![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jan 21, 2024, 11:57 AM IST
ಬೆಂಗಳೂರು: ಕುಡಿದು ಹಣಕ್ಕೆ ಪೀಡಿಸುತ್ತಿದ್ದ ಸಹೋದರಿ ಮಗನನ್ನು ಮಾವನೇ ಚಾಕುವಿನಿಂದ ಇರಿದು, ಬಳಿಕ ಕಲ್ಲು ಎತ್ತಿಹಾಕಿ ಕೊಲೆಗೈದಿರುವ ಘಟನೆ ಬಾಸಣವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಬಾಣಸವಾಡಿ ನಿವಾಸಿ ಅಜಯ್ ಅಲಿಯಾಸ್ ಟಿನ್ನು(29) ಕೊಲೆ ಯಾದವನು. ಈ ಸಂಬಂಧ ಮುರಳಿ (42) ಎಂಬಾತನನ್ನು ಬಂಧಿಸಲಾಗಿದೆ.
ಕೊಲೆಯಾದ ಅಜಯ್‌ಗೆ ತಂದೆ- ತಾಯಿ ಇಲ್ಲ. ಹೀಗಾಗಿ ಚಿಕ್ಕಂದಿನಿಂದ ಅಜ್ಜಿ ಲಕ್ಷ್ಮಮ್ಮ ಹಾಗೂ ಮಾವ ಮುರಳಿ ಜತೆ ವಾಸವಾಗಿದ್ದ. ಕುಡಿತದ ಚಟ ಅಂಟಿಸಿಕೊಂಡಿದ್ದ ಅಜಯ್ ಶುಕ್ರವಾರ ಮದ್ಯ ಸೇವಿಸಿ ಮನೆಗೆ ಬಂದು ಅಜ್ಜಿ ಲಕ್ಷ್ಮಮ್ಮ ಬಳಿ 2 ಲಕ್ಷ ರೂ.ಗೆ ಪೀಡಿಸುತ್ತಿದ್ದ. ಅಜ್ಜಿ ಹಣ ಇಲ್ಲ ಎಂದಿದ್ದಕ್ಕೆ ಹಲ್ಲೆ ಮಾಡಿದ್ದ. ಶನಿವಾರವೂ ಬೆಳಗ್ಗೆ ಮದ್ಯ ಸೇವಿಸಿ ಮನೆಗೆ ಬಂದು ಹಣಕ್ಕೆ ಪೀಡಿಸಿದ್ದಾನೆ. ಅದೇ ವೇಳೆ ಮನೆಗೆ ಬಂದ ಮುರಳಿ ಬುದ್ಧಿವಾದ ಹೇಳಿದರೂ ಕೇಳದೆ ಆತನೊಂದಿಗೆ ಜಗಳಕ್ಕೆ ಹೋಗಿದ್ದಾನೆ. ಅದರಿಂದ ಕೋಪಗೊಂಡ ಮುರಳಿ ಮನೆಯಲ್ಲಿದ್ದ ಚಾಕು ತೆಗೆದು ಅಜಯ್‌ಗೆ ಇರಿದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಅಜಯ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ ಎಂದು ಪೊಲೀಸರು ಹೇಳಿದರು.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತನ ಅಜ್ಜಿ ಲಕ್ಷ್ಮಮ್ಮ ನೀಡಿದ ದೂರಿನ ಮೇರೆಗೆ ಬಾಣಸವಾಡಿ ಠಾಣೆ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮುರಳಿಯನ್ನು ಬಂಧಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.