ಬಿಬಿಎಂಪಿ ಮುಚ್ಚಿಸಬೇಕಾದೀತು: ಹೈಕೋರ್ಟ್ ಎಚ್ಚರಿಕೆ
Team Udayavani, Oct 24, 2018, 12:32 PM IST
ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ “ಆಮೆ ನಡಿಗೆ’ ಅನುಸರಿಸುತ್ತಿರುವ ಬಿಬಿಎಂಪಿ ವಿರುದ್ಧ ಮತ್ತೇ ಚಾಟಿ ಬೀಸಿರುವ ಹೈಕೋರ್ಟ್, ರಸ್ತೆ ಗುಂಡಿಗಳನ್ನು ಮುಚ್ಚಿ ಇಲ್ಲವಾದಲ್ಲಿ ಬಿಬಿಎಂಪಿಯನ್ನು ಮುಚ್ಚಿಸಬೇಕಾದೀತು ಎಂದು ಮೌಖೀಕವಾಗಿ ಕಟು ಎಚ್ಚರಿಕೆ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಪಾಲಿಕೆಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾ. ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಎಸ್.ಜಿ ಪಂಡಿತ್ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ನಡೆಸಿತು.
ಈ ವೇಳೆ ಬಿಬಿಎಂಪಿ ಪರ ವಕೀಲರು ನೀಡಿದ ವಿವರಣೆಯಿಂದ ಅಸಮಧಾನಗೊಂಡ ಪೀಠ, “ಬಿಬಿಎಂಪಿ ಕೆಲಸ ಮಾಡಿದ್ದರೆ ಬೆಂಗಳೂರೇನೂ ಸ್ಥಗಿತಗೊಳ್ಳುವುದಿಲ್ಲ, ಬದಲಿಗೆ ಬಿಬಿಎಂಪಿಯನ್ನೇ ಮುಚ್ಚಿಸಲಾಗುವುದು, ನೀವು ರಸ್ತೆ ಗುಂಡಿ ಮುಚ್ಚದಿದ್ದರೆ ಅದು ನಿಮ್ಮದೇ ವೈಫಲ್ಯ ಎಂದು ಪರಿಗಣಿಸಿ ಈ ಕೆಲಸವನ್ನು ಮತ್ತೂಂದು ಏಜೆನ್ಸಿಗೆ ವಹಿಸಬೇಕಾಗಬಹುದು ಎಂದು ಮೌಖೀಕ ಎಚ್ಚರಿಕೆ ನೀಡಿತು.
ಮಂಗಳವಾರ ಬೆಳಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು “ಕಳೆದ 15 ದಿನಗಳಿಂದ ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆದಿಲ್ಲ. ಫೋಟೋ ಸಹಿತ 43 ಪ್ರದೇಶಗಳ ವಿವರ ನೀಡಿದ್ದರೂ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆದರೆ, ಬಿಬಿಎಂಪಿ ವಕೀಲರು ಅದನ್ನು ನಿರಾಕರಿಸಿದರು.
ಈ ಮಧ್ಯೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, “ನೀವು ಗುಂಡಿಗಳನ್ನು ಮುಚ್ಚುತ್ತೀರಿ ಎಂಬ ನಂಬಿಕೆ ಇತ್ತು. ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚೀದ್ದೀರಾ ಎಂದು ಪ್ರಶ್ನಿಸಿತು, “ಕೆಲಸ ನಡೆದಿದೆ 43 ಪ್ರದೇಶಗಳ ಪೈಕಿ 16 ಕಡೆಗಳಲ್ಲಿ ಮುಚ್ಚಲಾಗಿದೆ ಎಂದು ಬಿಬಿಎಂಪಿ ವಕೀಲರು ತಿಳಿಸಿದರು.
ಜಲಮಂಡಳಿಯ ಕಾಮಗಾರಿಗಳ ಕಾರಣದಿಂದಾಗಿ ಕೆಲವು ಕಡೆ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಆದರೆ, ಇದನ್ನು ನಿರಾಕರಿಸಿದ ಜಲಮಂಡಳಿ ಪರ ವಕೀಲರು, ರಸ್ತೆ ಗುಂಡಿಗಳು ಬಿದ್ದಿರವುದಕ್ಕೂ ಜಲಮಂಡಳಿಗೂ ಸಂಬಂಧವಿಲ್ಲ’ ಎಂದರು.
ಬಿಬಿಎಂಪಿಯೋ, ಜಲಮಂಡಳಿಯೋ ಗೊತ್ತಿಲ್ಲ ಒಟ್ಟಿನಲ್ಲಿ ಮಧ್ಯಾಹ್ನ 1.30ರೊಳಗೆ ಎಲ್ಲ 43 ಪ್ರದೇಶಗಳಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ತಾಕೀತು ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿತು. ಮಧಾಹ್ನದ ಬಳಿಕ ವಿಚಾರಣೆ ಆರಂಭಗೊಂಡಾಗ 14 ಕಡೆಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ.
ಉಳಿದ ಕಡೆ ಜಲಮಂಡಳಿ ಕಾಮಗಾರಿಗಳು ನಡೆಯುತ್ತಿದೆ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ “ಗುಂಡಿ ಮುಚ್ಚುವ ಕೆಲಸ ನಡೆಯಬೇಕು, ಇಲ್ಲದಿದ್ದರೆ ನ್ಯಾಯಾಲಯ ಸುಮ್ಮನೆ ಕೂರುವುದಿಲ್ಲ’ ಎಂದು ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಪರಿಶೀಲಿಸುವಂತೆ ಮಿಲಿಟರಿ ಎಂಜಿನಿಯರಿಂಗ್ ಸೂಪರಿಂಟೆಂಡೆಂಟ್ ನೇತೃತ್ವದ ಕೋರ್ಟ್ ಕಮಿಷನ್‌ಗೆ ಸೂಚಿಸಿ ವಿಚಾರಣೆಯನ್ನು ಅ.25 ಕ್ಕೆ ಮುಂದೂಡಿತು.
ವಿಶೇಷವಾಗಿ ವಿಚಾರಣೆ: ರಸ್ತೆ ಗುಂಡಿ ಮುಚ್ಚುವ ಸಂಬಂಧದ ಪ್ರಕರಣವು ಇತರ ಪ್ರಕರಣಗಳ ವಿಚಾರಣೆಗೆ ರಸ್ತೆ ಗುಂಡಿಯಂತೆಯೇ ಅಡ್ಡಿಯಾಗುತ್ತಿದೆ. ಈ ಅರ್ಜಿ ವಿಚಾರಣೆಗೆ ಸಾಕಷ್ಟು ಸಮಯ ವ್ಯಯವಾಗುತ್ತಿದೆ. ಇದರಿಂದಾಗಿ ಬೇರೆ ಪ್ರಕರಣಗಳ ವಿಚಾರಣೆಗೆ ಸಮಯ ಸಾಕಾಗುತ್ತಿಲ್ಲ. ಹಾಗಾಗಿ, ರಸ್ತೆ ಗುಂಡಿ ಮುಚ್ಚುವ ಅರ್ಜಿ ವಿಚಾರಣೆಯನ್ನು ರಜಾ ದಿನವಾದ ಶನಿವಾರದಂದು ವಿಶೇಷವಾಗಿ ವಿಚಾರಣೆ ನಡೆಸುವುದಾಗಿ ಈ ವೇಳೆ ನ್ಯಾಯಪೀಠ ಮೌಖೀಕವಾಗಿ ಹೇಳಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.