಮುಕ್ತ ಪ್ರದರ್ಶನ ನಡೆಸುವ ನಿಟ್ಟಿನಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳಿಗೆ ಲಾಲ್‌ಬಾಗ್‌ನಲ್ಲಿ ನಿಷೇಧ ಹೇರಲಾಗಿದೆ. ಆದರೆ, ನಾವು ಹೊರಗಿನಿಂದ ನೀರು ಕೊಂಡೊಯ್ಯಲು ಬಿಡುವುದಿಲ್ಲ. ಜತೆಗೆ, ನೀರು ಮಾರಾಟದ ಹೆಸರಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ನೀರು ಮಾರಾಟದ ಹೊಣೆಯನ್ನು ತೋಟಗಾರಿಕೆ ಇಲಾಖೆ ಖಾಸಗಿಯವರಿಗೆ ವಹಿಸಿದೆ.
ಸಸ್ಯಕಾಶಿಯ ವಿವಿಧೆಡೆ ತೆರೆದಿರುವ ನೀರು ಮಾರಾಟ ಕೇಂದ್ರಗಳಲ್ಲಿ ಒಂದು ಲೀಟರ್ ನೀರಿಗೆ 40 ರೂ. ಪಡೆಯಲಾಗುತ್ತಿದೆ. ನೀರಿಗೇಕೆ ಇಷ್ಟೊಂದು ದರ ಎಂದು ಪ್ರಶ್ನಿಸಿದರೆ, “ಬಾಟಲಿಗೆ 20 ರೂ., ನೀರಿಗೆ 20 ರೂ. ನಿಗದಿಪಡಿಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಟೆಂಡರ್ ಪಡೆದೇ ಮಾರಾಟ ಮಾಡುತ್ತಿದ್ದೇವೆ. ಸಮಸ್ಯೆಯಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಕೇಳಿ’ ಎಂದು ನೀರು ಮಾರಾಟಗಾರರು ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಊಟವಿಲ್ಲದೆ ಪರದಾಡಿದ ಮಕ್ಕಳು: ಮನೆ ಊಟ ಸೇರಿದಂತೆ ಹೊರಗಡೆಯಿಂದ ತರುವ ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ಸಾರ್ವಜನಿಕರು ಲಾಲ್‌ಬಾಗ್ ಒಳಗೆ ಕೊಂಡೊಯ್ಯುವುದಕ್ಕೆ ನಿರ್ಬಂಧ ಹೇರಲಾಗಿದೆ. ತೋಟಗಾರಿಕೆ ಇಲಾಖೆಯ ಈ ನಿರ್ಧಾರ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕೆಲವರು ಮನೆಯಿಂದಲೇ ಆಹಾರ ಸಿದ್ಧ ಮಾಡಿಕೊಂಡು ತಂದಿದ್ದರು.
ಆದರೆ ಅದನ್ನು ಒಳಗೆ ಕೊಂಡೊಯ್ಯಲು ಅನುಮತಿ ಇರಲಿಲ್ಲ. ಲಾಲ್‌ಬಾಗ್ ಆವರಣದಲ್ಲಿ ಮಾರುವ ಆಹಾರವನ್ನು ಮಕ್ಕಳು ತಿನ್ನುವುದಿಲ್ಲ. ಹೀಗಾಗಿ, ಕೆಲ ಮಕ್ಕಳು ಊಟವಿಲ್ಲದೆ ಹಸಿವಿನಿಂದ ಅಳುತ್ತಿದ್ದುದು ಕಂಡುಬಂತು. ಕನಿಷ್ಠ ಮಕ್ಕಳ ಆಹಾರವನ್ನೂ ಒಳಗೆ ಬಿಡದ ಇಲಾಖೆ ಕ್ರಮಕ್ಕೆ ತಾಯಂದಿರು ಆಕ್ರೋಶ ವ್ಯಕ್ತಪಡಿಸಿದರು.
