ಹೋಂವರ್ಕ್ ಅಲರ್ಟ್ ಸಾಧನ ರೂಪಿಸಿದ ಬಾಲೆ
Team Udayavani, Nov 18, 2017, 11:27 AM IST
ಬೆಂಗಳೂರು: ಕ್ರಿಯಾಶೀಲತೆ, ಪ್ರಯೋಗಶೀಲತೆ, ಕಲಾತ್ಮಕತೆಯನ್ನೇ ಉಪಯೋಗಿಸಿಕೊಂಡು ಸ್ವಂತ ಬಳಕೆಗೆ ಮಾತ್ರವಲ್ಲದೆ ಸಮುದಾಯ ಉಪಯೋಗಕ್ಕೂ ಪೂರಕವಾಗಿ ರೂಪುಗೊಂಡ ಸಾಲು ಸಾಲು ಉತ್ಪನ್ನ, ಸಾಧನಗಳು “ಮೇಕರ್ ಫೇರ್’ನಲ್ಲಿ (ಸ್ವ- ಉತ್ಪಾದಕರ ಮೇಳ) ಅನಾವರಣಗೊಂಡಿವೆ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದಿರುವ “ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ ಶುಕ್ರವಾರ ಆರಂಭವಾದ ಮೇಕರ್ ಫೇರ್‌ನಲ್ಲಿ ಎಂಟು ವರ್ಷದ ಬಾಲಕಿ ಅಭಿವೃದ್ಧಿಪಡಿಸಿರುವ ಪುಟ್ಟ ಸಾಧನದಿಂದ ಹಿಡಿದು ರಿಮೋಟ್ ನಿಯಂತ್ರಿತ ಕೀಟನಾಶಕ ಸಿಂಪಡಣೆ ಸಾಧನ, ಸಸಿಗಳಿಗೆ ನೀರುಣಿಸುವ ಸಾಧನಗಳು ಸೇರಿದಂತೆ ನಾನಾ ಬಗೆಯ ಆವಿಷ್ಕಾರಗಳು ಗಮನ ಸೆಳೆದಿದೆ.
ಶುಕ್ರವಾರ ಮೇಕರ್ ಫೇರ್‌ಗೆ ಚಾಲನೆ ನೀಡಿ ಮಾತನಾಡಿದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, “ದೇಶದಲ್ಲಿ ಸಾಕಷ್ಟು ಪ್ರತಿಭೆ, ಸಂಪನ್ಮೂಲವಿದ್ದರೂ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅಂತಿಮ ಉತ್ಪನ್ನವಾಗಿ ರೂಪಿಸಲು ಪೂರಕವಾದ ವ್ಯವಸ್ಥೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಹಾಗಾಗಿ ಯುವಜತೆಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗದಂತಾಗಿದೆ.
ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅನ್ವೇಷಣೆ, ನಾವೀತ್ಯತೆಯ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲು ಆದ್ಯತೆ ನೀಡಿದೆ’ ಎಂದು ಹೇಳಿದರು. ಸ್ವ-ತಯಾರಿಕೆ, ಕ್ರಿಯಾಶೀಲ ಚಿಂತನೆ, ಕಲೆ, ಕರಕುಶಲತೆಗೂ ಉತ್ತೇಜನ ನೀಡುವ ಮೂಲಕ ಉತ್ಪನ್ನ ಮಾರುಕಟ್ಟೆಯಲ್ಲಿ ಭಾರತ ಮುಂಚೂಣಿಯಲ್ಲಿರುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
ಕೈಗಾರಿಕೆಗಳು, ಖಾಸಗಿ ಸಂಸ್ಥೆಗಳು, ಸರ್ಕಾರ ಒಟ್ಟಾಗಿ ಕಾರ್ಯಪ್ರವೃತ್ತರಾದಾಗ ಮಾತ್ರ ಉತ್ತಮ ಆವಿಷ್ಕಾರ ಉತ್ತೇಜನ ವಾತಾವರಣ ನಿರ್ಮಿಸಲು ಸಾಧ್ಯ. ಅದರಂತೆ ಮೇಕರ್ ಫೇರ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ನಗರ ಮಾತ್ರವಲ್ಲದೆ ಗ್ರಾಮೀಣ ಪ್ರತಿಭೆಗಳು ತಮ್ಮ ಕ್ರಿಯಾಶೀಲತೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಐಬಿಎಂ ನಿರ್ದೇಶಕರಾದ ಶಾಲಿನಿ ಕಪೂರ್, ಐಟಿಬಿಟಿ ಇಲಾಖೆ ನಿರ್ದೇಶಕಿ ಸಲ್ಮಾ ಫಾಹಿಂ ಹಾಗೂ ಇತರರಿದ್ದರು.
