ಬೆಂಗಳೂರು ವಿವಿ 54ನೇ ಘಟಿಕೋತ್ಸವ ನಾಳೆ
Team Udayavani, Apr 21, 2019, 3:00 AM IST
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಏ.22ರಂದು ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮಿಸುತ್ತಿದ್ದಾರೆ. ಈ ಬಾರಿ ಘಟಿಕೋತ್ಸವದಲ್ಲಿ ಮೂವರು ಗೌರವ ಡಾಕ್ಟರೇಟ್, 166 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಹಾಗೂ 216 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯಲಿದ್ದಾರೆ.
ನಗರದ ಸೆಂಟ್ರಲ್ ಕಾಲೇಜು ಆವರಣದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಘಟಿಕೋತ್ಸವ ನಡೆಯಲಿದ್ದು, ರಾಜ್ಯಪಾಲ ವಿ.ಆರ್.ವಾಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ತ್ರಿಭಜನೆ ಬಳಿಕ ನಡೆಯುತ್ತಿರುವ ಮೊದಲ ಘಟಿಕೋತ್ಸವ ಇದಾಗಿದೆ.
ಘಟಿಕೋತ್ಸವ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ವಿವಿ ಕುಲಪತಿ ಪ್ರೊ.ವೇಣುಗೋಪಾಲ್, ಈ ಬಾರಿ ಘಟಿಕೋತ್ಸವದಲ್ಲಿ ಕಳೆದ ಶೈಕ್ಷಣಿಕ ಸಾಲಿನ ವಿವಿಧ ವಿಷಯಗಳ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾದ 65,039 ಅಭ್ಯರ್ಥಿಗಳು ಪದವಿ ಸ್ವೀಕರಿಸಲು ಅರ್ಹರಾಗಿದ್ದು, ಇವರಲ್ಲಿ 55,171 ವಿದ್ಯಾರ್ಥಿಗಳು ಈ ಬಾರಿ ಅರ್ಜಿ ಸಲ್ಲಿಸಿ ಘಟಿಕೋತ್ಸವ ಪದವಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ.
ಇವರ ಪೈಕಿ 22,970 ಪುರುಷರು ಹಾಗೂ 32,201 ಮಹಿಳೆಯರಿದ್ದಾರೆ ಎಂದು ತಿಳಿಸಿದರು. ಪದವಿ ಸ್ವೀಕರಿಸಲು ಅರ್ಹರಾದ 65,039 ವಿದ್ಯಾರ್ಥಿಗಳಲ್ಲಿ 33,036 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 20,437 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು 328 ಚಿನ್ನದ ಪದಕಗಳಿಗೆ 87 ವಿದ್ಯಾರ್ಥಿಗಳು (ಸ್ನಾತಕ ಪದವಿ-40, ಸ್ನಾತಕೋತ್ತರ ಪದವಿ 47), 154 ವಿದ್ಯಾರ್ಥಿನಿಯರು (ಸ್ನಾತಕ ಪದವಿ-82 ಹಾಗೂ ಸ್ನಾತಕೋತ್ತರ ಪದವಿ -72) ಭಾಜನರಾಗಿದೆ.
ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುವ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಚಿನ್ನದ ಪದಕವನ್ನು ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಗ್ರಾಜುಯೇಟ್ ಸ್ಟಡೀಸ್‌ನ ಎಂ.ಪಿ.ಮಂಜುಶ್ರೀ, ಗಣಿತಶಾಸ್ತ್ರ ವಿಭಾಗದ ಜಿ.ಮನೋಹರ, ಸಂವಹನ ವಿಭಾಗದ ಎಂ.ಮುನಿರಾಜು ಅವರು ಪಡೆಯಲಿದ್ದಾರೆ ಎಂದು ತಿಳಿಸಿದರು.
