ಸ್ವೀಪಿಂಗ್ ಯಂತ್ರ ಖರೀದಿಗೆ ಬಿಬಿಎಂಪಿ ಸಿದ್ಧತೆ
Team Udayavani, Apr 13, 2018, 12:08 PM IST
ಬೆಂಗಳೂರು: ರಾಜಧಾನಿಯ ಪ್ರಮುಖ ರಸ್ತೆಗಳು ಹಾಗೂ ಮೇಲ್ಸೇತುವೆ, ಕೆಳಸೇತುವೆಗಳ ಸ್ವತ್ಛತಾ ಕಾರ್ಯಕ್ಕಾಗಿ ಬಿಬಿಎಂಪಿ ಯಾಂತ್ರೀಕೃತ ಸ್ವತ್ಛತಾ ಯಂತ್ರ (ಮೆಕ್ಯಾನಿಕಲ್ ಸ್ವೀಪಿಂಗ್ ಮಷೀನ್-ಎಂಎಸ್‌ಎಂ) ವಾಹನಗಳ ಖರೀದಿಸಲು ನಿರ್ಧರಿಸಿದೆ.
ನಗರದಲ್ಲಿ ಶೇ.60ಕ್ಕಿಂತ ಹೆಚ್ಚು ವಾಹನಗಳು ಸಂಚರಿಸುವ 1,180 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಲ್ಲಿ, ಜತೆಗೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಸ್ವತ್ಛತಾ ಕಾರ್ಯಕ್ಕಾಗಿ ಸ್ವೀಪಿಂಗ್ ವಾಹನಗಳ ಬಳಕೆ ಸೂಕ್ತವೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿರುವುದರಿಂದ ಹೊಸದಾಗಿ 34 ವಾಹನಗಳ ಖರೀದಿಗೆ ಟೆಂಡರ್ ಆಹ್ವಾನಿಸಲಾಗಿದೆ.
ಪಾಲಿಕೆಯ ಎಂಟು ವಲಯಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ನಿಯೋಜಿಸಲಾದ ವಾಹನಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ರಸ್ತೆಗಳಲ್ಲಿ ಸ್ವತ್ಛತೆ ಪ್ರಮಾಣವೂ ಉತ್ತಮವಾಗಿದೆ. ಜತೆಗೆ ಪೌರಕಾರ್ಮಿಕರ ನಿಯೋಜನೆಗಿಂತ ಯಂತ್ರ ಬಳಕೆ ಪರಿಣಾಮಕಾರಿ ಹಾಗೂ ಆರ್ಥಿಕವಾಗಿಯೂ ಮಿತವ್ಯಯಕಾರಿ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಯಂತ್ರಗಳ ಖರೀದಿಗೆ ತೀರ್ಮಾನಿಸಲಾಗಿದೆ.
ನಗರದ ಪ್ರಮುಖ ರಸ್ತೆಗಳು, ಮೇಲ್ಸೇತುವೆ ಹಾಗೂ ಕೆಳಸೇತುವೆಗಳಲ್ಲಿ ಹೆಚ್ಚು ವಾಹನಗಳು ಸಂಚರಿಸುವುದರಿಂದ ಅಪಾಯದ ನಡುವೆ ಪೌರಕಾರ್ಮಿಕರು ಸ್ವತ್ಛತಾ ಕಾರ್ಯದಲ್ಲಿ ತೊಡಗುವುದು ಸವಾಲೆನಿಸಿದೆ. ಹೀಗೆ ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಸ್ವತ್ಛತಾ ಕಾರ್ಯ ನಡೆಸುವಾಗ ಪೌರಕಾರ್ಮಿಕರಿಗೆ ವಾಹನಗಳು ಡಿಕ್ಕಿ ಹೊಡೆದ ದಾಹರಣೆಗಳೂ ಸಾಕಷ್ಟಿವೆ.
ಹೀಗಾಗಿ ಸ್ವೀಪಿಂಗ್ ವಾಹನಗಳ ಬಳಕೆ ಸೂಕ್ತ ಎಂಬ ನಿರ್ಧಾರಕ್ಕೆ ಪಾಲಿಕೆ ಬಂದಿದೆ. ಅದರಂತೆ ಪ್ರತಿ ವಲಯಕ್ಕೆ ಒಂದರಂತೆ ಒಟ್ಟು 9 ವಾಹನಗಳ ಮೂಲಕ ಪ್ರಾಯೋಫಗಿಕ ಸ್ವತ್ಛತಾ ಕಾರ್ಯ ನಡೆಸಲಾಗಿದೆ. ಈ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಹೊಸದಾಗಿ 34 ವಾಹನಗಳ ಖರೀದಿಗೆ ನಿರ್ಧರಿಸಲಾಗಿದೆ.
