ನಲಪಾಡ್‌ಗೆ ಬೇಲಾ ಜೈಲಾ: ಇಂದು ನಿರ್ಧಾರ
Team Udayavani, Feb 26, 2018, 12:02 PM IST
ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ, ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹ್ಯಾರಿಸ್ ಹಾಗೂ ಆತನ ಸಹಚರರ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ.
ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ನಲಪಾಡ್ ಹಾಗೂ ಸಹಚರರ ಜಾಮೀನು ಅರ್ಜಿ ವಿಚಾರಣೆ ಕುತೂಹಲ ಪಡೆದುಕೊಂಡಿದ್ದು, ಜೈಲಾ ಅಥವಾ ಬೇಲಾ? ಎಂಬುದು ಸೋಮವಾರ ನಿರ್ಧಾರವಾಗಲಿದೆ. ಈ ಮಧ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಘಟನೆ ನಡೆದ ಯುಬಿ ಸಿಟಿಯ ಫರ್ಜಿ ಕೆಫೆಗೆ ಭಾನುವಾರ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಿದರು.
ಯಾವ ನಿರ್ದಿಷ್ಟ ಕಾರಣಕ್ಕೆ ಜಗಳ ಆರಂಭವಾಯಿತು ಎಂದು ಪ್ರಶ್ನಿಸಿದರು. ಜತೆಗೆ ವಿದ್ವತ್ ಮೇಲೆ ಹಲ್ಲೆ ನಡೆಸಿದ ಸ್ಥಳಗಳಾದ ಕಾರ್ ಪಾರ್ಕಿಂಗ್ ಮತ್ತು ಮಲ್ಯ ಆಸ್ಪತ್ರೆಗಳಿಗೆ ಮತ್ತೆ ಭೇಟಿ ಮಾಡಿ ಸ್ಥಳ ಪರಿಶೀಲಿಸಿ ಮಾಹಿತಿ ಕಲೆ ಹಾಕಿದರು.
ಮತ್ತೂಂದೆಡೆ ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಜಯನಗರದ ಶ್ರೀಕೃಷ್ಣ ಹಾಗೂ ನವಾಜ್‌ಗಾಗಿ ಹುಡುಕಾಟ ಮುಂದುವರಿದಿದೆ. ಅವರ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಲಾಗಿದೆ.
ಇಬ್ಬರೂ ಆರೋಪಿಗಳ ಮೊಬೈಲ್ ಸ್ವಿಚ್ ಆಫ್ ಆಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಪ್ರಕರಣ ಸಂಬಂಧ ಫರ್ಜಿ ಕೆಫೆಯಲ್ಲಿನ 4 ಸಿಸಿಟಿವಿ ಡಿವಿಆರ್‌ಗಳನ್ನು ವಶಕ್ಕೆ ಪಡೆದು, ಅಲ್ಲಿನ ಸಿಬ್ಬಂದಿ ಹೇಳಿಕೆ ಪಡೆಯಲಾಗಿದೆ ಎಂದು ಸಿಸಿಬಿ ಡಿಸಿಪಿ ರಾಮ್‌ನಿವಾಸ್ ಸಫೆಟ್ ತಿಳಿಸಿದ್ದಾರೆ.
ವಿದ್ವತ್ ಆರೋಗ್ಯದಲ್ಲಿ ಚೇತರಿಕೆ: ಮೊಹಮದ್ ನಲಪಾಡ್ ಹ್ಯಾರಿಸ್ ಮತ್ತು ಸಹಚರರಿಂದ ಹಲ್ಲೆಗೊಳಗಾಗಿ ಕಳೆದ 8 ದಿನಗಳಿಂದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡು ಬಂದಿದೆ. ವಿದ್ವತ್ ಕಣ್ಣಿನಲ್ಲಿ ಅಗಿದ್ದ ಸೋಂಕು ಸರಿ ಹೋಗಿದೆ. ಮುಖದ ಊತ ಕೂಡ ಕಡಿಮೆಯಾಗಿದೆ.
ಶೇ.90ರಷ್ಟು ಚೇತರಿಕೆ ಕಂಡಿರುವುದರಿಂದ ಇನ್ನೆರಡು ದಿನಗಳಲ್ಲಿ ಆತನನ್ನು ತುರ್ತು ನಿಗಾ ಘಟಕದಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ವಿದ್ವತ್ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಗೊಂಡ ಬಳಿಕ ಆತನಿಂದ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.