ತ್ಯಾಜ್ಯದಲ್ಲಿನ ಲಾಭ ಪಾಲಿಕೆಗೆ ಗೊತ್ತಿಲ್ಲ!
ಮಾರುಕಟ್ಟೆಗೆಂದು ಕಾಯಕಲ್ಪ?
Team Udayavani, Jun 8, 2019, 3:08 AM IST
ಚಿತ್ರ: ಫಕ್ರುದ್ದೀನ್ ಎಚ್.
ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಸರ್ಮಪಕವಾಗಿ ಬಳಸಿಕೊಂಡರೆ ಬಿಬಿಎಂಪಿಗೆ ತ್ಯಾಜ್ಯ ವಿಲೇವಾರಿಯಿಂದ ಆಗುತ್ತಿರುವ ನಷ್ಟ ತಪ್ಪಿಸಿ, ತ್ಯಾಜ್ಯದಿಂದಲೇ ಅರ್ಧ ಬೆಂಗಳೂರಿಗೆ ವಿದ್ಯುತ್ ನೀಡಬಹುದು!
ನಗರದಲ್ಲಿ ಉತ್ಪಾದನೆಯಾಗುತ್ತಿರುವ ತ್ಯಾಜ್ಯದಲ್ಲಿ ನಾಲ್ಕನೇ ಒಂದು ಭಾಗ ತ್ಯಾಜ್ಯ ಮಾರುಕಟ್ಟೆಗಳಿಂದಲೇ ಉತ್ಪಾದನೆಯಾಗುತ್ತಿದೆ. ಇದನ್ನು ವೈಜ್ಞಾನಿಕವಾಗಿ ಬಳಸಿಕೊಂಡರೆ ಜೈವಿಕ ಅನಿಲ ಘಟಕಗಳ ಮೂಲಕ ಪ್ರತಿ 5 ಟನ್ ಹಸಿ ತ್ಯಾಜ್ಯದಿಂದ 250 ಕಿ.ಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು.
ಪ್ರತಿದಿನ ಮಾರುಕಟ್ಟೆಗಳಿಂದ ಅಂದಾಜು 1200 ಟನ್‌ನಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಅರ್ಧದಷ್ಟು ತ್ಯಾಜ್ಯ ಬಳಸಿಕೊಂಡರೂ ನಗರದ ಬೀದಿ ದೀಪಗಳಿಗೆ, ಪಾರ್ಕ್‌ಗಳಿಗೆ ಬೇಕಾಗುವ ವಿದ್ಯುತ್ ಉತ್ಪಾದನೆ ಮಾಡಬಹುದು ಎನ್ನುತ್ತಾರೆ ತಜ್ಞರು.
ಮಾರುಕಟ್ಟೆ ಯಾವುದು, ಡಂಪಿಂಗ್‌ಯಾರ್ಡ್ ಯಾವುದು ಎನ್ನುವುದು ತಿಳಿಯದಷ್ಟರ ಮಟ್ಟಿಗೆ ನಗರದ ಕೃಷ್ಣರಾಜೇಂದ್ರ ಮಾರುಕಟ್ಟೆ, ಶಿವಾಜಿನಗರ ಮತ್ತು ಕೃಷ್ಣರಾಜಪುರ ಮಾರುಕಟ್ಟೆ ಪ್ರದೇಶಗಳು ತ್ಯಾಜ್ಯದಿಂದ ತುಂಬಿಕೊಳ್ಳುತ್ತವೆ. ಮಳೆಗಾಲದಲ್ಲಿ ಈ ಮಾರುಕಟ್ಟೆಗಳು ಅಕ್ಷರಶಃ ಕೆರೆಗಳಾಗಿ ಬದಲಾಗಿ ಬಿಡುತ್ತವೆ.
ಮಳೆಯ ಸಮದಲ್ಲಿ ತ್ಯಾಜ್ಯ ನಿರ್ವಹಣೆ ಬಹುದೊಡ್ಡ ಸವಾಲು. ಮೊದಲೇ ಸರ್ಮಪಕವಾಗಿ ತ್ಯಾಜ್ಯ ವಿಂಗಡಣೆಯಾಗದೆ ಸಮಸ್ಯೆಯಾಗಿರುವಾಗ ಮಳೆ, ಕಸದ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿದೆ.
