Tragic electrocution: ತಾಯಿ-ಮಗು ದಹನಕ್ಕೆ ಇಲಿ ಕಾರಣವಂತೆ
Team Udayavani, Nov 22, 2023, 9:31 AM IST
ಬೆಂಗಳೂರು: ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣಕ್ಕೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇಡೀ ಅವಘಡದ ಮೂಲ ಪತ್ತೆಹಚ್ಚಿರುವ ಅಧಿಕಾರಿಗಳು, ಘಟನೆಯನ್ನು ಇಲಿ ಮೇಲೆ ಎತ್ತಿಹಾಕಿದ್ದಾರೆ!
11 ಕೆವಿ ಎತ್ತರಿಸಿದ ವಿದ್ಯುತ್ ಎಚ್‌ಟಿ ಮಾರ್ಗವು ಹಾದುಹೋದ ಅಣತಿ ದೂರದಲ್ಲೊಂದು ಅಪಾರ್ಟ್‌ಮೆಂಟ್ ಇದೆ. ಅದು ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಂಡಿದೆ. ಅದಕ್ಕೆ ಪೂರಕವಾಗಿ 11 ಕೆವಿ ಮಾರ್ಗದ ಎಲ್‌ಬಿಎಸ್ (ಲೋಡ್ ಬ್ರೇಕ್ ಸ್ವಿಚ್) ಇದ್ದು, ಅದಕ್ಕೆ ಇಲಿ ಬಾಯಿ ಹಾಕಿದೆ. ವೈರ್‌ಗಳನ್ನು ಕಚ್ಚಿದ್ದರಿಂದ ಶಾರ್ಟ್ ಸರ್ಕಿಟ್ ಆಗಿದೆ. ಪರಿಣಾಮ ಎಚ್‌ಟಿ ಲೈನ್‌ನ ದುರ್ಬಲ ಪಾಯಿಂಟ್‌ನಲ್ಲಿ ತಂತಿ ತುಂಡಾಗಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವೈರ್ ಅನ್ನು ಕಚ್ಚಿದ ಇಲಿ ಕೂಡ ಅಲ್ಲಿಯೇ ಸತ್ತು ಬಿದ್ದಿರುವುದೇ ಘಟನೆಗೆ ಸಾಕ್ಷಿ ಎಂದೂ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ಬೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಮೈತ್ರಿ ಲೇಔಟ್‌ನ ಔದುಂಬರ ಹೋಮ್ಸ್ ಅಪಾರ್ಟ್ ಮೆಂಟ್‌ನಲ್ಲಿ ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಬಾಕ್ಸ್‌ಗೆ ಇಲಿ ನುಗ್ಗಿದ್ದರಿಂದ ಶಾರ್ಟ್ ಸರ್ಕಿಟ್ ಸಂಭವಿಸಿದ್ದು, 11 ಕೆವಿ ಓವರ್‌ಹೆಡ್ ಎಚ್‌ಟಿ ಮಾರ್ಗವು ಬೆಳಗ್ಗೆ ಸುಮಾರು 3.50ರ ಸುಮಾರಿಗೆ ತುಂಡಾಗಿ ನೆಲಕ್ಕೆ ಬಿದ್ದಿರುವುದನ್ನು ವಿದ್ಯುತ್ ಪರಿವೀಕ್ಷಣಾಧಿಕಾರಿ (ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರೇಟ್) ಅಧಿಕಾರಿಗಳ ಪ್ರಾಥಮಿಕ ವಿಚಾರಣೆ ವೇಳೆ ಕಂಡುಬಂದಿದೆ ಎಂದು ವಿವರಿಸಿದರು.