ಉದ್ಘಾಟನೆಯೂ ಆಕರ್ಷಕ!: ಮೇಕರ್ ಫೇರ್ ಉದ್ಘಾಟನಾ ಸಮಾರಂಭದಲ್ಲಿ ಸ್ಟಾರ್ಟ್‌ಅಪ್ ಸಂಸ್ಥೆಯೊಂದು ರೂಪಿಸಿದ ಹೈಟೆಕ್ ತಂತ್ರಜ್ಞಾನದಿಂದ ದೀಪ ಬೆಳಗಿಸುವ ವ್ಯವಸ್ಥೆ ಮೆಚ್ಚುಗೆಗೆ ಪಾತ್ರವಾಯಿತು. ಕಲಬುರಗಿಯ ರವಿಕುಮಾರ್, ಶ್ರೀಶೈಲ ಪತ್ತಾರ್ ಅವರು “ಬಿಎಚ್‌ಟಿ ಟೆಕ್ನಾಲಜಿಸ್’ ಹೆಸರಿನ ಸ್ಟಾರ್ಟ್‌ಅಪ್ ಸ್ಥಾಪಿಸಿದ್ದು, ಪ್ರಯತ್ನದ ವಿವರ ಹೀಗಿದೆ. ಎಕ್ಸ್‌ಪೀರಿಯನ್ಸ್ ಮಾರ್ಕೆಟಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸ್ಟಾರ್ಟ್‌ಅಪ್ ಸ್ಥಾಪಿಸಲಾಗಿದೆ.
“ನ್ಯೂರೋ ಸ್ಕೈ’ ಸಹಯೋಗದಲ್ಲಿ “ಮೈಂಡ್ ವೇವ್’ ಸಾಧನ ಅಭಿವೃದ್ಧಿಪಡಿಸಲಾಗಿದ್ದು, ಈ ಸಾಧನವನ್ನು ಸಚಿವರು ಇತರೆ ಗಣ್ಯರಿಗೆ ಅಳವಡಿಸಲಾಗಿತ್ತು. ಈ ಸಾಧನದಲ್ಲಿ ಹಣೆ, ಕಿವಿ ಸ್ಪರ್ಶಿಸುವ ಜಾಗದಲ್ಲಿ ಸೆನ್ಸಾರ್ ಅಳವಡಿಸಲಾಗಿರುತ್ತದೆ. ಇನ್ನೊಂದೆಡೆ ದೀಪಕಂಬಕ್ಕೆ ಎಲ್‌ಇಡಿ ಅಳವಡಿಸಿ ಅದನ್ನು ಬ್ಲೂಟೂಥ್‌ನಡಿ ಸಂಪರ್ಕಿಸಲಾಗಿತ್ತು. ಬಳಿಕ ಸಚಿವರು ಎಲ್‌ಇಡಿ ಕಡೆಗೆ ದಿಟ್ಟಿಸಿ ನೋಡುತ್ತಿದ್ದಂತೆ ದೀಪ ಬೆಳಗಿದವು ಎಂದು ರವಿಕುಮಾರ್ ತಿಳಿಸಿದರು.
ಗಮನ ಸೆಳೆದ ಪ್ರಯೋಗ: ಶಾಲೆಯಲ್ಲಿ ನೀಡುವ ಮನೆಪಾಠ ಮರೆತು ಹೋಗದಂತೆ ನೆನಪಿಸಿಕೊಳ್ಳಲು ಎಂಟು ವರ್ಷದ ನಿಧಿ ರಾಮಸುಬ್ರಹ್ಮಣ್ಯಂ ಜಾಮಿಟ್ರಿ ಬಾಕ್ಸ್‌ನಲ್ಲಿ ರೂಪಿಸಿರುವ ಅಲರ್ಟ್ ಸಾಧನ ಮೇಳದ ಆಕರ್ಷಣೆಯಾಗಿತ್ತು. ಜಾಮಿಟ್ರಿ ಬಾಕ್ಸ್‌ನಲ್ಲಿ ಆರು ಸಣ್ಣ ಎಲ್‌ಇಡಿಗಳನ್ನು ಅಳವಡಿಸಿ ಪ್ರತಿಯೊಂದಕ್ಕೂ ನಿರ್ದಿಷ್ಟ ವಿಷಯದ ಚೀಟಿ ಅಂಟಿಸಿದ್ದಾಳೆ.
