ಏಕಾಏಕಿ ಮದ್ಯ ನಿಷೇಧ ಕಷ್ಟಸಾಧ್ಯ: ಸಿಎಂ
Team Udayavani, Jan 31, 2019, 12:30 AM IST
ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಹಾಗೂ ಪ್ರತಿಭಟನಾಕಾರರ ನಡುವೆ ವಿಧಾನಸೌಧದಲ್ಲಿ ಬುಧವಾರ ನಡೆದ ಸಭೆ ವಿಫಲವಾಗಿದ್ದು, ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿ ಧರಣಿ ಮುಂದುವರಿಸಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
ಪ್ರತಿಭಟನಾಕಾರರ ಒಂಭತ್ತು ಮಂದಿಯ ನಿಯೋಗ ಹಾಗೂ ಸಿಎಂ ನಡುವಿನ ಮಾತುಕತೆ ಸಂದರ್ಭದಲ್ಲಿ ‘ನಾನು ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದೇನೆ. ಏಕಾಏಕಿ ಮದ್ಯ ನಿಷೇಧ ಮಾಡುವುದು ಹೇಗೆ? ಸಮಯ ಬೇಕಿದೆ, ಮನವಿ ಕೊಟ್ಟು ಹೋಗಿ’ ಎಂಬ ಮುಖ್ಯಮಂತ್ರಿಗಳ ಸಲಹೆಗೆ ನಿಯೋಗದ ಸದಸ್ಯರು ಒಪ್ಪಲಿಲ್ಲ. ಮದ್ಯ ನಿಷೇಧದ ಬಗ್ಗೆ ಲಿಖೀತ ರೂಪದ ಭರವಸೆ ನೀಡಿ ಎಂದು ಪಟ್ಟು ಹಿಡಿದಿದ್ದರು.
ರಾಜ್ಯ ಸರ್ಕಾರಕ್ಕೆ ಸಂಪನ್ಮೂಲ ಕ್ರೋಢೀಕರಣದ ಅವಕಾಶಗಳು ಸೀಮಿತವಾಗಿವೆ. ಎಲ್ಲವನ್ನೂ ತೀರ್ಮಾನಿಸಿ ಮನವಿ ಪರಿಶೀಲಿಸುತ್ತೇನೆ ಎಂಬ ಸಿಎಂ ಉತ್ತರಕ್ಕೆ, ಮದ್ಯ ನಿಷೇಧದಿಂದ ಜನರ ಜೀವನ ಶೈಲಿ ವೃದ್ಧಿಸುತ್ತದೆ. ಅವರು ಜೀವನೋಪಾಯಕ್ಕಾಗಿ ಖರೀದಿಸುವ ವಸ್ತುಗಳ ಮೇಲೆ ವಿಧಿಸುವ ತೆರಿಗೆಯಿಂದಲೂ ಆದಾಯ ಬರುತ್ತದೆ. ಹೀಗಾಗಿ, ಮದ್ಯನಿಷೇಧಕ್ಕೆ ಕ್ರಮ ವಹಿಸಿ ಎಂದು ನಿಯೋಗದ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಸಿಎಂ ಈ ವಾದವನ್ನು ಒಪ್ಪದ್ದಿದ್ದರಿಂದ ಮಾತುಕತೆ ವಿಫಲವಾಗಿ ನಿಯೋಗದ ಸದಸ್ಯರು ಹೊರ ಬಂದರು ಎಂದು ತಿಳಿದು ಬಂದಿದೆ.
ಸಭೆಯಿಂದ ಹೊರ ಬಂದ ರಂಗಕರ್ಮಿ ಪ್ರಸನ್ನ, ಸ್ವರ್ಣಾಭಟ್, ವಿದ್ಯಾಪಾಟೀಲ್ ಸೇರಿದಂತೆ ಇತರರನ್ನು ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಕರೆ ತಂದು ಬಿಟ್ಟಿದ್ದಾರೆ. ಶೇಷಾದ್ರಿ ರಸ್ತೆಯಿಂದ ಪ್ರತಿಭಟನೆಯನ್ನು ಸ್ಥಳಾಂತರಿಸಲು ಪೊಲೀಸರ ಸೂಚನೆಗೆ ಬಗ್ಗದ ಸಾವಿರಾರು ಮಹಿಳೆಯರು ಮದ್ಯಮಾರಾಟ ನಿಷೇಧ ಆಗುವ ತನಕ ನಿಲ್ಲೋದಿಲ್ಲ ಹೋರಾಟ, ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಅಕ್ರೋಶದಿಂದ ಘೋಷಣೆಗಳನ್ನು ಕೂಗಿ ಧರಣಿ ಮುಂದುವರಿಸಿದರು. ಕಡೆಗೆ ರಾತ್ರಿ ಒಂಭತ್ತು ಗಂಟೆ ಸುಮಾರಿಗೆ ಕಾನೂನು ಭಂಗ ಮಾಡಲು ಯತ್ನಿಸಿದ ಆರೋಪದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪರಿಶೀಲನೆಗೆ ಸಮಯ ಅಗತ್ಯ: ರಾಜ್ಯದಲ್ಲಿ ಮದ್ಯಪಾನವನ್ನು ಸಂಪೂರ್ಣ ನಿಷೇಧ ಮಾಡುವ ಕುರಿತು ಪರಿಶೀಲಿಸಲು ಸಮಯಾವಕಾಶದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಹಿರಿಯ ರಂಗಕರ್ಮಿ, ಪ್ರಸನ್ನ ಅವರ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ಮದ್ಯಪಾನ ನಿಷೇಧ ಹೋರಾಟಗಾರರಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ಮತ್ತು ಲಾಟರಿ ನಿಷೇಧಿಸಿದ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿರುವ ಸಿಎಂ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಮಿತ್ರಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಜಿಎಸ್‌ಟಿ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಸಂಪನ್ಮೂಲ ಕ್ರೋಢೀಕರಣದ ಅವಕಾಶಗಳು ಸೀಮಿತವಾಗಿವೆ. ಈ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಉನ್ನತ ಮಟ್ಟದ ಚರ್ಚೆ ನಡೆಸುವುದು ಸಹ ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ ವನ್ನು ಏಕಾಏಕಿ ಘೋಷಿಸಲಾಗದು. ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಲು ಸಮ ಯಾವಕಾಶದ ಅಗತ್ಯವಿದೆ ಎಂದು ಮನವೊ ಲಿಸಲು ಯತ್ನಿಸಿದರು ಎಂದು ತಿಳಿದು ಬಂದಿದೆ.