ತಂತಿ ತುಂಡಾಗಿ ಬಿದ್ದ ಬೆನ್ನಲ್ಲೇ ಕಾಡುಗೋಡಿ ವಿದ್ಯುತ್ ಉಪಕೇಂದ್ರದ ಫೀಡರ್ ಟ್ರಿಪ್ ಆಗಿದೆ. ತಕ್ಷಣ ಕಾಡುಗೋಡಿ ವಿದ್ಯುತ್ ಉಪಕೇಂದ್ರದ ಫೀಡರ್ ಅನ್ನು ಪುನಃ ಟೆಸ್ಟ್ ಚಾರ್ಜ್ ಮಾಡಲಾಗಿದೆ. ಆದಾಗ್ಯೂ ತುಂಡಾದ ತಂತಿ ನೆಲದ ಮೇಲೆ ಬಿದ್ದಿದ್ದರಿಂದ ಯಾವುದೇ ಅರ್ಥಿಂಗ್ ಆಗಿಲ್ಲ. ಬೆಳಗಿನಜಾವ 5.30ರ ಸುಮಾರಿಗೆ ಸೌಂದರ್ಯ ಅವರು ಮಗುವಿನೊಂದಿಗೆ ಬರುವಾಗ ತುಂಡಾದ ತಂತಿ ತುಳಿದಾದ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಎಂದು ಮಹಾಂತೇಶ ಬೀಳಗಿ ಸ್ಪಷ್ಟಪಡಿಸಿದರು.
ಸ್ವತಂತ್ರ ಸಮಿತಿ ರಚನೆ; ನಿರ್ದಾಕ್ಷಿಣ್ಯ ಕ್ರಮ: ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಇದೊಂದು ಅತ್ಯಂತ ವಿಷಾದಕರ ಘಟನೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತಜ್ಞರ ಸ್ವತಂತ್ರ ಸಮಿತಿಯಿಂದಲೂ ಸೇರಿದಂತೆ ಘಟನೆಗೆ ಸಂಬಂಧಿಸಿದಂತೆ ನಾಲ್ಕು ರೀತಿಯ ತನಿಖೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈಗಾಗಲೇ ಪೊಲೀಸರಿಂದ ಘಟನೆ ಕುರಿತು ತನಿಖೆ ನಡೆದಿದೆ. ಮತ್ತೂಂದೆಡೆ ಬೆಸ್ಕಾಂನಿಂದ ಆಂತರಿಕ ತನಿಖೆ ಸಾಗಿದೆ. ಎಲೆಕ್ಟ್ರಿಕಲ್ ಇನ್ ಸ್ಪೆಕ್ಟರೇಟ್ ಅಧಿಕಾರಿಗಳಿಂದ ತನಿಖೆ ನಡೆದಿದೆ. ಇದರ ಜತೆಗೆ ಇಬ್ಬರು ನಿವೃತ್ತ ಎಂಜಿನಿಯರ್ ಮತ್ತು ಮುಖ್ಯ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರೇಟ್ ಅವರನ್ನೊಳಗೊಂಡ ಪ್ರತ್ಯೇಕ ಸಮಿತಿ ರಚಿಸುತ್ತಿದ್ದು, ಅವರಿಂದಲೂ ಸುದೀರ್ಘ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು. ಹೆಚ್ಚು- ಕಡಿಮೆ ತಿಂಗಳಲ್ಲಿ ವರದಿ ಸಲ್ಲಿಕೆ ಆಗಬಹುದು ಎಂದು ಸಚಿವರು ತಿಳಿಸಿದರು.
2 ವಾರದಲ್ಲಿ ವರದಿ ಸಲ್ಲಿಸಲು ಸೂಚನೆ:
ಬೆಂಗಳೂರು: ನಗರದ ಹೋಪ್ ಫಾರಂ ಬಳಿ ನಡೆದ ವಿದ್ಯುತ್ ಅವಘಡ ಪ್ರಕರಣದಲ್ಲಿ ತಾಯಿ-ಮಗು ಸಾವಿಗೀಡಾದ ಘಟನೆ ತನಿಖೆಗಾಗಿ ತಜ್ಞರ ಸ್ವತಂತ್ರ ಸಮಿತಿ ರಚಿಸಿ ಮಂಗಳವಾರ ಸರ್ಕಾರ ಆದೇಶ ಹೊರಡಿಸಿದ್ದು, ಎರಡು ವಾರದಲ್ಲಿ ವರದಿ ಸಲ್ಲಿಸಲು ಸೂಚಿಸಿದೆ.