“ತ್ಯಾಜ್ಯ ವಿಂಗಡಣೆ ರಾಕೆಟ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದಷ್ಟು ಕಠಿಣವಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಲೇ ಇಷ್ಟೆಲ್ಲ ಸಮಸ್ಯೆಗಳು ಉದ್ಭವಿಸಿವೆ. ಸೂಕ್ತ ನಿರ್ವಹಣೆಯಿಂದ ಲಾಭವೇ ಆಗಲಿದೆ ಎನ್ನುವುದು ಗೊತ್ತಿದ್ದರೂ, ಬಿಬಿಎಂಪಿ ಸೂಕ್ರ ಕ್ರಮ ಅನುಸರಿಸುತ್ತಿಲ್ಲ ಎನ್ನುವುದು ವಿಪರ್ಯಾಸ’ ಎನ್ನುತ್ತಾರೆ ಹಸಿರುದಳ ಸಂಸ್ಥೆಯ ಸಹಸಂಸ್ಥಾಪಕಿ ನಳಿನಿ ಶೇಖರ್.
ತ್ಯಾಜ್ಯ ಸಂಸ್ಕರಣೆಗೆ ಹಲವು ಸಂಘಟನೆಗಳು ಸಿದ್ಧವಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳ ಅಸಡ್ಡೆ ಮತ್ತು ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದಲೇ ಹಲವು ಸಂಸ್ಥೆಗಳು ಹಿಂದೇಟು ಹಾಕುತ್ತಿವೆ ಎನ್ನುತ್ತಾರೆ ನಳಿನಿ.
ಹಸಿತ್ಯಾಜ್ಯ ಸಂಸ್ಕರಣೆಯಿಂದ ವಿದ್ಯುತ್ ಉತ್ಪಾದಿಸಿ ಬೀದಿ ದೀಪಗಳಿಗೆ ಬಳಸುವ ಉದ್ದೇಶದಿಂದ ನಗರದ 13 ಕಡೆ ಬಯೋ ಮಿಥನೈಸೇಷನ್ ಘಟಕಗಳನ್ನು ತೆಗೆಯಲಾಗಿತ್ತು. ಈಗ ಇವುಗಳಲ್ಲಿ ಬಹುತೇಕ ಘಟಕಗಳು ನಿದ್ರಾವಸ್ತೆ ತಲುಪಿವೆ. ಮಿಥನೈಸೇಷನ್ ಘಟಕಗಳಿಂದ ವಿದ್ಯುತ್ ಉತ್ಪಾದನೆ ಮಾಡಬಹುದಾದ ಬಹುದೊಡ್ಡ ಅವಕಾಶವನ್ನು ಬಿಬಿಎಂಪಿ ಕೈಚಲ್ಲಿದೆ.
ಈ ಘಟಕಗಳು ಸೂಕ್ತವಾಗಿ ನಿರ್ವಹಿಸಿದರೆ ನಗರದ ತ್ಯಾಜ್ಯ ಸಮಸ್ಯೆ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಲಿದ್ದು, ಉಚಿತವಾಗಿ ವಿದ್ಯುತ್ ಸಿಗಲಿದೆ. ಪಾಲಿಕೆಯ ಬಹುತೇಕ ವಾರ್ಡ್‌ಗಳಲ್ಲಿ ಸೂಕ್ತ ತ್ಯಾಜ್ಯ ನಿರ್ವಹಣೆಯಾಗುತ್ತಿಲ್ಲ. ತ್ಯಾಜ್ಯವನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕೇವಲ ಸಾಗಿಸುವುದಕ್ಕೆ ಬಿಬಿಎಂಪಿ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದೆ.
ತ್ಯಾಜ್ಯದಿಂದ ಲಾಭ: ನಗರದಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ಯಡಿಯೂರು ವಾರ್ಡ್ ಮಾದರಿಯಾಗಿದೆ. ಈ ವಾರ್ಡ್‌ನಲ್ಲಿ ಪ್ರತಿದಿನ 250 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದರಲ್ಲಿ 150 ಕಿಲೋ ವ್ಯಾಟ್ ವಿದ್ಯುತ್ ಅನ್ನು 17 ಕಟ್ಟಡಗಳು, 13 ಪಾರ್ಕ್‌ಗಳಿಗೆ ಬಳಸಲಾಗುತ್ತಿದೆ. ಉಳಿದ 100 ವ್ಯಾಟ್ ವಿದ್ಯುತ್ ಬೆಸ್ಕಾಂಗೆ ಮಾರಾಟ ಮಾಡಲು ಮುಂದಾಗಿದೆ.
