ROAD MISHAPS: ರಸ್ತೆ ಅಪಘಾತ; 6 ತಿಂಗಳಲ್ಲಿ 416 ಮಂದಿ ಸಾವು
Team Udayavani, Aug 9, 2023, 9:26 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸಂಭವಿಸಿದ ದ್ವಿಚಕ್ರ ವಾಹನಗಳ ರಸ್ತೆ ಅಪಘಾತಗಳಲ್ಲಿ ಶೇ.50 ಸವಾರರು ಹೆಲ್ಮೆಟ್ ಧರಿಸದೇ ತಲೆಗೆ ಏಟು ಬಿದ್ದು ದುರ್ಮರಣ ಹೊಂದಿರುವ ಆಘಾತಕಾರಿ ಅಂಶ ಹೊರ ಬಿದ್ದಿದೆ.
ಸಿಲಿಕಾನ್ ಸಿಟಿಯಲ್ಲಿ 6 ತಿಂಗಳಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ 416 ಮಂದಿ ಮೃತಪಟ್ಟಿದ್ದು, ಈ ಪೈಕಿ ಹೆಲ್ಮೆಟ್ ಧರಿಸದ ದ್ವಿಚಕ್ರವಾಹನ ಸವಾರರು ಶೇ.70 ಇದ್ದಾರೆ. ಹೆಲ್ಮೆಟ್ ಧರಿಸಿದ್ದರೆ ಶೇ.30 ಸವಾರರ ಜೀವ ಉಳಿಯುತ್ತಿತ್ತು ಎಂದು ಸಂಚಾರ ಪೊಲೀಸರೇ ಹೇಳುತ್ತಾರೆ.
ಮೃತರಲ್ಲಿ ಯುವಕರೇ ಹೆಚ್ಚು: ಹೆಲ್ಮೆಟ್ ಧರಿಸದೇ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರಲ್ಲಿ ಯುವ ಸವಾರರೇ ಹೆಚ್ಚಿದ್ದಾರೆ. ಐಷಾರಾಮಿ ಬೈಕ್, ಸ್ಕೂಟರ್‌ಗಳನ್ನು ವೇಗವಾಗಿ ಚಲಾಯಿಸಲು ಹೋಗಿ ಯುವಕರು ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಶಾಲೆಗೆ ಮಕ್ಕಳ ಕರೆದೊಯ್ಯುವಾಗ ಪಾಲಕರು ಹೆಲ್ಮೆಟ್ ಹಾಕಿಸದಿರುವುದು ಅಪಾಯಕಾರಿ. ಬೈಕ್‌ನಿಂದ ಬಿದ್ದ ಕೂಡಲೇ ತಲೆಗೆ ಪೆಟ್ಟಾಗಿ ರಕ್ತಸ್ರಾವವಾಗಿ ಸಾವನ್ನಪ್ಪುವ ಪ್ರಕರಣಗಳೇ ಅಧಿಕವಾಗಿದೆ. ಹೆಲ್ಮೆಟ್ ಧರಿಸದ ಯುವತಿಯರು, ಮಹಿಳೆಯರ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಾರೆ ಸಂಚಾರ ವಿಭಾಗದ ಪೊಲೀಸರು.
ರಾಜಧಾನಿಯಲ್ಲಿ ಜನಸಂಖ್ಯೆ ಪ್ರಮಾಣ ಮಿತಿ ಮೀರುತ್ತಿದ್ದಂತೆ ರಸ್ತೆಗಿಳಿಯುತ್ತಿರುವ ದ್ವಿಚಕ್ರವಾಹನಗಳೂ ದುಪ್ಪಟ್ಟಾಗಿವೆ. ಬರೋಬ್ಬರಿ 1.10 ಕೋಟಿ ವಾಹನಗಳಿದ್ದು, ಈ ಪೈಕಿ 80 ಲಕ್ಷ ದ್ವಿಚಕ್ರ ವಾಹನಗಳ ಪಾಲಿದೆ. ಪ್ರತಿದಿನ 570 ರಿಂದ 600 ಹೊಸ ದ್ವಿಚಕ್ರ ವಾಹನ ನೋಂದಣಿಯಾಗುತ್ತಿವೆ. ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೀಡು ಮಾಡಿದೆ.