ಸಮಿತಿಯಲ್ಲಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಿವೃತ್ತ ನಿರ್ದೇಶಕ (ಪ್ರಸರಣ) ಎಸ್. ಸಮಂತ್, ಇಂಧನ ಇಲಾಖೆಯ ಆರ್‌ಟಿ ಆ್ಯಂಡ್ ಆರ್‌ಡಿ ಮುಖ್ಯ ಎಂಜಿನಿಯರ್ ಬಿ.ವಿ. ಗಿರೀಶ್, ಸಿಪಿಆರ್‌ಐ ಜಂಟಿ ನಿರ್ದೇಶಕ ಪ್ರಭಾಕರ್, ಬೆಂಗಳೂರು ಪೂರ್ವ ವಿಭಾಗದ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕ ಜಿ. ರವಿಕುಮಾರ್ ಇದ್ದಾರೆ. ಈ ಸಮಿತಿಯು ವಿದ್ಯುತ್ ಅಪಘಾತದ ಬಗ್ಗೆ ಸಮಗ್ರ ತನಿಖೆ ನಡೆಸಿ, ಘಟನೆಗೆ ನಿಖರ ಕಾರಣಗಳನ್ನು ಕಂಡುಹಿಡಿಯುವುದರ ಜತೆಗೆ ಇಂತಹ ಘಟನೆಗಳು ಮರುಕಳಿಸದಂತೆ ತೆಗೆದುಕೊಳ್ಳಬಹುದಾದ ಎಲ್ಲ ತಾಂತ್ರಿಕ ಸಾಧ್ಯಾಸಾಧ್ಯತೆಗಳು ಮತ್ತು ವಿದ್ಯುತ್ ಸರಬರಾಜು ಕಂಪನಿಗಳು ಹಾಗೂ ಕೆಪಿಟಿಸಿಎಲ್ ಕೂಡಲೇ ಅನುಸರಿಸಬೇಕಾದ ವಿದ್ಯುತ್ ಸುರಕ್ಷಾ ಕ್ರಮಗಳ ಬಗ್ಗೆ ಸಲಹೆ ನೀಡಲಿದೆ. ಮುಂದಿನ ಎರಡು ವಾರಗಳಲ್ಲಿ ವರದಿ ಸಲ್ಲಿಸಲು ಆದೇಶದಲ್ಲಿ ಹೇಳಲಾಗಿದೆ.
15 ದಿನಗಳಲ್ಲಿ ಓಎಫ್ಸಿ ಕೇಬಲ್ ತೆರವುಗೊಳಿಸದಿದ್ದರೆ ಕತ್ತರಿ ಪ್ರಯೋಗ: ಓವರ್‌ಹೆಡ್ ವಿದ್ಯುತ್ ತಂತಿ ಅವಘಡದ ಬೆನ್ನಲ್ಲೇ ನಗರದ ಫುಟ್‌ಪಾತ್‌ಗಳಲ್ಲಿ ಎಲ್ಲೆಂದರಲ್ಲಿ ಜೋತುಬಿದ್ದಿರುವ ಓಎಫ್ಸಿ ಕೇಬಲ್‌ಗಳಿಗೂ ಕತ್ತರಿ ಹಾಕಲು ಸರ್ಕಾರ ಮುಂದಾಗಿದೆ. ಈಗಾಗಲೇ ಬಿಬಿಎಂಪಿ ಹಲವಾರು ಕಡೆಗಳಲ್ಲಿ ಹೊಸ ರಸ್ತೆಗಳ ನಿರ್ಮಾಣದ ಮೂಲಕ ಓಎಫ್ಸಿ ಕೇಬಲ್‌ಗಳ ನೆಲದಡಿ ಅಳವಡಿಕೆಗೆ ಡಕ್ಟ್ಗಳನ್ನು ನಿರ್ಮಿಸಿದೆ. ಆದಾಗ್ಯೂ ಪಾದಚಾರಿ ಮಾರ್ಗಗಳಲ್ಲಿ, ಮರಗಳ ಕೊಂಬೆಗಳಲ್ಲೆಲ್ಲಾ ಕೇಬಲ್‌ಗಳು ಜೋತುಬಿದ್ದಿವೆ. ಇವುಗಳಿಂದ ಪಾದಚಾರಿಗಳಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವುಗಳ ತೆರವಿಗೆ 15 ದಿನಗಳ ಗಡುವು ನೀಡಲಾಗುವುದು. ಅಷ್ಟರಲ್ಲಿ ತೆರವುಗೊಳಿಸಬೇಕು, ಇಲ್ಲದಿದ್ದರೆ ಮುಲಾಜಿಲ್ಲದೆ ಕತ್ತರಿಹಾಕಲಾಗುವುದು ಎಂದು ಎಚ್ಚರಿಸಿದರು.
