ಪ್ಲೇಟ್‌ಲೆಟ್ ಖರೀದಿ ವೆಚ್ಚ ಭರಿಸಲಿದೆ ಪಾಲಿಕೆ
Team Udayavani, Aug 20, 2019, 3:09 AM IST
ಬೆಂಗಳೂರು: ಡೆಂಘೀ ಜ್ವರಕ್ಕೆ ತುತ್ತಾಗಿ ಪ್ಲೇಟ್‌ಲೆಟ್‌ಗಾಗಿ ಖಾಸಗಿ ರಕ್ತನಿಧಿಗಳಿಗೆ ಸಾವಿರಾರು ರೂ. ನೀಡಿ ಬಳಲಿರುವ ಬಡ ರೋಗಿಗಳ ನೆರವಿಗೆ ಧಾವಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, 2017ರ ಮಾದರಿಯಲ್ಲೇ ರೋಗಿಗಳ ಪ್ಲೇಟ್‌ಲೆಟ್ ವೆಚ್ಚ ಭರಿಸಲು ನಿರ್ಧರಿಸಿದೆ. ನಗರದಲ್ಲಿ ಡೆಂಘೀ ಸೋಂಕು ಹೆಚ್ಚುತ್ತಿದೆ. ಒಂದೆಡೆ ಪ್ಲೇಟ್‌ಲೆಟ್ ಬೇಡಿಕೆ ಜಾಸ್ತಿಯಾಗಿದೆ.
ಇನ್ನೊಂದೆಡೆ ಬಡರೋಗಿಗಳಿಗೆ ಅಗತ್ಯ ಪ್ರಮಾಣದ ಪ್ಲೇಟ್‌ಲೆಟ್ ಪೂರೈಸಲು ಸರ್ಕಾರಿ ಆಸ್ಪತ್ರೆಗಳಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಖಾಸಗಿ ರಕ್ತನಿಧಿಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದ್ದು, ಬಡರೋಗಿಗಳು ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ಒಂದು ಯುನಿಟ್ ಪ್ಲೇಟ್‌ಲೆಟ್‌ಗೆ ಸಾವಿರಾರು ರೂ. ಭರಿಸಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಹೀಗಾಗಿ, ಬಿಬಿಎಂಪಿ ಮೇಯರ್ ನಿಧಿಯ, ಆಸ್ಪತ್ರೆಗಳ ಔಷಧ ಖರೀದಿ ವೆಚ್ಚದಲ್ಲಿ ರೋಗಿಗಳ ಪ್ಲೇಟ್‌ಲೆಟ್ ಖರೀದಿ ವೆಚ್ಚವನ್ನು ಬರಿಸುತ್ತಿದೆ. ರೋಗಿಗಳು ಅಥವಾ ಅವರ ಸಂಬಂಧಿಗಳು ಬಿಬಿಎಂಪಿ ವಲಯ ಆರೋಗ್ಯಾಧಿಕಾರಿಗೆ ತಾವು ಖರೀದಿಸಿದ ಪ್ಲೇಟ್‌ಲೆಟ್‌ನ ಬಿಲ್‌ನೊಂದಿಗೆ ಅರ್ಜಿಸಲ್ಲಿಸಿ ವೆಚ್ಚ ಮಾಡಿದ ಹಣವನ್ನು ಮರಳಿ ಪಡೆಯಬಹುದು.
