ಮತ್ತೆ ಲೋಕಾ ಕಚೇರಿಯೊಳಗೆ ಚೂರಿ
Team Udayavani, May 4, 2018, 11:45 AM IST
ಬೆಂಗಳೂರು: ಲೋಕಾಯುಕ್ತರ ಕಚೇರಿಯಲ್ಲೇ ಲೋಕಾಯುಕ್ತರಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಗುರುವಾರ ಮಹಿಳೆಯೊಬ್ಬರು ಚಾಕು ತೆಗೆದುಕೊಂಡು ಕಚೇರಿಗೆ ಆಗಮಿಸಿರುವ ಘಟನೆ ವರದಿಯಾಗಿದೆ. ಚಾಕುವಿನೊಂದಿಗೆ ಲೋಕಾಯುಕ್ತರ ಕಚೇರಿಗೆ ಆಗಮಿಸಿದ್ದ ವಿಜಯನಗರದ ನಿವಾಸಿ ಸೋನಿಯಾ ಅಲಿಯಾಸ್ ಸೋನಿಯಾ ರಾಣಿ ಎಂಬಾಕೆಯನ್ನು ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.
ಸೋನಿಯಾ ಗುರುವಾರ ಮಧ್ಯಾಹ್ನ 12.30ಕ್ಕೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದು, ಮುಂಭಾಗದ ಮೆಟಲ್ ಡಿಟೆಕ್ಟರ್ ಯಂತ್ರದ ದ್ವಾರದ ಮೂಲಕವೇ ಒಳಗೆ ಬಂದಿದ್ದರು. ಬಳಿಕ ಆಕೆಯ ಬಳಿಯಿದ್ದ ಬ್ಯಾಗ್ ಮತ್ತು ಆಕೆಯನ್ನು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ತಪಾಸಣೆ ಮಾಡಿದಾಗ ಬ್ಯಾಗ್‌ನಲ್ಲಿದ್ದ ಫೈಲ್ ಮಧ್ಯೆ ಚಾಕು ಇರುವುದು ಪತ್ತೆಯಾಗಿದೆ. ಕೂಡಲೇ ಸೋನಿಯಾಳನ್ನು ತಡೆದು ನಿಲ್ಲಿಸಿದ ಮಹಿಳಾ ಕಾನ್‌ಸ್ಟೆಬಲ್ ವಿಧಾನಸೌಧ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಅದರಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೋನಿಯಾಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಸೋನಿಯಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧ ವಿರುದ್ಧ ಕರ್ತವ್ಯ ಲೋಪದ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಳು. ಜತೆಗೆ ಮೈಸೂರು ರಾಜಮನೆತನದ ಪ್ರಮೋದಾ ದೇವಿ ವಿರುದ್ಧವೂ ದೂರು ನೀಡಿದ್ದು, ದಾಖಲೆಗಳ ಕೊರತೆಯಿಂದ ಹಲವು ದೂರುಗಳನ್ನು ಮುಕ್ತಾಯಗೊಳಿಸಲಾಗಿತ್ತು ಎಂದು ಲೋಕಾಯುಕ್ತ ಸಂಸ್ಥೆಯ ಉನ್ನತ ಮೂಲಗಳು ” ಉದಯವಾಣಿ’ಗೆ ತಿಳಿಸಿವೆ.
ಘಟನೆ ಬಗ್ಗೆ ಉದಯವಾಣಿ ಜತೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ಘಟನೆ ದುರದೃಷ್ಟಕರ. ಮಹಿಳೆ ಯಾವ ಕಾರಣಕ್ಕೆ ಚಾಕು ತೆಗೆದುಕೊಂಡು ಬಂದಿದ್ದಳು ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಬೇಕಿದೆ. ಆಕೆ ಸುಮಾರು 8 ದೂರುಗಳು ನೀಡಿದ್ದರು ಎಂಬ ಮಾಹಿತಿಯಿದ್ದು, ಎಲ್ಲ ದೂರುಗಳ ವಿಚಾರಣೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸಂಸ್ಥೆಯ ಸಿಬ್ಬಂದಿ ಆತಂಕ ಪಡುವ ಅಗತ್ಯವಿಲ್ಲ. ಮತ್ತಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದರು.
