ಪಾಲಿಕೆ ಸದಸ್ಯರ ಅಧಿಕಾರ ವಿಸ್ತರಣೆ ಸಾಧ್ಯವೇ?
ಚುನಾವಣೆಗೆ ಕೋವಿಡ್ ಪ್ರತಿಕೂಲ ವಾತಾವರಣ
Team Udayavani, Aug 10, 2020, 8:31 AM IST
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರ ಐದು ವರ್ಷದ ಅಧಿಕಾರ ಅವಧಿ ಸೆ. 10ಕ್ಕೆ ಮುಕ್ತಾಯವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಯ ಅನಿವಾರ್ಯವಿದೆ. ಹೀಗಾಗಿ, ಪಾಲಿಕೆ ಸದಸ್ಯರ ಅಧಿಕಾರ ಅವಧಿ ಮೂರು ತಿಂಗಳು ಅಥವಾ ಆರು ತಿಂಗಳ ಕಾಲ ವಿಸ್ತರಿಸಬೇಕು ಎಂದು ಪಾಲಿಕೆಯ ಸದಸ್ಯರು ಪಕ್ಷಾತೀತವಾಗಿ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಪಾಲಿಕೆ ಸದಸ್ಯರ ಮನವಿಗೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಅಧಿಕಾರಾವಧಿ ಬಳಿಕ ವಿಸ್ತರಣೆ ಆಗುವುದಿಲ್ಲ. ಪುನಃ ಇದಕ್ಕಾಗಿ ಚುನಾವಣೆಯೇ ನಡೆಯಬೇಕು. ಆದರೆ ಕೋವಿಡ್ ಸಂಕಷ್ಟದ ಸ್ಥಿತಿಯಲ್ಲಿ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ? ಪರಿಹಾರ ಏನು? ಎಂಬುದರ ಇಣುಕುನೋಟ ಇಲ್ಲಿದೆ.
ಬಿಬಿಎಂಪಿಯಲ್ಲಿ ಈಗ ತಲ್ಲಣ ಶುರುವಾಗಿದೆ. ಪಾಲಿಕೆ ಸದಸ್ಯರ ಅಧಿಕಾರಾವಧಿ ಸೆ.10ಕ್ಕೆ ಮುಗಿಯಲಿದ್ದು, ಕೋವಿಡ್ ಸಂಕಷ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಅತ್ಯಂತ ಅವಶ್ಯವಿದೆ. ಸದಸ್ಯರ ಅಧಿಕಾರಾವಧಿ ವಿಸ್ತರಣೆಗೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಕುರಿತು ಸರ್ಕಾರ ಸಕಾರಾತ್ಮಕವಾಗಿ ಇದುವರೆಗೂ ಸ್ಪಂದಿಸಿಲ್ಲ. ಹೀಗಾಗಿ ಸರ್ಕಾರ ಸಚಿವ ಸಂಪುಟದಲ್ಲಿ ವಿಷಯ ಮಂಡನೆ ಮಾಡಿ ಅನುಮೋದನೆ ಪಡೆದುಕೊಳ್ಳಬೇಕು. ಆದರೆ, ಇದಕ್ಕೆ ಶಾಸಕರು ಒಲವು ತೋರಿಸುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಆಡಳಿತ ಪಕ್ಷದ ನಾಯಕರೊಬ್ಬರು.
ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲದೆ ಇರುವುದ ರಿಂದ ಸೆ. 10ರ ನಂತರ ಪಾಲಿಕೆ ವ್ಯಾಪ್ತಿಯಲ್ಲಿ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಕ ಮಾಡಲಿದ್ದು, ಇವರ ಮೂಲಕ ಪಾಲಿಕೆ ವ್ಯಾಪ್ತಿಯಲ್ಲಿನ ಕಾರ್ಯಚಟುವಟಿಕೆಗಳು ನಿರ್ಧಾರ ಆಗಲಿವೆ. ನಂತರ ನೇರವಾಗಿ ಸರ್ಕಾರದ ನಿರ್ದೇಶನದಂತೆ ಆಡಳಿತಾಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ವೇಳೆಗೆ ಬಿಬಿಎಂಪಿ ಚುನಾವಣಾ ಪ್ರಕ್ರಿಯೆಗಳು ಅಂತಿಮಗೊಳ್ಳಬೇಕಾಗಿತ್ತು. ಆಗಸ್ಟ್‌ನಲ್ಲಿ ಚುನಾವಣೆ ನಡೆದು, ಸೆ. 10ರ ವೇಳೆಗೆ ನೂತನ ಮೇಯರ್ ಹಾಗೂ ಉಪಮೇಯರ್ ಅಧಿಕಾರ ಸ್ವೀಕರಿಸಬೇಕಾಗಿತ್ತು. ಆದರೆ, ಕೊರೊನಾ ಸೋಂಕಿನ ಭೀತಿಯಿಂದ ಎಲ್ಲಾ ಲೆಕ್ಕಾಚಾರವೂ ಈಗ ತಲೆಕೆಳಗಾಗಿದೆ.
