ಬಿಜೆಪಿಗೆ ಶಾ ಸಂಚಲನ : ನಾಳೆ ರಾಜ್ಯಕ್ಕೆ ಅಮಿತ್ ಶಾ, ಸಿಎಂ ಬೊಮ್ಮಾಯಿ ಜತೆ ಚರ್ಚೆ
Team Udayavani, May 2, 2022, 7:20 AM IST
ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದು, ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿದೆ. ಇನ್ನೆರಡು ದಿನಗಳಲ್ಲಿ ಪಕ್ಷದಲ್ಲಿಯ ಎಲ್ಲ ಕುತೂಹಲಗಳಿಗೆ ತೆರೆ ಬೀಳುವ ಸಾಧ್ಯತೆ ಇದೆ.
ಖೇಲೋ ಇಂಡಿಯಾ ಸಮಾರೋಪ ಸಮಾರಂಭ ಮತ್ತು ಬೆಂಗಳೂರು ನೃಪತುಂಗ ವಿ.ವಿ. ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅಮಿತ್ ಶಾ ಆಗಮಿಸುವುದು ನಿಗದಿತ ಕಾರ್ಯಕ್ರಮ. ಆದರೆ ಪಕ್ಷದ ಪ್ರಸ್ತಕ ಬೆಳವಣಿಗೆಗಳ ಕುರಿತು ಚರ್ಚಿಸಲು ಅಮಿತ್ ಶಾ ಹೆಚ್ಚಿನ ಸಮಯ ಮೀಸಲಿಡುವ ಸಾಧ್ಯತೆ ಇದೆ. ಹೀಗಾಗಿ ಅವರ ರಾಜ್ಯ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಸಚಿವ ಅಮಿತ್ ಶಾ ಮಂಗಳವಾರ ಬೆಳಗ್ಗೆ ಬಸವ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಅನಂತರ ನೃಪತುಂಗ ವಿ.ವಿ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರಿ ನಿವಾಸ ರೇಸ್‌ಕೋರ್ಸ್ ಕಾಟೇಜ್ 1ರಲ್ಲಿ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ರಾಜ್ಯದ ಪ್ರಸಕ್ತ ಬೆಳವಣಿಗೆಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಪ್ರಮುಖವಾಗಿ ಸಂಪುಟ ಪುನಾರಚನೆಯ ವಿಷಯ ಚರ್ಚೆಯಾಗುವ ಸಾಧ್ಯತೆ ಇದ್ದು, ಹಾಲಿ ಖಾಲಿ ಇರುವ 5 ಸ್ಥಾನಗಳ ಜತೆಗೆ ಸಂಪುಟದ ಐವರು ಹಿರಿಯ ಸಚಿವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕೆನ್ನುವ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ನಾಯಕತ್ವದ ಗೊಂದಲಕ್ಕೆ ಬ್ರೇಕ್
ಸಂಪುಟ ಪುನಾರಚನೆ ಜತೆಗೆ ಪಕ್ಷ ಮತ್ತು ಸರಕಾರದ ಮಟ್ಟದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಪಕ್ಷದ ಒಂದು ಗುಂಪು ನಿರಂತರವಾಗಿ ಹೇಳುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆಯೂ ಅಮಿತ್ ಶಾ ಸ್ಪಷ್ಟ ಸಂದೇಶ ರವಾನಿಸುವ ಸಾಧ್ಯತೆ ಇದೆ.