ಆರೋಗ್ಯದ ಮೇಲೆ ಪರಿಣಾಮ: ನಗರದ ಪ್ರಮುಖ ರಸ್ತೆಗಳಲ್ಲಿ ಪೌರಕಾರ್ಮಿಕರು ಅಪಾಯದ ನಡುವೆ ರಸ್ತೆಗಳನ್ನು ಸ್ವತ್ಛಗೊಳಿಸಬೇಕಾಗುತ್ತದೆ. ಇಂತಹ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಧೂಳು, ಮಣ್ಣು ಇರುವುದರಿಂದ ಕಸ ಗುಡಿಸುವಾಗ ಅವರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ಜತೆಗೆ ಪೌರಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ರಸ್ತೆ ಸ್ವತ್ಛಗೆ ಬಳಸಲು ಸಾಧ್ಯವಿಲ್ಲ. ಆದರೆ, ವಾಹನಗಳ ಮೂಲಕ ಪ್ರಮುಖ ರಸ್ತೆಗಳನ್ನು ಸುಲಭವಾಗಿ ಸ್ವತ್ಛಗೊಳಿಸಬಗಹುದು. ವಾಹನದಿಂದ ಸ್ವತ್ಛತೆ ಕೈಗೊಂಡಾಗ ರಸ್ತೆಯಲ್ಲಿ ಧೂಳೂ ಏಳುವುದಿಲ್ಲ. ಹೀಗಾಗಿ ಮಾಲಿನ್ಯ ಪ್ರಮಾಣ ಕಡಿಮೆಯಾಗಲಿದೆ ಎಂಬುದು ಪಾಲಿಕೆ ವಾದ.
ಪಾಲಿಕೆ ವೆಚ್ಚದಲ್ಲಿ ಉಳಿತಾಯ: 100 ಮಂದಿ ಪೌರಕಾರ್ಮಿಕರು ನಿರ್ವಹಿಸುವ ಕೆಲಸವನ್ನು ಒಂದು ವಾಹನ ನಿರ್ವಹಿಸಲಿದ್ದು, ಇದರಿಂದ ಸಮಯ ಕೂಡ ಉಳಿತಾಯವಾಗಲಿದೆ. ಪ್ರತಿ ವಾಹನಕ್ಕೆ ತಿಂಗಳಿಗೆ ಸರಾಸರಿ 6 ಲಕ್ಷ ರೂ. ಬಾಡಿಗೆ ನೀಡಲಾಗುತ್ತಿದ್ದು, ನಿತ್ಯ ಇಂತಿಷ್ಟು ಕಿ.ಮೀ ಸ್ವತ್ಛತಾ ಕಾರ್ಯ ನಡೆಸಬೇಕು ಎಂಬ ಷರತ್ತು ವಿಧಿಸಲಾಗಿದೆ.
ಅದೇ ಕೆಲಸವನ್ನು ಪೌರಕಾರ್ಮಿಕರಿಂದ ನಿರ್ವಹಿಸಿದರೆ 17 ಲಕ್ಷ ರೂ. ಭರಿಸಬೇಕಾಗುತ್ತದೆ. ವಾಹನಗಳ ಖರೀದಿಯಿಂದ ಪೌರಕಾರ್ಮಿಕರಿಗೆ ಕೆಲಸವಿಲ್ಲದಂತಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ನಗರದ ವಾರ್ಡ್ ರಸ್ತೆಗಳ ಸ್ವತ್ಛತೆಗೆ ಪೌರಕಾರ್ಮಿಕರ ಬಳಕೆ ಅನಿವಾರ್ಯ ಎಂದು ಪಾಲಿಕೆ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
ಪ್ರತಿ ಯಂತ್ರಕ್ಕೂ ಜಿಪಿಎಸ್: ಸ್ವತ್ಛತಾ ವಾಹನಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರತಿ ವಾಹನಕ್ಕೆ ಜಿಪಿಎಸ್ ಸಾಧನ ಹಾಗೂ ಕ್ಯಾಮೆರಾ ಅಳವಡಿಸಲಾಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಖರೀದಿಸುವ ವಾಹನಗಳಿಗೂ ಅಳವಡಿಸಲಾಗುವುದು. ಇದರಿಂದಾಗಿ ವಾಹನಗಳು ನಿತ್ಯ ಎಲ್ಲಿ? ಎಷ್ಟು ಸಮಯ ಕೆಲಸ ಮಾಡಿವೆ, ಎಷ್ಟು ದೂರ ಕ್ರಮಿಸಿವೆ ಎಂಬ ಮಾಹಿತಿ ಪಾಲಿಕೆಗೆ ಲಭ್ಯವಾಗಲಿದೆ.
ನಗರದ ಪ್ರಮುಖ ರಸ್ತೆಗಳು, ಮೇಲ್ಸೇತುವೆ ಹಾಗೂ ಕೆಳಸೇತುವೆ ಸ್ವತ್ಛತಾ ಕಾರ್ಯಕ್ಕೆ ಹೊಸದಾಗಿ 34 ಕಸ ಗುಡಿಸುವ ಯಂತ್ರಗಳ ಖರೀದಿಗೆ ಟೆಂಡರ್ ಆಹ್ವಾನಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ತೆರವಾದವಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಸಫ್ರಾರ್ಜ್ ಖಾನ್, ಘನತ್ಯಾಜ್ಯ ಮತ್ತು ಆರೋಗ್ಯ ವಿಭಾಗದ ಜಂಟಿ ಆಯುಕ್ತ
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.