ಘಟಿಕೋತ್ಸವಕ್ಕೆ ಆಗಮಿಸುವವರು ಆಮಂತ್ರಣ ಪತ್ರಿಕೆಯೊಂದಿಗೆ, ಗುರುತಿನ ಚೀಟಿಯೊಂದನ್ನು ಕಡ್ಡಾಯವಾಗಿ ತರಬೇಕು. ಅಂದು ಬೆಳಗ್ಗೆ 10.15ರ ಒಳಗೆ ಸಭಾಂಗಣದಲ್ಲಿ ಆಸೀನರಾಗಿರಬೇಕು. ಗಾಂಧಿನಗರದ ಪಿ.ಕೆ.ಬ್ಲಾಕ್‌ನಲ್ಲಿರುವ ಕ್ರಿಕೆಟ್ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
20 ಗ್ರಾಂ ಬೆಳ್ಳಿ ಬೇಸ್‌ನ 1.3 ಗ್ರಾಂ ಚಿನ್ನದ ಪದಕ: ಈ ಹಿಂದಿನ ಘಟಿಕೋತ್ಸವಗಳಲ್ಲಿ ಚಿನ್ನದ ಲೇಪನವುಳ್ಳ ಪದಕ ಮಾತ್ರ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಚಿನ್ನದ ಪದಕಗಳಲ್ಲಿ 20 ಗ್ರಾಂ ಬೆಳ್ಳಿಯ ಬೇಸ್‌ನ ಮೇಲೆ 1.3 ಗ್ರಾಂ ನಾಣ್ಯ ಮಾದರಿಯ ಚಿನ್ನದ ಪದಕ ಜೋಡಿಸಲಾಗಿದೆ.
ಒಂದು ಚಿನ್ನದ ಪದಕದ ಬೆಲೆ 6 ಸಾವಿರ ರೂ. ಆಗಿದ್ದು, ಚಿನ್ನದ ಪದಕಗಳಿಗಾಗಿಯೇ ಒಟ್ಟು 14 ಲಕ್ಷ ರೂ. ವ್ಯಯವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ದಾನಿಗಳ ಠೇವಣಿಯಿಂದ ಬರುವ ಬಡ್ಡಿ ಹಣ ಕಡಿಮೆಯಾಗಿದ್ದು, ವ್ಯತ್ಯಾಸದ ಹಣವನ್ನು ವಿಶ್ವವಿದ್ಯಾಲಯದಿಂದ ಭರಿಸಲಾಗಿದೆ. ಇನ್ನು ವಿಜೇತರಿಗೆ ನೀಡುವ ನಗದು ಬಹುಮಾನವು ಕನಿಷ್ಠ 500 ರೂ.ನಿಂದ 5,000 ರೂ. ವರೆಗೆ ಇರಲಿದೆ ಎಂದು ಕುಲಪತಿಗಳು ತಿಳಿಸಿದರು.
ವಿದ್ಯಾರ್ಥಿನಿಯರದ್ದೇ ಮೇಲುಗೈ: ಘಟಿಕೋತ್ಸವದಲ್ಲಿ ಪದವಿ, ಚಿನ್ನದ ಪದಕ, ಹಣದ ಬಹುಮಾನ ಪಡೆಯುವುದರಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪದವಿಗೆ ಅರ್ಹತೆ ಪಡೆದ 65,039 ಅಭ್ಯರ್ಥಿಗಳಲ್ಲಿ 32,201 ವಿದ್ಯಾರ್ಥಿನಿಯರಿದ್ದಾರೆ. ಚಿನ್ನದ ಪದಕ ಪಡೆಯುತ್ತಿರುವ 216 ಮಂದಿಯಲ್ಲಿ 154 ವಿದ್ಯಾರ್ಥಿನಿಯರು (82 ಸ್ನಾತಕ, 72 ಸ್ನಾತಕೋತ್ತರ) ಹಾಗೂ ಅತೀ ಹೆಚ್ಚು ಪದಕ ಪಡೆದ ಐದು ಮಂದಿ ಪೈಕಿ 4 ವಿದ್ಯಾರ್ಥಿಯರಿದ್ದಾರೆ.