“ಯಡಿಯೂರು ವಾರ್ಡ್ ತ್ಯಾಜ್ಯದಿಂದಲೇ ಪಾಲಿಕೆಗೆ ಪ್ರತಿ ತಿಂಗಳು 34 ಲಕ್ಷ ರೂ. ಲಾಭ ಬರುತ್ತಿದೆ. ವೈಜ್ಞಾನಿಕ ಮಾದರಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ವಾರ್ಡ್‌ನಲ್ಲಿ ಉಂಟಾಗಿದ್ದ ತ್ಯಾಜ್ಯ ಸಮಸ್ಯೆ ಕಡಿಮೆಯಾಗಿದ್ದು, ಲಾಭವೂ ಸಿಗುತ್ತಿದೆ’ ಎನ್ನುತ್ತಾರೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್.
“ನಗರದಲ್ಲಿ ಯಡಿಯೂರು ವಾರ್ಡ್‌ನಲ್ಲಿ ಮಾತ್ರ ಜೈವಿಕ ಘಟಕದ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ಘಟಕದಲ್ಲಿ ತಯಾರಾದ ಗೊಬ್ಬರವನ್ನು ಪದ್ಮನಾಭ ನಗರದ 42 ಪಾರ್ಕ್‌ಗಳಿಗೆ ಬಳಸಲಾಗುತ್ತಿದೆ. ಇದಕ್ಕೆ ಈ ಹಿಂದೆ ಬಳಸಲಾಗುತ್ತಿದ್ದ ರಾಸಾಯನಿಕ ತ್ಯಾಜ್ಯ ನಿಂತಿದೆ’ ಎನ್ನುತ್ತಾರೆ ಯಾಡಿಯೂರು ವಾರ್ಡ್‌ನ ಸದಸ್ಯೆ ಪೂರ್ಣಿಮಾ ರಮೇಶ್.
“ನಗರದಲ್ಲಿ 1058 ಪಾರ್ಕ್‌ಗಳಿವೆ. ಇದರಲ್ಲಿ 774 ಪಾರ್ಕ್‌ಗಳನ್ನು ಗುತ್ತಿಗೆದಾರರು ನಿರ್ವಹಣೆ ಮಾಡುತ್ತಿದ್ದಾರೆ. ನಗರದ 1058 ಪಾರ್ಕ್‌ಗಳಿಗೆ ರಾಸಾಯನಿಕ ರಸಗೊಬ್ಬರಕ್ಕೆ 70 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಎಲ್ಲ ಪಾರ್ಕ್‌ಗಳಿಗೆ ಇಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ದ್ರಾವಣವನ್ನು ಬಳಸಲು ಬಿಬಿಎಂಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ರಾಸಾಯನಿಕ ಗೊಬ್ಬರಕ್ಕೆ ಬಿಬಿಎಂಪಿ ವ್ಯಯಿಸುತ್ತಿದ್ದ 70 ಲಕ್ಷ ರೂ. ಉಳಿತಾವಾಗಲಿದೆ’ ಎಂದು ಪೂರ್ಣಿಮಾ ವಿವರಿಸುತ್ತಾರೆ.
ತ್ಯಾಜ್ಯ ವಿಲೇವಾರಿಯ ಹಿಂದೆ ಮಾಫಿಯಾ?: ತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ಆಗದಿರುವುದಕ್ಕೆ ತ್ಯಾಜ್ಯ ವಿಲೇವಾರಿ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯೇ ಕಾರಣ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿ ಅಧಿಕಾರಿಗಳು. ತ್ಯಾಜ್ಯ ನಿರ್ವಹಣೆಯ ಹಿಂದೆ ಬಹುದೊಡ್ಡ ಮಾಫಿಯಾ ಇದೆ. ಗುತ್ತಿಗೆದಾರರು, ಬಿಬಿಎಂಪಿ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವುದು ಅವರ ಆರೋಪ.
ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಒಂದು ವರ್ಷಕ್ಕೆ ಅಂದಾಜು ಒಂದು ಸಾವಿರ ಕೋಟಿ ರೂ. ಗಳನ್ನು ವ್ಯಯಿಸುತ್ತಿದೆ. ಸೂಕ್ತ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆಯಾದದ್ದೇ ಆದಲ್ಲಿ ಬಿಬಿಎಂಪಿಗೆ ಲಾಭವೇ ಆಗಲಿದೆ. ಆದರೆ, ಲಾಭ ಉಂಟು ಮಾಡುವುದು ಅಧಿಕಾರಿಗಳಿಗಾಗಲಿ, ಗುತ್ತಿಗೆದಾರರಿಗಾಗಲಿ ಬೇಕಾಗಿಲ್ಲ. ಇದರಿಂದ ಅವರ ಜೇಬಿಗೆ ಕತ್ತರಿ ಬೀಳಲಿದೆ ಎನ್ನುವ ಆತಂಕದಿಂದ ಸೂಕ್ತ ನಿರ್ವಹಣೆ ಯಾಗದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ ಎನ್ನುವುದು ಅವರ ಆರೋಪ.
ಮಾರುಕಟ್ಟೆಯ ತ್ಯಾಜ್ಯ ಎಲ್ಲಿಗೆ ಹೋಗುತ್ತೆ?: ಮಾರುಕಟ್ಟೆಯ ತ್ಯಾಜ್ಯವಷ್ಟೇ ಅಲ್ಲ, ನಗರದ ಬಹುತೇಕ ತ್ಯಾಜ್ಯ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿಯಾಗಿದ್ದು ಕಡಿಮೆ. ಈಗ ಬೆಳ್ಳಳ್ಳಿ ಕ್ವಾರಿ ಮತ್ತು ಕೆಸಿಡಿಸಿ ಘಟಕಕ್ಕೆ ತ್ಯಾಜ್ಯ ಸಾಗಿಸಲಾಗುತ್ತಿದೆ. ಸಣ್ಣ ಪ್ರಮಾಣದಲ್ಲಿ ನಗರದ ಏಳು ತ್ಯಾಜ್ಯ ಸಂಸ್ಕರಣೆ ಘಟಕಗಳಿಗೆ ಸಣ್ಣ ಪ್ರಮಾಣದಲ್ಲಿ ಅಂದಾಜು 40ರಿಂದ 50 ಟನ್ ತ್ಯಾಜ್ಯ ಸಾಗಿಸಲಾಗುತ್ತಿದೆ. ಕೇವಲ ಮಾರುಕಟ್ಟೆ ತ್ಯಾಜ್ಯ ಸಾಗಿಸುವುದಕ್ಕೆ ಬಿಬಿಎಂಪಿ ಪ್ರತಿ ವರ್ಷ 250 ಕೋಟಿ ರೂ. ವ್ಯಯಿಸುತ್ತಿದೆ.
ಮರುಕಟ್ಟೆಯಲ್ಲಿ ಸಿಗುವ ಹಸಿ ತ್ಯಾಜ್ಯ, ತ್ಯಾಜ್ಯವೇ ಅಲ್ಲ. ಅದು ಬಹುಸತ್ವಗಳಿಂದ ಕೂಡಿರುವ ಅಮೃತ. ಆ ಸತ್ವವನ್ನು ಮರಳಿ ಮಣ್ಣಿಗೆ ಸೇರಿಸುವ ಕೆಲಸ ಆಗುತ್ತಿಲ್ಲ. ಅದರ ಮಹತ್ವ ತಿಳಿಯುವವರೆಗೆ ವ್ಯರ್ಥ ಮಾಡುವುದು ಮುಂದುವರಿಯುತ್ತಲೇ ಇರುತ್ತದೆ.
-ಯಲ್ಲಪ್ಪರೆಡ್ಡಿ, ಪರಿಸರ ತಜ್ಞ
* ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2: ಕಾಲ್ತುಳಿತದ ಗಾಯಾಳು ಬಾಲಕನ ಭೇಟಿಯಾದ ಅಲ್ಲು ಅರ್ಜುನ್
ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಎಚ್‌ಡಿಕೆ
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.