ವಿಧಾನಸೌಧ ಮುತ್ತಿಗೆ ಯತ್ನ ವಿಫಲ
‘ಬಡವರ ಬದುಕು ಬೀದಿ ಪಾಲು ಮಾಡುತ್ತಿರುವ ಮದ್ಯ ಮಾರಾಟ ನಿಷೇಧಿಸಿ…. ಮದ್ಯಮಾರಾಟ ನಿಷೇಧ ಆಗುವ ತನಕ ನಿಲ್ಲೋದಿಲ್ಲ ಹೋರಾಟ’ ಇಂತಹ ಘೋಷಣೆಗಳನ್ನು ಹೊತ್ತು ಬರೋಬ್ಬರಿ 200 ಕಿಲೋಮಿಟರ್‌ಗೂ ಹೆಚ್ಚು ದೂರ ಕ್ರಮಿಸಿ ಬಂದಿದ್ದ ಸಾವಿರಾರು ಮಹಿಳೆಯರು ಬುಧವಾರ ವಿಧಾನಸೌಧ ಮುತ್ತಿಗೆ ಹಾಕುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ವಿಧಾನಸೌಧ ಮುತ್ತಿಗೆ ಯತ್ನ ವಿಫಲಗೊಳ್ಳುತ್ತಲೇ ಫ್ರೀಡಂಪಾರ್ಕ್ ಸಮೀಪದ ಶೇಷಾದ್ರಿ ರಸ್ತೆಯಲ್ಲಿ ಧರಣಿ ಕುಳಿತ ಮಹಿಳೆಯರು ಹೋರಾಟ ಮುಂದುವರಿಸಿದರು.
ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡುವ ತನಕ ಜಾಗ ಬಿಟ್ಟು ಕದಲುವುದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ 70 ವಯೋಮಾನದ ವೃದ್ಧೆಯರಾದಿಯಾಗಿ ಸಾವಿ ರಾರು ಮಹಿಳೆಯರು ಒಕ್ಕೊರಲಿನಿಂದ ‘ಮದ್ಯಪಾನ ನಿಷೇಧ ಆಗಲೇಬೇಕು’ ಎಂಬ ಘೋಷಣೆಗಳನ್ನು ಮೊಳಗಿಸಿದರು. ಬ್ಯಾರಿಕೇಡ್‌ಗಳನ್ನು ಹಾಕಿ ತಡೆ ಹಾಕಿದ್ದ ಪೊಲೀಸರನ್ನುದ್ದೇಶಿಸಿ, ಪೊಲೀಸರೇ ದಾರಿ ಬಿಡಿ, ನಾವು ವಿಧಾನಸೌಧಕ್ಕೆ ತೆರಳುತ್ತೇವೆ ಎಂದು ಆಕ್ರೋಶದ ನುಡಿಗಳನ್ನಾಡಿದರು. ಮದ್ಯ ಮಾರಾಟದಿಂದ ಗ್ರಾಮೀಣ ಭಾಗದ ಮಹಿಳೆಯರು ಸಂಕಷ್ಟ ಅನುಭವಿಸುತ್ತಿರುವ ಪರಿಸ್ಥಿತಿಯನ್ನು ಹಾಡುಗಳ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದರು. ಬುಧವಾರ ಮಧ್ಯಾಹ್ನದ ಹೊತ್ತಿಗೆ ಪ್ರತಿಭಟನೆಯ ಕಾವು ಬಿಸಿಯೇರಿತ್ತು. ಪ್ರತಿಭಟನಾಕಾರರು ಗುಂಪು ಗುಂಪಾಗಿ ಬ್ಯಾರಿಕೇಡ್ ಬೇಧಿಸಿ ವಿಧಾನಸೌಧದ ಕಡೆ ಹೆಜ್ಜೆ ಹಾಕಲು ಯತ್ನಿಸಿದರೂ ಪ್ರಯತ್ನ ಫಲ ನೀಡಲಿಲ್ಲ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.