ಸಮಿತಿಗಳ ಮುಖ್ಯಸ್ಥರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ತಡೆಯುವ ನಿಟ್ಟಿನಲ್ಲಿ ಪಾಲಿಕೆ ಸದಸ್ಯರು ಪ್ರಮುಖ ಪಾತ್ರ ನಿರ್ವಹಿಸಬೇಕಾಗಿದೆ. ಆದರೆ, ಕೆಲವು ಭಾಗದಲ್ಲಿ ಪಾಲಿಕೆ ಸದಸ್ಯರು ನಿರೀಕ್ಷಿತ ಪ್ರಮಾಣದಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಜತೆಗೆ ಪಾಲಿಕೆ ವ್ಯಾಪ್ತಿಯ ವಾರ್ಡ್ ಮಟ್ಟದ ಮತ್ತು ವಿಪತ್ತು ನಿರ್ವಹಣಾ ಕೋಶದ ಸಮಿತಿ ಹಾಗೂ ಬೂತ್ ಮಟ್ಟದ ಸಮಿತಿಗೆ ಪಾಲಿಕೆ ಸದಸ್ಯರೇ ಅಧ್ಯಕ್ಷರಾಗಿರಲಿದ್ದು, ಸೋಂಕು ತಡೆಗೆ ವಾರ್ಡ್ ಮಟ್ಟದಲ್ಲಿ ಯೋಜನೆ ರೂಪಿಸುವಲ್ಲಿ ಪಾಲಿಕೆ ಸದಸ್ಯರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇದೀಗ ಆಡಳಿತಾತ್ಮಕ ನಿರ್ವಹಣೆ ಜಾರಿಯಾಗುವ ಸಾಧ್ಯತೆ ಇರುವುದರಿಂದ ವಾರ್ಡ್ ಮಟ್ಟದಲ್ಲಿ ಸೋಂಕು ನಿರ್ವಹಣೆಗೆ ಹಿನ್ನಡೆಯಾಗುವ ಸಾಧ್ಯತೆಯೂ ಇದೆ.
ಈ ಕ್ಷೇತ್ರಕ್ಕೆ ಶಾಸಕರೂ ಇಲ್ಲ : ಬಿಬಿಎಂಪಿ ವ್ಯಾಪ್ತಿಯಲ್ಲಿ ಆಡಳಿತಾತ್ಮಕ ನಿರ್ವಹಣೆ ಜಾರಿಯಾದ ಮೇಲೆ ಶಾಸಕರೇ ಕಿಂಗ್ ಆಗಲಿದ್ದಾರೆ. ಆದರೆ, ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರ ಅಕ್ಷರಶಃ ಅನಾಥವಾಗಲಿದೆ! ಈಗಾಗಲೇ ಹಲವು ತಿಂಗಳಿಂದ ಈ ಕ್ಷೇತ್ರಕ್ಕೆ ಶಾಸಕರು ಇಲ್ಲ. ಇದೀಗ ಪಾಲಿಕೆ ಸದಸ್ಯರ ಅಧಿಕಾರ ಅವಧಿಯೂ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಅತ್ತ ಶಾಸಕರೂ ಇಲ್ಲ, ಇತ್ತ ಪಾಲಿಕೆ ಸದಸ್ಯರೂ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.