ಮೂವರಿಗೆ ಗೌರವ ಡಾಕ್ಟರೇಟ್: ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್, ಪದ್ಮಶ್ರೀ ಪುರಸ್ಕೃತೆ ಡಾ. ಕಾಮಿನಿ ರಾವ್, ಸಮಾಜ ಸೇವಕ ಎಸ್.ವಿ.ವಿ.ಸುಬ್ರಹ್ಮಣ್ಯ ಗುಪ್ತ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುತ್ತಿದೆ. 11 ಸಾಧಕರ ಪಟ್ಟಿ ಯಲ್ಲಿ, ಪ್ರೊ. ಎನ್.ಆರ್.ಶೆಟ್ಟಿ ಅವರನ್ನು ಒಳಗೊಂಡ ಸಮಿತಿಯು ಮೂವರನ್ನು ಆಯ್ಕೆ ಮಾಡಿದೆ.
ಅತಿ ಹೆಚ್ಚು ಪದಕ ಪಡೆದ ವಿದ್ಯಾರ್ಥಿಗಳ ಪಟ್ಟಿ
* ಬೆಂಗಳೂರು ವಿಶ್ವವಿದ್ಯಾಲಯ ಸೆಂಟ್ರಲ್ ಕಾಲೇಜು ಎಂಎಸ್ಸಿ ರಸಾಯನಿಕಶಾಸ್ತ್ರ ವಿಭಾಗದ ವಿನುತ ಕೆ.ವಿ (7 ಚಿನ್ನದ ಪದಕ)
* ಬಿ.ಎಂ.ಎಸ್ ಮಹಿಳಾ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿ ವರಲಕ್ಷ್ಮೀ ಆರ್. (4 ಪದಕ, 4 ನಗದು ಬಹುಮಾನ)
* ಕೆ.ಜಿ.ಎಫ್‌ನ ಭಗವಾನ್ ಮಹಾವೀರ ಜೈನ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಶಂಕರ ಭಾಷ್ಯಂ (5 ಪದಕ, 2 ನಗದು ಬಹುಮಾನ)
* ಅನುಗ್ರ ಬಿ.ಇಡಿ ಕಾಲೇಜಿನ ಬಿ.ಇಡಿ ವಿದ್ಯಾರ್ಥಿನಿ ಸೌಮ್ಯಾ .ಎನ್ (3 ಪದಕ, 5 ನಗದು ಬಹುಮಾನ)
* ಯುವಿಸಿಇಯ ಬಿ.ಇ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನ ವಿದ್ಯಾರ್ಥಿನಿ ವರ್ಷಿತಾ .ವಿ (2 ಪದಕ, 4 ನಗದು ಬಹುಮಾನ)
ಬಸ್ ಚಾಲಕನ ಪುತ್ರಿಗೆ 7 ಚಿನ್ನ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡಾವಹಳ್ಳಿಯ ನಿವಾಸಿ, ಕೆಎಸ್‌ಆರ್‌ಟಿಸಿ ಬಸ್ ಚಾಲಕ ಕೆ.ಟಿ.ವೆಂಕಟರೆಡ್ಡಿ ಹಾಗೂ ಶಾಂತಿ ದಂಪತಿ ಪುತ್ರಿ, ಕೆ.ವಿ.ವಿನುತಾ, 7 ಚಿನ್ನದ ಪದಕ ಮುಡಿಗೇರಿಸಿಕೊಳ್ಳುತ್ತಿದ್ದಾರೆ.
ಸೆಂಟ್ರಲ್ ಕಾಲೇಜು ವಿದ್ಯಾರ್ಥಿನಿ ವಿನುತಾ, 2017-18ನೇ ಶೈಕ್ಷಣಿಕ ಸಾಲಿನಲ್ಲಿ ರಸಾಯನಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ 8.4 ಸಿಜಿಪಿಎ (ಗ್ರೇಡ್)ಪಡೆದು ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ.