ಶಾಲೆಯಲ್ಲಿ ಹೋಂವರ್ಕ್ ನೀಡಿದಾಗ ಆ ವಿಷಯದ ಗುಂಡಿ ಒತ್ತಿದರೆ ಎಲ್‌ಇಡಿ ಬೆಳಗುತ್ತದೆ. ಇದರಿಂದ ಮನೆಯಲ್ಲಿದ್ದಾಗ ಸಹಜವಾಗಿ ಜಾಮಿಟ್ರಿ ಬಾಕ್ಸ್ ತೆರೆದಾಗ ಹೋಂವರ್ಕ್ ವಿಷಯ ಗೊತ್ತಾಗಲಿದೆ. ಸ್ಕೂಲ್‌ನಲ್ಲಿ ನೀಡುವ ಹೋಂವರ್ಕ್ ಮರೆತುಹೋಗಿ ಟೀಚರ್ ಬಳಿ ಬೈಸಿಕೊಳ್ಳುವುದನ್ನು ತಪ್ಪಿಸಲು ಒಂದು ಅಲರ್ಟ್ ಸಾಧನ ರೂಪಿಸಿದ್ದೇನೆ. ಅಪ್ಪನ ಸಹಾಯದೊಂದಿಗೆ ಎಲ್‌ಇಡಿ ಅಳವಡಿಸಿ ಕಿರು ಬ್ಯಾಟರಿಗೆ ಸಂಪರ್ಕಿಸಿದ್ದೇನೆ.
ಟೀಚರ್ ಶಾಲೆಯಲ್ಲಿ ಹೋಂವರ್ಕ್ ನೀಡುತ್ತಿದ್ದಂತೆ ಆ ವಿಷಯದ ಗುಂಡಿ ಒತ್ತುತ್ತೇನೆ. ಇದರಿಂದ ಯಾವುದೇ ಹೊತ್ತಿನಲ್ಲಿ ಜಾಮಿಟ್ರಿ ಬಾಕ್ಸ್ ತೆರೆದರೂ ಎಲ್‌ಇಡಿ ಗಮನಿಸಿ ಹೋಂವರ್ಕ್ ಮುಗಿಸಲು ಅನುಕೂಲವಾಗಲಿದೆ ಎಂದು ಕುಮಾರನ್ಸ್ ಶಾಲೆಯ ಮೂರನೇ ತರಗತಿಯ ನಿಧಿ ರಾಮಸುಬ್ರಹ್ಮಣ್ಯಂ ಹೇಳುತ್ತಾಳೆ.
ನಿಧಿಯ ಅಕ್ಕ ಚಿನ್ಮಯಿ ರಾಮಸುಬ್ರಹ್ಮಣ್ಯಂ ಕೂಡ ಇನ್‌ಹೇಲರ್ ಅಲರ್ಟ್ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದು, ಗಮನ ಸೆಳೆದಿದೆ. ಅಸ್ತಮಾದಿಂದ ಬಳಲುವವರು ಬಳಸುವ ಇನ್‌ಹೇಲರ್‌ಗೆ ಸುಧಾರಿತ ಗ್ಯಾಸ್ ಸೆನ್ಸಾರ್ ಅಳವಡಿಸಲಾಗಿದೆ. ಇದರಿಂದ ನಿತ್ಯ ಎಷ್ಟು ಬಾರಿ ಬಳಸಲಾಗಿದೆ, ಇನ್ನೂ ಎಷ್ಟು ದಿನ ಬಳಸಬಹುದು ಇತರೆ ಮಾಹಿತಿ ಸಂದೇಶ ಮೊಬೈಲ್ ಆ್ಯಪ್‌ಗೆ ರವಾನೆಯಾಗುತ್ತದೆ. ಜತೆಗೆ ವಾತಾವರಣದಲ್ಲಿ ದೂಳು, ಹೊಗೆ ಪ್ರಮಾಣದ ಬಗ್ಗೆಯೂ ಮಾಹಿತಿ ನೀಡಲಿದೆ. ಸ್ಪರ್ಧೆಯೊಂದಕ್ಕೆ ಅಭಿವೃದ್ಧಿಪಡಿಸಿದ ಸಾಧನ ಗಮನ ಸೆಳೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.