ಸರ್ಕಾರಕ್ಕೆ ಲಾಭವಾಗುವ ಸಾಧ್ಯತೆ : ಪಾಲಿಕೆ ವ್ಯಾಪ್ತಿಯಲ್ಲಿ ಆಡಳಿತಾತ್ಮಕ ನಿರ್ವಹಣೆಯಿಂದ ಲಾಭವೂ ಇದೆ. ಸರ್ಕಾರವೇ ಪಾಲಿಕೆಯ ಮೇಲೆ ನೇರ ಅಧಿಕಾರ ಚಲಾಯಿಸುವ ಹಿನ್ನೆಲೆಯಲ್ಲಿ ಗೊಂದಲಗಳು ಮೂಡುವ ಸಾಧ್ಯತೆ ಇಲ್ಲದೆ, ನಿರ್ಧಾರಗಳನ್ನು ಶೀಘ್ರ ತೆಗೆದುಕೊಳ್ಳಬಹುದು. ಈ ಅವಧಿಯಲ್ಲಿ ನಗರದ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಬಹುದು ಎನ್ನುವ ಮಾತೂ ಇದೆ. ಆದರೆ, ಈ ವೇಳೆ ಸರ್ಕಾರ ಏಕಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಶಾಸಕರು ಹೇಳಿದಂತೆ ಮತ್ತು ಅವರಿಗೆ ಬೇಕಾದವರಿಗೆ ಆಗಬೇಕಾದ ಕೆಲಸಗಳು ಸರಾಗವಾಗಿ ಆಗುವ ಸಾಧ್ಯತೆಯೂ ಇದೆ.
ಶಾಸಕರಿಗೆ ಜವಾಬ್ದಾರಿ ಜತೆಗೆ ಲಾಭ : ಬೆಂಗಳೂರಿನಲ್ಲಿ ವಿವಿಧ ಪಕ್ಷದ 27 ಜನ ಶಾಸಕರು ಇದ್ದಾರೆ. ಆದರೆ, ಸೋಂಕು ತಡೆಯುವ ನಿಟ್ಟಿನಲ್ಲಿ ಇಲ್ಲಿಯವರೆಗೆ ಬಹುತೇಕ ಶಾಸಕರು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಗ್ಗೆ ವರದಿಯಾಗಿಲ್ಲ. ಅಲ್ಲದೆ, ಮುಂದಿನ ದಿನಗಳಲ್ಲಿ ಇಡೀ ವಿಧಾನಸಭಾ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಹಾಗೂ ಕೊರೊನಾ ತುರ್ತು ಪರಿಸ್ಥಿಯನ್ನು ಶಾಸಕರೇ ನಿರ್ವಹಿಸಲಿದ್ದಾರೆಯೇ ಎನ್ನುವುದೂ ಪ್ರಶ್ನೆಯಾಗಿಯೇ ಉಳಿದಿದೆ. ಈ ವೇಳೆ ಶಾಸಕರು ಬೆಂಬಲಿಗರಿಗೆ ಹೆಚ್ಚು ಅನುಕೂಲ, ವರ್ಗಾವಣೆ ಹಾಗೂ ಅನುದಾನ ಬಳಕೆಯ ವಿಚಾರಗಳಲ್ಲಿ ಸಹ ಮೇಲುಗೈ ಸಾಧಿಸುವ ಸಾಧ್ಯತೆಯೂ ಇದೆ.
ಅವಧಿ ವಿಸ್ತರಣೆ ಅನುಮಾನ : ಪಾಲಿಕೆ ಸದಸ್ಯರ ಅಧಿಕಾರ ಅವಧಿ ವಿಸ್ತರಣೆ ಮಾಡುವ ವಿಚಾರದಲ್ಲಿ ಸರ್ಕಾರ ಸಮ್ಮತಿ ನೀಡುವ ಸಾಧ್ಯತೆ ಇಲ್ಲ ಎಂದು ಹೆಸರು ಹೇಳಲಿಚ್ಛಿಸದ ಆಡಳಿತ ಪಕ್ಷದ ನಾಯಕರೊಬ್ಬರು ತಿಳಿಸಿದರು. ಪಾಲಿಕೆಯ ಕೆಲವು ಆಡಳಿತಾತ್ಮಕ ವಿಚಾರಗಳಲ್ಲಿ ಸರ್ಕಾರಕ್ಕೆ ಅಸಮಾಧಾನವಿದೆ. ಕೊರೊನಾ ತುರ್ತು ಪರಿಸ್ಥಿತಿ ಇದೆಯಾದರೂ, ಅಧಿಕಾರಿಗಳು ಹಾಗೂ ಸ್ವಯಂ ಸೇವಕರನ್ನು ಹೆಚ್ಚು ಬಳಸಿಕೊಂಡು ಇದಕ್ಕೆ ಕಡಿವಾಣ ಹಾಕಲಾಗುವುದು. ಹೀಗಾಗಿ, ಶೇ. 99ರಷ್ಟು ಪಾಲಿಕೆ ಸದಸ್ಯರ ಅಧಿಕಾರ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಿದರು.