ಈ ಗಡುವು ಎಲ್ಲೆಲ್ಲಿ ಡಕ್ಟ್ಗಳ ಸೌಲಭ್ಯವಿದೆಯೋ ಅಲ್ಲಿನ ಫುಟ್‌ಪಾತ್‌ಗಳಲ್ಲಿ ಜೋತುಬಿದ್ದಿರುವ ಓಎಫ್ಸಿ ಕೇಬಲ್‌ಗಳಿಗೆ ಅನ್ವಯ ಆಗಲಿದೆ. ಎಲ್ಲಿ ಡಕ್ಟ್ಗಳಿಲ್ಲವೋ ಅಲ್ಲಿ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ಚರ್ಚಿಸಲಾಗುವುದು ಎಂದರು.
ಎಫ್ಎಸ್‌ಎಲ್ ವರದಿ ಆಧರಿಸಿ ಕ್ರಮ:
ಬೆಂಗಳೂರು: ವಿದ್ಯುತ್ ತಂತಿ ತಗುಲಿ ತಾಯಿ ಹಾಗೂ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್) ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲೆಕ್ಟ್ರಿಕಲ್ ಇನ್ ಸ್ಪೆಕ್ಟರ್ ಹಾಗೂ ಎಫ್ಎಸ್‌ಎಲ್ ಅಧಿಕಾರಿಗಳ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆರೋಪಿತ ಅಧಿಕಾರಿಗಳನ್ನು ಬಂಧಿಸಿ ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ಸ್ಥಳ ಪರಿಶೀಲನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಿಂಗಳಿಗೊಮ್ಮೆ ಸುರಕ್ಷಾ ದಿನಕ್ಕೆ ಸೂಚನೆ:
ಬೆಂಗಳೂರು: ತಾಯಿ- ಮಗು ಸಾವು ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಇಂಧನ ಇಲಾಖೆ, ಘಟನೆಗೆ ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡುಬಂದಿದೆ. ಇಂತಹ ಘಟನೆ ಮರುಕಳಿಸದಿರಲು ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.
ಅದರಂತೆ ಎಸ್ಕಾಂಗಳ ಮಟ್ಟದಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳನ್ನು ಒಳಗೊಂಡಂತೆ ತಿಂಗಳಿಗೊಮ್ಮೆ ಸುರಕ್ಷತಾ ದಿನ ಹಮ್ಮಿಕೊಂಡು, ಉತ್ತಮ ಅಭ್ಯಾಸಗಳ ಬಗ್ಗೆ ವಿನಿಮಯ ಮಾಡಿಕೊಳ್ಳಬೇಕು. ಉಪಕೇಂದ್ರಗಳ ಆಪರೇಟರ್‌ಗಳು 11 ಕೆವಿ ಮಾರ್ಗಗಳು ಡಬಲ್ ಒಸಿಆರ್/ ಇಎಫ್ಆರ್ ಮೂಲಕ ಟ್ರಿಪ್ ಆದಾಗ ಸಂಬಂಧಪಟ್ಟವರನ್ನು ಸಂಪರ್ಕಿಸಿ, ಅವರ ಸಹಮತದೊಂದಿಗೆ ಮಾರ್ಗಗಳ ಟೆಸ್ಟ್ ಚಾರ್ಜ್ ಮಾಡಬೇಕು. ಈ ಕುರಿತು ಆಯಾ ಉಪಕೇಂದ್ರಗಳ ಆಪರೇಟರ್‌ಗಳು ಮಾಹಿತಿ ಹೊಂದಿರುವುದನ್ನು ನೋಡಲ್ ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.