ಇದೀಗ ಹೆಲ್ಮೆಟ್ ಧರಿಸದೇ ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಸಂಚಾರ ಪೊಲೀಸರು ಇಂತಹ ಸವಾರರ ಮೇಲೆ ಹದ್ದಿನ ಕಣ್ಣಿಡಲು ಸಿದ್ಧತೆ ನಡೆಸಿದ್ದು, ಕಡ್ಡಾಯವಾಗಿ ದಂಡ ವಸೂಲಿ ಮಾಡುವ ಮೂಲಕ ಶೀಘ್ರದಲ್ಲೇ ಬಿಸಿ ಮುಟ್ಟಿಸಲಿದ್ದಾರೆ.
ಹೆಲ್ಮೆಟ್ ಧರಿಸದ ಸವಾರರ ವಿರುದ್ಧ ಕ್ರಮ:
ಬೆಂಗಳೂರು ಸಂಚಾರ ಪೊಲೀಸರು ಹೆಲ್ಮೆಟ್ ಧರಿಸದ ಸವಾರರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸಂಚಾರ ಪೊಲೀಸ್ ಸಿಬ್ಬಂದಿಗೆ ವಿತರಿಸಿರುವ ಡಿಜಿ ಟ್ಯಾಬ್ ಮೂಲಕ ಹೆಲ್ಮೆಟ್ ಧರಿಸದೇ ಪ್ರಯಾಣಿಸುವವರ ಮೇಲೆ ನಿಗಾ ಇರಿಸಿ ಫೋಟೋ ತೆಗೆದು ಸಾಕ್ಷ್ಯ ಸಮೇತ ದಂಡ ವಿಧಿಸುವ ಪ್ರಕರಣ ಹೆಚ್ಚಿಸಲು ಸೂಚಿಸಲಾಗಿದೆ.
ಹೆಲ್ಮೆಟ್ ಧರಿಸದವರ ಮನೆಗೆ ನೋಟಿಸ್ ಕಳುಹಿಸಿ ದಂಡ ವಸೂಲಿ ಮಾಡುವ ಪ್ರಕ್ರಿಯೆಯೂ ಕೆಲ ದಿನಗಳಲ್ಲೇ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಯುತ್ತಿದೆ. ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) 50 ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದೆ. 250 ಅಟೋಮೇಟೆಡ್ ನಂಬರ್ ಪ್ಲೇಟ್ ರೆಕಗ್ನೆ„ಸೇಶನ್ (ಎಎನ್‌ಪಿಆರ್) ಕ್ಯಾಮೆರಾ ಅಳವಡಿಸಲಾಗಿದೆ. ಈ ತಂತ್ರಜ್ಞಾನದಲ್ಲಿ ಹೆಲ್ಮೆಟ್ ಧರಿಸದೇ ನಿಯಮ ಉಲ್ಲಂ ಸುವವರ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. 48 ಸಂಚಾರ ಪೊಲೀಸ್ ಠಾಣೆಗಳಲ್ಲೂ ಸಾಮಾಜಿಕ ಜಾಲತಾಣಗಳ ಪ್ರತ್ಯೇಕ ಐಡಿಗಳನ್ನು ಸೃಜಿಸಿ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ಪ್ರಯಾಣಿಸಲು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ನಗರದ ಬಹುತೇಕ ಕಡೆ ಹೆಲ್ಮೆಟ್ ರಹಿತ ಚಾಲನೆ ಬಗ್ಗೆ ವಿಶೇಷವಾದ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ದ್ವಿಚಕ್ರ ವಾಹನಗಳ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೃತಪಟ್ಟವರ ಪೈಕಿ ಹೆಲ್ಮೆಟ್ ಧರಿಸದಿರುವವರೇ ಹೆಚ್ಚಾಗಿದ್ದಾರೆ. ಗುಣಮಟ್ಟದ ಹೆಲ್ಮೆಟ್ ಧರಿಸುವುದು ಉತ್ತಮ. ಸವಾರರು ಹೆಲ್ಮೆಟ್ ಧರಿಸದೇ ಸಂಚಾರ ಪೊಲೀಸರ ಕಣ್ತಪ್ಪಿಸಬಹುದು. ಆದರೆ, ಅಪಘಾತದ ಕಣ್ಣು ತಪ್ಪಿಸಲು ಸಾಧ್ಯವಿಲ್ಲ.-ಎಂ.ಎನ್.ಅನುಚೇತ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ.
-ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.