2017ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿದ್ದವು. ಮೇ ಅಂತ್ಯಕ್ಕೆ ಬೆರಳೆಣಿಕೆಯಷ್ಟಿದ್ದ ಪ್ರಕರಣಗಳ ಸಂಖ್ಯೆ, ಜೂನ್ ಒಂದೇ ತಿಂಗಳಲ್ಲಿ ಸಾವಿರ ಗಡಿ ದಾಟಿತ್ತು. ಆ ವರ್ಷಾಂತ್ಯಕ್ಕೆ ಸೋಂಕಿತರ ಸಂಖ್ಯೆ 7,000 ಗಡಿ ಮೀರಿತ್ತು. ಆಗಲೂ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಲೇಟ್‌ಲೆಟ್ ಕೊರತೆಯಾಗಿ, ರೋಗಿಗಳು ಖಾಸಗಿಯವರಿಂದಲೇ ಖರೀದಿ ಮಾಡುತ್ತಿದ್ದರು. ಹೀಗಾಗಿ, ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಗರದ ವ್ಯಾಪ್ತಿಯಲ್ಲಿ ರೋಗಿಗಳು ಪ್ಲೇಟ್‌ಲೆಟ್‌ಗಾಗಿ ಮಾಡಿರುವ ವೆಚ್ಚವನ್ನು ಬಿಬಿಎಂಪಿಯಿಂದಲೇ ಭರಿಸಲು ತೀರ್ಮಾನಿಸಿದ್ದರು.
ಕಳೆದ ವರ್ಷ ಆರೋಗ್ಯ ಇಲಾಖೆ ಮುಂಜಾಗ್ರತೆಯಿಂದಾಗಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ಪ್ಲೇಟ್‌ಲೆಟ್ ಅಭಾವ ಉಂಟಾಗಿರಲಿಲ್ಲ. ಪ್ರಸಕ್ತ ವರ್ಷ ಮತ್ತೆ ಡೆಂಘೀ ಉಲ್ಬಣವಾಗಿ ತಿಂಗಳ ಅಂತರದಲ್ಲಿ 2000 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವರ್ಷಾರಂಭದಿಂದ ಇಲ್ಲಿಯವರೆ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಕಾರಣ, 2017ರ ಮಾದರಿಯಲ್ಲಿ ಪ್ಲೇಟ್‌ಲೆಟ್ ವೆಚ್ಚ ಬರಿಸಲು ನಿರ್ಧರಿಸಲಾಗಿದೆ.
ಏಕರೂಪ ದರ, ನಿಯಂತ್ರಣಕ್ಕೆ ಮನವಿ: ನಗರದಲ್ಲಿ ಪ್ಲೇಟ್‌ಲೆಟ್ ಬೇಡಿಕೆ ಹೆಚ್ಚಿರುವ ಕಾರಣ ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್‌ಲೆಟ್ ಅನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. 50 ಎಂ.ಎಲ್‌ನ ಒಂದು ಯುನಿಟ್‌ಗೆ 600ರಿಂದ 1,000 ರೂ.ವರೆಗೂ ದರ ಪಡೆಯುತ್ತಿದ್ದು, ಖಾಸಗಿ ರಕ್ತನಿಧಿಗಳಲ್ಲಿ ಏಕ ದರ ಪಾಲನೆ ಮಾಡುತ್ತಿಲ್ಲ. ಅಲ್ಲದೆ ಒಮ್ಮೆಗೆ 40 ಸಾವಿರಕ್ಕೂ ಹೆಚ್ಚು ಪ್ಲೇಟ್‌ಲೆಟ್ ಲಭ್ಯವಾಗುವ ಸಿಂಗಲ್ ಡೋನರ್ ಪ್ಲೇಟ್‌ಲೆಟ್ಸ್ ಒಂದು ಯುನಿಟ್‌ಗೆ 10 ರಿಂದ 12 ಸಾವಿರ ರೂ.ಗಿಂತಲೂ ಹೆಚ್ಚು ದರ ಪಡೆಯುತ್ತಿದ್ದಾರೆ.