“ಈ ಸಾಧನೆ ಹಿಂದೆ ಪ್ರಾಧ್ಯಾಪಕರ ಮಾರ್ಗದರ್ಶನದ ಕೊಡುಗೆ ಸಾಕಷ್ಟಿದೆ. ಪ್ರಥಮ ರ್‍ಯಾಂಕ್ ಪಡೆದಿರುವ ವಿಷಯ ತಿಳಿದು ಖುಷಿಯಾಯಿತು. ಈ ಮೂಲಕದ ತಂದೆ ತಾಯಿಯ ಗೌರವ ಹೆಚ್ಚಿಸಿದ್ದೇನೆ ಎಂಬ ಹೆಮ್ಮೆ ಇದೆ. ಸದ್ಯ ಬಿ.ಇಡಿ ಮಾಡುತ್ತಿದ್ದು, ಮುಂದೆ ಆರ್ಗನ್ ವಿಷಯದ ಮೇಲೆ ಪಿಎಚ್‌ಡಿ ಮಾಡುತ್ತೇನೆ’ ಎನ್ನುತ್ತಾರೆ ವಿನುತಾ.
ತಾಲೂಕು, ಜಿಲ್ಲೆ ನಂತರ ಈಗ ವಿವಿಗೇ ಫಸ್ಟ್!: ಕೋಲಾರದ ಕೆಜಿಎಫ್ನ ಓ.ಶಂಕರ ಭಾಷ್ಯಂ, 2017-18ನೇ ಸಾಲಿನಲ್ಲಿ ಶೇ.95 ಅಂಕಗಳೊಂದಿಗೆ ಬಿ.ಕಾಂ ಉತ್ತೀರ್ಣರಾಗಿದ್ದು, 5 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.
ಸಿಂಡಿಕೇಡ್ ಬ್ಯಾಂಕ್ ನೌಕರರ ಪುತ್ರ ಶಂಕರ, ಈ ಹಿಂದೆ ಎಸ್‌ಎಸ್‌ಎಲ್‌ಸಿಯಲ್ಲಿ (ಶೇ.98) ತಾಲೂಕಿಗೆ ಪ್ರಥಮ, ಪಿಯುಸಿಯಲ್ಲಿ (ಶೇ.97) ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರು. ಈಗ ಬಿ.ಕಾಂ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ.
ಸಾಧನೆ ಕುರಿತು ಮಾತಿಗಿಳಿದ ಶಂಕರ ಭಾಷ್ಯಂ, “ಅಂದಿನ ಪಾಠ ಅಂದೇ ಓದುತ್ತಿದ್ದೆ. ನಿತ್ಯ ಬೆಳಗ್ಗೆ 3 ಗಂಟೆ, ಸಂಜೆ 2 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಹೀಗಾಗಿ, ಪರೀಕ್ಷೆ ದುರಿಸುವುದು ಸುಲಭವಾಯಿತು. ಸದ್ಯ ಬೆಂಗಳೂರಿನ ಐಸಿಎಐನಲ್ಲಿ ಸಿ.ಎ ಕೋರ್ಸ್ ಮಾಡುತ್ತಿದ್ದು, ಉತ್ತಮ ಲೆಕ್ಕಪರಿಶೋಧಕ ಆಗಬೇಕೆಂಬುದೇ ನನ್ನ ಗುರಿ,’ ಎಂದರು.
ಪತಿ ಬೆಂಬಲವೇ ಸಾಧನೆಗೆ ಉತ್ತೇಜನ: ಕಳೆದ ಶೈಕ್ಷಣಿಕ ಸಾಲಿನಲ್ಲಿ ಬಿ.ಇಡಿಯಲ್ಲಿ ಶೇ.94.7 ಅಂಕ ಗಳಿಸುವ ಮೂಲಕ ಎನ್.ಸೌಮ್ಯಾ, ಪ್ರಥಮ ರ್‍ಯಾಂಕ್ ಗಳಿಸಿದ್ದು, 3 ಚಿನ್ನದ ಪದಕ ಹಾಗೂ 5 ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ.