ದೂರುಗಳ ಮುಕ್ತಾಯದ ಆಕ್ರೋಶವೇ ಕಾರಣವೇ?: ತಾನು ನೀಡಿದ್ದ ಬಹುತೇಕ ದೂರುಗಳು ಕ್ರಮವಿಲ್ಲದೆ ಮುಕ್ತಾಯಗೊಂಡಿದ್ದು ಸೋನಿಯಾ ಈ ವರ್ತನೆಗೆ ಕಾರಣ ಎನ್ನಲಾಗುತ್ತಿದೆ. ಮಾರ್ಚ್ 7ರಂದು ಲೋಕಾಯುಕ್ತರಿಗೆ ಚಾಕು ಇರಿದಿದ್ದ ಆರೋಪಿ ತೇಜ್‌ರಾಜ್ ಶರ್ಮಾ, ಸರ್ಕಾರಿ ಅಧಿಕಾರಿಗಳ ವಿರುದ್ಧ ನೀಡಿದ್ದ ದೂರು ಸರಿಯಾಗಿ ವಿಚಾರಣೆ ನಡೆಸದೆ ಮುಕ್ತಾಯಗೊಳಿಸಿದ್ದೇ ತನ್ನ ಆಕ್ರೋಶಕ್ಕೆ ಕಾರಣ ಎಂದು ಹೇಳಿಕೊಂಡಿದ್ದ. ಮಹಿಳೆ ನೀಡಿದ್ದ ದೂರುಗಳು ಬಹುತೇಕ ಮುಕ್ತಾಯಗೊಂಡಿದ್ದರಿಂದ ಅಸಹಾಯಕತೆ ಮತ್ತು ಆಕ್ರೋಶದಿಂದ ಚಾಕುವಿನೊಂದಿಗೆ ಲೋಕಾಯುಕ್ತ ಕಚೇರಿಗೆ ಬಂದಿದ್ದಳು ಎಂಬ ಮಾತುಗಳು ಕೇಳಿಬರುತ್ತಿವೆ.
ರಾಜೀವ್ ಗಾಂಧಿ ಪತ್ನಿ ಎಂದು ಪ್ರಮಾಣಪತ್ರ ಮಾಡಿಸಿಕೊಂಡಿದ್ದಳು: ಹಲವು ವರ್ಷಗಳಿಂದ ಲೋಕಾಯುಕ್ತ ಕಚೇರಿಗೆ ಎಡತಾಕುತ್ತಿದ್ದ ಸೋನಿಯಾ, ತಾನು ರಾಜೀವ್ ಗಾಂಧಿ ಪತ್ನಿ ಎಂದು ಹೇಳಿಕೊಳ್ಳುತ್ತಿದ್ದಳು. ಅಲ್ಲದೆ, ಪತಿಯ ಹೆಸರು ರಾಜೀವ್ ಗಾಂಧಿ ಎಂದು ಅಫಿಡವಿಟ್ ಮಾಡಿಸಿರುವುದು ಕೂಡ ಬೆಳಕಿಗೆ ಬಂದಿದೆ.
ಪೊಲೀಸ್ ಅಧಿಕಾರಿಗಳು, ಕುಣಿಗಲ್ ತಾಲೂಕಿನ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಅಧಿಕಾರ ದುರ್ಬಳಕೆ, ಕರ್ತವ್ಯ ಲೋಪದ ಆರೋಪ ಮಾಡಿ 2009ರಿಂದ ಸಾಕಷ್ಟು ದೂರುಗಳನ್ನು ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಿಸಿದ್ದಳು. ಆದರೆ, ವಿಚಾರಣೆ ವೇಳೆ ತನ್ನ ವಿಳಾಸವನ್ನು ಸರಿಯಾಗಿ ತಿಳಿಸುತ್ತಿರಲಿಲ್ಲ. ಜತೆಗೆ ತಾನು ರಾಜೀವ್ ಗಾಂಧಿ ಪತ್ನಿ, ಮೈಸೂರು ಮಹಾರಾಜರ ಸಂಸ್ಥಾನದ ಕುಟುಂಬಕ್ಕೆ ಸೇರಿದವಳು. ತನಗೆ ಜಮೀನು ಬರಬೇಕಿದೆ ಮುಂತಾದ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಳು.