ಇನ್ನು ಖಾಸಗಿ ಆಸ್ಪತ್ರೆಗಳು ರಕ್ತನಿಧಿ ಕೇಂದ್ರದಿಂದ ತಂದು ತಮ್ಮಲ್ಲಿ ದಾಖಲಾದ ರೋಗಿಗಳಿಗೆ ನೀಡುವ ಪ್ಲೇಟ್‌ಲೆಟ್‌ಗೂ ದುಪ್ಪಟ್ಟು ದರ ವಿಧಿಸುತ್ತಿವೆ. ಇವೆಲ್ಲದಕ್ಕೂ ತಡೆ ಹಾಕಲು ಬಿಬಿಎಂಪಿ ಹಿರಿಯ ಆರೋಗ್ಯ ಅಧಿಕಾರಿಗಳು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದು, ಖಾಸಗಿ ಆಸ್ಪತ್ರೆ ಹಾಗೂ ರಕ್ತ ನಿಧಿ ಕೇಂದ್ರಗಳಿಗೆ ಏಕರೂಪ ದರ ನಿಯಮ ಜಾರಿಗೊಳಿಸಿ ಅವುಗಳನ್ನು ನಿಯಂತ್ರಿಸಲು ಮನವಿ ಮಾಡಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ?: ಪ್ಲೇಟ್‌ಲೆಟ್ ಖರೀದಿ ಮಾಡಿರುವವರು ತಮ್ಮ ವಾರ್ಡ್‌ನ ಆರೋಗ್ಯ ನಿರೀಕ್ಷಕ ಮೂಲಕ ವಲಯ ಆರೋಗ್ಯಾಧಿಕಾರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಜತೆ ಖರೀದಿ ಮಾಡಿದ ಬಿಲ್ ಹಾಗೂ ರೋಗಿಯ ವೈದ್ಯಕೀಯ ದಾಖಲೆಗಳ ಒಂದು ಪ್ರತಿ ಹಾಗೂ ಬಿಬಿಎಂಪಿ ವ್ಯಾಪ್ತಿ ನಿವಾಸಿ ಎಂಬುದನ್ನು ದೃಢ ಪಡೆಸಲು ಗುರುತಿನಚೀಟಿ ಒಂದು ಇರಬೇಕು.
ನಗರದ ಯಾವುದೇ ಆಸ್ಪತ್ರೆ ಅಥವಾ ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ಪ್ರಸ್ತಕ ವರ್ಷ ಪ್ಲೇಟ್‌ಲೆಟ್ ಖರೀದಿ ಮಾಡಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. “ಅರ್ಜಿಯು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಳಿ ಪರಿಶೀಲನೆಯಾಗಿ ಸದ್ಯ ಚಾಲ್ತಿ ಇರುವ ಮೆಡಿಕಲ್ ಬೋರ್ಡಿನಿಂದ ಅನುಮೋದನೆ ಪಡೆದು ಬಳಿಕ ರೋಗಿಯ ಖಾತೆಗೆ ಹಣ ಭರಿಸಲಾಗುತ್ತದೆ. ಈ ಪ್ರಕ್ರಿಯೆಗೆ 15 ದಿನಗಳಾಗಬಹುದು’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ನಿರ್ಮಲಾ ಬುಗ್ಗಿ ತಿಳಿಸಿದರು.
ಬಡರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ 2017ರ ಮಾದರಿಯಲ್ಲಿಯೇ ರೋಗಿಗಳ ಪ್ಲೇಟ್‌ಲೆಟ್ ಖರೀದಿ ವೆಚ್ಚ ಭರಿಸುವಂತೆ ಆಯುಕ್ತರಿಗೆ ಆದೇಶಿಸಿದ್ದೇನೆ. ಎಲ್ಲಾ ಖಾಸಗಿ ರಕ್ತನಿಧಿ ಕೇಂದ್ರಗಳಲ್ಲೂ ಏಕರೂಪ ದರ ನಿಯಮ ಜಾರಿ ಕುರಿತು ಆರೋಗ್ಯ ಇಲಾಖೆ ಜತೆ ಚರ್ಚಿಸಲಾಗುತ್ತಿದೆ.
-ಗಂಗಾಬಿಕೆ, ಮೇಯರ್
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.