ಮುಖಂಡರೊಂದಿಗೆ ಸಭೆ
ಅಮಿತ್ ಶಾ ಪಕ್ಷದ ಕಚೇರಿಗೆ ಭೇಟಿ ನೀಡಿ, ರಾಜ್ಯದಲ್ಲಿ ಪಕ್ಷ ಸಂಘಟನೆ ಮತ್ತು ಚುನಾವಣೆ ದೃಷ್ಟಿಯಿಂದ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ನಾಯಕರಿಗೆ ಚುನಾವಣೆಯಲ್ಲಿ 150ರ ಗುರಿ ಮುಟ್ಟಲು ನೀಲನಕ್ಷೆ ಸಿದ್ಧಪಡಿಸುವಂತೆ ಅವರು ಸೂಚನೆ ನೀಡಿದ್ದಾರೆ. ಅವರ ಬರುವಿಕೆಯ ಹಿನ್ನೆಲೆಯಲ್ಲಿ ರವಿವಾರ ಸಿಎಂ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು, ರಾ. ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಭೆ ನಡೆಸಿದ್ದಾರೆ.
ಸೇರ್ಪಡೆ ಸಾಧ್ಯತೆ
ಅಮಿತ್ ಶಾ ಅವರ ರಾಜ್ಯ ಭೇಟಿ ಸಂದರ್ಭದಲ್ಲಿ ಬೇರೆ ಪಕ್ಷಗಳ ಅನೇಕ ಮುಖಂಡರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ವರ್ತೂರು ಪ್ರಕಾಶ್ ಸೇರ್ಪಡೆ ?
ಮಾಜಿ ಸಚಿವ ವರ್ತೂರು ಪ್ರಕಾಶ್ ಬಿಜೆಪಿ ಸೇರಲು ಪ್ರಯತ್ನ ನಡೆಸಿದ್ದು, ರವಿವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅವರ ಸೇರ್ಪಡೆ ಕುರಿತು ರವಿವಾರ ಸಂಜೆ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಚರ್ಚೆಯಾಗಿದ್ದು, ಬಹುತೇಕ ಅವರ ಸೇರ್ಪಡೆಗೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸದ್ದು ಮಾಡಿದ ಸಂತೋಷ್ ಹೇಳಿಕೆ
ಗುಜರಾತ್, ಉತ್ತರಾಖಂಡ ಮತ್ತಿತರ ಅನೇಕ ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ತೆಗೆದುಕೊಂಡ ನಿಲುವಿನಿಂದ ಪಕ್ಷಕ್ಕೆ ಹೆಚ್ಚು ಅನುಕೂಲವಾಗಿದೆ. ನಾಯಕತ್ವ ಬದಲಾವಣೆಗೆ ಯಾವುದೇ ಆರೋಪ ಇರಬೇಕೆಂದೇನೂ ಇಲ್ಲ ಎಂದು ಬಿಜೆಪಿ ರಾ. ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮೈಸೂರಿನಲ್ಲಿ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದು ಮತ್ತು ಕುಟುಂಬ ರಾಜಕಾರಣಕ್ಕೆ ಪಕ್ಷ ಮಣೆ ಹಾಕುವುದಿಲ್ಲ ಎಂಬ ಹೇಳಿಕೆ ಬಿಜೆಪಿಯಲ್ಲಷ್ಟೇ ಅಲ್ಲದೇ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬಿ.ಎಲ್. ಸಂತೋಷ್ ಅವರ ಹೇಳಿಕೆ ಸರಿಯಿದೆ. ಅವರು ಕಾರ್ಪೊರೇಷನ್ ಚುನಾವಣೆಗೆ ಅನ್ವಯಿಸಿ ಇಂಥ ಹೇಳಿಕೆ ನೀಡಿದ್ದಾರೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಸಿಎಂ ಬಸವರಾಜ ಬೊಮ್ಮಾಯಿ ಆರೆಸ್ಸೆಸ್‌ನಿಂದ ಬಂದವರಲ್ಲ. ಅವರು ಜನತಾ ಪರಿವಾರದವರು. ಹೀಗಾಗಿಯೇ ಅವನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಆರೆಸ್ಸೆಸ್‌ನವರು ಪ್ರಯತ್ನಿಸುತ್ತಿದ್ದಾರೆ.
– ಸಿದ್ದರಾಮಯ್ಯ, ವಿಪಕ್ಷ ನಾಯಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.