ಫೀಲ್ಡಿಗಿಳಿದ ಬಿಬಿಎಂಪಿ ಆಯುಕ್ತರು
ನಿಯಮ ಪಾಲಿಸದ ಆಸ್ಪತ್ರೆ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗೆ ತರಾಟೆ
Team Udayavani, Jul 20, 2020, 9:05 AM IST
ಬೆಂಗಳೂರು: ಶನಿವಾರ ಬಿಬಿಎಂಪಿ ಆಯುಕ್ತರಾಗಿ ನೇಮಕವಾದ ಎನ್.ಮಂಜುನಾಥ್ ಪ್ರಸಾದ್ ಭಾನುವಾರದಿಂದ ಫೀಲ್ಡ್‌ಗೆ ಇಳಿದಿದ್ದಾರೆ.
ಭಾನುವಾರ ಬೆಳಗ್ಗೆ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿದ್ದು, ಕೆಲವು ನಿರ್ದಿಷ್ಟ ಸೂಚನೆ ನೀಡಿದ್ದಾರೆ. ನಿಯಮ ಪಾಲನೆ ಮಾಡದೆ ಇದ್ದರೆ ಆಸ್ಪತ್ರೆ ಬಂದ್ ಮಾಡಿ ವಿಪತ್ತು ನಿರ್ವಹಣೆ ಕಾಯ್ದೆ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಕೋಟಾ ಪ್ರಕಾರ ಶೇ.50 ಹಾಸಿಗೆಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು. ಬಿಬಿಎಂಪಿ ಶಿಫಾರಸು ಮಾಡುವ ರೋಗಿಗಳಿಗೆ ಚಿಕಿತ್ಸೆ ನೀಡಬೇಕು, ಇಲ್ಲವಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಆಯುಕ್ತರು ಭಾನುವಾರ ಸಾಕ್ರ ಆಸ್ಪತ್ರೆ, ಕೊಲಂಬಿಯಾ ಆಸ್ಪತ್ರೆ, ವೈದೇಹಿ ಮೆಡಿಕಲ್ ಕಾಲೇಜಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಸರ್ಕಾರಿ ಕೋಟಾ ಪ್ರಕಾರ 30 ಹಾಸಿಗೆ ನೀಡಬೇಕು ಎಂದು ಸರ್ಕಾರ ನಿರ್ದೇಶನ ನೀಡಿದ್ದರೂ, ಸರ್ಕಾರಿ ಆಸ್ಪತ್ರೆ ರೋಗಿಗಳನ್ನು ದಾಖಲು ಮಾಡಿಕೊಳ್ಳದೆ ಇರುವುದು ಕಂಡು ಬಂದಿದೆ. ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಸದಸ್ಯರು, ವೈದ್ಯಕೀಯ ಸಿಬ್ಬಂದಿಯನ್ನು ಆಯುಕ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ನಗರದ ವೈದೇಹಿ ಮೆಡಿಕಲ್ ಕಾಲೇಜಿನಲ್ಲಿ ಒಂದು ಸಾವಿರ ಹಾಸಿಗೆ ವ್ಯವಸ್ಥೆ ಇದ್ದರೂ, ಸರ್ಕಾರಿ ರೋಗಿಗಳಿಗೆ ಕೇವಲ 200 ಹಾಸಿಗೆ ಮೀಸಲಿಡಲಾಗಿತ್ತು. ಅದೇ ರೀತಿ ಕೊಲಂಬಿಯಾ ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾ ನಿಗದಿ ಮಾಡಿರುವಷ್ಟು ಹಾಸಿಗೆ ಮೀಸಲಿಡದೆ ಇರುವುದು ಕಂಡುಬಂದಿದ್ದು ಕೂಡಲೇ ಸರಿಪಡಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಸಂಜೆ ವೇಳೆಗೆ ತಪ್ಪು ತಿದ್ದಿಕೊಂಡ ಆಸ್ಪತ್ರೆ: ಆಯುಕ್ತರು ಬೆಳಗ್ಗೆ ಸಾಕ್ರ ಆಸ್ಪತ್ರೆಗೆ ಭೇಟಿ ನೀಡಿ ಅವ್ಯವಸ್ಥೆ ಬಗ್ಗೆ ತರಾಟೆಗೆ ತೆಗೆದುಕೊಂಡ ಮೇಲೆ ಸಂಜೆ ವೇಳೆಗೆ ಆಸ್ಪತ್ರೆ ಸರ್ಕಾರಿ ಕೋಟಾದಂತೆ ರೋಗಿಗಳನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುವುದಾಗಿ ಆಯಕ್ತರಿಗೆ ಪತ್ರದ ಮೂಲಕ ವಿವರಣೆ ನೀಡಿದೆ. ಹಾಗೆಯೇ ಪೂರ್ವ ವಲಯದ ವಾರ್ ರೂಮ್‌ನಿಂದಲೇ ಸೋಂಕಿತರೊಂದಿಗೆ ವಿಡಿಯೋ ಸಂವಾದ ನಡೆಸಿ ಆತ್ಮಸ್ಥೈರ್ಯ ತುಂಬಿದರು. ಅಲ್ಲದೇ, ಕೋವಿಡ್ ಆರೈಕೆ ಕೇಂದ್ರಗಳ ಪರಿಸ್ಥಿತಿ ಮಾಹಿತಿ ಕುರಿತು ಪಡೆದುಕೊಂಡಿದ್ದಾರೆ.
ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ : ನಗರದಲ್ಲಿನ ಖಾಸಗಿ ಆಸ್ಪತ್ರೆಗಳು ಮುಂದಿನ 24 ಗಂಟೆಗಳ ಒಳಗಾಗಿ ಆಯಾ ಆಸ್ಪತ್ರೆಗಳ ವಿವರ ನೀಡುವಂತೆ ಆಯುಕ್ತರು ಎಲ್ಲಾ ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ನೀಡಲು ಮುಂದಾಗಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿನ ಶೇ.50 ಹಾಸಿಗೆ ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದೆ. ಆದರೆ, ಖಾಸಗಿ ಆಸ್ಪತ್ರೆಗಳು ಸರ್ಕಾರಿ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ. ಕೆಲವು ಆಸ್ಪತ್ರೆಗಳು ತಪ್ಪು ಮಾಹಿತಿ ನೀಡುತ್ತಿರುವುದು ಕಂಡುಬರುತ್ತಿದೆ. ರೋಗಿಗಳನ್ನು ಆಯಾ ಆಸ್ಪತ್ರೆಗೆ ಸೇರಿಸುವ ಮುನ್ನ ವೆಬ್‌ಸೈಟ್‌ನಲ್ಲಿ ಹಾಸಿಗೆ ಖಾಲಿ ಎಂದೇ ನಮೂದಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಖಾಲಿ ಇಲ್ಲ ಎಂಬ ಉತ್ತರ ಬರುತ್ತಿದೆ. ಹೀಗಾಗಿ, ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸೋಮವಾರ ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡುತ್ತೇವೆ. ಮುಂದಿನ 24 ಗಂಟೆಯಲ್ಲಿ ಆಸ್ಪತ್ರೆಗಳು ಆಯಾ ಆಸ್ಪತ್ರೆಗಳಲ್ಲಿನ ಒಟ್ಟು ಹಾಸಿಗೆ ವಿವರ ಮತ್ತು ಇದರಲ್ಲಿ ಎಷ್ಟು ಹಾಸಿಗೆಗಳನ್ನು ಸರ್ಕಾರಿ ರೋಗಿಗಳಿಗೆ ಮೀಸಲಿಡಲಾಗಿದೆ ಎನ್ನುವ ಬಗ್ಗೆ ಮಾಹಿತಿ ನೀಡಬೇಕು. ಮುಖ್ಯವಾಗಿ ಎಷ್ಟು ಇನ್ನೂ ಖಾಲಿ ಇದೆ ಎನ್ನುವುದು ತಿಳಿಸಬೇಕು. ಈ ವಿವರವನ್ನು ಮುಂದಿನ 24 ಗಂಟೆಗಳ ಒಳಗಾಗಿ ಕಡ್ಡಾಯವಾಗಿ ನೀಡಬೇಕು. ಅಲ್ಲದೆ, ನಿಖರವಾದ ಮಾಹಿತಿಯನ್ನೇ ನೀಡಬೇಕು ಇಲ್ಲವಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.