ಬಿಎಸ್ಸಿ ಮುಗಿದ ಕೂಡಲೇ ವಿವಾಹವಾದ ಸೌಮ್ಯಾ, ನಂತರ ಎಂಎಸ್ಸಿ ಮುಗಿಸಿ, ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದರು. ಭವಿಷ್ಯದಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿಯಾಗಬೇಕೆಂಬ ಆಸೆ ಹೊಂದಿರುವ ಇವರು, ವಿವಾಹವಾದ 8 ವರ್ಷ ಬಳಿಕ ಬಿ.ಇಡಿ ಪದವಿ ಮಾಡಿದರು. ಶ್ರದ್ಧೆ, ನಿರಂತರ ಶ್ರಮದಿಂದ ಇದೀಗ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ.
ಈ ವೇಳೆ ಮಾತನಾಡಿದ ಸೌಮ್ಯಾ, “ಪತಿ ಅರುಣ್ ಖಾಸಗಿ ಕಂಪನಿ ಉದ್ಯೋಗಿ. ನಾನು ಪದವಿಗೇ ಓದು ನಿಲ್ಲಿಸಿದೆ. ನೀನಾದರೂ ಮುಂದಕ್ಕೆ ಓದು ಎಂದು ಪ್ರೋತ್ಸಾಹಿಸಿ ಕಾಲೇಜಿಗೆ ಕಳಿಸಿದರು. ನನ್ನ ಈ ಸಾಧನೆಗೆ ಅವರ ಬೆಂಬಲವೇ ಕಾರಣ. ಓದಿಗೆ ವಯಸ್ಸು ಅಡ್ಡಿಯಾಗಲ್ಲ. ಬದ್ಧತೆ ಇದ್ದರೆ ಸಾಧನೆ ಸಾಧ್ಯ,’ ಎಂದರು.
4 ಚಿನ್ನ ಕೊಳ್ಳೆಹೊಡೆದ ಆಟೋ ಚಾಲಕನ ಪುತ್ರಿ: ಬ್ಯಾಟರಾಯನಪುರ ನಿವಾಸಿ, ಆಟೋ ಚಾಲಕ ರಾಜು ಹಾಗೂ ಶಶಿಕಲಾ ದಂಪತಿ ಪು ಆರ್.ವರಲಕ್ಷ್ಮೀ, ಶೇ.93.78 ಅಂಕಗಳೊಂದಿಗೆ ಬಿಎಸ್‌ಸಿಯಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದು, 4 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.
ಪಿಯುಸಿ ನಂತರ ಸಿಇಟಿಯಲ್ಲಿ 6000ನೇ ರ್‍ಯಾಂಕ್ ಗಳಿಸಿದ್ದ ವರಲಕ್ಷ್ಮೀ ಅವರಿಗೆ ಸರ್ಕಾರಿ ಎಂಜಿನಿಯರಿಂಗ್ ಸೀಟು ಸಿಗಲಿಲ್ಲ. ಆರ್ಥಿಕ ಸಮಸ್ಯೆಯಿಂದ ಅನಿವಾರ್ಯವಾಗಿ ಬಿಎಸ್ಸಿ ಸೇರಿದ ಇವರು, ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ ಮೊದಲ ರ್‍ಯಾಂಕ್‌ಗಳಿಸಿದ್ದಾರೆ.
“ನಾವು ಓದಲಿಲ್ಲ. ಮಕ್ಕಳಾದರೂ ಓದಲಿ ಎಂದು ಅವಳ ಓದಿಗೆ ಯಾವುದೇ ಸಮಸ್ಯೆಯಾಗದಂತೆ ನಿಭಾಯಿಸುತ್ತಿದ್ದೇವೆ. ಅವಳಿಗೆ ಪಿಎಚ್‌ಡಿ ಮಾಡುವ ಆಸೆಯಿದೆ. ಅದಕ್ಕೂ ನಮ್ಮ ಬೆಂಬಲವಿರುತ್ತದೆ’ ಎನ್ನುತ್ತಾರೆ ಪೋಷಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.