20 ರೂ.ಗೆ ಒಂದು ಪುಸ್ತಕ: ಫಲಪುಷ್ಪ ಪ್ರದರ್ಶನದಲ್ಲಿ ಪುಸ್ತಕ ಮಾರಾಟ ಪುಸ್ತಕ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಶಾಲಾ ಮಕ್ಕಳ ಪುಸ್ತಕಗಳ ಜತಗೆ ಕತೆ, ಕಾಂದಂಬರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಅನೇಕ ರೀತಿಯ ಪುಸ್ತಕಗಳು 20 ರೂ.ಗೆ ದೊರೆಯುತ್ತಿದ್ದು, ಪುಸ್ತಕ ಪ್ರೀಮಿಯರು ಪುಸ್ತಕ ಮಾರಾಟ ಕೇಂದ್ರದತ್ತ ದಾಪುಗಾಲು ಹಾಕಿದ್ದು ಕಂಡು ಬಂತು. ಕವಿ ಚನ್ನವೀರ ಕಣವಿ, ಅನಕೃ ಸೇರಿದಂತೆ ಹಲವು ಕಾದಂಬರಿಕಾರರ ಪುಸ್ತಕಗಳು ಕೇವಲ 20 ರೂ.ಗೆ ಲಭ್ಯವಿವೆ.
ಖುಷಿ ಪಟ್ಟ ಮುಖ್ಯಮಂತ್ರಿ: 1912ರಿಂದಲೂ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುತ್ತಾ ಬಂದಿದ್ದು, ಗಾಂಧೀಜಿ ಮತ್ತು ಕಸ್ತೂರ ಬಾ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಈ ಬಾರಿ ಫಲಪುಷ್ಪ ಪ್ರದರ್ಶನವನ್ನು ರಾಷ್ಟ್ರಪಿತನಿಗೆ ಸಮರ್ಪಿಸಲಾಗಿದೆ. ಗಾಂಧೀಜಿ ಅವರ ಬದುಕಿನ ಸಂದೇಶವನ್ನು ಹೂವುಗಳಲ್ಲಿ ಕಟ್ಟಿಕೊಟ್ಟಿರುವುದು ಖುಷಿ ಪಡುವ ಸಂಗತಿಯಾಗಿದ್ದು, ಇದಕ್ಕಾಗಿ ತೋಟಗಾರಿಕೆ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಬದುಕು-ಸಾಧನೆ-ಹೋರಾಟ ಕುರಿತ ಸಂದೇಶಗಳು ತರಹೇವಾರಿ ಹೂಗಳಲ್ಲಿ ಅರಳಿರುವುದು ಖುಷಿ ಕೊಟ್ಟಿದೆ.
-ಶ್ರದ್ಧಾ, ಮಂಗಳೂರು
ದೇಸಿ ಮತ್ತು ವಿದೇಶಿ ಹೂವುಗಳಿಂದ ಮಿಂದೆದ್ದಿರುವ ಗಾಂಧೀಜಿ ಅವರ ಸಬರಮತಿ ಆಶ್ರಮವನ್ನು ನೋಡುವುದೇ ಕಣ್ಣಿಗೆ ಸೊಗಸು.
-ಸುಬ್ರದ್, ಮಂಗಳೂರು
ಇಪ್ಪತ್ತು ವರ್ಷಗಳಿಂದ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುತ್ತಿದ್ದೇನೆ. ಈ ಬಾರಿ ಪ್ರದರ್ಶನವನ್ನು ಗಾಂಧೀಜಿಗೆ ಅರ್ಪಿಸಿರುವುದು ಸಂತಸ ತಂದಿದೆ.
-ಮುಕುಂದರಾವ್, ವಿಜಯ ಬ್ಯಾಂಕ್ ಕಾಲೋನಿ ನಿವಾಸಿ
ಹೂವುಗಳಲ್ಲಿ ಗಾಂಧೀಜಿ ಬದುಕಿನ ಕುರಿತ ಸಂದೇಶವನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಇದಕ್ಕಾಗಿ ತೋಟಗಾರಿಕೆ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ.
-ಗೀತಾ, ಮೆಲ್ಬೋರ್ನ್ ನಿವಾಸಿ
ಗಾಂಧೀಜಿ ಅವರ ಕುರಿತು ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ಆದರೆ ಹೂವುಗಳ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತಿರುವುದು ಉತ್ತಮ ಪ್ರಯತ್ನ.
-ಫಿಲಿಪ್ ಕೆಂಟ್, ಯುಕೆ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.