ಮೀಸಲಾತಿ ಪಟ್ಟಿ ಇನ್ನು ಪ್ರಕಟಿಸಿಲ್ಲ : ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ 2011ರ ಜನ ಸಂಖ್ಯೆಗೆ ಅನುಗುಣವಾಗಿ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಶೇ. 5ಕ್ಕಿಂತ ಹೆಚ್ಚು ಬದಲಾವಣೆ ಮಾಡದಂತೆ ಮರುವಿಂಗಡಣೆ ಮಾಡಲಾಗಿದ್ದು, ಆದರೆ, ಸರ್ಕಾರ ವಾರ್ಡ್‌ಗಳಿಗೆ ಮೀಸಲಾತಿ ಪಟ್ಟಿಯನ್ನು ಇನ್ನೂ ಪ್ರಕಟ ಮಾಡಿಲ್ಲ. ಪಾಲಿಕೆಯ ಚುನಾವಣೆಗೆ ಮುನ್ನ ಪ್ರತಿ ವಾರ್ಡ್‌ಗೂ ಮೀಸಲಾತಿ ಪ್ರಕಟಿಸಿದರೆ ಚುನಾವಣೆ ಸಾಧ್ಯ. ಆದರೆ, ಈ ವಿಚಾರದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ಜತೆಗೆ ಕೋವಿಡ್ ಪರಿಸ್ಥಿತಿಯೂ ಅನಾಸಕ್ತಿಗೆ ಕಾರಣ ಎನ್ನಲಾಗಿದೆ.
ಪಾಲಿಕೆ ಸದಸ್ಯರ ಅಧಿಕಾರ ಅವಧಿ ಆರು ತಿಂಗಳು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡುವ ಸಂಬಂಧ ಪಕ್ಷದ ವರಿಷ್ಠರೊಂದಿಗೆ ಚರ್ಚೆ ಮಾಡಲಾಗುವುದು. ಅಂತಿಮವಾಗಿ ಸರ್ಕಾರದ ನಿರ್ಧಾರಕ್ಕೆ ಬದ್ಧ. – ಎಂ. ಗೌತಮ್‌ಕುಮಾರ್, ಮೇಯರ್
ಎಲ್ಲ ವಾರ್ಡ್‌ಗಳಲ್ಲಿ ವಾರ್ಡ್ ಮಟ್ಟದ ಸಮಿತಿ ಅಧ್ಯಕ್ಷರಾಗಿ ಆಯಾ ವಾರ್ಡ್‌ನ ಪಾಲಿಕೆ ಸದಸ್ಯರೇ ಇರುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ವಾರ್ಡ್ ಮಟ್ಟದಲ್ಲಿ ಪಾಲಿಕೆ ಸದಸ್ಯರಿಗೆ ಅನೌಪಚಾರಿಕವಾಗಿ ಅಧಿಕಾರ ನೀಡುವುದು ಉತ್ತಮ. – ಕಾತ್ಯಾಯಿನಿ ಚಾಮರಾಜ್, ಸಾಮಾಜಿಕ ಕಾರ್ಯಕರ್ತೆ
ಕೋವಿಡ್ ತಡೆಯುವ ನಿಟ್ಟಿನಲ್ಲಿ ಪಾಲಿಕೆ ಸದಸ್ಯರು ಫ್ರಂಟ್ ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ಪಾಲಿಕೆ ಸದಸ್ಯರ ಅಧಿಕಾರ ಅವಧಿಯನ್ನು ಸರ್ಕಾರ ಮೂರು ಅಥವಾ ಆರು ತಿಂಗಳು ವಿಸ್ತರಿಸಬೇಕು. – ಅಬ್ದುಲ್‌ವಾಜಿದ್, ವಿರೋಧ ಪಕ್ಷದ ನಾಯಕ, ಬಿಬಿಎಂಪಿ
ಸದಸ್ಯರ ಅಧಿಕಾರ ವಿಸ್ತರಿಸುವುದಕ್ಕೆ ಬರುವುದಿಲ್ಲ. ಇದು ಸಂವಿಧಾನ ವಿರೋಧಿ ನಡೆ. ಈ ಅಧಿಕಾರ ಸರ್ಕಾರಕ್ಕೂ ಇಲ್ಲ. ಈಗ ಬಿಹಾರ ಸೇರಿದಂತೆ ವಿವಿಧೆಡೆ ಚುನಾವಣೆ ಚರ್ಚೆ ನಡೆದಿದೆ. ಅದೇ ರೀತಿ, ಇಲ್ಲೂ ಚುನಾವಣೆ ನಡೆಸಲಿ. –ಪಿ.ಆರ್. ರಮೇಶ್, ಮಾಜಿ ಮೇಯರ್
– ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.