ಈ ಹಿನ್ನೆಲೆಯಲ್ಲಿ ಸೋನಿಯಾಳ ಪೂರ್ವಾಪರ ಪರಿಶೀಲನೆ ನಡೆಸುಂತೆ ಪೊಲೀಸರಿಗೆ ವರ್ಷದ ಹಿಂದೆ ಸೂಚಿಸಲಾಗಿತ್ತು. ಸೋನಿಯಾ ಮೈಸೂರು ಹಾಗೂ ವಿಜಯನಗರದಲ್ಲಿ ಎರಡೂ ವಿಳಾಸಗಳಲ್ಲಿ ವಾಸವಿರುವುದು, ಜಮೀನು ತಕರಾರಿಗೆ ಸಂಬಂಧಿಸಿದಂತೆ ದೂರುಗಳನ್ನು ನೀಡುತ್ತಿರುವುದು, ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಂಗತಿ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ತನ್ನ ಪತಿ ರಾಜೀವ್ ಗಾಂಧಿ ಎಂದು ನೋಟರಿ ಮಾಡಿಸಿ ದೂರಿನ ಜತೆ ಅಫಿಡವಿಟ್ ಸಲ್ಲಿಸಿದ್ದರು. ಆದರೆ, ಆಕೆಯ ಪತಿಯ ಹೆಸರು ಅದಲ್ಲ ಎಂಬುದು ಬೆಳಕಿಗೆ ಬಂದಿತು. ಹೀಗಾಗಿ ಅಫಿಡವಿಟ್ ಮಾಡಿಕೊಟ್ಟಿದ್ದ ನೋಟರಿ ಸಿಬ್ಬಂದಿಗೆ ಸಮನ್ಸ್ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಇದಲ್ಲದೆ, ಸೋನಿಯಾ ಕುರಿತು ಇನ್ನಷ್ಟು ಮಾಹಿತಿಗಳು ಪೊಲೀಸರ ವರದಿಯಲ್ಲಿ ಪ್ರಸ್ತಾಪವಾಗಿವೆ. ಆದರೆ, ತನಿಖಾ ದೃಷ್ಟಿಯಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಬ್ಬಂದಿಗೆ ದಿಗ್ಭ್ರಮೆ: ಲೋಕಾಯುಕ್ತರ ಮೇಲೆ ಚಾಕುವಿನಿಂದ ಹಲ್ಲೆಯಾದ ಎರಡು ತಿಂಗಳಲ್ಲೇ ಮಹಿಳೆಯೊಬ್ಬರು ಚಾಕುವಿನೊಂದಿಗೆ ಲೋಕಾಯುಕ್ತ ಕಚೇರಿ ಪ್ರವೇಶಿಸಿದ್ದು ಅಲ್ಲಿನ ಸಿಬ್ಬಂದಿಯಲ್ಲಿ ದಿಗ್ಭ್ರಮೆ ಮೂಡಿಸಿದೆ. ಮಾರ್ಚ್ 7ರಂದು ತೇಜ್‌ರಾಜ್ ಶರ್ಮಾ ಎಂಬಾತ ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಇದಾದ ಬಳಿಕ ಭದ್ರತೆ ಹೆಚ್ಚಿಸಲಾಗಿತ್ತು. ಇದರ ಮಧ್ಯೆಯೂ ಮಹಿಳೆಯೊಬ್ಬರು ಚಾಕುವಿನೊಂದಿಗೆ ಕಚೇರಿ ಪ್ರವೇಶಿಸಿದ್ದು ಸಂಸ್ಥೆಯ ಸಿಬ್ಬಂದಿಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಯಾವ ಕಾರಣಕ್ಕೆ ಚಾಕುವಿನೊಂದಿಗೆ ಲೋಕಾಯುಕ್ತ ಕಚೇರಿಗೆ ಬಂದಿದ್ದೆ ಎಂಬುದನ್ನು ಮಹಿಳೆ ಇನ್ನೂ ತಿಳಿಸಿಲ್ಲ. ಲೋಕಾಯುಕ್ತ ಉನ್ನತ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಳ್ಳಲಾಗಿದ್ದು, ಸೋನಿಯಾ ವಿಚಾರಣೆ ಮುಂದುವರಿದಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಆಕೆಯ ಹಿನ್ನೆಲೆ ಮತ್ತು ಸಂಬಂಧಿಕರ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ.
-ಚಂದ್ರಗುಪ್ತ, ಡಿಸಿಪಿ ಕೇಂದ್ರ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.